Thursday, January 31, 2008

ದಿನಚರಿ : ಮುಂಜಾನೆಊರಿನ ಪದವಿನ ಮೈದಾನದಲ್ಲಿ ದೇವಿ ಮಹಾತ್ಮೆ ಯಕ್ಷಗಾನದ ಅಬ್ಬರದ ಚೆಂಡೆಯ ಪೆಟ್ಟಿಗೆ ಇವತ್ತು ಬೆಳಿಗ್ಗೆ ಎಂದಿಗಿಂತ ಅರ್ಧ ಗಂಟೆ ಮೊದಲೇ ಎಚ್ಚರವಾಯಿತು. ಅಂದರೆ ಈಗ ಮೂರೂವರೆ ಗಂಟೆ ಇರಬಹುದು. ಯಕ್ಷಗಾನವುಂಟು ಎಂದು ಗುಡ್ಡೆಯ ಬದಿಯ ಮಾಂಕು ಹೇಳಿದ್ದ. ಮಾಧವಣ್ಣನವರ ಹರಕೆ ಬಯಲಾಟವಾಗಿ ಇದು ಪ್ರತಿವರ್ಷ ನಡೆಯುತ್ತಿದೆ. ಹಾಗಾಗಿ ಊರಿನ ಎಲ್ಲರಿಗೂ ಗೊತ್ತು. ಸಂಜೆ ಸತ್ಯನಾರಾಯಣ ಪೂಜೆ ಮುಗಿಸಿ ಎಲ್ಲರಿಗೂ ಊಟ ಕೊಟ್ಟು ರಾತ್ರೆ ದೇವಿ ಮಹಾತ್ಮೆ ಆಡಿಸುವುದು ಮಾಧವಣ್ಣನಿಗೆ ವರ್ಷದ ರೂಢಿ.
ಚಳಿಯಿನ್ನೂ ಹೆಚ್ಚೂ ಇಲ್ಲ. ಕಡಿಮೆಯೂ ಇಲ್ಲ. ಹಾಗಿದೆ. ರಾತ್ರಿಯಿಡೀ ಬರೇ ಸಾಧಾರಣ ಹೊದಿಕೆ ಹೊದ್ದರೆ ಚಳಿಯಾಗುತ್ತಿತ್ತು. ಹಾಗೆಂದು ಕಂಬಳಿ ಹೊದ್ದರೆ ಸೆಖೆಯಾಗುತ್ತಿತ್ತು. ತೋಟದ ಬದಿಯ ಕೆರೆಯಲ್ಲಿ ನೀರು ತುಂಬಿದೆ. ಅದಕ್ಕಾಗಿಯೋ ಏನೋ ಗಾಳಿ ಬೀಸುವಾಗ ಚಳಿಯಾದಂತನಿಸುತ್ತದೆ.
ಎದ್ದು ಹೊರಗೆ ಬಂದರೆ ಕಾಳು ನಾಯಿ ಬಚ್ಚಲಕೋಣೆಯ ಒಲೆಯ ಬದಿಯಲ್ಲಿ ಮಲಗಿ ಗೊರಕೆ ಹೊಡೆಯುತ್ತಿದೆ. ಅಂಗಳದಲ್ಲಿ ಮಂಜು ಬಿದ್ದು ಒದ್ದೆಯಾಗಿದೆ. ಹರಡಿರುವ ಅಡಿಕೆಯನ್ನು ಕದ್ದು ಕೊಂಡು ಹೋದರೂ ಕಾಳುನಿಗೆ ಗೊತ್ತಾಗದಷ್ಟು ಜೋರಾಗಿ ನಿದ್ದೆಮಾಡುತ್ತಿದ್ದಾನೆ.
ಬಚ್ಚಲಿಗೆ ಹೋಗಿ ಮುಖಕ್ಕೆ ನೀರು ಹಾಕಿದಾಗ ಕಾಳು ತಲೆ ಎತ್ತಿ ನೋಡಿ ನಾನೇ ಎಂದು ತಿಳಿದು ಮತ್ತೆ ಮಲಗಿದ. ಅಮ್ಮನಿಗೆ ಮುಖ ತೊಳೆಯಲು ನೀರು ಬಿಸಿಯಾಗಲಿ ಎಂದು ಬಚ್ಚಲ ಒಲೆಗೆ ಒಂದೆರಡು ತೆಂಗಿನ ಸಿಪ್ಪೆ ಮತ್ತು ಮಡಲನ್ನು ಇಟ್ಟು ಬಂದೆ.
ಗೂಡಿನಲ್ಲಿದ್ದ ಕೋಳಿಗಳಿಗೆ ಎಚ್ಚರವಾಗಿಲ್ಲವೋ ಏನೋ. ತೋಟದ ಆ ಬದಿಯ ತನಿಯಪ್ಪಣ್ಣನ ಕೋಳಿ ಕೂಗಿತು. ಈಗ ನಮ್ಮ ಕೋಳಿಗಳೂ ಕೂಗಲು ಆರಂಭಿಸಿದವು. ಗಂಟೆ ನಾಲ್ಕರ ಹತ್ತಿರ ವಾಗಿರಬಹುದು ಎಂದು ಅವುಗಳು ಕೂಗಿದ್ದುದರಿಂದಲೇ ಗೊತ್ತಾಯಿತು. ದಿನವೂ ತನಿಯಪ್ಪಣ್ಣನ ಅಂಕದ ಕೋಳಿಗಳು ಎಲ್ಲರಿಂದ ಮೊದಲು ಕೂಗುವುದು. ಬಹಳ ಪ್ರೀತಿಯಿಂದ ಸಾಕುವ ತನಿಯಪ್ಪಣ್ಣ ಅವುಗಳನ್ನು ತನ್ನ ಮನೆಯ ಜಗಲಿಯಲ್ಲಿಯೇ ಕಟ್ಟಿಹಾಕುತ್ತಾನೆ. ರಾತ್ರಿ ಮಲಗಿದ ಅವನಿಗೆ ಕೋಳಿಗಳ ಕುಟುರು ಕುಟುರು ಶಬ್ದ ಕೇಳದಿದ್ದರೆ ನಿದ್ದೆ ಹತ್ತುವುದಿಲ್ಲ. ಮೊನ್ನೆ ಅಡ್ಕದಲ್ಲಿ ನಡೆದ ಅಂಕದಲ್ಲಿ ಅವನ ಕರ್ಬೊಳ್ಳೆ ಕೋಳಿ ನಾಗುನ ಕೋಳಿಯನ್ನು ಬಾಳಿನಲ್ಲಿ ಕತ್ತರಿಸಿಯೇ ಹಾಕಿತ್ತು. ಗದ್ದೆಯಲ್ಲಿ ಬೆಳೆದ ಭತ್ತದ ಅಕ್ಕಿರೊಟ್ಟಿ ಮಾಡಲು ಅಕ್ಕಿ ನೆನೆಹಾಕಲು ಹೆಂಡತಿಯಲ್ಲಿ ಹೇಳಿಯೇ ಹೋಗಿದ್ದ. ಒಂದು ವೇಳೆ ಅವತ್ತು ಕರ್ಬೊಳ್ಳೆ ಗೆದ್ದು ಬರದಿದ್ದರೆ ಮನೆಯಲ್ಲಿದ್ದ ಕೆಮ್ಮೈರೆ ಸತ್ತು ಅಕ್ಕಿ ರೊಟ್ಟಿಗೆ ಪದಾರ್ಥವಾಗಬೇಕಿತ್ತು.

ಕೇಶವ ಭಟ್ಟರ ನಾಯಿ ಬೊಗಳಲು ಶುರು ಮಾಡಿತು. ಭಟ್ಟ್ರೂ ಆಟದಿಂದ ಬಂದಿರಬೇಕು. ಯಾಕೆಂದರೆ ಅವರು ಆಟಕ್ಕೆ ಲೇಟಾಗಿ ಹೋಗಿ ಬೇಗ ಬರುವವರು. ಹತ್ತು ಗಂಟೆಗೆ ಊಟ ಮಾಡಿ ಹೋದರೆ ಬೆಳಿಗ್ಗೆ ಐದು ಆಗುವುದಕ್ಕಿಂತ ಮುಂಚೆ ಬಂದು ಎರಡು ಮೂರು ಗಂಟೆ ನಿದ್ದೆ ಮಾಡಿ ಮತ್ತೆ ಮರುದಿನ ಅವರು ಎಂದಿನಂತೆ ಎಲ್ಲ ಕೆಲಸದಲ್ಲಿ ತೊಡಗುತ್ತಾರೆ. ಜತೆಗೆ ಯಕ್ಷಗಾನದ ವಿಮರ್ಶೆ ಮಾಡಲು ಸಂಜೆ ಗೋಳಿಮರದ ಕೆಳಗೆ ಸೇರುವ ಎಲ್ಲ ಬಚ್ಚಾಳಿಗಳಿಗೆ ಅವರೇ ನಾಯಕರು ಎಂಬಂತೆ ಅಲ್ಲಿರುತ್ತಾರೆ.

ಇಷ್ಟು ಬೇಗ ತೋಟಕ್ಕೆ ಹೋದರೆ ಬಿದ್ದ ಅಡಿಕೆ ಕೂಡ ಕಣ್ಣಿಗೆ ಕಾಣ ಸಿಗುವುದಿಲ್ಲ. ಬೆಳಿಗ್ಗೆ ಮಾಂಕು ಬಂದರೆ ತೋಟದ ತಡುಮೆಯನ್ನೊಮ್ಮೆ ಸರಿ ಮಾಡಿಸಬೇಕು. ಮೊನ್ನೆ ಮಡಲು ಎಳೆದು ಕೊಂಡು ಹೋಗುವಾಗ ಅದುಕೂಡ ಮುರಿದುಹೋಯಿತು.

ದನದ ಹಟ್ಟಿಗೆ ಹೋಗಿ ಅವುಗಳಿಗೆ ಒಣಹುಲ್ಲು ಹಾಕಿ ಆಯಿತು. ಇನ್ನು ಸ್ವಲ್ಪದರಲ್ಲಿ ಅವನ್ನು ಕರೆಯಬೇಕು. ಲಚುಮಿಯ ಹಾಲು ನೀರಾಗಲಿಕ್ಕೆ ಶುರುವಾಗಿದೆ. ಎಂತದ್ದು ಗೊತ್ತಿಲ್ಲ. ನೋಡುವ ಸಂಜೆ ಸಮಯ ಸಿಕ್ಕಿದರೆ ಸೊಸೈಟಿಗೆ ಹೋಗುವಾಗ ಪಶುವೈದ್ಯರಿದ್ದರೆ ಏನಾದರೂ ಕೇಳಿಕೊಳ್ಳಬಹುದು. ಅತ್ತಿಗೆಯವರು ಯಾವಾಗ ಎದ್ದರೋ ಒಂದೂ ಗೊತ್ತಾಗಿಲ್ಲ. ಒಲೆಯಲ್ಲಿ ದೋಸೆಯ ಚುಯಿಂ ಚುಯಿಂ ಕೇಳುತ್ತದೆಯಲ್ಲ. ಈಗ ಹರೀಶನಿಗೆ ಎಂಟುಗಂಟೆಯ ಬಸ್ಸಿಗೆ ಹೋಗಬೇಕಲ್ಲ. ಅದಕ್ಕಾಗಿ ಅವನು ತಯಾರಿ ನಡೆಸುತ್ತಿದ್ದಾನೆ.

ಮುಖವೆಲ್ಲ ತೊಳೆದು ಮೀನಿನ ಗಸಿಯಲ್ಲಿ ದೋಸೆ ತಿಂದೂ ಆಯಿತು. ಎಷ್ಟು ಬೇಗ ಮುಂಜಾನೆ ಹರಿದು ಮಧ್ಯಾಹ್ನವಾಗುತ್ತಾ ಬಂತು. ಏನೆಲ್ಲಾ ಕೆಲಸ ಇದೆ. ಕೆಲಸ ಮುಗಿಸಿ ಮತ್ತೆ ಬಂದು ನಿಮ್ಮಲ್ಲಿ ಮಾತಾಡುವ ಆಶೆ ಇದೆ. ನೋಡೋಣ. ಹೇಗಾಗುತ್ತದೆಯೆಂದು. ದಿನಚರಿಯನ್ನು ಮುಂದುವರಿಸುವ ವಿಶ್ವಾಸದೊಂದಿಗೆ.
ಒಲವಿನ
ಬಾನಾಡಿ.

Friday, January 25, 2008

ಸಂದೇಶಗಳುನಿಲ್ಲದ ಸಂದೇಶ

ಪಣಂಬೂರು ಬೀಚಿನಲ್ಲಿ
ಕಾಯಬೇಡ ಎಂದಿದ್ದೆ. ನಿನ್ನ ಮೆಸೇಜ್ ಬಂದಾಗ ಅರ್ಥವಾಗಲಿಲ್ಲ. ನೀನು ನನ್ನನ್ನು ನಿನಗಾಗಿ ಕಾಯಬೇಡ ಎಂದಿದ್ದೆಯೋ? ನಾನು ನಿನ್ನನ್ನು ನನಗಾಗಿ ಕಾಯಬೇಡ ಎಂದಿದ್ದೆನೋ ಗೊತ್ತಾಗಲಿಲ್ಲ. ಅಥವಾ "ಕಾಯ" ಬೇಡ. ಕಾಯದ ಜತೆಗೆ ಯಾವ ಕಾಯಕವೂ ಬೇಡ. ನಿನ್ನ ಒಗಟಿನ ಮಾತುಗಳು. ಕವನಗಳು. ಈಗೀಗ ಮೆಸೆಜ್‍ಗಳು.
ರಾತ್ರಿಯ ಒಂದು ಗಂಟೆಗೂ ನಿಲ್ಲದ ನಿನ್ನ ಮೆಸೆಜ್‍ಗಳನ್ನು ಓದುವ ನನ್ನನ್ನು ಕಂಡ ನನ್ನ ಗೆಳೆಯನಿಗೆ ಆಶ್ಚರ್ಯ. ಅಲ್ಲ ಅವಳು ಇನ್ನೂ ರಾತ್ರಿ ಒಂದು ಗಂಟೆಗೂ ಮಲಗಿಲ್ಲ. ನಾಳೆ ಬೆಳಗಾಗುವುದರೊಳಗೆ ಎದ್ದು ಮನೆಗೆಲಸ ಮುಗಿಸಿ ಕಾಲೇಜಿಗೆ ಹೋಗಿ ಪಾಠ ಮಾಡುತ್ತಾಳೆ. ಅವಳ ಪಾಠ ಕೇಳಲೂ ಹುಡುಗ ಹುಡುಗಿಯರು ಕಾತುರರಾಗಿರುತ್ತಾರೆ. ಹೇಗಪ್ಪಾ ನಿಭಾಯಿಸುತ್ತಾಳೆ ಎಂದು ನಿನ್ನ ಬಗ್ಗೆ ಕೇಳಿದ. ಅಷ್ಟರಲ್ಲಿ ನಿನ್ನ ಮೆಸೇಜ್ "ನಾನು ಮಾಕ್ಸಿಂ ಗಾರ್ಕಿಯ ಮದರ್ ಓದುತ್ತಿದ್ದೇನೆ. ನೀನೇನು ಮಾಡ್ತೀಯ" ಎಂದು.

ನನ್ನ ಗೆಳೆಯನಿಗೆ ಕೇಳಿದೆ "ಏನುತ್ತರಿಸಲಿ" ಎಂದು. "ನಾಲ್ಕನೆ ಕ್ಲಾಸಿನಿಂದಲೂ ನನ್ನ ಗೆಳತಿಯಾಗಿರುವ ರಾಧಿಕಾಳ ಜತೆ ರಾತ್ರಿ ಕಳೆಯುತ್ತಿದ್ದೇನೆ" ಎಂದು ಮೆಸ್ಸೇಜಿಸು ಎಂದು ನನ್ನ ಗೆಳೆಯ ಸಲಹೆ ನೀಡಿದ. ನಾನು "ಗೆಟಿಂಗ್ ರೆಡಿ ಟು ಸ್ಲೀಪ್. ಗುಡ್ ನೈಟ್" ಎಂದರೂ ನೀನು ಕಳುಹಿಸುವ ಮೆಸೆಜ್‍ಗಳು ನಿಲ್ಲಲ್ಲಿಲ್ಲ. ನಾನುತ್ತರಿಸಲ್ಲಿಲ್ಲ. ಇವತ್ತು ಮುಂಜಾನೆ ನೋಡಿದಾಗ ಹತ್ತರ ಮೇಲೆ ನಿನ್ನ ಮೆಸೇಜ್‍ಗಳು.

ಕಾಯುತ್ತಿದ್ದೇನೆ ನಾನು
ನಿನಗಾಗಿ ಎಂದು
ಕಾಯುತ್ತಲೇ ಇದ್ದೇವೆ ನಾನು-ನೀನು
ಯಾರನ್ನು, ಯಾಕಾಗಿ, ಎಷ್ಟೊತ್ತು
ಕಾಯಲಿ?

ಒಲವಿನಿಂದ
ಬಾನಾಡಿ

Thursday, January 24, 2008

ಸುಮಧುರ ನೆನಪುಗಳ ವಾಸನೆ


ಪರಿಮಳ:
ಮಲ್ಲಿಗೆ
ನಿಮ್ಮ ಮನೆಯಂಗಳದಲ್ಲಿ ಅರಳಿದ್ದ ಮಲ್ಲಿಗೆ ಹೂವನ್ನು ಕಂಡು ಮೆಚ್ಚಿದ್ದೆ. ಅದರ ಸುವಾಸನೆಯನ್ನು ಸ್ವಾದಿಸಿ ಬಹಳ ದಿನಗಳಿಂದ ಮರೆತಿದ್ದ ಸುಂದರ ನೆನಪುಗಳನ್ನೆಲ್ಲಾ ಮರುಕಳಿಸಿ ಮನವನ್ನು ತುಂಬಿದ್ದೆ. ಮುಂಜಾನೆಯ ತುಂತುರು ಮಂಜಿನ ಹನಿಗಳನ್ನು ಹೊತ್ತು ನಿಂದ ಮಲ್ಲಿಗೆಯ ಎಸಳುಗಳು ಸಂಜೆ ನೀಡಿದ ಸುಮಧುರತೆಯ ಉಲ್ಲಾಸವನ್ನು ಮತ್ತೆ ಕೆದರಿತ್ತು. ಹೌದು. ಸಂಜೆ ನಿಮ್ಮ ಮನೆಯಲ್ಲಿ ಅರಳಿದ ಮಲ್ಲಿಗೆಯ ಕಂಪು ಮೈಲು ದೂರದ ನಮ್ಮ ಮನೆಯಲ್ಲಿ ಹೇಗೆ ಬಂತು ಎಂದು ನೋಡಲು ಆ ಮಲ್ಲಿಗೆಯ ಮಾಲೆಯನ್ನು ಮುಡಿಯಲ್ಲಿಟ್ಟು ಬಂದ ನೀನು ಮನೆಯನ್ನು, ಮನವನ್ನು, ರಾತ್ರಿಯ ಕನಸನ್ನು ಎಲ್ಲವನ್ನು ಹೊಕ್ಕಿದ್ದೆ.

ಮಣ್ಣು
ಮುಸ್ಸಂಜೆಗೆ ದಿಡೀರೆಂದು ಬಂದು ನಿಂತ ಬಸ್ಸನ್ನಿಂದಿಳಿದಾಗ ಮೊದಲ ಮಳೆಗೆ ನೆನೆದ ಮಣ್ಣಿನ ಕಂಪನ್ನು ಆಹ್ಲಾದಿಸಿದಾಗ ಈ ಮಣ್ಣಿನ ಕಣಕಣದಲ್ಲೂ ಕಾಣುವ ಅದ್ಭುತತೆಯನ್ನು ಅರಿತಂತನಿಸಿತು. ಸುರಿದ ಮಳೆಗೆ ಪುಳಕಗೊಂಡ ಧೂಳು ಮಣ್ಣು ಸುಮ್ಮನೆ ಸಪ್ಪಗಾಗಿದೆಯೋ ಏನೋ?

ಹೆಣ್ಣು
ಎರಡು ಉಸಿರುಗಳು ಸೇರಿ ಹೀರಿದ ಪ್ರೇಮದ ಮಧುರತೆಯಲ್ಲಿ ಅದೇನು ಹುಮ್ಮಸ್ಸು. ಹರಿದು ಹೋಗದ ಬೆವರಿನ ವಾಸನೆಯನ್ನು ಕುಡಿದ ಅಮಲಿನಲ್ಲಿ ತೇಲಾಡಿದಾಗ ಮದಿರೆಯ ಪಾತ್ರೆ ಖಾಲಿಯಾದರೇನಂತೆ? ಅವಳ ಒಳಗನ್ನು ಸೇರುವ ಮೊದಲಿನ ಉತ್ಕಟತೆಯ ಪ್ರೇಮೊಲ್ಲಾಸದ ಕಂಪಿಗೆ ಧರೆಯಿಡೀ ಕಂಪಿಸಿತು.

ಸಮುದ್ರ
ಕಡಲ ಕರೆಗೆ ಹೋಗುವ ಮೊದಲು ಮೊಗವೀರರ ಮನೆಯ ಹಿತ್ತಿಲಲ್ಲಿ ನಡೆಯುವಾಗ ಅದೇನು ಕಂಪು. ಕಡಲ ಒಡಲಿನಿಂದ ಬಂದ ಹಸಿಮೀನು ಒಂದೆಡೆಯಾದರೆ, ಕರುಳು ಕಸಿದು ಒಣಗಲು ಹಾಕಿದ ಶಾರ್ಕ್ (ಬಲ್ಯಾರ್, ತೊರಕೆ, ಬಂಗುಡೆ, ಇತ್ಯಾದಿ) ಮೀನಿನ ವಾಸನೆ. ಒಣಗಿದ ಮೀನನ್ನು ಸುಟ್ಟು ವಾಸನೆ. ಆ ವಾಸನೆಗೆ ಹೊಟ್ಟೆ ತುಂಬಿದ ಸಂತಸ.
ಒಲವಿನಿಂದ
ಬಾನಾಡಿ

Sunday, January 6, 2008

ಹೊಸ ವರ್ಷದ ಪಯಣ

ವರ್ಷ ಹೊಸದಾಗಿದೆ. ಹಳೆಯ ವರ್ಷದ ದಿನದ ಮೋಜು ಮುಗಿದಿದೆ. ಮುಂಬಯಿಯಲ್ಲಿ ಅದರ ಗೋಜಲು ಶುರುವಾಗಿದೆ. ಹೊಸ ವರ್ಷದ ಮೊದಲ ದಿನದ ಅಪಘಾತಗಳು ಈ ಸಲ ಕಡಿಮೆಯೋ ಎಂದೆನಿಸಿದೆ. ಹೊಸ ವರ್ಷದೊಂದಿಗೆ ಹೊಸ ಭರವಸೆಗಳು, ಹೊಸ ಕನಸುಗಳು, ಹೊಸ ದೀಕ್ಷೆಗಳು ಹುಟ್ಟಿವೆ. ಈ ಬ್ಲಾಗ್ ಕೂಡಾ ಹೊಸ ಬಟ್ಟೆ ತೊಟ್ಟು ಕೊಂಡಿದೆ.

ಮಂಗಳೂರಿನಿಂದ ಬೆಂಗಳೂರಿಗೆ ರೈಲು ಓಡಲು ಮತ್ತೆ ಆರಂಭವಾಗಿದೆ. ತೊಂಬತ್ತರ ದಶಕದ ಆರಂಭದಲ್ಲಿ ನಾನು ಅದೇ ರೈಲು ಮಾರ್ಗವಾಗಿ ಬಹಳಷ್ಟು ಪ್ರವಾಸ ಕೈಗೊಂಡಿದ್ದೆ. ಅದು ಸುಂದರ ಅನುಭವ ಅನ್ನುವುದಕ್ಕೆ ಅಂದಿನ ದೂರದರ್ಶನದಲ್ಲಿ ಈ ಸುಂದರ ಮಾರ್ಗದ ಕುರಿತು ಒಂದು ಸಾಕ್ಷ್ಯ ಚಿತ್ರ ಕೂಡಾ ಬಂದಿತ್ತು. ಒಮ್ಮೆ ಬೆಂಗಳೂರಿನಿಂದ ಬರುತ್ತಿದ್ದೆವು. ಉತ್ತರ ಭಾರತದ ಪ್ರಯಾಣಿಕರು ನಮ್ಮ ಕೋಚ್‍ನಲ್ಲಿ ಹತ್ತಿದರು. ನಾವು ನಮ್ಮಷ್ಟಕ್ಕೇ ಇದ್ದೆವು. ಅವರು ಮಾತು ಆರಂಭಿಸಿದರು. ಮಾತುಕತೆಯಾಗುತ್ತಿದ್ದಂತೆ ಇಸ್ಪೀಟ್ ಆಟ ಶುರುವಾಯಿತು. ನಂತರ ಅವರು ತಮ್ಮೊಂದಿಗೆ ತಂದ ತಿಂಡಿಗಳ ಪೊಟ್ಟಣ ಬಿಚ್ಚಿದರು. ನಂತರ ಬೆಂಗಳೂರಿನಿಂದ ತಂದ ವಿಸ್ಕಿ ಬಾಟಲಿ ತೆರೆದರು. ಕುಡಿಯಲು ಆರಂಭಿಸಿದರು. ಕುಡಿದು ಕುಡಿದು ಮೂಗಿನ ಮಟ್ಟಕೇರಿತು. ರಾತ್ರಿ ಬಹಳವಾಯಿತು. ನಾವೆಲ್ಲ ಮಲಗಿದೆವು. ಅವರ ಗಲಾಟೆ ಆರಂಭವಾಗಿ ನಮ್ಮ ನಿದ್ರೆಗೆ ತೊಂದರೆಯಾಯಿತು.

ಕುಡಿದವರ ಅಮಲು ಜಾಸ್ತಿಯಾಗಿ ವಾಂತಿ ಮಾಡಲು ಆರಂಭಿಸಿದರು. ಇಡೀ ಕೋಚ್ ಗಬ್ಬುಹೊಡೆಯಲು ಆರಂಭವಾಯಿತು. ನಾವು ಇನ್ನೊಂದು ಕೋಚ್‍ಗೆ ಹೋಗಲು ನಿರ್ಧರಿಸಿದೆವು. ಅಷ್ಟರಲ್ಲಿ ಇವರ ಆವಾಂತರದ ಬಗ್ಗೆ ಟೀಟಿ ಗೆ ತಿಳಿದು ಆತ ಬಂದ. ಇವರಲ್ಲಿ ಟಿಕೇಟ್ ಯಾರಲ್ಲಿದೆ ಎಂದೂ ಗೊತ್ತಿರಲ್ಲಿಲ್ಲ. ಎಲ್ಲರ ಬೈಗಳನ್ನು ಕೇಳಿಕೊಳ್ಳುತ್ತಾ ಕೊಳ್ಳುತ್ತಾ ಅವರೊಂದು ಬದಿಯಲ್ಲಿ ಕುಳಿತು ರಾತ್ರಿಯನ್ನು ಕಳೆದರು.

ಮುಂಜಾನೆ ರೈಲು ಮಂಗಳೂರು ತಲಪಿತು.

ಎಂದಿನಂತೆ ಪ್ರತಿವರ್ಷದ ಕೊನೆಯ ದಿನ,ವರ್ಷವಿಡೀ ಕುಡಿದರೂ ಇನ್ನೂ ಮುಗಿದ್ದಿಲ್ಲ ಎಂಬಂತೆ ಕುಡಿಯುವ ಪರಿಯನ್ನಿಟ್ಟಿರುವ ನಮ್ಮಲ್ಲಿ ಈ ವರ್ಷ ಕುಡಿತವಿರಲ್ಲಿಲ್ಲ. ಹೊಸವರ್ಷದ ಹೊಸ ದಿನ ಹ್ಯಾಂಗೋವರ್‍ನಲ್ಲಿ ತಲೆ ಸಿಡಿಯಲ್ಲಿಲ್ಲ. ಮಿನಿಬಾರ್‍ನಲ್ಲಿ ಬಾಟಲಿಗಳು ಹಾಗೇ ಕಾದು ಕುಳಿತಿವೆ.

ಒಲವಿನಿಂದ
ಬಾನಾಡಿ.