Thursday, January 31, 2008

ದಿನಚರಿ : ಮುಂಜಾನೆಊರಿನ ಪದವಿನ ಮೈದಾನದಲ್ಲಿ ದೇವಿ ಮಹಾತ್ಮೆ ಯಕ್ಷಗಾನದ ಅಬ್ಬರದ ಚೆಂಡೆಯ ಪೆಟ್ಟಿಗೆ ಇವತ್ತು ಬೆಳಿಗ್ಗೆ ಎಂದಿಗಿಂತ ಅರ್ಧ ಗಂಟೆ ಮೊದಲೇ ಎಚ್ಚರವಾಯಿತು. ಅಂದರೆ ಈಗ ಮೂರೂವರೆ ಗಂಟೆ ಇರಬಹುದು. ಯಕ್ಷಗಾನವುಂಟು ಎಂದು ಗುಡ್ಡೆಯ ಬದಿಯ ಮಾಂಕು ಹೇಳಿದ್ದ. ಮಾಧವಣ್ಣನವರ ಹರಕೆ ಬಯಲಾಟವಾಗಿ ಇದು ಪ್ರತಿವರ್ಷ ನಡೆಯುತ್ತಿದೆ. ಹಾಗಾಗಿ ಊರಿನ ಎಲ್ಲರಿಗೂ ಗೊತ್ತು. ಸಂಜೆ ಸತ್ಯನಾರಾಯಣ ಪೂಜೆ ಮುಗಿಸಿ ಎಲ್ಲರಿಗೂ ಊಟ ಕೊಟ್ಟು ರಾತ್ರೆ ದೇವಿ ಮಹಾತ್ಮೆ ಆಡಿಸುವುದು ಮಾಧವಣ್ಣನಿಗೆ ವರ್ಷದ ರೂಢಿ.
ಚಳಿಯಿನ್ನೂ ಹೆಚ್ಚೂ ಇಲ್ಲ. ಕಡಿಮೆಯೂ ಇಲ್ಲ. ಹಾಗಿದೆ. ರಾತ್ರಿಯಿಡೀ ಬರೇ ಸಾಧಾರಣ ಹೊದಿಕೆ ಹೊದ್ದರೆ ಚಳಿಯಾಗುತ್ತಿತ್ತು. ಹಾಗೆಂದು ಕಂಬಳಿ ಹೊದ್ದರೆ ಸೆಖೆಯಾಗುತ್ತಿತ್ತು. ತೋಟದ ಬದಿಯ ಕೆರೆಯಲ್ಲಿ ನೀರು ತುಂಬಿದೆ. ಅದಕ್ಕಾಗಿಯೋ ಏನೋ ಗಾಳಿ ಬೀಸುವಾಗ ಚಳಿಯಾದಂತನಿಸುತ್ತದೆ.
ಎದ್ದು ಹೊರಗೆ ಬಂದರೆ ಕಾಳು ನಾಯಿ ಬಚ್ಚಲಕೋಣೆಯ ಒಲೆಯ ಬದಿಯಲ್ಲಿ ಮಲಗಿ ಗೊರಕೆ ಹೊಡೆಯುತ್ತಿದೆ. ಅಂಗಳದಲ್ಲಿ ಮಂಜು ಬಿದ್ದು ಒದ್ದೆಯಾಗಿದೆ. ಹರಡಿರುವ ಅಡಿಕೆಯನ್ನು ಕದ್ದು ಕೊಂಡು ಹೋದರೂ ಕಾಳುನಿಗೆ ಗೊತ್ತಾಗದಷ್ಟು ಜೋರಾಗಿ ನಿದ್ದೆಮಾಡುತ್ತಿದ್ದಾನೆ.
ಬಚ್ಚಲಿಗೆ ಹೋಗಿ ಮುಖಕ್ಕೆ ನೀರು ಹಾಕಿದಾಗ ಕಾಳು ತಲೆ ಎತ್ತಿ ನೋಡಿ ನಾನೇ ಎಂದು ತಿಳಿದು ಮತ್ತೆ ಮಲಗಿದ. ಅಮ್ಮನಿಗೆ ಮುಖ ತೊಳೆಯಲು ನೀರು ಬಿಸಿಯಾಗಲಿ ಎಂದು ಬಚ್ಚಲ ಒಲೆಗೆ ಒಂದೆರಡು ತೆಂಗಿನ ಸಿಪ್ಪೆ ಮತ್ತು ಮಡಲನ್ನು ಇಟ್ಟು ಬಂದೆ.
ಗೂಡಿನಲ್ಲಿದ್ದ ಕೋಳಿಗಳಿಗೆ ಎಚ್ಚರವಾಗಿಲ್ಲವೋ ಏನೋ. ತೋಟದ ಆ ಬದಿಯ ತನಿಯಪ್ಪಣ್ಣನ ಕೋಳಿ ಕೂಗಿತು. ಈಗ ನಮ್ಮ ಕೋಳಿಗಳೂ ಕೂಗಲು ಆರಂಭಿಸಿದವು. ಗಂಟೆ ನಾಲ್ಕರ ಹತ್ತಿರ ವಾಗಿರಬಹುದು ಎಂದು ಅವುಗಳು ಕೂಗಿದ್ದುದರಿಂದಲೇ ಗೊತ್ತಾಯಿತು. ದಿನವೂ ತನಿಯಪ್ಪಣ್ಣನ ಅಂಕದ ಕೋಳಿಗಳು ಎಲ್ಲರಿಂದ ಮೊದಲು ಕೂಗುವುದು. ಬಹಳ ಪ್ರೀತಿಯಿಂದ ಸಾಕುವ ತನಿಯಪ್ಪಣ್ಣ ಅವುಗಳನ್ನು ತನ್ನ ಮನೆಯ ಜಗಲಿಯಲ್ಲಿಯೇ ಕಟ್ಟಿಹಾಕುತ್ತಾನೆ. ರಾತ್ರಿ ಮಲಗಿದ ಅವನಿಗೆ ಕೋಳಿಗಳ ಕುಟುರು ಕುಟುರು ಶಬ್ದ ಕೇಳದಿದ್ದರೆ ನಿದ್ದೆ ಹತ್ತುವುದಿಲ್ಲ. ಮೊನ್ನೆ ಅಡ್ಕದಲ್ಲಿ ನಡೆದ ಅಂಕದಲ್ಲಿ ಅವನ ಕರ್ಬೊಳ್ಳೆ ಕೋಳಿ ನಾಗುನ ಕೋಳಿಯನ್ನು ಬಾಳಿನಲ್ಲಿ ಕತ್ತರಿಸಿಯೇ ಹಾಕಿತ್ತು. ಗದ್ದೆಯಲ್ಲಿ ಬೆಳೆದ ಭತ್ತದ ಅಕ್ಕಿರೊಟ್ಟಿ ಮಾಡಲು ಅಕ್ಕಿ ನೆನೆಹಾಕಲು ಹೆಂಡತಿಯಲ್ಲಿ ಹೇಳಿಯೇ ಹೋಗಿದ್ದ. ಒಂದು ವೇಳೆ ಅವತ್ತು ಕರ್ಬೊಳ್ಳೆ ಗೆದ್ದು ಬರದಿದ್ದರೆ ಮನೆಯಲ್ಲಿದ್ದ ಕೆಮ್ಮೈರೆ ಸತ್ತು ಅಕ್ಕಿ ರೊಟ್ಟಿಗೆ ಪದಾರ್ಥವಾಗಬೇಕಿತ್ತು.

ಕೇಶವ ಭಟ್ಟರ ನಾಯಿ ಬೊಗಳಲು ಶುರು ಮಾಡಿತು. ಭಟ್ಟ್ರೂ ಆಟದಿಂದ ಬಂದಿರಬೇಕು. ಯಾಕೆಂದರೆ ಅವರು ಆಟಕ್ಕೆ ಲೇಟಾಗಿ ಹೋಗಿ ಬೇಗ ಬರುವವರು. ಹತ್ತು ಗಂಟೆಗೆ ಊಟ ಮಾಡಿ ಹೋದರೆ ಬೆಳಿಗ್ಗೆ ಐದು ಆಗುವುದಕ್ಕಿಂತ ಮುಂಚೆ ಬಂದು ಎರಡು ಮೂರು ಗಂಟೆ ನಿದ್ದೆ ಮಾಡಿ ಮತ್ತೆ ಮರುದಿನ ಅವರು ಎಂದಿನಂತೆ ಎಲ್ಲ ಕೆಲಸದಲ್ಲಿ ತೊಡಗುತ್ತಾರೆ. ಜತೆಗೆ ಯಕ್ಷಗಾನದ ವಿಮರ್ಶೆ ಮಾಡಲು ಸಂಜೆ ಗೋಳಿಮರದ ಕೆಳಗೆ ಸೇರುವ ಎಲ್ಲ ಬಚ್ಚಾಳಿಗಳಿಗೆ ಅವರೇ ನಾಯಕರು ಎಂಬಂತೆ ಅಲ್ಲಿರುತ್ತಾರೆ.

ಇಷ್ಟು ಬೇಗ ತೋಟಕ್ಕೆ ಹೋದರೆ ಬಿದ್ದ ಅಡಿಕೆ ಕೂಡ ಕಣ್ಣಿಗೆ ಕಾಣ ಸಿಗುವುದಿಲ್ಲ. ಬೆಳಿಗ್ಗೆ ಮಾಂಕು ಬಂದರೆ ತೋಟದ ತಡುಮೆಯನ್ನೊಮ್ಮೆ ಸರಿ ಮಾಡಿಸಬೇಕು. ಮೊನ್ನೆ ಮಡಲು ಎಳೆದು ಕೊಂಡು ಹೋಗುವಾಗ ಅದುಕೂಡ ಮುರಿದುಹೋಯಿತು.

ದನದ ಹಟ್ಟಿಗೆ ಹೋಗಿ ಅವುಗಳಿಗೆ ಒಣಹುಲ್ಲು ಹಾಕಿ ಆಯಿತು. ಇನ್ನು ಸ್ವಲ್ಪದರಲ್ಲಿ ಅವನ್ನು ಕರೆಯಬೇಕು. ಲಚುಮಿಯ ಹಾಲು ನೀರಾಗಲಿಕ್ಕೆ ಶುರುವಾಗಿದೆ. ಎಂತದ್ದು ಗೊತ್ತಿಲ್ಲ. ನೋಡುವ ಸಂಜೆ ಸಮಯ ಸಿಕ್ಕಿದರೆ ಸೊಸೈಟಿಗೆ ಹೋಗುವಾಗ ಪಶುವೈದ್ಯರಿದ್ದರೆ ಏನಾದರೂ ಕೇಳಿಕೊಳ್ಳಬಹುದು. ಅತ್ತಿಗೆಯವರು ಯಾವಾಗ ಎದ್ದರೋ ಒಂದೂ ಗೊತ್ತಾಗಿಲ್ಲ. ಒಲೆಯಲ್ಲಿ ದೋಸೆಯ ಚುಯಿಂ ಚುಯಿಂ ಕೇಳುತ್ತದೆಯಲ್ಲ. ಈಗ ಹರೀಶನಿಗೆ ಎಂಟುಗಂಟೆಯ ಬಸ್ಸಿಗೆ ಹೋಗಬೇಕಲ್ಲ. ಅದಕ್ಕಾಗಿ ಅವನು ತಯಾರಿ ನಡೆಸುತ್ತಿದ್ದಾನೆ.

ಮುಖವೆಲ್ಲ ತೊಳೆದು ಮೀನಿನ ಗಸಿಯಲ್ಲಿ ದೋಸೆ ತಿಂದೂ ಆಯಿತು. ಎಷ್ಟು ಬೇಗ ಮುಂಜಾನೆ ಹರಿದು ಮಧ್ಯಾಹ್ನವಾಗುತ್ತಾ ಬಂತು. ಏನೆಲ್ಲಾ ಕೆಲಸ ಇದೆ. ಕೆಲಸ ಮುಗಿಸಿ ಮತ್ತೆ ಬಂದು ನಿಮ್ಮಲ್ಲಿ ಮಾತಾಡುವ ಆಶೆ ಇದೆ. ನೋಡೋಣ. ಹೇಗಾಗುತ್ತದೆಯೆಂದು. ದಿನಚರಿಯನ್ನು ಮುಂದುವರಿಸುವ ವಿಶ್ವಾಸದೊಂದಿಗೆ.
ಒಲವಿನ
ಬಾನಾಡಿ.

1 comment:

  1. Check out http://kannada.blogkut.com/ for all kannada blogs, News & Videos online. Lets Get united with other bloggers.

    ReplyDelete