Tuesday, February 19, 2008

ಕೆಂಡಸಂಪಿಗೆಯಲ್ಲಿ ದಾಖಲಾದ ಬಾನಾಡಿ

ಬಾನಾಡಿ - ನನ್ನ ಬ್ಲಾಗ್‍ಗೆ ಇನ್ನೆರಡು ತಿಂಗಳಲ್ಲಿ ಒಂದು ವರ್ಷ ತುಂಬುತ್ತದೆ. ಮಗಳ ಅಥವಾ ಮಗನ ಮೊದಲ ಹುಟ್ಟು ಹಬ್ಬವನ್ನು ಆಚರಿಸಲು ಯೋಚಿಸುವ ಹೆತ್ತವರಂತೆ ನಾನೂ ಒಂದು ತರ ಪುಲಕಿತನಾಗಿಯೂ ಇದ್ದೆ. ಫೆಬ್ರವರಿಯಿಂದ ಜೂನ್‍ವರೆಗೆ ನನಗೆ ಸ್ವಲ್ಪ ಹೆಚ್ಚು ಬಿಡುವು ಇರುವ ಸಮಯ. ಉಳಿದ ತಿಂಗಳುಗಳಲ್ಲಿ ಬಿಡುವಿಲ್ಲದೆ ದುಡಿಯುವುದರಿಂದ ಬ್ಲಾಗ್ ಕೂಡಾ ನಿದ್ದೆ ಮಾಡುತ್ತಿರುತ್ತದೆ.
ಇದೇ ಗುಂಗಿನಲ್ಲಿದ್ದ ನನಗೇ ಆಶ್ಚರ್ಯ ವಾಗುವಂತೆ 'ಬಾನಾಡಿ'ಯನ್ನು ಕೆಂಡ ಸಂಪಿಗೆಯಲ್ಲಿ ಪರಿಚಯಿಸಲಾಗಿದೆ. ಅದರ ಸಂಪಾದಕ ಮಂಡಳಿಗೆ ನಾನು ಅಭಾರಿ. ಕನ್ನಡದಲ್ಲಿರುವ ಬ್ಲಾಗ್‍ಗಳನ್ನು ಲೆಕ್ಕ ಹಾಕುವಾಗ ಅವುಗಳು ಎರಡು ಶತಕದ ಗಡಿದಾಟಿವೆ. ಬಹಳಷ್ಟು ಉತ್ತಮ ಬ್ಲಾಗ್‍ಗಳು ಕನ್ನಡದಲ್ಲಿವೆ. ನಾನೇ ಒಂದು ಪಟ್ಟಿಮಾಡಿ ಕೆಂಡಸಂಪಿಗೆಗೆ ಕಳುಹಿಸಬೇಕೆಂದೂ ಇದ್ದೆ. ಪ್ರಯತ್ನ ಮಾಡುವೆ.
ಕೆಂಡ ಸಂಪಿಗೆ ನೋಡಿ ಮೊದಲ ಬಾರಿ ಇಲ್ಲಿ ಬಂದವರಿಗೆ ಹಾರ್ದಿಕ ಸ್ವಾಗತ.
ಒಲವಿನಿಂದ
ಬಾನಾಡಿ

Monday, February 11, 2008

ದಾಸನ ಮಾಡಿಕೊ ನನ್ನನಮ್ಮ ಮನೆಗೆ ಮೊನ್ನೆ ತಂದ ನಾಯಿಮರಿ ಅಂಗಳದಲ್ಲೆಲ್ಲಾ ಸುತ್ತಾಡಿತು. ತನ್ನ ಹೊಸಸ್ಥಳವನ್ನು ಅರಿತುಕೊಂಡು ಅದರದ್ದೇ ಆದ ರೀತಿಯಲ್ಲಿ ಅದಿರಲಿ ಎಂದು ನಾವು ಅದನ್ನು ಕಟ್ಟಿಹಾಕಲ್ಲಿಲ್ಲ. ನಾಯಿಮರಿ ಸಾಮಾನ್ಯ ಊರಿನ ತಳಿ. ಊರಿನ ನಾಯಿಗಳಿಗೆ ತಕ್ಕಷ್ಟು ತರಬೇತಿ ನೀಡಿದರೆ ಅವುಗಳನ್ನು ಸಾಕಿದ್ದಕ್ಕೆ, ನಮಗೆ ಬೇಕಾದಷ್ಟು ಸಹಾಯ ಮಾಡುತ್ತವೆ. ಇದು ನಾವು ತಿಳಿದುಕೊಂಡ ಸತ್ಯ ಮತ್ತು ಅನುಭವ.
ಹಿಂದೆ ನಮ್ಮಲ್ಲೊಂದು ನಾಯಿ ಇತ್ತು. ಅದರ ಹೆಸರು ದಾಸ ಎಂದು. ಅದು ಬಹಳ ಜೋರಾಗಿತ್ತು ಮತ್ತು ಕೇವಲ ಮನೆಯವರ ಮಾತನ್ನು ಕೇಳುತ್ತಿತ್ತು. ನಮ್ಮ ತಂದೆಯವರು ಅದಕ್ಕೆ ಮೆಚ್ಚಿನವರಾಗಿದ್ದರು. ಅವರಿಗೂ ಅದರ ಬಗ್ಗೆ ಬಹಳ ಹೆಮ್ಮೆಯಿತ್ತು. ಹೊಸಬರು ಯಾರಾದರೂ ಮನೆಗೆ ಬಂದರೆ ಬೊಗಳಿ ಅವರನ್ನು ಹೆದರಿಸುತ್ತಿತ್ತು. ದಿನಾ ಬರುವವರಿಗೂ ನಮ್ಮ ಮನೆಯ ದಾಸನ ಹೆದರಿಕೆ. ಕೆಲವೊಮ್ಮೆ ಮನೆಯ ಮೇಲಿನ ಗುಡ್ಡದಿಂದಲೇ ಜನ ಸಿಳ್ಳು ಹೊಡೆಯತ್ತಿದ್ದರು. ಕೆಲವರು ಗೇರು ಮರ ಹತ್ತಿ ಅಲ್ಲಿಂದ ನಮ್ಮನ್ನು ಯಾರನ್ನಾದರೂ ಕರೆಯುತ್ತಿದ್ದರು. ಅಲ್ಲಿದ್ದವರ ಬೊಬ್ಬೆ ಮೊದಲು ನಮ್ಮ ದಾಸನಿಗೇ ಕೇಳಿ, ಆತ ಬೊಗಳುತ್ತಿದ್ದ. ನಂತರ ನಮ್ಮ ತಾಯಿಯವರು ಯಾರೋ ಬಂದಿರಬೇಕು. ಅಂಗಳದ ಆಚೆ ಮೂಲೆಗೆ ಹೋಗಿ ನೋಡಿ ಎಂದು ನಮ್ಮನ್ನು ಅಟ್ಟುತ್ತಿದ್ದರು. ನಾವು ಕೊರಳು ಉದ್ದ ಮಾಡಿ ನೋಡುತ್ತಲೇ ದಾಸನನ್ನು ಸುಮ್ಮನಿರಲು ಹೇಳುತ್ತಿದ್ದೇವು. ದಾಸನನ್ನು ನಾವು ಕಟ್ಟಿಹಾಕಿದ ಸಂದರ್ಭ ನನಗೆ ನೆನಪೇ ಆಗುವುದಿಲ್ಲ. ನಮ್ಮ ಮನೆಯ ಗೇಟಿನ ವರೆಗೆ ಮಾತ್ರ ಹೋಗಿ ಆತ ಎಲ್ಲರನ್ನು ಜೋರು ಮಾಡುತ್ತಿದ್ದ. ಒಂದು ವೇಳೆ ಯಾರಾದರೂ ಬರುವ ಸಂದರ್ಭದಲ್ಲಿ ದಾಸ ನಮ್ಮ ಗೇಟಿನಿಂದ ಹೊರಗಿದ್ದರೆ ಏನೂ ಮಾಡುತ್ತಿರಲಿಲ್ಲ. ಆದರೆ ಜನರಿಗೆ ಹೆದರಿಕೆ. ನಮ್ಮ ಮನೆಗೆ ಬರುವವರಾಗಿದ್ದರೆ ದಾಸ ನಮ್ಮ ಗೇಟಿನ ಒಳಗೆ ಬಂದು ಬೊಗಳುತ್ತಿದ್ದ.
ನಮ್ಮ ತಂದೆಯವರು ಸೊಸೈಟಿಗೆ ಹೂಗುವಾಗ ಅಥವಾ ನಾವೆಲ್ಲಾದರು ಹೊರಗಡೆ ಹೋಗುವಾಗ ಅದು ನಮ್ಮ ಜತೆ ಬಹಳಷ್ಟು ದೂರ ಬರುತ್ತಿತ್ತು. ಮುಖ್ಯರಸ್ತೆಯ ಬದಿಯಲ್ಲಿ ಬಸ್ಸು ಹಿಡಿಯಲೆಂದು ಕಾಯುತ್ತಿರಬೇಕಾದರೆ ಅದು ಕಾಯುತ್ತಿತ್ತು. ನಾವು ಬಸ್ಸು ಹತ್ತಿ ಹೊರಟರೆ ಅದು ತನ್ನ ಪಾಡಿಗೆ ನಮ್ಮ ಮನೆಗೆ ವಾಪಾಸಾಗುತ್ತಿತ್ತು. ದಾರಿಯಲ್ಲಿ ಹೋಗುತ್ತಿರುವಾಗ ಅದನ್ನು ಯಾರೂ ಕಲ್ಲೆಸೆದು ಹೆದರಿಸುತ್ತಿರಲ್ಲಿಲ್ಲ. ಕಾರಣ ಅವರೇನಾದರೂ ನಮ್ಮ ಮನೆಗೆ ಬಂದರೆ ಅವರನ್ನು ಸಿಗಿದು ಹಾಕಬಹುದು ಎಂಬ ಭಯವಿತ್ತು ಜನರಲ್ಲಿ. ನನ್ನ ಅಣ್ಣ ಮುಂಬಯಿಯಲ್ಲಿದ್ದಾಗ ವರುಷಕ್ಕೊಮ್ಮೆ ಬಂದಾಗ ದಾಸನಿಗೆ ಸ್ವಲ್ಪ ಹೆದರಿಕೆ. ಅವನು ಮನೆಯ ದೂರ ಇರುತ್ತಿದ್ದ. ಕೆಲವೊಮ್ಮೆ ಅವನ ಜತೆಗೆ ಆಟ ಕೂಡ ಆಡುತ್ತಾನೆ. ಆದರೆ ಹೆದರಿಕೆ.
ಅಣ್ಣ ಬಂದಾಗ ಮಾಡುವ ಕುರಿ, ಕೋಳಿ, ಮೀನಿನ ಅಡುಗೆ ಮತ್ತು ಅವನಿಗೆ ಸಿಗುವ ಮಾಂಸದ ಊಟ ದಾಸನನ್ನು ಹತ್ತಿರ ತರಿಸುತ್ತದೆ.

ನಮ್ಮೆಲ್ಲರ ದಾಸ ಬಹಳ ಮುದಿಯನಾಗುವವರೆಗೆ ಜೀವಿಸಿದ್ದ. ನಮ್ಮ ತಂದೆಯ ದಾಸ ನಾಗಿದ್ದ ಆತ ನಮ್ಮ ತಂದೆಯವರು ತೀರಿದ ನಂತರ ಸತ್ತ. ನಮ್ಮ ತಂದೆಯವರ ಉತ್ತರಕ್ರಿಯೆಯ ಮೊದಲ ದಿನದಿಂದ ದಾಸ ಯಾರಿಗೂ ಕಾಣಸಿಗಲಿಲ್ಲ. ನಾವೆಲ್ಲಾ ಹುಡುಕಿದೆವು. ಅವನು ನಮ್ಮ ಅಡಿಕೆ ತೋಟದ ಒಂದು ಮೂಲೆಯಲ್ಲಿ ಸುಮ್ಮನೆ ಮಲಗಿದ್ದ. ನಮ್ಮ ತಂದೆಯವರು ತೀರಿಹೋದ ಮೇಲೆ ಅವರ ಶವ ಸಂಸ್ಕಾರ, ನಂತರ ಗೋಳೋ ಎಂದು ಮನೆಯವರೆಲ್ಲ ಅತ್ತುದ್ದನು ಕಂಡ ದಾಸ ಕೂಡಾ ಅತ್ತಿದ್ದ. ಅವನಿಗೆ ನಮ್ಮ ತಂದೆಯವರು ಇನ್ನಿಲ್ಲ ವೆಂಬ ವಿಷಯ ಗೊತ್ತಾಗಿತ್ತು. ಅವನು ಊಟ ಮಾಡಿದ್ದನೆ ಇಲ್ಲವೇ ಎಂದು ವಿಚಾರಿಸಲು ಯಾರೂ ಇರಲ್ಲಿಲ್ಲ. ತೋಟದ ಮೂಲೆಯಲ್ಲಿ ಸುಮ್ಮನೆ ಬಿದ್ದದ್ದ ಅವನು ಏಳುವಂತಿರಲಿಲ್ಲ. ನಾವು ಅವನಿಗೆ ಊಟ ತೆಗೆದುಕೊಂಡು ಇಟ್ಟೆವು. ಮುಸಿ ನೋಡಿ ಸುಮ್ಮನಾದ.

ಉತ್ತರಕ್ರಿಯೆಯಾದ ನಂತರ ರಾತ್ರಿ ನಾನು ಮತ್ತು ಅಣ್ಣ ದಾಸನನ್ನು ನೋಡಲು ಹೋದೆವು. ಆದರೆ ದಾಸ ಸತ್ತು ಹೋಗಿದ್ದ. ನಾನು ಮತ್ತು ಅಣ್ಣ ಸೇರಿ ನಮ್ಮ ದಾಸನ ಅಂತ್ಯಕ್ರಿಯೆಯನ್ನೂ ಮಾಡಿದೆವು. ತಂದೆಯವರನ್ನು ಕಳಕೊಂಡ ನೋವಿನೊಂದಿಗೆ ನಮಗೆ ದಾಸನನ್ನೂ ಕಳಕೊಂಡ ವ್ಯಥೆಯಾಯಿತು.

ನಂತರ ನಮಗೆ ದಾಸನಂತಹ ನಾಯಿ ಸಿಗಲೇ ಇಲ್ಲ. ಅವನಿಂದ ದಪ್ಪ, ಬಲಿಷ್ಟವಿದ್ದ ನಾಯಿ ಸಿಕ್ಕಿದರೂ, ಅವನಷ್ಟು ನಂಬಿಗಸ್ತ ಮತ್ತು ನಿಯತ್ತಿನ ನಾಯಿಯನ್ನು ನಮ್ಮಮನೆಯಲ್ಲಿ ಕಂಡಿಲ್ಲ. ಇನ್ನೆಲ್ಲೂ ಕೂಡ ಕಂಡಿಲ್ಲ.

ಈಗ ತಂದ ನಾಯಿಮರಿ ನಮ್ಮ ದಾಸನ ನೆನಪನ್ನು ನೀಡಬಹುದೇ ಹೊರತು ದಾಸನಾಗಲಾರ ಎಂಬ ಖಚಿತತೆ ನನಗಿದೆ.

ಒಲವಿನಿಂದ
ಬಾನಾಡಿ

ಮಧ್ಯಮ (ಮಾಧ್ಯಮ) ವಿಯೋಗ

ಕಳೆದ ಒಂದು ವಾರದಿಂದ ಯಾವುದೇ ಸುದ್ದಿ ಚಾನೆಲ್‍ಗಳನ್ನು ನೋಡಲಿಲ್ಲ. ದಿನದಲ್ಲಿ ಕನಿಷ್ಟ ಅರ್ಧ ಗಂಟೆ ಟಿ.ವಿ. ಮುಂದೆ ಕುಳಿತು "ಕಳೆಯುವ" ಸಮಯವನ್ನು ಮತ್ತೆ ಹೇಗಾದರೂ ಕಳೆಯಬಹುದಲ್ಲವೆ ಎನಿಸಿತ್ತು.

ಟಿ.ವಿ.ಯಲ್ಲಿ ಬರುವ ಸುದ್ದಿಗಳನ್ನು ನೋಡದೆ ನಾನೇನು ಕಳಕೊಂಡಿಲ್ಲ ಅನಿಸಿತು. ಬೆಳಿಗ್ಗೆ ಬರುವ ಪತ್ರಿಕೆಗಳನ್ನೂ ಹಾಗೇ ಮಡಚಿಟ್ಟು ಸುಮ್ಮನಿರಲೇ ಎಂದನಿಸಿತ್ತದೆ. ಕಾರಣ ಈ ಮಾಧ್ಯಮದವರ ಬಗ್ಗೆ ಒಂದು ತರ ವಾಕರಿಕೆ ಶುರುವಾಗಿದೆ. ಪ್ರಾಮಾಣಿಕತೆ, ಬದ್ಧತೆ, ಪ್ರಸಕ್ತತೆ ಅವರ ಶಬ್ದಭಂಡಾರದಲ್ಲಿಲ್ಲ. ಒಂದೊಮ್ಮೆ ರಾಜಕಾರಣಿಗಳ ಬಗ್ಗೆ ಹೇಸಿಹೋಗಿದ್ದ ಮನಸ್ಸು ಈಗ ಮಾಧ್ಯಮದವರ ಬಗ್ಗೆ ಅಷ್ಟೇ ಹೇಸುತ್ತಿದೆ.

ಭಾರತದ ಯಾವುದೇ ಮಹಾನಗರದಲ್ಲಿ ಕನಿಷ್ಟ ಇಪ್ಪತ್ತು ವಾರ್ತಾ ಚಾನೆಲ್‍ಗಳು ಸಿಗುತ್ತವೆ. ಸುಮಾರು ಇಪ್ಪತ್ತು ಮೆಲ್ದರ್ಜೆಯ ದಿನಪತ್ರಿಕೆಗಳು ಪ್ರಕಟವಾಗುತ್ತವೆ. ಇವುಗಳ ಜತೆಗೆ ಲೆಕ್ಕಕ್ಕಿಲ್ಲದ ಚಾನೆಲ್‍ಗಳು, ಪತ್ರಿಕೆಗಳು ಅದೆಷ್ಟೋ. ಇವುಗಳೆಲ್ಲಾ ತಮ್ಮನ್ನು ಮಾರುವುದರೊಂದಿಗೆ ಅವರ ಓದುಗರನ್ನೂ ಮಾರಾಟ ಮಾಡುತ್ತಾರೆ ಅಂತನಿಸುತ್ತದೆ.

ಓದುಗರು ಮತ್ತು ಸಮಾಜದ ಮಧ್ಯೆ ಕೊಂಡಿಯಾಗಿರಬೇಕಾದ ಈ ಮಾಧ್ಯಮದವರು ತಲೆಹಿಡುಕರಂತೆ ವರ್ತಿಸುವುದನ್ನು ಕಂಡಾಗ ನಾವು (ಓದುಗರು ಅಥವಾ ನೋಡುಗರು) ಅವರು ಕೊಟ್ಟಿದನ್ನು ಓದಬೇಕು ಅಥವಾ ನೋಡಬೇಕು.

ಜತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಮಾಧ್ಯಮದವರು ನಾವು ಎಂದು ಹೇಳುತ್ತಾ ಎಲ್ಲ ಸವಲತ್ತುಗಳನ್ನು ಸುಲಭವಾಗಿ ದೊರಕಿಸಿ ಕೊಳ್ಳಬೇಕೆನ್ನುತ್ತಾರೆ ಅವರು.

ಸಮ್ಮಿಶ್ರ ಸರಕಾರಗಳು, ಹಲವಾರು ಸಣ್ಣ ರಾಜಕೀಯ ಪಕ್ಷಗಳು, ಮತದಾರರ ಪ್ರಜ್ಞಾವಂತ ಆಯ್ಕೆಗಳು ರಾಜಕಾರಣಿಗಳನ್ನು ಸರಿದಾರಿಯತ್ತ ತರುವ ಸಂದರ್ಭದಲ್ಲಿ ಮಾಧ್ಯಮದವರು ಈ ರೀತಿ ವರ್ತಿಸುವುದನ್ನು ಕಂಡಾಗ ಅವರಿಗೆ ಮದ್ದು ಅರೆಯುವವರು ಯಾರೆಂದು ಗೊತ್ತಿಲ್ಲ!

ಈ ಮಧ್ಯೆ, ವಾರಾಂತ್ಯದಲ್ಲಿ ಗುರುಪ್ರಸಾದ್ ಕಾಗಿನೆಲೆ ಅವರ 'ಬಿಳಿಯ ಚಾದರ'ವನ್ನು ಹೊದ್ದಿದ್ದಾಯಿತು. ಮೂರು ಸಿಟಿಂಗ್‍ನಲ್ಲಿ ಪೂರ್ತಿ ಕಾದಂಬರಿ ಓದಿ ಮುಗಿಸಿದೆ. ಥಾಂಕ್ಸ್ ಟು ಮೀಡಿಯಾ.

Saturday, February 9, 2008

ಶಾಲೆಯ ನೆನಪಿನಲ್ಲಿ

ಒಂದನೇ ಮಾಸ್ಟ್ರು ಬಂದರು...
ನಮ್ಮ ಶಾಲೆ L ಆಕಾರದಲ್ಲಿತು. ಶಾಲೆಯ ಒಂದು ಕೊನೆಯಲ್ಲಿ ಅಧ್ಯಾಪಕರ ಕೊಠಡಿ. ಇನ್ನೊಂದು ಕೊನೆಯಲ್ಲಿ ಒಂದನೇ ತರಗತಿ. ನಾವು ಒಂದನೇ ತರಗತಿಯಲ್ಲಿದ್ದಾಗ ಜಗಲಿ ಮೇಲೆ ನಿಂತುಕೊಂಡು ಅಧ್ಯಾಪಕರು ತರಗತಿಗೆ ಬರುವುದನ್ನೇ ಕಾಯುತ್ತಿದ್ದೆವು. ಅಧ್ಯಾಪಕರು ತಮ್ಮ ಕೋಣೆಯಿಂದ ಹೊರಟರು ಎಂದು ಗೊತ್ತಾದೊಡನೆ ಎಲ್ಲರೂ ಸೇರಿ "ಒಂದನೇ ಮಾಸ್ಟ್ರು ಬಂದರು... ಒಂದನೇ ಮಾಸ್ಟ್ರು ಬಂದರು... " ಎಂದು ರಾಗವಾಗಿ ಹಾಡುತ್ತಿದ್ದೆವು. ಅಧ್ಯಾಪಕರು ಕ್ಲಾಸಿಗೆ ಹೋಗುವ ಜತೆಗೆ ನಮ್ಮನ್ನೆಲ್ಲಾ 'ಒಳಗೆ ಹೋಗಿ, ಒಳಗೆ ಹೋಗಿ' ಎಂದು ಪ್ರೀತಿಯಿಂದ ತಮ್ಮ ಕ್ಲಾಸಿಗೆ ಕರೆದುಕೊಂಡು ಹೋಗುತ್ತಿದ್ದರು.

Wednesday, February 6, 2008

ಕೋಳಿಗಳ ಗೂಡು

ಸಂಜೆಯಾಯಿತೆಂದರೆ ಕೋಳಿಗಳನ್ನು ಗೂಡಿಗೆ ಹಾಕುವುದು ಒಂದು ದೊಡ್ಡ ಕೆಲಸವೇ. ಸುಮಾರು ನಾಲ್ಕು ಗಂಟೆ ಹೊತ್ತಿಗೆ ಕಟ್ಟಿದ್ದ ದೊಡ್ಡ ಕೋಳಿಗಳನ್ನು ಬಿಡುತ್ತಾರೆ. ಅದಕ್ಕಿಂತ ಮೊದಲೇ ಸ್ವತಂತ್ರವಾಗಿ ತೋಟ ಗದ್ದೆ ಎಂದು ತಿರುಗಾಡುತ್ತಿದ್ದ ಹೇಂಟೆ ಮತ್ತು ಸಣ್ಣ ಕೋಳಿಗಳು, ಅವುಗಳ ಮರಿಗಳು ಅಲ್ಲಿ ಇಲ್ಲಿ ಓಡಾಡುತ್ತಿರುತ್ತವೆ. ಸೂರ್ಯ ಕಂತಿದ ಎಂದಾಗುವಾಗ ಕೋಳಿಗಳನ್ನು ಕರೆಯಲು ಆರಂಭವಾಗುತ್ತದೆ. ತೋಟದ ಕೆಳಗಿನ ಐರಿನ್ ಬಾಯಮ್ಮ ತನ್ನ ಮನೆಯ ಕೋಳಿಗಳನ್ನು ಕೂಗಲು ಆರಂಭಿಸಿದರೆ, ನಾವು ನಮ್ಮ ಕೋಳಿಗಳನ್ನು ಇನ್ನೂ ದೊಡ್ಡ ಸ್ವರದಲ್ಲಿ ಕುವೋ, ಕುವೋ ಎಂದು ಕರೆಯುತ್ತೇವೆ. ಐರಿನ್‍ಳ ಮನೆಯ ಹುಂಜದೊಟ್ಟಿಗೆ ಸಖ್ಯ ಮಾಡಲು ಹೋಗಿದ್ದ ನಮ್ಮ ಹೇಂಟೆಯೋ ಅಥವಾ ಅವರ ಹೇಂಟೆಯ ಜತೆಗೆ ನಮ್ಮ ಮನೆಯ ಹುಂಜ ಹೋದುದೋ ಹೇಗಿದ್ದರೂ ಅದನ್ನು ಕಂಡು ಹಿಡಿದು ನಮ್ಮ ನಮ್ಮ ಕೋಳಿಗಳನ್ನು ಅವುಗಳ ಗೂಡಿಗೆ ಸೇರಿಸಬೇಕು. ಕೋಳಿಗಳು ಗೂಡಿಗೆ ಸೇರುವ ಮುಂಚೆ ಅಲ್ಲಿ ಇಲ್ಲಿ ಎಂದು ಓಡಾಟ ಮಾಡುತ್ತವೆ. ಸಂಜೆ ತಾನೆ ಬಿಟ್ಟ ಹುಂಜಗಳೋ ಇದ್ದ ತೆಂಗಿನ ಮರದ ಬುಡವನ್ನೋ, ಬಸಳೆ, ತೊಂಡೆಕಾಯಿ ಅಥವಾ ಹರಿವೆಯಂತಹ ತರಕಾರಿ ಗಿಡಗಳ ಬುಡವನ್ನೋ ತಮ್ಮ ಕಾಲಿನಿಂದ ಬಿಡಿಸಿ ಹುಳ ಹುಪ್ಪಟೆಗಳನ್ನು ಹುಡುಕುವುದನ್ನು ಇನ್ನೂ ನಿಲ್ಲಿಸಿರಲಾರದು. ಅವೆಲ್ಲವನ್ನೂ ಈಗಲೇ ಗೂಡಿಗೆ ಸೇರಿಸಬೇಕು.