Tuesday, December 30, 2008

ಮುಗಿಯಿತು ಎಂದೊಡನೆ ಆರಂಭವಾಗುವುದು

ಜನವರಿ ಒಂದರಂದು ಉತ್ತರ ಪ್ರದೇಶದ ರಾಮಪುರದಲ್ಲಿ ಸೆಂಟ್ರಲ್ ರಿಸರ್ವ್ ಪೋಲೀಸ್ ಫೋರ್ಸ್‌ನ ಕೇಂದ್ರಕ್ಕೆ ಭಯೋತ್ಪಾದಕರು ದಾಳಿಮಾಡಿ ಎಂಟು ಜನರ ಮಾರಣ ಹೋಮ ಮಾಡಿದರು. ಈ ಭಯೋತ್ಪಾದನೆ ೨೦೦೮ ರಲ್ಲಿ ಮೇ, ಜುಲೈ, ಸಪ್ಟಂಬರ್, ಅಕ್ಟೋಬರ್, ನವಂಬರ್ ತಿಂಗಳಲ್ಲಿ ಮುಂದುವರಿಯಿತು.
ಜೈಪುರದಲ್ಲಿ ೮೦, ಬೆಂಗಳೂರಿನಲ್ಲಿ ಒಂದು, ಅಹಮದಾಬಾದ್‌ನಲ್ಲಿ ೫೩, ದಿಲ್ಲಿಯಲ್ಲಿ ೨೬, ಗುವಾಹಟಿಯಲ್ಲಿ ೮೪ ಮತ್ತೆ ಮುಂಬಯಿಯಲ್ಲಿ ೧೮೪. ಇದು ಬಲಿಯಾದವರ ಸಂಖ್ಯೆ. ಇನ್ನೊಂದು ಜನವರಿ ಒಂದು ಬರಲು ಕೆಲವೇ ಘಂಟೆಗಳಿವೆ. ಅದರೊಳಗೆ ಇನ್ನೆಷ್ಟು ಬಲಿಯಾಗಬಹುದೆಂಬ ಆತಂಕದಲ್ಲಿಯೇ ಕುಟ್ಟುತ್ತಿದ್ದೇನೆ.
೨೦೦೮ ಆತಂಕದ ವರ್ಷವೇ ಎಂದು ಸಾಬೀತು ಪಡಿಸಿತು. ವರ್ಷದ ಆರಂಭದಲ್ಲಿ ೨೦೦೦೦ ತೋರಿಸುತ್ತಿದ್ದ ಮುಂಬಯಿ ಶೇರ್ ಮಾರುಕಟ್ಟೆಯ ಸೂಚ್ಯಂಕ ಇಂದು ಅದರ ನಾಲ್ಕನೇ ಒಂದರಷ್ಟು ಇಳಿದಿದೆ. ದುಮ್ಮಾನಗಳು ಬಹಳಷ್ಟು.
ಕೊನೆಯದೊಂದು ಆಶಾಕಿರಣ ಕಾಶ್ಮೀರದಲ್ಲಿ ಪ್ರಜಾಪ್ರಭುತ್ವದ ವಿಜಯ.
ವರ್ಷದ ವಿಶ್ವ ಘಟನೆ: ಆಫ್ರಿಕಾ ಮೂಲದ ಕರಿಯ ಡೆಮಾಕ್ರೇಟ್ ಒಬಾಮಾ ಅಮೇರಿಕಾದ ಅಧ್ಯಕ್ಷನಾಗಿ ಆಯ್ಕೆ ಯಾಗಿದ್ದು.
ಇಂತಹ ಘಟನೆಗಳ ನಡುವೆಯೇ ಕರ್ನಾಟಕದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ 'ಅಪರೇಶನ್ ಕಮಲ' ಎಂಬ ಹೊಸಪದ ಸೃಷ್ಟಿ ಆಯಿತು. ವರ್ಷಾಂತ್ಯದ ಉಪ ಚುನಾವಣೆಯಲ್ಲಿ ಅವರ ಪಕ್ಷಕ್ಕೆ ಸಮರ್ಥನೆ ಸಿಕ್ಕಿದೆ.
ಭಾರತ ಪಾಕಿಸ್ಥಾನದ ನಡುವೆ ಸಮರದ ನೆರಳು ಬೀಳುತ್ತಿದೆಯೇ? ಯುದ್ಧಕ್ಕೆ ಬಲಿಯಾಗುವಷ್ಟು ಎರಡೂ ದೇಶದ ರಾಜಕೀಯ ಮುತ್ಸದ್ಧಿಗಳು ಮೂರ್ಖರಲ್ಲದಿರಬಹುದು.
ಹೊಸವರ್ಷದಲ್ಲಿ ಭಾರತದಲ್ಲಿ ಹೊಸ ಸರಕಾರವನ್ನು ಚುನಾಯಿಸುವ ಅವಕಾಶ ಮತ್ತೊಮ್ಮೆ ಬರಲಿದೆ. ಆರ್ಥಿಕ ಬಿಕ್ಕಟ್ಟುಗಳು ದೂರವಾಗುವವೇ? ಭಯೋತ್ಪಾದನೆಯ ಆತಂಕ ಕಡಿಮೆಯಾಗುವುದೇ?
ಭರವಸೆಯಲ್ಲಿ ದಿನ ನೋಡುವುದೇ ಆಶಾವಾದಿಗಳ ಕರ್ತವ್ಯ.
ವರ್ಷವೊಂದು ಉರುಳಿದಾಗ ಮತ್ತೊಂದು ಅರಳುವುದು. ಗಿಡದಲ್ಲೊಂದು ಎಲೆ ಹಣ್ಣಾಗಿ ಉರುಳಿದಾಗಲೇ ಮತ್ತೊಂದು ಚಿಗುರುತ್ತದೆ. ಒಂದು ತಲೆಮಾರು ಅಳಿದಾಗಲೇ ಇನ್ನೊಂದು ತಲೆಮಾರು ಹುಟ್ಟುತ್ತದೆ. ಇದು ನಿತ್ಯಕ್ರಿಯೆ. ನಿಸರ್ಗ ಸಹಜ. ಇದೆಲ್ಲದರ ನಡುವೆ ಪ್ರಶ್ನೆಗಳು ಮೂಡುತ್ತವೆ.
ಕಾಲ ಎಂಬುದು ಆರಂಭವಾಗಿತ್ತೇ?
ವಿಶ್ವಕ್ಕೆ ಗಡಿಯಿದೆಯೇ?
ಕಾಲ ಎನ್ನುವುದು ಅತೀತವೇ?
ವಿಶ್ವವೆನ್ನುವುದು ಅನಂತವೇ?
ಹಾಗಾದರೆ ನಾನು ಎನ್ನುವುದು ಎಷ್ಟು ಚಿಕ್ಕ ಚುಕ್ಕೆ.
ಅನಂತವಾದ ವಿಶ್ವದಲ್ಲಿ ಹುಡುಕುವುದು ಹೇಗೆ? ಎಲ್ಲಿ?
ಹೊಸ ಕ್ಯಾಲೆಂಡರ್ ನೋಡುತ್ತಾ ಸೋಮವಾರ ಶುಕ್ರ, ಶನಿವಾರವಾಗಿದ್ದು ಗೊತ್ತಾಗದೇ ಕಳೆದ ಆ ಹಳೆಯ ವರ್ಷಗಳಿಗೆ ವಂದಿಸುವುದೇ?
ಅಥವಾ ಮುಂಬರುವ ದಿನಗಳು ಕೂಡಾ ಸೊಗಸಾಗುವವೆಂದೇ ತಿಳಿದು ವರ್ಷದ ಕೊನೆಗೆ ಉಳಿದುದೆಲ್ಲವನ್ನು ಸುರಿಯುವುದೇ?
ಬ್ಲಾಗು ನೋಡುವ ನಿಮಗೆಲ್ಲ ಹೊಸ ವರ್ಷ ಹೊಸತನ ತರಲಿ, ಉಲ್ಲಾಸದಾಯಕವಾಗಲಿ, ಸಂತೋಷ ತುಂಬಲಿ, ಸಿರಿ ಹರಿದು ಬರಲಿ.
ಬದುಕು ಬೆಳಕಾಗಲಿ.
ಹಾರೈಕೆಗಳು.

ಒಲವಿನಿಂದ
ಬಾನಾಡಿ

Wednesday, December 24, 2008

ಕ್ರಿಸ್ಮಸ್ ಹಬ್ಬದ ಶುಭಾಶಯಗಳು


Sunday, December 21, 2008

ಅಕ್ಕಮ್ಮಕ್ಕನ ಆದರಾತಿಥ್ಯ

ನವಂಬರದ ಸಂಜೆಗೆ ಕೊಡಗಿನ ಮಡಿಲಲ್ಲಿ ಕುಳಿತು ಗೋವಾದಿಂದ ತಂದ ಗೇರುಹಣ್ಣಿನ ಫೆನ್ನಿಯ ಬಾಟಲಿಯನ್ನು ನೋಡುತ್ತಾ ಧ್ಯಾನಿಸುತ್ತಿರುವಾಗ ಅಕ್ಕಮ್ಮಕ್ಕ ಫಕ್ಕನೆ ತಮ್ಮಾ ಅದೇಕೆ ನೀನು ಅಷ್ಟು ಕೆಟ್ಟ ವಾಸನೆಯ ಆ ಫೆನ್ನಿಯನ್ನು ಕುಡಿಯುತ್ತಿ ಎಂದಳು. ಒಳಗೆ ಮಂಚದ ಕೆಳಗೆ ರಂ ಬಾಟಲಿಗಳಿವೆ. ಒಂದೆರಡು ಸ್ಕಾಚು ಬಾಟಲಿಗಳಲ್ಲಿ ನಿನಗೆ ಬೇಕಾಗುವಷ್ಟು ಮಿಕ್ಕಿರಲೂ ಬಹುದು ಎಂದಳು.
ಅಕ್ಕಮ್ಮಕ್ಕನ ಆದರಾತಿಥ್ಯಕ್ಕೆಂದೇನೋ ನಾನು ಮಡಿಕೇರಿಯಲ್ಲಿ ಇಳಿದು ಕೊಂಡದ್ದು. ಎರಡು ದಿನವಿತ್ತು. ಹಾಗೇ ನಿಶ್ಚಿತ ಕೆಲಸಗಳಿರಲಿಲ್ಲ. ಗೋವಾದಿಂದ ಸೀದಾ ಬೆಂಗಳೂರಿಗೆ ಹೊರಟು, ಅಲ್ಲಿಯ ಕೆಲಸ ಮುಗಿಸಿ ಬಸ್ಸಲ್ಲಿ ಮಂಗಳೂರಿಗೆ ಹೋಗುವ ಮನಸ್ಸಾಗಿತ್ತು. ಮಂಗಳೂರಿನ ಬಸ್ಸು ಬರುವ ಮೊದಲು ಬಂದ ಮಡಿಕೇರಿಯ ಬಸ್ಸನ್ನೇ ಏರಿ ಕುಳಿತಾಗ ನೆನಪಾದವಳು ಅಕ್ಕಮ್ಮಕ್ಕ. ಇನ್ನು ಏನೂ ಪ್ಲಾನಿಲ್ಲ. ಸೀದಾ ಮಡಿಕೇರಿಯಲ್ಲಿ ಅಕ್ಕಮ್ಮಕ್ಕನ ಮನೆಗೆ ಹೋಗಿ ಫೆನ್ನಿ ಕುಡಿದು ನಿದ್ದೆ ಮಾಡುವುದು. ಅಥವಾ ಗೋವಾದಲ್ಲಿ ಇನ್ನೂ ಓದಿ ಮುಗಿಯದ ಆ ಇಂಗ್ಲಿಷ್ ಕಾದಂಬರಿ ಮುಗಿಸುವುದು ಎಂದು ಯೋಚಿಸಿ ಬಸ್ಸಲ್ಲಿ ನಿದ್ದೆ ಹೋದೆ.
ಬಸ್ಸಿಳಿದು ಮನೆಗೆ ಬಂದ ನನಗೆ ಅಕ್ಕಮ್ಮಕ್ಕ ಕೊಟ್ಟ ಕಾಫಿ ಕುಡಿದು ಫ್ರೆಶ್ ಆದೆ. ಹೊಟ್ಟೆತುಂಬುವಷ್ಟು ಕಾಫೀನೇ ಕುಡಿದಿದ್ದೆ. ಮಂಗಳೂರಿನಿಂದ ಬಂದಿದ್ದ ಮೀನು ಮಧ್ಯಾಹ್ನದ ಊಟಕ್ಕೆ ಸರಿಯಾಗಿತ್ತು. ಅಕ್ಕಮ್ಮಕ್ಕನಿಗೆ ನಾನು ಹೋಗಿದ್ದು ಖುಷಿಕೊಟ್ಟ ವಿಚಾರ ಎಂದೇ ಅವಳ ಉತ್ಸಾಹದಲ್ಲಿ ತೋರುತ್ತಿತ್ತು. ಮಂಗಳೂರಿನ, ಪುತ್ತೂರಿನ, ಕಾಸರಗೋಡಿನ, ಕಾರ್ಕಳದ, ಬೆಂಗಳೂರಿನ, ಸೋಮವಾರಪೇಟೆಯ ಸುದ್ದಿಗಳನ್ನು ಬಿಚ್ಚಿಬಿಚ್ಚಿ ಹೇಳಿದಳು. ನನಗೆ ಅವಳು ಉಲ್ಲೇಖಿಸಿದ ಕೆಲವು ಜನರು ಯಾರು ಎಂಬುದೂ ಗೊತ್ತಾಗಲಿಲ್ಲ. ಅವಳ ಮಾತಿಗೆ ಕಿವಿಯಾಗಿದ್ದೆ. ಇಷ್ಟೆಲ್ಲಾ ವಿಷಯಗಳನ್ನು ನನಗಾಗಿಯೇ ಹೇಳುವುದು ಅವಳಿಗೆ ನನ್ನಲ್ಲಿರುವ ಪ್ರೀತಿಯಿಂದಲ್ಲದೆ ಬೇರಾವ ಕಾರಣದಿಂದಲ್ಲ.
ಸಂಜೆಯ ಅಡುಗೆಗೆ ಪಂದಿಕರಿ ಮಾಡ್ತೇನೆ ಎಂದಳು. ಆವಾಗಲೇ ಫೆನ್ನಿಯನ್ನು ಏರಿಸಿದ್ದ ನನಗೆ ಖುಷಿಯಾಯ್ತು. ಅಕ್ಕಮ್ಮಕ್ಕ ನೀನು ಪಂದಿಕರಿಯನ್ನು ನನ್ನಿಂದ ಮಾಡಿಸು ಎಂದೆ. ಮಾಂಸದ ಅಡುಗೆ ಮಾಡುವುದು ನನ್ನ ಹವ್ಯಾಸಗಳಲ್ಲೊಂದು ಎಂದುಕೊಂಡವ ನಾನು. ಅವಳು ಕೊಟ್ಟ ಮಾಂಸವನ್ನು ಸಣ್ಣಗೆ ತುಂಡು ಮಾಡಿದೆ, ಅದಕ್ಕೆ ಅವಳಂದಂತೆ ಅರಶಿನಹುಡಿ, ಮೆಣಸಿನ ಹುಡಿ, ಉಪ್ಪು ಹಾಕಿಡಲಾಯಿತು. ಬಹಳಷ್ಟು ಈರುಳ್ಳಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಶುಂಠಿ, ಕರಿಮೆಣಸುಗಳನ್ನು ಹಾಕಿ ಕಡೆದಿಡಲಾಯಿತು. ಕೊತ್ತಂಬರಿ, ಜೀರಿಗೆ, ಕರಿಮೆಣಸು, ಮೆಂತೆ, ಇತ್ಯಾದಿಯನ್ನು ಹುರಿದು ಹುಡಿಮಾಡಲಾಯಿತು. ಅದಕ್ಕಾಗಿಯೇ ಇರುವ ಕಚಂಪುಳಿಯನ್ನೂ ಸೇರಿಸಿಯಾಯಿತು. ಇವೆಲ್ಲವನ್ನೂ ಮಾಡುತ್ತಿದ್ದಂತೆ ಮಧ್ಯಮಧ್ಯ ನಾನು ಫೆನ್ನಿಯನ್ನು ಹೀರುತ್ತಿದ್ದುದರಿಂದ ಯಾವ ಯಾವ ಸಂಬಾರಗಳನ್ನು ಯಾವಾಗ ಹಾಕಿದೆ ಅಥವಾ ಇನ್ನೇನೆಲ್ಲಾ ಆಯಿತೆಂಬ ನೆನಪು ಈಗ ಆಗುತ್ತಿಲ್ಲ!
ಜತೆಗೆ ಉಣ್ಣಲು ಅಕ್ಕಿಯ ರೊಟ್ಟಿ ಮಾಡಲಾ ಅಥವಾ ಕುಚ್ಚಿಲಕ್ಕಿಯ ಪುಂಡಿ ಮಾಡಲಾ ಎಂದು ಅಕ್ಕಮ್ಮಕ್ಕ ಕೇಳಿದಾಗ ರೊಟ್ಟಿಯೇ ಮಾಡೆಂದೆ. ಒಲೆಯ ಮುಂದು ಬೆಚ್ಚಗೆ ಕುಳಿತು ಅವಳ ಕತೆಗಳನ್ನು ಕೇಳಿದಂತಾಯಿತು ಎಂದು ಕೊಂಡೆ. ಅಲ್ಲೆ ಕುಳಿತು ರೊಟ್ಟಿ ತಯಾರಾಗುತ್ತಿದ್ದಂತೆ ಪಂದಿಕರಿಯ ಪ್ಲೇಟಿನೊಂದಿಗೆ ನಾನು ಅದ್ಯಾವುದೋ ಲೋಕಕ್ಕೆ ಹೋದವನಂತಿದ್ದೆ.
ಪಂದಿಕರಿಯ ಜತೆಗೆ ಅಕ್ಕಮ್ಮಕ್ಕಳೂ ಫೆನ್ನಿಯನ್ನು ಗ್ಲಾಸಿನಲ್ಲಿ ಹಾಕಿ ಕುಳಿತಾಗ ನಾನು ಅವಳೊಡನೆ ಕೆಟ್ಟ ವಾಸನೆಯ ಆ ಫೆನ್ನಿಯನ್ನು ನೀನೇಕೆ ಕುಡಿಯುವೆ. ಸ್ಕಾಚ್ ತೊಗೋ ಎಂದೆ. ಅವಳು ಇದೇ ಒಳ್ಳೆಯದು ಎಂದು ಹೇಳಿದಳು.

ಮರುದಿನ ಮಂಗಳೂರಿನ ಬಸ್ಸಿಗೆ ಹೊರಡುವಾಗ ಮನಸ್ಸು ಭಾರವಾಗಿತ್ತು. ಅಕ್ಕಮ್ಮಕ್ಕನ ಆದರಾತಿಥ್ಯಕ್ಕೆ.

Wednesday, December 17, 2008

ಕತ್ತಲೆಯಿಂದ ಬೆಳಕಿಗೆ

ಮಾಧ್ಯಮಗಳು ಸಮಾಜದ ಕನ್ನಡಿ ಎನ್ನುತ್ತೇವೆ. ಸಮಾಜದಲ್ಲಿ ಒಳ್ಳೆಯತನವಿದ್ದರೆ ಮಾಧ್ಯಮವು ಅದನ್ನೇ ತೋರಿಸುತ್ತದೆ, ಕೆಟ್ಟದು ಇದ್ದರೆ ಕೆಟ್ಟದನ್ನು ತೋರಿಸುತ್ತದೆ ಎಂಬುದು ಮಾಧ್ಯಮದವರು ಅವರನ್ನು ಪ್ರಶ್ನಿಸಿದಾಗ ಹೇಳುವ ಉತ್ತರ. ಮುಂಬಯಿ ದುರಂತದ ನಂತರ ಕೆಲವು ಮ್ಯಾಗಝಿನ್ ಗಳ ಮುಖಪುಟವನ್ನು ನೋಡಿದಾಗ ನನಗೆ ಅನಿಸಿದ್ದು ಅವರೆಲ್ಲ ಅದೆಷ್ಟು ಚೆನ್ನಾಗಿ ಈ ದುರಂತದ ವಿವಿಧ ಮಜಲುಗಳನ್ನು ಸೆರೆಹಿಡಿದ್ದಾರೆ ಎಂದು.ಆದರೆ ಒಂದು ಸಣ್ಣ ಪತ್ರಿಕೆ ದೆಹಲಿ ಕರ್ನಾಟಕ ಸಂಘದ ಅಭಿಮತ ನನ್ನ ಮುಚ್ಚಿದ ಕಣ್ಣನ್ನು ತೆರೆಯಿತು. ಅದರ ಮುಖಪುಟದಲ್ಲಿ ಮುಂಬಯಿ ದುರಂತದ ಯಾವುದೇ ಭಯಾನಕ ಚಿತ್ರವಿರಲಿಲ್ಲ. ಕತ್ತಲೆಯ ಕಪ್ಪಿನಿಂದ ಮೊಂಬತ್ತಿಗಳನ್ನು ಉರಿಸುವ ಚಿತ್ರ. ಹೇಳಲಾಗದ ಅದೆಷ್ಟೋ ಮಾತುಗಳನ್ನು ಈ ಮುಖಪುಟ ನೀಡಿತು. ೬೦ ಗಂಟೆಗಳ ಭಯೋತ್ಪಾದನೆಯ ನೇರ ಪ್ರಸಾರ, ನೆಟ್‌ಗಳಲ್ಲಿ ಹರಿದಾಡಿದಾಗ ಕಂಡ ದುರಂತದ ಚಿತ್ರಗಳು, ಮತ್ತೆ ಪತ್ರಿಕೆಗಳಲ್ಲಿ ದುರಂತದ ಚಿತ್ರಗಳು.ಚಿತ್ರಗಳನ್ನು ಕಂಡವರೆಲ್ಲರ ಎದೆಯೊಳಗೆ ಈ ದುರಂತದ ಎಳೆಗಳು ಸ್ಥಾಯಿಯಾಗಿರದಿರದು.ಇಂತೆಲ್ಲಾ ಕ್ಷಣಗಳಲ್ಲಿ ಅಭಿಮತದ ಮುಖಪುಟ ಹೊಸ ಹೊಳಪನ್ನು ನೀಡಿತು. ಅದನ್ನು ರಚಿಸಿದ ಗುರುಬಾಳಿಗ ಬ್ಲಾಗಿಗರಿಗೆ ಅಪರಿಚಿತರಲ್ಲ. ಅವರು ಅತ್ಯಂತ ಸಂವೇದನಾಶೀಲ ಹೃದಯವಿರುವ ಒಬ್ಬ ಕಲಾವಿದ, ಬರಹಗಾರ.ಅವರ ಕತೆಗಳನ್ನು ಓದಿದವರಿಗೆ ಅವರ ಪ್ರತಿಭೆಯ ಸೆಳೆ ಕಂಡುಬರುತ್ತದೆ.ಮಹಾನಗರಗಳಲ್ಲಿ ಸಂವೇದನೆಯಿಂದ ಬದುಕುತ್ತಿರುವ ಇಂತಹವರಿಗೆ ಭಯೋತ್ಪಾದನೆಗಳ ನಡುವೆಯೂ ಬೆಳಕು ಕಂಡಾಗ ಸೃಜನಶೀಲತೆ ಮುಂದುವರಿಯುತ್ತದೆ.ಭಲೇ ಬಾಳಿಗ.
ಒಲವಿನಿಂದ

ಬಾನಾಡಿ

Friday, December 12, 2008

ಬೇರೆ ಮಾತಿಲ್ಲ. . .

ಇವತ್ತು ಈ ಲಿಂಕ್ ಕ್ಲಿಕ್ ಮಾಡಿ. ಅಷ್ಟೇ. ಮಾನಸ
ಬೇರೆ ಮಾತಿಲ್ಲ.

ಒಲವಿನಿಂದ
ಬಾನಾಡಿ

Wednesday, December 10, 2008

ಖಾಲಿ ಕೈಗಳಿಗೆ ಮೆಹಂದಿ ಯಾವಾಗಾ?

ಇಸ್ಸಾರ್ ಮತ್ತು ಅವನ ಕುಟುಂಬದವರು ನಮಗೆ ಪರಿಚಿತರಷ್ಟೇ. ಸ್ನೇಹಿತರೆನ್ನುವಷ್ಟು ಆತ್ಮೀಯರಲ್ಲ. ಸ್ನೇಹಿತರಲ್ಲ ಎನ್ನುವಷ್ಟೂ ದೂರದವರಲ್ಲ. ಹತ್ತಿರದಿಂದ ಕಂಡಾಗ ಮಾತಾಡುವ, ದೂರದಿಂದ ನೋಡಿದಾಗ ಕೈಬೀಸುವಷ್ಟು ನಮ್ಮೊಳಗಿನ ಸಂಬಂಧ. ಈದ್ ಮಿಲಾದ್ ದಿನ ಎಸ್‌ಎಂಎಸ್ ಕಳಿಸುವುದೋ, ಅಥವಾ ಕುರಾನ್‌ನ ಕೆಲವು ವೈಚಾರಿಕ ಸಂಗತಿಗಳನ್ನು ಸ್ಪಷ್ಟಪಡಿಸಲು ನಾನವನಿಗೆ ಫೋನ್ ಮಾಡುವುದೋ ಬಿಟ್ಟರೆ ನಮ್ಮೊಳಗೆ ಅಷ್ಟೇನು ನಂಟಿಲ್ಲ. ಆತನನ್ನು ದೂರದಿಂದ ಕಂಡ ನನಗೆ ಆತನೊಬ್ಬ ನಿರುಪದ್ರವಿ ಆದರೆ ನಿಷ್ಟ ಮುಸ್ಲಿಮನಾಗಿದ್ದ. ಸಮಯಕ್ಕೆ ಸರಿಯಾದ ಪ್ರಾರ್ಥನೆ, ರಂಜಾನ್ ಉಪವಾಸ, ಕುರಾನ್ ಪಠನ, ಅಸ್ಸಲಾಮ್ ಅಲೈಕುಂ ಎಂದು ಹತ್ತಿರದವರನ್ನು ವಂದಿಸುವುದು ಇತ್ಯಾದಿ ಮಾಡುತ್ತಿದ್ದ. ಕಳೆದ ವರ್ಷ ಈದ್ ಮಿಲಾದ್ ದಿನ ಸಿಕ್ಕವನೆ ನನ್ನನ್ನು ಎದೆಗಪ್ಪಿ ಈದ್ ಮುಬಾರಕ್ ಹೇಳಿದ್ದ. ನಾನು ಅವನಿಗೆ ಹಬ್ಬದ ಶುಭಾಶಯ ಹೇಳಿದ್ದೆ. ಮುಂದಿನ ಈದ್‌ಗೆ ನೀನು ನಮಗೆಲ್ಲ ಬಿರಿಯಾನಿ ತಿನಿಸಬೇಕೆಂದು ಹೇಳಿದ್ದೆ. ಒಪ್ಪಿದ್ದ.

ಇಸ್ಸಾರ್ ನಿನ್ನೆ ಮತ್ತೆ ಸಿಕ್ಕಿದ. ಜತೆಗೆ ಅವನ ಹೆಂಡತಿ ಮತ್ತು ಮಗಳು ಇದ್ದರು. ಕಿರಾಣಿ ಅಂಗಡಿಯ ಹತ್ತಿರ ಆತ ರಸ್ತೆ ದಾಟಿ ನನ್ನ ಕಡೆ ಬರುತ್ತಿದ್ದ. ನಾನು ಆತನ ಕಡೆ ಹೋಗುವವನಾಗಿದ್ದೆ. ನಾನು ದಾಟದೆ ಅಲ್ಲೇ ನಿಂತೆ. ಆತನನ್ನು ಮಾತಾಡಿಸೋಣ. ಬಕರಿ ಈದ್ ನಲ್ಲಿ ಎಷ್ಟು ಬಕರಿಗಳನ್ನು ತಿಂದ ಎಂದು ಕೇಳಲು. ಆಗ ನನಗೆ ಕಳೆದ ಈದ್ ನಲ್ಲಿ ಕೇಳಿದ ಬಿರಿಯಾನಿಯ ನೆನಪಾಗಿರಲಿಲ್ಲ. ಹೇಗಿದ್ದೀರಿ? ಅಂದ ಹಾಗೆ ಈದ್ ಮುಬಾರಕ್ ಹೊ ಎಂದು ಆತನ ಎದೆಗಪ್ಪಲು ಬಂದೆ. ಹೌದು ಎಂದಷ್ಟೆ ನುಡಿದ ಆತನ ಕೈ ನನ್ನ ಕೈಯ ಬೆರಳುಗಳನ್ನು ಅಮುಕುತ್ತಿದ್ದವು. ಆತನ ದೃಷ್ಟಿ ಎಲ್ಲೋ ಇತ್ತು. ಮನಸ್ಸಿಗೆ ತುಂಬಾ ನೋವಾದಂತೆ ಮುಖ ಹೇಳುತ್ತಿತ್ತು. ಇಸ್ಸಾರ್ ಎಲ್ಲಾ ಆರಾಮ ತಾನೆ ಎಂದೆ. ಹೌದು ಎಂದಷ್ಟೆ ಹೇಳಿದ. ಆತನ ಕೈ ನನ್ನ ಕೈಯನ್ನು ಬಿಟ್ಟಿರಲಿಲ್ಲ. ಆತನ ಹೆಂಡತಿ ಮತ್ತು ಮಗಳು ಹತ್ತಿರ ಬಂದು ನಿಂತರು. ಮತ್ತೇನು ವಿಶೇಷ? ಎಂದೆ. ಆತ ಈ ಜಗತ್ತಿನಲ್ಲಿ ಏನೆಲ್ಲಾ ಆಗುತ್ತದೆ ನೋಡಿ ಎಂದು ನಿಟ್ಟುಸಿರು ಬಿಟ್ಟ. ಏನಾಯಿತು ಎಂದೆ.

ಮುಂಬಯಿ ದುರಂತದ ಬಗ್ಗೆ ಇಸ್ಸಾರ್ ದುಃಖಿತನಾಗಿದ್ದ. ಬಹಳಷ್ಟು ಬೇಸರ ಹೊಂದಿದ್ದ. ವಿಟಿ ಯಲ್ಲಾಗಲಿ ತಾಜ್ ನಲ್ಲಾಗಲಿ ಭಯೋತ್ಪಾದಕರು ದಾಳಿ ಮಾಡಿದಾಗ ಅಲ್ಲಿ ಎಷ್ಟು ಮುಸ್ಲಿಮರಿದ್ದಾರೆ, ಎಷ್ಟು ಕ್ರಿಶ್ಚಿಯನರಿದ್ದಾರೆ, ಎಷ್ಟು ಹಿಂದೂಗಳಿದ್ದಾರೆ ಅಥವಾ ಎಷ್ಟು ಯಹೂದಿಯರಿದ್ದಾರೆ ಎಂದು ಯಾರು ಲೆಕ್ಕ ಹಿಡಿದಿಲ್ಲ. ಅಥವಾ ಭಯೋತ್ಪಾದಕರ ಸೆರೆಯಲ್ಲಿ ಸಿಕ್ಕವರನ್ನು ಬಿಡಿಸುವಾಗ ಯಾರು ಯಾವ ಧರ್ಮದವರು ಎಷ್ಟಿದ್ದಾರೆ ಎಂದು ಲೆಕ್ಕ ನೋಡಿಲ್ಲ.

ದೇವರ ಆದೇಶದಂತೆ ಪ್ರವಾದಿ ಅಬ್ರಹಾಮನು ತನ್ನ ಮಗ ಇಸ್ಮಾಯಿಲ್ ನನ್ನು ಬಲಿಕೊಟ್ಟ ದಿನವನ್ನು ಮಸ್ಲಿಮರು ಆಡು, ಕುರಿ ಯಾ ಹೋರಿಯನ್ನು ಬಲಿಕೊಟ್ಟು ಆಚರಿಸುವ ಹಬ್ಬವೇ ಬಕರಿ ಈದ್. ಈ ಬಾರಿ ಮುಸ್ಲಿಮರು ಬಕರಿ ಈದ್ ದಿನ ಹೋರಿಯನ್ನು ಬಲಿಕೊಡಬಾರದೆಂದು ಭಾರತದ ಮುಸ್ಲಿಮ್ ನಾಯಕರು ಎಲ್ಲರಿಗೂ ಕರೆ ನೀಡಿದ್ದರು. ಅಲ್ಲದೆ ಮುಂಬಯಿಯಲ್ಲಿ ಬಲಿಯಾದ ಭಯೋತ್ಪಾದಕರ ದಫನಕ್ಕೆ ಅಲ್ಲಿನ ಯಾವುದೇ ಮುಸ್ಲಿಮ್ ಸ್ಮಶಾನಗಳು ಅವಕಾಶ ಮಾಡಿಲ್ಲ. ಇವೆಲ್ಲ ಭಾರತದಂತಹ ದೇಶದಲ್ಲಿ ವಿಶೇಷ ಮಹತ್ವ ಪಡೆಯಬೇಕಾದ ವಿಷಯಗಳಲ್ಲ. ಆದರೆ ಮುಸಲ್ಮಾನರ ಬಗ್ಗೆ ಅತಿ ಸಂದೇಹ ಪಡುವಾಗ ಇವೆಲ್ಲ ಸಣ್ಣ ವಿಷಯಗಳಾಗುವುದಿಲ್ಲ. ಮುಸ್ಲಿಮ್ ವರ್ಗದ ಕೆಲವೊಂದು ಗುಂಪು ದಾರಿ ತಪ್ಪಿ ಹೋಗಿದೆ. ಅದರಲ್ಲಿ ಸಂದೇಹವಿಲ್ಲ. ಅವರನ್ನು ಸರಿದಾರಿಗೆ ತರಲು ಮುಸ್ಲಿಂ ಸಮಾಜ ಅಥವಾ ಭಾರತದ ಸಾಮಾಜಿಕ ವ್ಯವಸ್ಥೆಯಾಗಲಿ, ರಾಜಕೀಯ ವ್ಯವಸ್ಥೆಯಾಗಲಿ ಯಾವುದೇ ಕೆಲಸ ಮಾಡುತ್ತಿಲ್ಲ. ಅದಕ್ಕಾಗಿ ಸಮಗ್ರ ಮುಸ್ಲಿಂ ಸಮಾಜವೇ ಉಳಿದವರ ಸಿಟ್ಟಿಗೆ ಕಾರಣವಾಗಿದೆ. ಅವರನ್ನು ಪಾಕಿಸ್ಥಾನಿಗಳೆಂದು ಕರೆಯಲಾಗುತ್ತದೆ. ಭಾರತದ ಮುಖ್ಯವಾಹಿನಿಯಿಂದ ಹೊರಹೋಗುತ್ತಿದ್ದ ಮುಸ್ಲಿಂ ಸಮಾಜ ಮುಂಬಯಿ ದುರಂತದ ನಂತರ ಒಂದಾಗುವುದೇ? ಚಿಕ್ಕ ಪುಟ್ಟ ವೈಯಕ್ತಿಕ ಗಲಭೆಗಳಿಗೆ ಕೋಮು ಗಲಭೆಯ ಬಣ್ಣ ಲೇಪಿಸಲಾಗುವುದೇ? ಕಾದು ನೋಡಬೇಕು.

ನಾವು ಬೀಳ್ಕೊಡುವಾಗ ಇಸ್ಸಾರ್ ನ ಮಗಳು ಟಾಟಾ ಮಾಡಿದಳು. ಅವಳೇನು ಹೊಸ ಬಟ್ಟೆ ಹಾಕಿರಲಿಲ್ಲ. ಬಕ್ರೀದ್‌ಗೆ ಅವಳ ಕೈಯಲ್ಲಿ ಮದುರಂಗಿಯ ಬಣ್ಣವಿರಲಿಲ್ಲ. ಹುಡುಗಿಯ ಖಾಲಿ ಖಾಲಿ ಕೈ ನನ್ನನ್ನು ಬಹಳ ದೂರ ಕೊಂಡೊಯ್ಯಿತು.

Tuesday, December 9, 2008

ಹೊಸವರ್ಷದ ನಿರೀಕ್ಷೆಯಲ್ಲಿ ....


ಡಿಸೆಂಬರ ೩೧ರ ರಾತ್ರಿ ಮಂಗಳೂರಿನ ಓಣಿಗಳಲ್ಲಿ ಮಕ್ಕಳು ಯುವಕರು ಎಲ್ಲಾ ಸೇರಿ 'ಅಜ್ಜೆರ್ ಸೈತೆರ್... ಅಜ್ಜೆರ್ ಸೈತೆರ್ ...' ಎಂದು ಖುಷಿಯಿಂದ ಕುಣಿಯುತ್ತಾ ಹುಲ್ಲಿನಿಂದ ಮಾಡಿದ ವ್ಯಕ್ತಿಯೊಬ್ಬನಿಗೆ ಹಳೆಯ ಅಂಗಿಯೊಂದನ್ನು ಹಾಕಿ ಅವನನ್ನು ಎತ್ತಿಕೊಂಡು ಹೋಗುತ್ತಿದ್ದೆವು. ಓಣಿಯಲ್ಲಿದ್ದ ಮನೆಯವರೆಲ್ಲರೂ ಹೊರಬಂದು ಒಮ್ಮೆ ನೋಡಿದಾಗ ಅಕ್ಕಾ, ಅಣ್ಣಾ, ಅಜ್ಜ ಸತ್ತರು ಅಜ್ಜ ಸತ್ತರು ಎಂದು ಕುಣಿದಾಡುತ್ತಿದ್ದೆವು. ಅಜ್ಜನನ್ನು ಓಣಿಯ ಒಂದು ಕೊನೆಗೆ ಕೊಂಡುಹೋಗಿ ಅಲ್ಲಿ ಅವನನ್ನು ಸುಟ್ಟು ಕುಣಿಯುತ್ತಿದ್ದೆವು. ಡಿಸೆಂಬರ್‌ನ ಕಚಗುಳಿಯಿಡುವ ಚಳಿಗೆ ಮೈ ಬೆಚ್ಚಾಗುತ್ತಿತ್ತು. ನಂತರ ಎಲ್ಲರಿಗೂ ಹೊಸ ವರ್ಷದ ಶುಭಾಶಯ ಹೇಳಿ ನಮ್ಮ ನಮ್ಮ ಮನೆಗೆ ವಾಪಾಸಾಗುತ್ತಿದ್ದೆವು. ಅಜ್ಜ ಅಂದರೆ ನಮಗೆಲ್ಲ ಹಳೆಯವರ್ಷ. ಆತ ಸತ್ತ. ಅಂದರೆ ಈ ವರ್ಷ ಮುಗಿಯಿತು. ಇನ್ನು ಹೊಸವರ್ಷ. ಹಳೆಯದೆಲ್ಲವೂ ಬೇಡಎನ್ನುವ ವಿಚಾರದಲ್ಲಿ ಅಜ್ಜನನ್ನು ಸುಡುತ್ತಿದ್ದೆವು. ಈ ಹೊಸವರ್ಷಾಚರಣೆಯ ಪದ್ಧತಿ ಈಗೀಗ ಕಡಿಮೆಯಾಗಿದೆಯಂತೆ. ಬೆಂಗಳೂರಿನಿಂದ ರಾಜೇಶ ಈ ಸಲ ಹೊಸವರ್ಷಕ್ಕೆ ಮಂಗಳೂರಿಗೆ ಹೋಗ್ತಾನೆ ಅಂದಾಗ ಅವನಿಗೆ ಕೇಳಿದೆ ಅಜ್ಜನನ್ನು ಸುಡಲೋ ಎಂದು. ಅಜ್ಜನನ್ನು ಸುಡುವ ಕ್ರಮ ಈಗ ಎಲ್ಲಿ ಎಂದು ಆತನೂ ಸ್ವಲ್ಪ ದುಃಖಗೊಂಡ. ಡಿಸೆಂಬರ್ ತಿಂಗಳು ನಮಗೆ ಬಹಳ ಖುಷಿಯ ತಿಂಗಳು. ನಮ್ಮ ಕ್ರಿಶ್ಚಿಯನ್ ಗೆಳೆಯರು, ಗೆಳತಿಯರು ಕ್ರಿಸ್‌ಮಸ್ ಸಂಭ್ರಮದಲ್ಲಿರುವಾಗ ನಮಗೂ ಅದರ ಸಂಭ್ರಮ. ಮನೆಯಲ್ಲಿ ತಂದಿಡುವ ಕ್ರಿಸ್‌ಮಸ್ ಮರ, ಅದರ ಸುತ್ತ ಸಣ್ಣ ಸಣ್ಣ ಬಲ್ಬ್‌ಗಳು. ಎಲ್ಲಕ್ಕಿಂತ ಹೆಚ್ಚಾಗಿ ಕೇಕ್‌ಗಳು. ಮಂಗಳೂರಿನ ಕೆಲವೊಂದು ಬೇಕರಿಗಳು ವಿವಿಧ ಆಕಾರದ, ವಿವಿಧ ಡಿಸೈನ್‌ನ ಕೇಕ್‌ಗಳನ್ನು ಮಾಡಿ ಪ್ರದರ್ಶಿಸುತ್ತಿದ್ದರು. ಉದಯವಾಣಿಯಲ್ಲಿ ಅದರ ಫೋಟೋ ಕೂಡ ಬರುತ್ತಿತ್ತು.
ಕೆಲವಾರು ವರ್ಷಗಳಿಂದ ನಮ್ಮ ಕಾಲೋನಿಗಳಲ್ಲಿ ನಡೆಯುವ ಹೊಸವರ್ಷದ ಗಾಲಾಗಳಲ್ಲಿ ಕಂಠಪೂರ್ತಿ ಕುಡಿದು ಮರುದಿನ ತಲೆನೋವಿನ ಹೊಸವರ್ಷದ ಹೊಸದಿನವನ್ನು ಆರಂಭಿಸುತ್ತಿದ್ದೇವೆ. ಕಳೆದ ವರ್ಷ ಟಿವಿ ಮುಂದೆ ಕುಳಿತು ಹೊಸವರ್ಷವನ್ನು ಆಚರಿಸಿದ ನಾವು ಈ ವರ್ಷ ಏನಾದರೂ ಹೊಸದು ಮಾಡಬೇಕು ಎಂದುಕೊಂಡಿದ್ದೆವು. ಮೂರ್ನಾಲ್ಕು ತಿಂಗಳ ಮೊದಲೇ ನಮ್ಮ ಸ್ನೇಹಿತ ವಿಕಾಸ್ ಮುಂಬಯಿಗೆ ಹೋಗೋಣ ಎಂದಿದ್ದ. ಅವನ ಹೆಂಡತಿ ಜೆಟ್ ಏರ್‌ವೇಸ್‌ನಲ್ಲಿ ಕೆಲಸ ಮಾಡುತ್ತಿದ್ದುದರಿಂದ ಟಿಕೇಟು ವ್ಯವಸ್ಥೆ ಆತನೇ ಮಾಡ್ತೇನೆ ಎಂದಿದ್ದ. ಗ್ಲೋಬಲ್ ಕಾನ್‌ಫರೆನ್ಸ್ ಒಂದು ಜನವರಿ ೧೦ರಿಂದ ಆರಂಭಮಾಡಬೇಕಾಗಿದ್ದುದರಿಂದ ನಾನು ಅದರ ಕೆಲಸದಲ್ಲಿ ಬಿಝಿ ಇರುವೆನೆಂದರೂ ಆತ ಬಹಳಷ್ಟು ಹುರಿದುಂಬಿಸಿದ್ದಾನೆ. ಜೆ.ಡಬ್ಲ್ಯೂ. ಮ್ಯಾರೆಟ್‌ನಲ್ಲಿ ಕತ್ರಿನಾ ಕೈಫ್ ಡಾನ್ಸ್ ಫಿಕ್ಸ್ ಮಾಡಿದ್ದಾರೆ ಮುಂತಾದ ವಿವರ ನೀಡಿ ಜೀವಮಾನದಲ್ಲಿ ಒಮ್ಮೆಯಾದರೂ ಬಾಲಿವುಡ್‌ನ ಒಂದು ಲೈವ್ ಕಾರ್ಯಕ್ರಮ ನೋಡಲು ನನ್ನನ್ನು ತಯಾರಿಗೊಳಿಸುತ್ತಿದ್ದ ನಮ್ಮ ವಿಕಾಸ್. ಈ ವರ್ಷ ಬೋನಸ್ ಹಣ ಬಂದಾಗ ಅದನ್ನು ಖರ್ಚುಮಾಡದೇ ಹೊಸವರ್ಷದ ಸಿಲಬ್ರೇಶನ್‌ಗೆ ಉಳಿಸು ಎಂದು ಅವನು ನನಗೆ ಖರ್ಚಿನ ಕುರಿತು ತಲೆಕೆಡಿಸದಂತಹ ಸಲಹೆಯನ್ನು ಕೊಟ್ಟಿದ್ದ. ಲೈವ್ ಕಾರ್ಯಕ್ರಮಗಳಿಗಿಂತ ಅವನ್ನು ಟಿವಿಯಲ್ಲಿ ನೋಡುವುದು ನಮಗೆ ಸಾಕು ಎಂಬುದು ನನ್ನ ಅಭಿಮತವಾಗಿತ್ತು.
ನಿರಂತರ ಅರುವತ್ತು ಗಂಟೆಗಳ ಲೈವ್ ಭಯೋತ್ಪಾದಕ ಕೃತ್ಯದ ಬಳಿಕ ನಮ್ಮ ಮುಂಬಯಿ ಕಾರ್ಯಕ್ರಮ ರದ್ದಾಗಿದೆ. ಕತ್ರಿನಾ ಕೈಫ್ ಕೂಡಾ ತನ್ನ ಕಾರ್ಯಕ್ರಮ ರದ್ದುಗೊಳಿಸಿದ್ದಾಳೆ ಎಂದು ತಿಳಿದುಬಂದಿದೆ. ಮುಂಬಯಿಯನ್ನು ದ್ವೇಷಿಸುವವರು ಭಯೋತ್ಪಾದಕರಲ್ಲದೇ ಇನ್ಯಾರು ಅದನ್ನು ದ್ವೇಷಿಸಲಾರರು. ಕಳೆದ ವರ್ಷ ಗಣೇಶ ವಿಸರ್ಜನೆಯಂದು ನಾನು ಸಂಜೆ ಹೊತ್ತಿಗೆ ಮುಂಬಯಿ ತಲುಪಿ ಏರ್‌ಪೋರ್ಟ್‌ನಿಂದ ನಗರವಿಡೀ ತುಂಬಿದ್ದ ಗಣೇಶ ಮೆರವಣಿಗೆಯ ನಡುವೆ ರಿಕ್ಷಾವೊಂದರಲ್ಲಿ ನಮ್ಮ ಹೋಟೆಲ್ ತಲುಪಿದೆ. ಮೆರವಣಿಗೆಯ ಮಧ್ಯದಲ್ಲಿ ಹೋಗಲು ಟ್ಯಾಕ್ಸಿಗಿಂತ ರಿಕ್ಷಾವೇ ಮೇಲು ಎಂದು ಹೇಳಿದ ನಿತಿನ್ ಮರುದಿನ ವಂದಿಸಿದೆ. ಆ ಮೆರವಣಿಗೆಯ ಸಂಬ್ರಮ ಉತ್ಸಾಹ ಕಂಡು ನಾನು ನಮ್ಮ ಊರಿನ ಜಾತ್ರೆಗಳ ನೆನಪು ಮಾಡಿಕೊಂಡೆ. ಎಲೆ ಮುಂಬಯಿ ನಾವು ನಿನ್ನನ್ನು ಪ್ರೀತಿಸುತ್ತಿದ್ದೆವೆ. ಬಹಳಷ್ಟು. ಗೇಟ್‌ವೇ ಎದುರು ನಿಂತು ಆ ತಾಜಮಹಲು ಹೋಟೆಲಿನ ಹಿನ್ನೆಲೆಯಲ್ಲಿ ತೆಗೆದ ಚಿತ್ರಗಳನ್ನು ಮತ್ತೆ ಮತ್ತೆ ನೋಡುತ್ತಿದ್ದೇನೆ.

ಸಿಡಿಲು

ಒಂದು ಹಳತ್ತಾಗುತ್ತಿರುವ ಜೋಕು: ಹಿಂದಿಯಲ್ಲಿ ಮಾತಾಡುವಾಗ ಮುಂಬಯಿಯನ್ನು ಸ್ತ್ರೀಲಿಂಗವಾಗಿಯೂ ದೆಹಲಿಯನ್ನು ಪುಲ್ಲಿಂಗವಾಗಿಯೂ ಯಾಕೆ ಕರೆಯುತ್ತಾರೆ? ಮುಂಬಯಿಯಲ್ಲಿ ಗೇಟ್ ವೇ ಆಫ್ ಇಂಡಿಯಾ ಇದೆ. ದೆಹಲಿಯಲ್ಲಿ ಕುತುಬ್ ಮಿನಾರ ಇದೆ!

Sunday, December 7, 2008

ಬಿಲದೊಳಗಿಂದ ಹೊರಬಂದ ಇಲಿಗಳು


ಕಂಪ್ಯೂಟರ್ ಬಳಸುವವರು ಮೌಸ್ ಬಳಸುವುದು ಸಾಮಾನ್ಯ. ಐಟಿ ನಗರವಾದ ಬೆಂಗಳೂರಿನಲ್ಲಿ ಬಹಳಷ್ಟು ಇಲಿಗಳು ಅರ್ಥಾತ್ ಮೌಸ್‌ಗಳು ಇವೆ. ಆದರೆ ಬೆಂಗಳೂರು ನಗರದಂತೆ ಬಿಹಾರವನ್ನು ಐಟಿ ನಗರವನ್ನಾಗಿ ಮಾಡಲು ಹೊರಟ ಅಲ್ಲಿನ ಮುಖ್ಯಮಂತ್ರಿ ನಿತೀಶ್ ಕುಮಾರ ಅವರು ಕೆಲದಿನಗಳ ಹಿಂದೆ ನಿಜವಾದ ಇಲಿಗಳ ಕುರಿತು ವಿವಾದಕ್ಕೆ ಸಿಕ್ಕಿದ್ದರು. ಬಿಹಾರದ ಅತಿ ಬಡವರು ಬಿಲಗಳಲ್ಲಿ ಅಡಗಿಕೊಂಡಿರುವ ಇಲಿಗಳನ್ನು ಹಿಡಿದು ಆಹಾರವನ್ನಾಗಿ ತಿನ್ನುತ್ತಿದ್ದರು. ಅಂತಹ ಜನರಿಗೆ ಇಲಿ ಖಾದ್ಯವನ್ನು ಸರಕಾರವೇ ಇಲಿ ಫಾರ್ಮ್‌ಗಳನ್ನು ಸ್ಥಾಪಿಸಿ ಸರಬರಾಜು ಮಾಡಬೇಕೆಂಬ ಕೋರಿಕೆ ಇತ್ತು. ಸರಕಾರದ ಆದೇಶಕ್ಕೆ ಜನ ಕಾದಿದ್ದರು. ಇಲಿ ಫಾರ್ಮ್ ಮಾಡದೇ ಇಲಿಗಳನ್ನು ಸಾಕಲೆಂದು ನಿಗದಿಪಡಿಸಿದ ಹಣವನ್ನು ತಮ್ಮ ಜೇಬೆಂಬ ಬಿಲದೊಳಗೆ ಇಳಿಬಿಟ್ಟು ಸುಖಿಸುವ ಕನಸನ್ನು ಕಟ್ಟಿಕೊಂಡಿದ್ದರು. ಆದರೆ ನಿನ್ನೆ ಶನಿವಾರ ನಿತೀಶ್ ಕುಮಾರ್ ಅವರು ಬಿಹಾರದ ಅತಿ ಬಡವರಿಗಾಗಿ ಇಲಿಫಾರ್ಮ್ ಮಾಡುವ ಯೋಚನೆಯನ್ನು ತಮ್ಮ ತಲೆಯಿಂದ ಹಾಗೂ ಸರಕಾರದ ಕಡತದಿಂದ ತೆಗೆದುಹಾಕಿದ್ದಾರೆ. ಇನ್ನು ಹೆಚ್ಚು ಹೆಚ್ಚು ಕಂಪ್ಯೂಟರ್ ಮೌಸ್ ಗಳನ್ನು ಬಿಹಾರದಲ್ಲಿ ಸಾಕುತ್ತಾರೋ ನೋಡಬೇಕು. ಇಲಿ ಅಥವಾ ಹೆಗ್ಗಣ ತಿನ್ನುವುದು ಬರೆ ಬಿಹಾರದಲ್ಲಿ ಅಲ್ಲ. ನಮ್ಮೂರಿನಲ್ಲೊಮ್ಮೆ ದೊಡ್ಡ ಹೆಗ್ಗಣ ನೋಡಿದಾಗ ನನ್ನಮ್ಮ ನನಗೆ ಹೇಳಿದ ಮಾತು ನೆನಪಿಗೆ ಬರುತ್ತಿದೆ: ಇದನ್ನು ಹಿಂದೆ ಆಗಿದ್ದರೆ ಯಾರದರೂ ತೆಗೆದುಕೊಂಡು ಹೋಗಿ ತಿನ್ನುತ್ತಿದ್ದರು. ಈಗ ಹೆಗ್ಗಣ ತಿನ್ನುವವರು ಯಾರೂ ಇಲ್ಲ ಎಂದು. ಸಣ್ಣ ಸಣ್ಣ ಪ್ರಾಣಿಗಳಾದ ಹೆಗ್ಗಣ, ಮೊಲ, ಆಮೆ, ಕಾಡುಕೋಳಿ, ಅಳಿಲು, ಬಾವಲಿ, ಕೆರೆಯ ಸಣ್ಣ ಮೀನು, ಕಾಡು ಹಂದಿ, ಬೆರು, ಇತ್ಯಾದಿ ಪ್ರಾಣಿಗಳನ್ನು ಜನರು ಬೇಟೆಯಾಡಿ ತಿನ್ನುತ್ತಿದ್ದ ದಿನಗಳು ಇಂದಿಗಿಂತ ಸುಮಾರು ನಲ್ವತ್ತು ವರ್ಷಗಳ ಹಿಂದೆ ಇತ್ತು ಎಂದು ನನ್ನ ಅಮ್ಮ ಹೇಳುತ್ತಾರೆ. ಕೋಳಿ, ಕುರಿ, ಆಡು, ಕೋಣ, ಹಂದಿಯ ಮಾಂಸ ತಿನ್ನುವ ಆಧುನಿಕ ನಗರದ ಮಂದಿಯೂ ಒಮ್ಮೊಮ್ಮೆ ಇಂಥ ಕಾಡುಪ್ರಾಣಿಗಳ ಮಾಂಸ ತಿನ್ನಲು ಹಳ್ಳಿಗಳಿಗೋ, ನಗರದಿಂದ ದೂರವಿರುವ ರಿಸಾರ್ಟ್‌ಗಳಿಗೋ ಹೋಗುತ್ತಾರೆ. ತಿತ್ತಿಭ ಹಕ್ಕಿಯ ಮಾಂಸ ತಿನ್ನಲು ನಗರಗಳಲ್ಲಿ ಕೆಲವು ಮಂದಿಯ ಗುಂಪೇ ಇದೆ. ಅವರಿಗೆ ಈ ಅಪರೂಪದ ಹಕ್ಕಿಯ ಮಾಂಸ ಎಲ್ಲಿ ಸಿಗುತ್ತದೆ, ಯಾವ ಕಾಲದಲ್ಲಿ ಸಿಗುತ್ತದೆ ಇತ್ಯಾದಿ ವಿವರಗಳು ಗೊತ್ತಿರುತ್ತವೆ. ಕೆಲವೊಮ್ಮೆ ಸರಕಾರಿ ಅಧಿಕಾರಿಗಳೂ ಇದರಲ್ಲಿ ಶಾಮೀಲಾಗಿ ಗುಟ್ಟು ರಟ್ಟಾಗದಂತೆ ನೋಡಿಕೊಳ್ಳುತ್ತಾರೆ. ವಿಯೇಟ್ನಾಂ, ಚೀನಗಳಲ್ಲಿ ಅವರ ಹೊಸ ವರ್ಷಕ್ಕೆ ಇಲಿಮಾಂಸದ ಅಡುಗೆ ಅಗತ್ಯವೆಂದು ತಿಳಿದುಕೊಂಡಿದ್ದೇನೆ. ಚೀನಿಯರ ಇಲಿ ವರ್ಷವೂ ಇದೆಯಲ್ಲ. ಅಂದಹಾಗೆ ಇಲಿಮಾಂಸದಲ್ಲಿ ಅತ್ಯಂತ ಹೆಚ್ಚು ಪ್ರೋಟೀನ್ ಇರುತ್ತದೆಯಂತೆ. ಇಲಿಯ ಪ್ರೊಟೀನ್ ನಿಂದಲೇ ಇನ್ಸುಲಿನ್ ತಯಾರಿಸಿ ಸಕ್ಕರೆ ಕಾಯಿಲೆಯವರಿಗೆ ನೀಡುತ್ತಾರೆ ಎಂದರೆ ಸಕ್ಕರೆ ಕಾಯಿಲೆ ಇರುವವರು ಹೆಚ್ಚು ಇಲಿಮಾಂಸ ತಿನ್ನಬಹುದು ಅಲ್ಲವೇ?


ಸಿಡಿಲು


ನಾಗಾಲ್ಯಾಂಡ್‌ನ ಜನ ನಾಯಿ ತಿನ್ನುತ್ತಾರೆ ಎಂದು ನನ್ನ ವೃತ್ತಿ ಭಾಂಧವ ನನಗೆ ತಿಳಿಸಿದ್ದ. ಅದರ ಮಾಂಸದ ರುಚಿ ಹೇಗಿರುತ್ತದೆ? ಎಂದು ನಾನು ಕೇಳಿದಕ್ಕೆ ಅವನು ಕೊಟ್ಟ ಉತ್ತರ ಹೀಗಿದೆ. ಮುಖ್ಯವಾಗಿ ನಾಯಿಯ ಮಾಂಸವನ್ನು ಅಲ್ಲಿನ ಜನ ಇಷ್ಟ ಪಡುವುದಿಲ್ಲ. ಆದರೆ ಅದರ ಬಿರಿಯಾನಿ ಅವರಿಗೆ ಬಲು ಪ್ರೀತಿ. ಅದು ಹೇಗಿರುತ್ತದೆ? ನನ್ನ ಪ್ರಶ್ನೆ. ಅವನು ರಿಸಿಪಿಯನ್ನೇ ವಿವರಿಸಿದ. ನೀವು ಸಾಯಿಸಬೇಕಾದ ನಾಯಿಯನ್ನು ಒಂದೆರಡು ದಿನ ಯಾವುದೇ ಆಹಾರ ಕೊಡದೆ ಅದರ ಹೊಟ್ಟೆ ಖಾಲಿಯಾಗಿ ಹಸಿವಿನಿಂದ ನರಳುವಂತೆ ಮಾಡಿರಿ. ನೀವು ನಾಯಿಯನ್ನು ಕೊಲ್ಲುವುದಕ್ಕೆ ಒಂದೆರಡು ಗಂಟೆ ಮೊದಲು ಅದಕ್ಕೆ ನಾಗಲ್ಯಾಂಡ್‌ನಲ್ಲಿಯೇ ಬೆಳೆಯುವ ಅತ್ಯಂತ ಉತ್ತಮವೆಂದು ಪರಿಗಣಿಸಲಾದ ಅಕ್ಕಿಯನ್ನು ತಿನ್ನಿಸಿ. ಹಸಿವಿನಿಂದ ನರಳುತ್ತಿರುವ ನಾಯಿ ಅಕ್ಕಿಯನ್ನು ಗಬಗಬನೆ ತಿನ್ನುವುದು. ನಾಯಿ ಅಕ್ಕಿ ತಿಂದ ನಂತರ ಒಂದೆರಡು ಗಂಟೆಗಳಲ್ಲಿ ಆ ನಾಯಿಯನ್ನು ಸಾಯಿಸಿರಿ. ಅದರ ಹೊಟ್ಟೆಯನ್ನು ಸೀಳಿ ಅದರಲ್ಲಿರುವ ಅಕ್ಕಿಯನ್ನು ಬೇರ್ಪಡಿಸಿರಿ. ನಾಯಿಯ ಹೊಟ್ಟೆಯೊಳಗಿನ ವಿವಿಧ ರಸಗಳಿಂದ ಕೂಡಿದ ಈ ಅಕ್ಕಿಯನ್ನು ಹಬೆಯಿಂದ ಬೇಯಿಸಿ. ಅದು ಅನ್ನವಾಗುತ್ತದೆ. ಅದರ ರುಚಿಯನ್ನು ಸವಿದವರೇ ಬಲ್ಲರು.ಇದು ನಾನು ನನ್ನ ವೃತ್ತಿಯ ಆರಂಭದಲ್ಲಿ ನನ್ನ ವೃತ್ತಿ ಭಾಂಧವರೊಬ್ಬರಿಂದ ಕೇಳಿದ ಕಥೆ. ನನಗೆ ನಂಬಲು ಆಗುತ್ತಿಲ್ಲ. ಅವರು ನನ್ನನ್ನು ಫೂಲ್ ಮಾಡಲು ಹೇಳಿದ್ದಾರೋ ಅಥವಾ ನಿಜವಾಗಿಯೂ ಹಾಗೆಯೇ ಆಗುತ್ತದೋ? ನಾನಿನ್ನೂ ನಾಗಾಲ್ಯಾಂಡ್‌ಗೆ ಹೋಗಿಲ್ಲ. ಹೋದರೆ ಅಲ್ಲಿನ ಜನರನ್ನು ನೋಡಿ ಅಥವಾ ಕೇಳಿ ತಿಳಿದುಕೊಳ್ಳುವ ಕುತೂಹಲವಿದೆ ಮತ್ತು ಅಲ್ಲಿ ನಾನು ಅನ್ನವನ್ನು ಉಣ್ಣಲಾರೆ ಎಂಬ ಭಯವೂ ಇದೆ.

Friday, December 5, 2008

ಶಿಖರದಿಂದ ಕಣಿವೆಗೆ

ಪೆಟ್ರೋಲ್ ಬೆಲೆ ಐದು ರೂ ಕಡಿಮೆಯಾಗಿದೆ ಎಂಬ ಸುದ್ದಿಯನ್ನು ತೈಲ ಉದ್ಯಮದ ಜತೆ ಸಂಬಂಧ ಇಟ್ಟಿರುವ ಗೆಳೆಯನೊಡನೆ ಹಂಚಿಕೊಂಡಾಗ 'ಈ ಸರಕಾರ ತನ್ನ ಹೊರೆಯನ್ನು ಬರಲಿರುವ ಸರಕಾರದ ಮೇಲೆ ಹೊರಿಸುತ್ತಿದೆ' ಎಂದನು. ಪೆಟ್ರೋಲ್ ಬೆಲೆ ಕುರಿತು ಗೊತ್ತಿರುವವರು ಆಡುವ ಮಾತಿದು.

ಜನಸಾಮಾನ್ಯರಿಗೆ ಪೆಟ್ರೋಲ್ ಬೆಲೆ ಒಂದು ರೂ ಕಡಿಮೆಯಾದರೂ ಖುಷಿಯ ವಿಚಾರ. ಪೆಟ್ರೋಲ್, ಡಿಸೀಲ್, ಕೆರೋಸಿನ್, ಎಲ್‌ಪಿಜಿಯ ಉತ್ಪಾದನ ಮೂಲವಾದ ಕಚ್ಚಾತೈಲದ ಬೆಲೆ ಒಂದು ಬ್ಯಾರೆಲ್‌ಗೆ ೫೦ ಡಾಲರ್‌ನಿಂದ ೧೪೮ ಡಾಲರ್‌ಗೇರಿತ್ತು ಮತ್ತೆ ಈಗ ಸುಮಾರು ೪೮ ಡಾಲರ್‌ಗೆ ಇಳಿದಿದೆ. ಈ ನಡುವೆ ಭಾರತದಲ್ಲಿ ಪೆಟ್ರೋಲ್ ಮತ್ತು ಡಿಸೀಲ್ ಬೆಲೆ ಈ ವರ್ಷದ ಜೂನ್‌ನಲ್ಲಿ ರೂ ಐದು ಮತ್ತು ಮೂರು ಹೆಚ್ಚಾಗಿತ್ತು. ಅದೂ ತೈಲ ಕಂಪನಿಗಳು ನಷ್ಟ ಅನುಭವಿಸಿ ತಮ್ಮ ಅಸ್ತಿತ್ವವನ್ನೇ ಕಳಕೊಳ್ಳುವ ಭಯವನ್ನು ವ್ಯಕ್ತಪಡಿಸಿದಾಗ ಸರಕಾರ ತನ್ನ ಕೈಯನ್ನು ಸಡಿಲಿಸಿತು. ಕಚ್ಚಾತೈಲದ ಬೆಲೆ ಪರ್ವತ ಶಿಖರಕ್ಕೇರಿ ಮತ್ತೆ ಕಣಿವೆಗಿಳಿದಿದೆ. ಆದರೆ ಭಾರತದಲ್ಲಿ ತೈಲ ಬೆಲೆಗಳ ಏರುಪೇರು ಆಗಿಲ್ಲ. ಈಗ ಆಗುವುದು ಬಿಟ್ಟರೆ.


ನಾವು ದಿನನಿತ್ಯ ಉಪಯೋಗಿಸುವ ಪೆಟ್ರೋಲ್ ಡಿಸೀಲ್ ಬೆಲೆ ನಿಜ ಬೆಲೆಯೆ ಅಲ್ಲ. ಕಚ್ಚಾ ತೈಲದಿಂದ ಒಂದು ಲೀಟರ್ ಪೆಟ್ರೋಲ್ ಉತ್ಪಾದಿಸಲು ಭಾರತದ ತೈಲ ಕಂಪನಿಗಳಿಗೆ ಸುಮಾರು ಇಪ್ಪತ್ತೈದು ರೂ ಖರ್ಚು ತಗಲಿದರೆ ಉಳಿದ ಇಪ್ಪತ್ತೈದು ರೂ ನಾವು ನೇರವಾಗಿ ಸರಕಾರಕ್ಕೆ ತೆರಿಗೆ ರೂಪದಲ್ಲಿ ನೀಡುತ್ತೇವೆ. ಭಾರತದ ಆರ್ಥಿಕ ವ್ಯವಸ್ಥೆಯ ಅಡಿಪಾಯವೇ ಈ ತೈಲ ಕಂಪನಿಗಳು ಜನಸಾಮಾನ್ಯರಿಂದ ಪಡೆದು ನೀಡುವ ತೆರಿಗೆ ಹಣ. ಎಡ ಪಕ್ಷಗಳು ಹಣಕಾಸು ಸಚಿವರಿಂದ ಕೇಳುತ್ತಿದ್ದುದು ಇದನ್ನೆ. ತೆರಿಗೆ ಹಣ ಕಡಿಮೆ ಮಾಡಿ. ನೈಜವಾಗಿ ಜನಸಾಮಾನ್ಯರಿಗೆ ತೈಲಬೆಲೆ ಕಡಿಮೆಯಲ್ಲಿ ಸಿಗಬಹುದು ಮತ್ತು ತೈಲ ಕಂಪನಿಗಳು ನಷ್ಟ ಅನುಭವಿಸಬೇಕಾಗಿಲ್ಲ.
ತೈಲ ಬೆಲೆ ಇಳಿತವನ್ನು ಎಲ್ಲರಿಂದ ಹೆಚ್ಚು ವಿರೋಧಿಸಿದವರೆಂದರೆ ಹಿಂದಿನ ವಿತ್ತ ಸಚಿವ ಪಿ. ಚಿದಂಬರಂ. ಬೆಲೆಇಳಿಕೆಯಿಂದ ಸರಕಾರದ ಆದಾಯ ಇಳಿಯಬಹುದು ಎಂಬ ಚಿಂತೆ ಅವರದಾಗಿತ್ತು. ಡಾ. ಮನಮೋಹನ್ ಸಿಂಗ್ ಅವರು ವಿತ್ತಖಾತೆಯನ್ನು ವಹಿಸಿದೊಡನೆ ತೆಗೆದುಕೊಂಡ ಮೊದಲ ಆರ್ಥಿಕ ನಿರ್ಧಾರವಿದು. ಬೆಲೆಏರಿಕೆ ಈ ತಿಂಗಳಿನಿಂದ ಕಡಿಮೆಯಾಗಬಹುದೇ?
ಸರಕಾರ ತೊಂಬತ್ತರ ದಶಕದಲ್ಲಿ ತೈಲಬೆಲೆಗಳನ್ನು ಮಾರುಕಟ್ಟೆಯ ನಿರ್ಧಾರಕ್ಕೆ ಬಿಟ್ಟಿತ್ತು. ಆದರೆ ಒಂದೇ ಸವನೆ ಏರುತ್ತಿರುವ ಕಚ್ಚಾ ತೈಲದ ಬೆಲೆ ಮತ್ತು ಚುನಾವಣೆಗಳು ಸರಕಾರದ ಈ ಆರ್ಥಿಕ ನಿರ್ಣಯ ರಾಜಕೀಯವಾಗಿ ಲಾಭದಾಯಕವಾಗಿರಲಿಲ್ಲ. ಹಾಗಾಗಿ ಕೂಡಲೆ ಅಂದಿನ ಪೆಟ್ರೋಲಿಯಂ ಸಚಿವ ರಾಮನಾಯ್ಕ್ ತೈಲಬೆಲೆಯನ್ನು ಸರಕಾರ ನಿರ್ಧರಿಸುವುದು ಎಂದರು. ಬೆಲೆ ಹೆಚ್ಚಾಗಬೇಕಾದಾಗ ಕಂಪನಿಗಳು ಹೆಚ್ಚಿಸುವಂತಿರಲಿಲ್ಲ. ತೈಲ ಅರ್ಥ ವ್ಯವಸ್ಥೆ ಕುಸಿಯಿತು. ಖಾಸಗಿ ಕ್ಷೇತ್ರದ ಬೃಹತ್ ಕಂಪೆನಿಗಳಾದ ರಿಲಾಯನ್ಸ್ ಮತ್ತು ಎಸ್ಸಾರ್ ದೇಶಾದ್ಯಂತ ರಿಟೇಲ್ ಔಟ್‌ಲೆಟ್‌ಗಳನ್ನು ತೆರೆದರೂ ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಗಗನಕ್ಕೇರಿದಾಗ ಅವುಗಳನ್ನು ಮುಚ್ಚಿ ಕುಳಿತವು. ಈಗ ಮತ್ತೆ ತೆರೆದು ಜನರಿಗೆ ಮಾರುಕಟ್ಟೆ ದರದಲ್ಲಿ ಪಟ್ರೋಲ್ ಡಿಸೀಲ್ ಮಾರಲು ಪ್ರಯತ್ನಿಸುತ್ತಿವೆ.
ನನ್ನ ಗೆಳೆಯನ ಮಾತನ್ನು ವಿವರಿಸುವುದಾದರೆ ಈಗ ತೈಲ ಬೆಲೆ ಇಳಿಸಿದ ಸರಕಾರ ಇನ್ನು ಕೆಲವು ತಿಂಗಳುಗಳಲ್ಲಿ ಚುನಾವಣೆ ಎದುರಿಸಲಿದೆ. ಆಡಳಿತ ಪಕ್ಷ ಜನರಿಗೆ ಕಡಿಮೆ ಬೆಲೆಗೆ ಇಂಧನ ನೀಡಿದುದನ್ನು ಚುನಾವಣಾ ವಿಷಯವನ್ನಾಗಿಸಲಿದೆ. ಮತ್ತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಾದಾಗ ಹೊಸ ಸರಕಾರ (ಬಹುಷ: ಬೇರೆ ಪಕ್ಷದ್ದು) ತೈಲಬೆಲೆ ಏರಿಸಬೇಕಾಗುತ್ತದೆ. ಜನರ ಸಿಟ್ಟನ್ನು ಅದು ಎದುರಿಸಬೇಕಾಗುತ್ತದೆ.

ಸಿಡಿಲು

ನಾವು ಅನ್ನ ಬೇಯಿಸುವ ಅಡುಗೆ ಅನಿಲ ಸಿಲಿಂಡರ್ ಒಂದಕ್ಕೆ ತೈಲ ಕಂಪೆನಿಗಳು ರೂ ೧೪೮ ಹಾಗೂ ಕೆರೋಸಿನ್ ಲೀಟರ್ ಒಂದಕ್ಕೆ ರೂ. ೧೭ ನಷ್ಟ ಅನುಭವಿಸುತ್ತಿವೆ.

ಗುಡುಗು

೨೦೦೮-೦೯ರ ಸಾಲಿನ ರೂ ೯೨,೮೫೩ ಕೋಟಿ ನಷ್ಟವನ್ನು ಸಾರ್ವಜನಿಕ ಕ್ಷೇತ್ರದ ಇಂಡಿಯನ್ ಆಯಲ್, ಭಾರತ್ ಪೆಟ್ರೋಲಿಯಂ, ಹಿಂದೂಸ್ಥಾನ್ ಪೆಟ್ರೋಲಿಯಂ ಈಗಾಗಲೇ ತಮ್ಮ ಅರ್ಧವರ್ಷದ ಅಕೌಂಟಿಗೆ ಸೇರಿಸಿವೆ.

Thursday, December 4, 2008

ಅತಿ ಮೋಹದ ಪಾಕಿಸ್ಥಾನೀ ಮಾಧ್ಯಮ

ಭಾರತದ ಸೈನ್ಯ ಅಥವಾ ಆಡಳಿತ ವ್ಯವಸ್ಥೆಯೇ ಭಯೋತ್ಪಾದಕರನ್ನು ಸೃಷ್ಟಿಸಿ ಮುಂಬಯಿ ದುರಂತಕ್ಕೆ ಪಾಕಿಸ್ಥಾನಿ ಮೂಲದ ಭಯೋತ್ಪಾದಕರು ಕಾರಣ ಎಂದು ಸುಳ್ಳು ಹೇಳುತ್ತಿವೆ ಎಂದು ಪಾಕಿಸ್ಥಾನದ ಟಿವಿ ಚಾನೆಲ್‌ಗಳು ಜನಾಭಿಪ್ರಾಯ ಮೂಡಿಸುತ್ತಿವೆ. ಪಾಕಿಸ್ಥಾನದ ಬಲಹೀನ ಸರಕಾರಕ್ಕೆ ಅಲ್ಲಿನ ಎಲ್ಲಾ ರಾಜಕೀಯ ಶಕ್ತಿಗಳು ಮಾತ್ರವಲ್ಲ ಮಾಧ್ಯಮಗಳು ಮತ್ತು ವಿಶ್ಲೇಷಕರು ಸಮರ್ಥನೆ ನೀಡುತ್ತಿದ್ದಾರೆ. ಪಾಕಿಸ್ಥಾನದ ಮಾಧ್ಯಮಗಳು ಪ್ರಮುಖವಾಗಿ ಬ್ರಾಡ್‌ಕಾಸ್ಟ್ ಮಾಧ್ಯಮಗಳು ಭಾರತದ ರಾಜಕೀಯ ಪಕ್ಷಗಳನ್ನು, ಭದ್ರತಾ ಪಡೆಗಳನ್ನು ಮತ್ತು ಮುಖ್ಯವಾಗಿ ಭಾರತದ ಮಾಧ್ಯಮಗಳನ್ನು ಹೀಯಾಳಿಸುತ್ತಿವೆ. ಭಾರತದ ಬ್ರಾಡ್‌ಕಾಸ್ಟ್ ಮಾಧ್ಯಮಗಳು ಅರವತ್ತು ಗಂಟೆಗಳಷ್ಟು ಕಾಲ ಮುಂಬಯಿಯಿಂದ ನಿರಂತರ ಭಯೋತ್ಪಾದಕರ ಮತ್ತು ಭದ್ರತಾ ಪಡೆಗಳ ನಡುವಿನ ಕಾಳಗವನ್ನು ನೇರಪ್ರಸಾರಮಾಡಿ ಭಾರತದ ಪ್ರಜೆಗಳಿಗೆ ಮುಂಬಯಿಯಲ್ಲಿ ಏನಾಗುತ್ತಿದೆ ಎಂಬ ಮಾಹಿತಿ ನೀಡಿವೆ. ಅದನ್ನು ನೋಡಿದ ವೀಕ್ಷಕರಿಗೆ ಕೆಲವೊಮ್ಮೆ ಅದು ರೋಚಕವಾದ ವರದಿಯೆಂದೆಣಿಸಿದರೂ ಪಾಕಿಸ್ಥಾನದ ಎಲ್ಲಾ ವ್ಯವಸ್ಥೆಗಳು ದಿಕ್ಕೆಟ್ಟು ಹೋದವು. ನಿರಂತರ ಟಿವಿ ನೋಡಿದ ಜನ ಕೈಗೆ ಸಿಕ್ಕಿದ ಆಯುಧವನ್ನು ಎತ್ತಿ ಪಾಕಿಸ್ಥಾನದತ್ತ ದಾಳಿಗೆ ಬರಬಹುದೆಂಬಷ್ಟು ಭೀತಿ ಅವರಲ್ಲಿ ಹುಟ್ಟಿತು.
ಭಾರತದ ಮಾಧ್ಯಮಗಳು ಈ ಮುಂಬಯಿ ದಾಳಿಗೆ ಪಾಕಿಸ್ಥಾನವೇ ಕಾರಣ ಎಂಬುದನ್ನು ಅಷ್ಟು ಬೇಗ ಹೇಗೆ ನಿರ್ಣಯಿಸಿತು ಎಂಬುದು ಅವರ ಪ್ರಶ್ನೆ. ಭಾರತದ ಮಾಧ್ಯಮಗಳು ಅತಿ ರಾಷ್ಟ್ರೀಯವಾದಿಯಾಗಿದ್ದು ಸುಳ್ಳುಗಳ ಸರಮಾಲೆಯನ್ನೆ ನೇಯುತ್ತಿವೆ ಎಂದು ಹೇಳುತ್ತಾರೆ. ಯಾವುದೇ ಪೂರಕ ಸಾಕ್ಷಾಧಾರವಿಲ್ಲದೆ ಭಾರತದ ಮಾಧ್ಯಮವು ನಿರ್ಣಯಕ್ಕೆ ಬಂದು ಬಿಡುತ್ತದೆ ಎಂದು ಪಾಕಿಸ್ಥಾನದ ಮಾಧ್ಯಮಗಳು ಬೊಬ್ಬಿಡುತ್ತಿವೆ. ಭಾರತದ ಕೆಲವು ಪತ್ರಿಕೆಗಳು ಜಗತ್ತಿನ ಮಾಧ್ಯಮಗಳು ಮುಂಬಯಿ ದಾಳಿಯನ್ನು ಹೇಗೆ ಪರಿಗಣಿಸಿವೆ ಎಂಬುದನ್ನು ತೋರಿಸಿವೆ. ಪಾಕಿಸ್ಥಾನದ ಸ್ವಘೋಷಿತ ಮಾಜಿ ಐಎಸ್‌ಐ ಹಮಿದ್ ಮೀರ್ ಎಂಬ ಅಂಕಣಕಾರ ಮುಂಬಯಿ ದಾಳಿಯನ್ನು ಹಿಂದೂ ಪರ ಸಂಘಟನೆಗಳೇ ನಡೆಸಿವೆ ಎಂಬ ತಲೆಬುಡವಿಲ್ಲದ ವಿಶ್ಲೇಷಣೆ ಮಾಡಿದ್ದಾನೆ. ಪಾಕಿಸ್ಥಾನದ ಮಾಧ್ಯಮಗಳು ಭಯೋತ್ಪಾದಕ ಕೃತ್ಯಕ್ಕೆ ಪಾಕಿಸ್ಥಾನ ಹೊಣೆಯೇ ಅಲ್ಲ ಎಂಬಂತೆ ವಾದ ಮಾಡಿವೆ. ಆಂಟಿ ಟೆರರಿಸ್ಟ್ ಸ್ಕ್ವಾಡ್‌ನ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಭಾರತದ ಸೈನ್ಯವೇ ಮುಗಿಸಿಬಿಟ್ಟಿದೆ ಎಂದು ಪಾಕಿಸ್ಥಾನ ಮಾಧ್ಯಮಗಳು ವರದಿ ಮಾಡುತ್ತಿವೆ.
ಭಾರತದ ಮಾಧ್ಯಮಗಳನ್ನು ಛೀಮಾರಿಮಾಡುವ ನಮ್ಮ ಜನ ಪಾಕಿಸ್ಥಾನದ ಬ್ರಾಡ್‍ಕಾಸ್ಟ್ ಮಾಧ್ಯಮವನ್ನು ಮತ್ತು ಅದು ಪಾಕಿಸ್ಥಾನದಲ್ಲಿ ಮಾಡುವ ಭಾರತದ ವಿರುದ್ಧದ ಜನಾಭಿಪ್ರಾಯಗಳನ್ನು ಕಂಡು ಭೀತಿಗೊಳ್ಳುವುದರಲ್ಲಿ ಸಂಶಯವಿಲ್ಲ.

Wednesday, December 3, 2008

ಅಕ್ಕಿ ಅನ್ನವಾಗಲಿ

ಅಮೇರಿಕಾದ ಸೆಕ್ರೆಟರಿ ಆಫ್ ಸ್ಟೇಟ್ ಕಾಂಡೋಲೀಸಾ ರೈಸ್ ಅವರು ಬಹಳ ಅವಸರದಿಂದಲೇ ನವದೆಹಲಿಗೆ ಆಗಮಿಸಿದ್ದಾರೆ. ಮುಂಬಯಿ ದಾಳಿಗೆ ನೊಂದ ಭಾರತೀಯರಿಗೆ ಸಾಂತ್ವನ ನೀಡಲು ಆಕೆ ಬಂದಂತೆ ಕಾಣುತ್ತಿಲ್ಲ. ನೊಂದಿರುವ ಭಾರತೀಯರ ಭಾವನೆಗಳು ಇಲ್ಲಿನ ರಾಜಕೀಯ ನಾಯಕರ ಮೇಲೆ ಪರಿಣಾಮ ಬೀರಿ ಅವರೇನಾದರೂ ಪಾಕಿಸ್ಥಾನದ ಮೇಲೆ ಎರಗಬಹುದೇನೋ ಎಂಬ ಗುಮಾನಿ ಅಮೇರಿಕಾದಲ್ಲಿ ಬಂದಿರುವುದರಿಂದ ಆಕೆ ವೇಗವಾಗಿ ಹಾರುತ್ತಾ ಯುರೋಪಿನ ಪ್ರವಾಸವನ್ನು ಮೊಟಕುಗೊಳಿಸುತ್ತಾ ಭಾರತದೆಡೆಗೆ ಧಾವಿಸಿದ್ದಾಳೆ. ಅಮೇರಿಕಾದ ಅಧಿಕಾರಿಗಳೂ ಮುಂಬಯಿ ದಾಳಿಯಲ್ಲಿ ಪಾಕಿಸ್ಥಾನದ ಕೈ ಇದೆ ಎನ್ನುವುದನ್ನು ಒಳಗಿಂದೊಳಗೆ ನಂಬಿದರೂ ಇಲ್ಲವೆಂದು ಹೇಳುವಂತೆ ಕಾಣುತ್ತಾರೆ. ತಪ್ಪು ಮಾಡಿದ ಕಿರಿಯ ಹುಡುಗನಿಗೆ ಹಿರಿಯ ಹುಡುಗನಿಂದ ಬಚಾವ್ ಮಾಡಿಸುವ ತರ ಅಮೇರಿಕಾ ನಡೆಯುತ್ತಿದೆ. ಪಾಕಿಸ್ಥಾನದ ಲಸ್ಕರ್ ಇ ತಾಯಿಬಾ ಇದರಲ್ಲಿ ಪಾಲ್ಗೊಂಡಿದೆ ಎಂದು ಅಮೇರಿಕಾದ ಅಧಿಕಾರಿಗಳಿಗೆ ಮನವರಿಕೆಯಾಗಿದೆ. ಭಾರತವೆಲ್ಲಿಯಾದರೂ ಪಾಕಿಸ್ಥಾನದ ವಿರುದ್ಧ ದಂಡೆತ್ತಿ ಬರಬಹುದೆಂಬ ಭೀತಿಯಲ್ಲಿ ಓಡೋಡಿ ಬಂದ ರೈಸ್ ಇಲ್ಲಿನ ನಾಯಕರ ಬೆನ್ನು ತಟ್ಟಿ ಸುಮ್ಮನಾಗಿಸುವಲ್ಲಿ ಪ್ರಯತ್ನ ಪಡುತ್ತಿದ್ದಾಳೆ.
ಈ ಮಧ್ಯೆ ಪಾಕಿಸ್ಥಾನದಲ್ಲಿ ಬಲಹೀನ ಸರಕಾರದ ಬೆನ್ನಿಗೆ ಎಲ್ಲ ರಾಜಕೀಯ ಪಕ್ಷಗಳು, ಮಾಧ್ಯಮಗಳು, ಜನಾಭಿಪ್ರಾಯ ರೂಪಿಸುವವರು ನಿಂತಿದ್ದಾರೆ. ಅವರು ಪಾಕಿಸ್ಥಾನದ ಒಗ್ಗಟ್ಟನ್ನು ಬಲಪಡಿಸುತ್ತಿದ್ದಾರೆ. ಆಡಳಿತ ಯಂತ್ರದೊಂದಿಗೆ ಇವರೆಲ್ಲ ಸೇರಿ ಮುಂಬಯಿ ದಾಳಿಯಲ್ಲಿ ಪಾಕಿಸ್ಥಾನದ ಕೈವಾಡವೇನೂ ಇಲ್ಲ ಎಂಬ ಅಭಿಪ್ರಾಯವನ್ನು ವಿಶ್ವಮಟ್ಟದಲ್ಲಿ ರೂಪಿಸುತ್ತಿದ್ದಾರೆ. ಪಾಕಿಸ್ಥಾನದ ಅಧ್ಯಕ್ಷ ಅಸಿಫ್ ಅಲಿ ಜರ್ಧಾರಿ ಅಮೇರಿಕಾದ ಟಿವಿ ಚಾನೆಲ್‌ಗಳಲ್ಲಿ ಕಾಣಿಸಿಕೊಂಡು ತಪ್ಪು ನಮ್ಮದಲ್ಲ ಎಂದು ಹೇಳಿದ್ದಾರೆ. ಪಾಕಿಸ್ಥಾನಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ, ಭಯೋತ್ಪಾದನೆಯ ವಿರುದ್ಧ ನಾವಿದ್ದೇವೆ ಎಂದು ತೋರಿಸಿಕೊಳ್ಳಬೇಕು. ಜತೆಗೆ ಆಂತರಿಕವಾಗಿ ಭಾರತದ ಯಾವುದೇ ಎಚ್ಚರದ ಮಾತುಗಳಿಗೆ ನಾವು ಬಗ್ಗುವುದಿಲ್ಲ ಎಂದು ತೋರಿಸಬೇಕಾಗಿದೆ. ಎಲ್ಲರೂ ಒಂದಾಗಿ ಭಾರತದಲ್ಲಿ ಆದ ದುರಂತಕ್ಕೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಭಾರತವು ಪಾಕಿಸ್ಥಾನವೇ ಇದಕ್ಕೆಲ್ಲ ಕಾರಣ ಎಂದು ಬೆರಳು ತೋರಿಸುವುದನ್ನು ಪಾಕಿಸ್ಥಾನ ತಳ್ಳಿಹಾಕುತ್ತಿದೆ.
ಭಾರತ ತನ್ನಲ್ಲಿರುವ ಸಾಕ್ಷಾಧಾರಗಳನ್ನು ಮುಂದಿಟ್ಟು ರಾಜಕೀಯ ನಿರ್ಧಾರಗಳ ಮೂಲಕ ಮತ್ತು ಮಾಧ್ಯಮಗಳ ಮೂಲಕ ಪಾಕಿಸ್ಥಾನವು ಹೇಗೆ ಭಯೋತ್ಪಾದನೆಯ ತೊಟ್ಟಿಲಾಗಿದೆ ಎಂಬುದನ್ನು ಜಗತ್ತಿಗೆ ತೋರಿಸಬೇಕು. ಘಟನೆಯ ನಂತರದ ಮೊದಲ ಒಂದೆರಡು ದಿನಗಳಲ್ಲಿ ದೇಶದ ಆಡಳಿತ ನಾಯಕರು ಮಾತಾಡಿದ ಧ್ವನಿ ಇನ್ನೂ ಗಟ್ಟಿಯಾಗಿ ಬಹಳಷ್ಟು ದಿನ ಉಳಿಯಬೇಕು. ದೇಶದ ಜನತೆ ಯಾವುದಾದರೂ ಪರಿಣಾಮವನ್ನು ಕಾಣುವಂತಹ ನಿರ್ಧಾರಗಳನ್ನು ಸರಕಾರವು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಕಾಂಡೋಲೀಸಾ ರೈಸ್ ನಂತಹವರು ಬಂದಾಗ ಬಾಲಬೀಸಿ ಕುಂಯ್‌ಗುಡುವ ಕುನ್ನಿಗಳು ನಾವಾಗುತ್ತೇವೆ.

Tuesday, December 2, 2008

ಈಗಲ್ಲವಾದರೆ ಇನ್ಯಾವಾಗ...?

ಭಾರತದ ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ ಅವರು ಟಿವಿ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರತಿಯೊಂದು ಸಾರ್ವಭೌಮ ರಾಷ್ಟ್ರವೂ ತನ್ನ ಗಡಿಯನ್ನು ರಕ್ಷಿಸಲು ಯಾವಾಗ ಬೇಕಾದರೂ ಯಾವುದೇ ಕಾರ್ಯಗಳನ್ನು ಕೈಗೆತ್ತಿಕೊಳ್ಳಬಹುದು ಎಂದಿದ್ದಾರೆ. ಪಾಕಿಸ್ಥಾನದ ಜತೆಗಿನ ಐದು ವರ್ಷಗಳಷ್ಟು ಹಳೆಯ ಶಾಂತಿ ಒಪ್ಪಂದದಲ್ಲಿ ಹೆಚ್ಚಿನದೇನೂ ಆಗಿಲ್ಲ ಎಂದೂ ಅವರು ಹೇಳಿದ್ದಾರೆ. ಶಾಂತಿ ಶಾಂತಿ ಎಂದು ಹೇಳುತ್ತಿರುವ ಭಾರತ ಈಗ ಎದ್ದು ನಿಂತು ಕೊಂಡರೆ ಪಾಕಿಸ್ಥಾನ ಏನೂ ಮಾಡಲಾಗದು. ಅಲ್ಲಿನ ಕ್ಷೀಣ ರಾಜಕೀಯ ವ್ಯವಸ್ಥೆ, ಅಮೇರಿಕಾದೊಂದಿಗಿನ ಅಷ್ಟಕಷ್ಟೇ ಇರುವ ಸಂಬಂಧ, ಅಣು ಸಂಬಂಧದ ನಂತರ ಹತ್ತಿರವಾದ ಭಾರತ ಮತ್ತು ಅಮೇರಿಕಾ ನಂಟು, ಅಮೇರಿಕಾ ಅಧ್ಯಕ್ಷನಾಗಿ ಬುಷ್ ನ ಕೊನೆ ದಿನಗಳು, ಅಧೋಗತಿಗಿಳಿದ ಜಾಗತಿಕ ಅರ್ಥವ್ಯವಸ್ಥೆ ಇವೆಲ್ಲಾ ಇದೀಗ ಭಾರತದ ಪರವಾಗಿಯೇ ಇವೆ. ಯುನೈಟೆಡ್ ಪ್ರೋಗ್ರೆಸ್ಸಿವ್ ಅಲಾಯನ್ಸ್‌ನ ಮುತ್ಸದ್ಧಿಗಳು ಸಮಯದ ಸದುಪಯೋಗವನ್ನು ಪಡೆದು ಪಾಕಿಸ್ಥಾನದಿಂದ ಹೊರಡುವ ಭಯೋತ್ಪಾದನೆ ಚಟುವಟಿಕೆಗಳನ್ನು ನಿಗ್ರಹಿಸುವ ಕೆಲಸವನ್ನು ಮಾಡಿದರೆ ಮುಂದಿನ ದಿನಗಳು ಭಾರತದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಬಹುದು. ಒಂದು ಭಯೋತ್ಪಾದಕ ಕೃತ್ಯದಿಂದ ದಣಿದು ಎಲ್ಲವನ್ನು ಮರೆತು ಬಿಡುವಷ್ಟರಲ್ಲಿ ಇನ್ನೊಂದು ದಾಳಿ ಆಗುವುದು ನಿಂತರೆ ಮಾತ್ರ ಸರಕಾರ, ಉದ್ಯಮ, ಸಮಾಜ ಅಭಿವೃದ್ಧಿಯತ್ತ ನಿರಂತರ ನಡೆಯಬಹುದು.ಅಮೇರಿಕಾದ ಹಿರಿಯ ಅಧಿಕಾರಿಯೊಬ್ಬರು ಪಾಕಿಸ್ಥಾನದ ಕೈವಾಡದ ಬಗ್ಗೆ ಶಂಕಿಸುವುದಕ್ಕೆ ಕಾರಣಗಳನ್ನು ಕಂಡಿದ್ದಾರೆ. ತನಿಖೆ ಇನ್ನೂ ಪೂರ್ತಿಯಾಗದಿರುವುದರಿಂದ ಮಾಹಿತಿ ಪೂರ್ಣ ಲಭ್ಯವಿಲ್ಲ. ಭಾರತವೂ ಈಗಾಗಲೇ ಬೇಕಾದ ಭಯೋತ್ಪಾದಕರ ಪಟ್ಟಿಯನ್ನು ನೀಡಿ ಪಾಕಿಸ್ಥಾನವನ್ನು ಎಚ್ಚರಿಸಿದೆ. ಟೇಬಲ್ ಎದುರು ಕುಳಿತು ಮಾತಾಡಿ ಇದನ್ನೆಲ್ಲ ನಿರ್ವಹಿಸುವ ಕಾಲ ಮುಗಿದಿದೆ. ನ್ಯೂಕ್ಲಿಯರ್ ರಾಷ್ಟ್ರವಾಗಿರುವ ಭಾರತದ ಪ್ರತಿಯೊಂದು ಹೆಜ್ಜೆಯನ್ನು ನೋಡುತ್ತಿರುವ ಅಮೇರಿಕಾ ಕೂಡಾ ಭಾರತ ಎಚ್ಚೆತ್ತರೆ ಭಯಪಟ್ಟೀತು. ಆದರೆ ಭಾರತವನ್ನು ಮಣಿಸುವಷ್ಟು ಧೈರ್ಯವನ್ನು ಪಡೆಯಲಾರದು. ಭಯೋತ್ಪಾದನೆಯಿಂದ ಭಾರತಕ್ಕೆ ಆಗುತ್ತಿರುವ ನೋವು, ನಷ್ಟಗಳನ್ನು ಎದುರಿಸಲು ಈಗಿರುವಷ್ಟು ದೊಡ್ದ ನೈತಿಕ ಬಲ ಇನ್ನು ಸಿಗುವುದಾದರೆ ಅದಕ್ಕೆ ಪ್ರಜೆಗಳು ಯಾವ ಬೆಲೆ ನೀಡಬೇಕೇನೋ? ನೋವು ಎಲ್ಲರಿಗೂ ಆಗಿದೆ. ಆ ನೋವು ಇಡೀ ದೇಶವನ್ನು ಅಲುಗಾಡಿಸಿದೆ. ಮುಂಬಯಿಯಲ್ಲಿ ಸಿಡಿದ ಗುಂಡುಗಳು ಎಲ್ಲರ ಎದೆಯನ್ನೂ ಒಡೆದಿದೆ. ದೇಶದ ನಾಯಕತ್ವ ಬರೇ ಮುಲಾಮು ಹಚ್ಚಿ ನೋವನ್ನು ಕಡಿಮೆಗೊಳಿಸಬಹುದು ಎಂದುಕೊಂಡರೆ ಅದರ ಪರಿಣಾಮ ವಿಪರೀತವಾಗುವುದರಲ್ಲಿ ಸಂಶಯವಿಲ್ಲ. ದೇಶದ ಸರಕಾರ ವರ್ಷದೊಳಗಿನ ಚುನಾವಣೆಯನ್ನು ಮರೆತು, ನಿರ್ದಿಷ್ಟ ಹಾಗೂ ನಿಖರವಾದ ಭಾಷೆಯಲ್ಲಿ ಭಯೋತ್ಪಾದನೆಯ ವಿರುದ್ಧ ಜಗತ್ತಿನ ಅತ್ಯುನ್ನತ ಮಟ್ಟದಲ್ಲಿ ಹಾಗೂ ಅತ್ಯುತ್ತಮ ರೀತಿಯಲ್ಲಿ ತನ್ನ ಧ್ವನಿಯನ್ನು ಎತ್ತಬೇಕು. ಆ ಧ್ವನಿಗೆ ಕನಿಷ್ಟ ಭಾರತದ ಮಟ್ಟಿಗಾದರೂ ಭಯೋತ್ಪಾದನೆ ನಿಗ್ರಹವಾಗಲೇ ಬೇಕು. ಈಗಲ್ಲವಾದರೆ ಇನ್ಯಾವಾಗ ಎಂಬ ಪ್ರಶ್ನೆ ಕಾಡುತ್ತಿದೆ. ಈ ಪ್ರಶ್ನೆ ಭಾರತದ ನಾಯಕತ್ವಗಳಿಗೆ ಕಾಡದಿದ್ದರೆ ನಮ್ಮ ಜೀವವನ್ನು ಒತ್ತೆಯಿಟ್ಟು ಬದುಕಬೇಕು. ಭಾರತದ ಬೆನ್ನು ಬಾಗಿ ಕುಸಿದು ಹೋಗಿದೆ. ಇನ್ನು ಸೆಟೆದು ನಿಲ್ಲದಿದ್ದರೆ ಇನ್ಯಾವಾಗ? ಅದಕ್ಕೆ ನೀಡಬೇಕಾದ ಬೆಲೆಯೇನು?
ಸಿಡಿಲು
ಮುಂಬಯಿಯಲ್ಲಿ ಇಸ್ರೇಲ್ ನ ರಬ್ಬಿ ಗೇವ್ರಿಯಲ್ ಹಾಲ್ಟ್ಜ್‌ಬರ್ಗ್ ಮತ್ತು ರಿವ್ಕಾ ಅವರು ಬಲಿಯಾದರು. ಅವರ ಅಂತಿಮ ಸಂಸ್ಕಾರದ ಸಂದರ್ಭ ಅವರ ಬದುಕುಳಿದ ಎರಡು ವರ್ಷದ ಮಗು ಮೋಶ್ ಹಾಲ್ಟ್ಜ್‌ಬರ್ಗ್ ನನ್ನು ಕಂಡ ಇಸ್ರೇಲಿಗರ ಒಂದೇ ಪ್ರಶ್ನೆ "ಯಾಕೆ? ಯಾಕೆ? ಯಾಕೆ?" ಎಂಬುದು.

ಚಿತ್ರ: AP

Monday, December 1, 2008

ಕೇಳಬಹುದೇ ಶಂಖನಾದ

ಭಾರತದ ಹೊಸ ಗೃಹ ಸಚಿವ ಪಲನಿಯಪ್ಪನ್ ಚಿದಂಬರಂ ತನ್ನ 'ಗೃಹ'ದಿಂದ ಹೊರಬಂದು ಪಾಕಿಸ್ಥಾನದ ರಾಯಭಾರಿಯನ್ನು ಕರೆದು ಮುಂಬಯಿ ದುರಂತದಲ್ಲಿ ಪಾಕಿಸ್ಥಾನದ ಕೈವಾಡ ಇರುವುದನ್ನು ತಿಳಿಸಿಹೇಳಿ ಎಚ್ಚರಿಸಿದ್ದಾರೆ. ಸುಮಾರು ಇನ್ನೂರಕ್ಕೂ ಹೆಚ್ಚು ಜನರನ್ನು ಬಳಿ ತೆಗೆದುಕೊಂಡ ಮುಂಬಯಿ ದುರಂತದ ಹಿಂದೆ ಪಾಕಿಸ್ಥಾನದ ಕೈವಾಡ ಇದೆ ಎಂದು ಭಾರತ ಸರಕಾರದ ವಿವಿಧ ಅಂಗಗಳಿಗೆ ಖಚಿತ ಮಾಹಿತಿಗಳು ಲಭ್ಯವಾಗಿವೆ. ಈ ಮಾಹಿತಿಗಳನ್ನು ಹಿಡಿದುಕೊಂಡು ಪಾಕಿಸ್ಥಾನವನ್ನು ಎತ್ತರದ ಸ್ವರದಲ್ಲಿ ಗದರಿಸುವ ಧೈರ್ಯ ಭಾರತ ಸರಕಾರಕ್ಕಿದೆಯೇ? ಧೃಢತೆಯಿಂದ ಮತ್ತು ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸುವಷ್ಟು ಭಾರತದ ರಾಜಕಾರಣಿಗಳಿಗೆ ಸ್ಥೈರ್ಯವಿದೆಯೇ? ಚಿದಂಬರಂ ಅವರು ಪ್ರತಿಕ್ರಿಯಲೇ ಬೇಕು. ಯಾಕೆಂದರೆ ಚುನಾವಣೆ ಇನ್ನು ತಿಂಗಳುಗಳ ಲೆಕ್ಕದಷ್ಟು ದೂರವಿದೆ. ರಾಜೀನಾಮೆ ನೀಡಿದ ಶಿವರಾಜ್ ಪಾಟೀಲ್ ಅವರ ಅಸಮರ್ಥತೆಯನ್ನು ಅಳಿಸಿ ಜನತೆಯ ಎದುರು ಯುನಾಯ್ಟೆಡ್ ಪ್ರೋಗ್ರೆಸ್ಸಿವ್ ಅಲಾಯನ್ಸ್ ಸರಕಾರವು ಚುನಾವಣೆಯನ್ನು ಎದುರಿಸಬೇಕು. ಜನರಲ್ಲಿ ಸಿಟ್ಟಿದೆ. ಅದು ಕೇವಲ ಕಾಂಗ್ರೆಸ್ ಅಥವಾ ಆಡಳಿತ ಪಕ್ಷದ ಮೇಲಲ್ಲ. ಇಡೀ ರಾಜಕೀಯ ವ್ಯವಸ್ಥೆಯ ಬಗ್ಗೆ ಜನ ರೊಚ್ಚಿಗೆದ್ದಿದ್ದಾರೆ. ಮುಂಬಯಿಯಲ್ಲಿ ಕೆಲವು ಕಾರ್ಪೋರೇಟ್ ಮುಂದಾಳುಗಳು ಮಹಾ ನಗರಗಳ ಕಾನೂನು ಮತ್ತು ಸುವ್ಯವಸ್ಥೆಗಾಗಿ ಖಾಸಗಿ ಸೆಕ್ಯೂರಿಟಿ ಬಲಗಳನ್ನು ವೃದ್ಧಿಸುವ ಕುರಿತೂ ಮಾತಾಡುತ್ತಾರೆ. ರೊಚ್ಚಿಗೆದ್ದಿರುವ ಜನತೆ ಸರಕಾರವನ್ನು ಮತ್ತು ರಾಜಕೀಯ ಪಕ್ಷಗಳನ್ನು ದೂರುತ್ತಿದ್ದಾರೆ. ಜನತೆಗೆ ಹೆದರಿ ರಾಜೀನಾಮೆ ನೀಡುವುದು ಕೆಲವೊಮ್ಮೆ ನಾಯಕರುಗಳಿಗೆ ಅನಿವಾರ್ಯವಾಗುತ್ತಿದೆ. ಚಿದಂಬರಂ ಅವರ ಎಚ್ಚರಿಕೆ ಪಾಕಿಸ್ಥಾನದಲ್ಲಿ ಎಷ್ಟು ಪರಿಣಾಮಕಾರಿಯಾಗಬಲ್ಲುದು? ಭಾರತದ ಜನತೆಯ ಸಿಟ್ಟು ಸರಕಾರದ ಮೂಲಕ ವಿಶ್ವನಾಯಕರನ್ನು ತಲುಪಬಲ್ಲುದೇ? ಇಸ್ಲಾಮಬಾದ್ ನಲ್ಲಿರುವ ಪಾಕಿಸ್ಥಾನದ ಅಧ್ಯಕ್ಷ ಅಸಿಫ್ ಅಲಿ ಝರ್ದಾರಿ ಅಥವಾ ಪಾಕಿಸ್ಥಾನದ ಪ್ರಧಾನಿ ಸಯದ್ ಯುಸುಫ್ ರಾಝ ಗಿಲಾನಿ ತಲೆಕೆಡಿಸಿಕೊಳ್ಳವಷ್ಟು ಭಾರತದ ಆಡಳಿತ ಬೊಬ್ಬೆ ಹೊಡೆಯುತ್ತಿದೆಯೇ? ಅಮೇರಿಕಾದ ಸೆಕ್ರೆಟರಿ ಆಫ್ ಸ್ಟೇಟ್ ಕ್ಯಾಂಡೋಲೀನಾ ರೈಸ್ ಭಾರತಕ್ಕೆ ತಲುಪುವಷ್ಟರಲ್ಲಿ ಆಡಳಿತ ಯಂತ್ರದಿಂದ ಪರಿಣಾಮಕಾರಿ ಅಭಿಪ್ರಾಯ ಬೀರುವ ಕೆಲಸಗಳು ನಡೆಯುತ್ತಿದೆಯೇ? ಭಾರತವು ಪಾಕಿಸ್ಥಾನವನ್ನು ಔಪಚಾರಿಕವಾಗಿಯೇ ಎಚ್ಚರಿಸಿದಾಗ ಪಾಕಿಸ್ಥಾನ ಸರಕಾರವು ಪೂರ್ಣಪ್ರಮಾಣದ ಪಾರದರ್ಶಿಕತೆ, ಸಹಕಾರದಿಂದ ಭಾರತವು ನೀಡುವ ಸಾಕ್ಷಿಗಳನ್ನು ಪರಿಶೀಲಿಸಿ ಕೆಲಸ ಕೈಗೊಳ್ಳುವುದೇ? ಪಾಕಿಸ್ಥಾನದ ಮಾಧ್ಯಮಗಳು ಅಲ್ಲಿನ ವಿಶ್ಲೇಷಣಕಾರರು ಭಾರತದ ಸೈನಿಕರ ಕುರಿತು ಕೀಳರಿಮೆಯಿಂದ ಜನಾಭಿಪ್ರಾಯವನ್ನು ಮೂಡಿಸಿದೆ. ಇಪ್ಪತ್ತನಾಲ್ಕು ಘಂಟೆಯಾದರೂ ಒಂದು ಹೋಟೆಲ್‌ನಲ್ಲಿರುವ ಬೆರಳೆಣಿಕೆಯಷ್ಟು ಭಯೋತ್ಪಾದಕರನ್ನು ಭಾರತದ ಸುರಕ್ಷಾ ಬಲಗಳಿಗೆ ಹೊರ ಹಾಕಲು ಆಗಿಲ್ಲ ಎಂದು ಅಲ್ಲಿನ ಮಾಧ್ಯಮಗಳು ಅಣಕವಾಡುತ್ತಿದ್ದವು. ನಮ್ಮ ಸರಕಾರವನ್ನು, ವ್ಯವಸ್ಥೆಯನ್ನು ಕುಹಕವಾಡುವ ಭಾರತದ ಮಾಧ್ಯಮಗಳು ಇಂತಹ ಭಯೋತ್ಪಾದಕ ಕೃತ್ಯಗಳಲ್ಲಿ ಪಾಕಿಸ್ಥಾನದ ಕೈ ಎಷ್ಟು ಆಳವಾಗಿದೆ ಎಂದು ಕಂಡುಹಿಡಿದು ಬಯಲಿಗೆಳಯಬೇಕು.
ಸಿಡಿಲು
ಪಾಕಿಸ್ಥಾನದ ಮಾಧ್ಯಮಗಳ ಪ್ರಕಾರ ಮುಂಬಯಿ ದುರಂತವನ್ನು ಭಾರತವೇ ಮಾಡಿಸಿದೆಯಂತೆ!
ಗುಡುಗು
ಒಬಾಮ, ಹಿಲರಿ ಕ್ಲಿಂಟನ್ ಅವರನ್ನು ಅಮೇರಿಕಾದ ಸೆಕ್ರೆಟರಿ ಆಫ್ ಸ್ಟೇಟ್ ಆಗಿ ನೇಮಿಸಿದ್ದಾರೆ.

Sunday, November 30, 2008

ಅರ್ಥವಾದೀತೇ ಮನ ಮೋಹನ...


ದೇಶದ ಅರ್ಥಮಂತ್ರಿ ಬದಲಾಗಿದ್ದಾರೆ. ಮುಂಬಯಿ ದುರಂತದ ನಂತರ ಕೇಂದ್ರ ಸರಕಾರ ಅತ್ಯಂತ ಸಮಯೋಚಿತ ನಿರ್ಧಾರ ಕೈಗೊಂಡಿದೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಕೈಗೊಂಡ ಉತ್ತಮ ನಿರ್ಧಾರ. ಇದ್ದೂ ಇಲ್ಲದಂತಿದ್ದ ಗೃಹ ಮಂತ್ರಿ ರಾಜಿನಾಮೆ ದೊಡ್ಡ ಸಂಗತಿಯೇನಲ್ಲ. ಕಳೆದ ಐದು ವರ್ಷಗಳಲ್ಲಿ ಏನೂ ಮಾಡದಿದ್ದ ಯುನಾಯ್ಟೆಡ್ ಪ್ರೋಗ್ರೆಸ್ಸಿವ್ ಅಲಾಯನ್ಸ್ ನ ಭವಿಷ್ಯ ಶೂನ್ಯವಾಗಿತ್ತು. ಎಡ ಪಕ್ಷಗಳ ಕಿರುಕುಳದಿಂದ ನಾಲ್ಕು ವರ್ಷ ಏನೂ ಮಾಡಲಾಗಿಲ್ಲ. ನಂತರ ಏನಾದರೂ 'ಆಗಬಹುದು' ಎಂದು ಯೋಚಿಸಿದ್ದು ಏನೂ ಆಗಲಿಲ್ಲ. ಸರಕಾರದಲ್ಲಿದ್ದ ಕೆಲವು ಪ್ರತಿಭೆಗಳು ಅನಾವಶ್ಯಕ ಐದು ವರ್ಷಗಳನ್ನು ಕಳೆದುಕೊಂಡವು. ಚುನಾವಣೆ ಗೆದ್ದು ಸೋನಿಯಾ ಗಾಂಧಿಯವರು ಅತ್ಯಂತ ಗೌರವಯುತ ಅರ್ಥಶಾಸ್ತ್ರಜ್ಞ ಡಾ. ಮನಮೋಹನ್ ಸಿಂಗ್ ಅವರನ್ನು ಪ್ರಧಾನಮಂತ್ರಿಯಾಗಿ ಆಯ್ಕೆ ಮಾಡಿದಾಗ ದೇಶದ ಎಲ್ಲರಲ್ಲೂ ಆಶಾದಾಯಕ ಭರವಸೆ ಇತ್ತು. ಪ್ರಧಾನಿಯಾಗಿ ಡಾ. ಮನಮೋಹನ್ ಸಿಂಗ್ ಅತ್ಯಂತ ಉತ್ತಮ ಪ್ರಧಾನಿ ಯಾಗದಿದ್ದರೂ ದೇಶದ ಜನತೆಯ ಮೇಲೆ ಅವರಿಗೆ ಕಳಕಳಿಯಿತ್ತು. ಜನರು ಅವರನ್ನು ಕ್ಷಮಿಸಬಹುದು. ರಾಜಕಾರಣಿಯಾಗಿ ಸೋತ ಅರ್ಥಶಾಸ್ತ್ರಜ್ಞ ಮತ್ತೆ ದೇಶದ ಅರ್ಥ ವ್ಯವಸ್ಥೆಯ ಚುಕ್ಕಾಣಿ ಹಿಡಿದಿದ್ದಾರೆ. ಯೋಜನಾ ಆಯೋಗದ ಡೆಪ್ಯೂಟಿ ಚೇಯರ್‌ಮ್ಯಾನ್, ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್, ಮುಖ್ಯ ಆರ್ಥಿಕ ಸಲಹಾಗಾರ, ಮತ್ತು ಸುಧಾರಣೆಗಳ ಸೂತ್ರಧಾರನಾಗಿ ಹಣಕಾಸು ಸಚಿವ - ಈ ಎಲ್ಲಾ ಹುದ್ದೆಗಳನ್ನು ಅಲಂಕರಿಸಿದ ಡಾ. ಮನಮೋಹನ್ ಸಿಂಗ್ ಅವರು ಮತ್ತೆ ದೇಶದ ಅರ್ಥ ಮಂತ್ರಿಯ ಹೊಣೆಯನ್ನು ಹೊತ್ತಿದ್ದಾರೆ. ಜಗತ್ತಿಡೀ ಇಂದು ಆರ್ಥಿಕ ಗೊಂದಲದಲ್ಲಿರುವಾಗ ಡಾ. ಮನಮೋಹನ್ ಸಿಂಗ್ ಅವರಿಂದ ಇನ್ನು ಕೆಲವೇ ತಿಂಗಳಲ್ಲಿ ಏನೆಲ್ಲಾ ಚಮತ್ಕಾರಗಳನ್ನು ನಿರೀಕ್ಷಿಸಬಹುದು. ಬಹಳಷ್ಟು. ಅತ್ಯಂತ ಸಂಕುಚಿತ ಧೋರಣೆಯ ಪಿ. ಚಿದಂಬರಂ ಅವರಿಗೆ ಮನೆಯೇ ಒಳ್ಳೆಯದು ಎಂದು ಅವರನ್ನು ಗೃಹ ಸಚಿವರನ್ನಾಗಿಸಿದುದು ಇನ್ನೂ ಒಳ್ಳೆಯದೇ. ಅರಿಸ್ಟೋಕ್ರಾಟ್ ಶಿವರಾಜ್ ಪಾಟೀಲರ ಸ್ಥಾನಕ್ಕೆ ಸರಿಯಾದ ವ್ಯಕ್ತಿ!ಲೋಕಸಭಾ ಸ್ಪೀಕರ್ ಆಗಿದ್ದಾಗ ಶಿವರಾಜ್ ಪಾಟೀಲ ಅವರು ತನ್ನ ಅರಿಸ್ಟೋಕ್ರಾಟ್ ವ್ಯಕ್ತಿತ್ವಕ್ಕೆಂದೇ ದೆಹಲಿಯ ಅಶೋಕ ಹೋಟೇಲ್ ನಲ್ಲಿ ದಿನಕ್ಕೆ ಲಕ್ಷಗಟ್ಟಲೇ ಬಾಡಿಗೆ ಇರುವ ಕೋಣೆಯೊಂದನ್ನು ಸರಕಾರಿ ವೆಚ್ಚದಲ್ಲಿ ವರ್ಷಗಟ್ಟಲೇ ಇಟ್ಟಿದ್ದರು. ದಿನಕ್ಕೆರಡು ಮೂರು ಗಂಟೆ ಅವರು ಅಲ್ಲಿ ಕಳೆಯುತ್ತಿದ್ದರು. ವಿಲಾಸ್ ರಾವ್ ದೇಶಮುಖ್ ಅವರನ್ನು ಬದಲಿಸಿ ಕಾಂಗ್ರೆಸ್ ಪಕ್ಷವು ಶಿವರಾಜ್ ಪಾಟಿಲ್ ಅವರನ್ನು ಮಹಾರಾಷ್ಟ್ರ ಸರಕಾರದ ಮುಖ್ಯಮಂತ್ರಿಯನ್ನಾಗಿ ಮಾಡದಿದ್ದರೆ ಸಾಕು.! ಇವಿಷ್ಟು ಇಂದು ಸಂಜೆಯ ಬೆಳವಣಿಗೆ!!
ಸಿಡಿಲು
ನಗರವಿಡೀ ಭಯೋತ್ಪಾದಕರ ಮುಷ್ಠಿಯೊಳಗಿದ್ದಾಗ ಮುಂಬಯಿಯಲ್ಲಿದ್ದು ಅಮಿತಾಬ್ ಬಚ್ಚನ್ ಅವರು ಆ ಸಂದರ್ಭದಲ್ಲಿ ಬಹಳಷ್ಟು ಮಾಡಬಹುದಿತ್ತು. ಆದರೆ ಅವರು ತನ್ನ ಬ್ಲಾಗ್ ಬರೆದರಷ್ಟೇ!!ಜನರಲ್ಲಿ ಇಷ್ಟೊಂದು ಹೃದಯಾಘಾತಗಳು ಸಂಭವಿಸುವಾಗ ಭಯ ಮತ್ತು ದಿಗಿಲುಂಟಾಗುತ್ತದೆ. ಅವು ಹೃದಯವೇ ಎಂದು.
ಒಲವಿನಿಂದ
ಬಾನಾಡಿ

Wednesday, November 19, 2008

ಕಾಲ ಸರಿಯಿಲ್ಲ.


ಕುಸಿಯುತ್ತಿರುವ ಭೌಗೋಲಿಕ ಆರ್ಥಿಕ ವ್ಯವಸ್ಥೆ. ಏರುತ್ತಿರುವ ಹಣದುಬ್ಬರ. ಸ್ಟಾಕ್ ಎಕ್ಸ್‌ಚೇಂಜ್‌ಗಳಲ್ಲಿ ಕುಸಿಯುತ್ತಿರುವ ಶೇರುಗಳ ಬೆಲೆ. ದೇಶಗಳ ಅರ್ಥವ್ಯವಸ್ಥೆಯನ್ನು ಹಿಡಿದಿಟ್ಟುಕೊಳ್ಳುವವರು ತಮ್ಮಲ್ಲಿರುವ ಎಲ್ಲಾ ಕುಟಿಲೋಪಾಯಗಳನ್ನು ಉಪಯೋಗಿಸಿ ಆರ್ಥಿಕ ಪರಿಸ್ಥಿತಿಯ ಸುಧಾರಣೆಗೆ ಪ್ರಯತ್ನ ಪಡುತ್ತಿದ್ದಾರೆ. ಈ ಕುಸಿತ ಇನ್ನೂ ಒಂದು ವರ್ಷ ಮುಂದುವರಿಯಲಿದ್ದು ಜನಜೀವನ ಇನ್ನೂ ದುಸ್ತರವಾಗಲಿದೆ. ಆರ್ಥಿಕವಾಗಿ ಸುಧೃಢವಾಗಿದ್ದ ಜಪಾನ್ ಕೂಡ ಆರ್ಥಿಕ ಕುಸಿತಕ್ಕೊಳಗಾಗಿದೆ.
ಭಾರತದ ಶೇರು ಮಾರುಕಟ್ಟೆಯ ಸೂಚ್ಯಂಕವಾಗಿರುವ ಸೆನ್ಸೆಕ್ಸ್ ಒಂದೊಮ್ಮೆ 20000ದ ಗಡಿಯನ್ನು ತಲುಪಿದಾಗ ದೇಶದಲ್ಲಿ ಆರ್ಥಿಕ ವ್ಯವಹಾರ ಅತೀ ಉತ್ತಮವಾಗಿದ್ದು ಇದೇ ರೀತಿ ಇನ್ನು ಹತ್ತು ವರ್ಷಗಳೊಳಗೆ ಭಾರತ ಜಗತ್ತಿನ ಸುಪರ್ ಪವರ್ ಆಗುತ್ತದೆ ಎಂಬ ಆಶೆ ಎಲ್ಲರಲ್ಲೂ ಮೂಡಿತ್ತು. ಇಂದು ಶೇರು ಮಾರುಕಟ್ಟೆ ಸದ್ಯ ಏಳದಷ್ಟು ಕುಸಿದಿದೆ. ಇನ್ನು ಯಾವಾಗ ಸುಧಾರಿಸುತ್ತದೆ ಎಂದು ಯಾವ ಪಂಡಿತರೂ ಹೇಳಲು ಇಚ್ಚಿಸುವುದಿಲ್ಲ.
ದೇಶದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದ್ದಾಗ ಅದು ಕಟ್ಟಕಡೆಯ ನಾಗರಿಕನ ವರೆಗೆ ತಲುಪಲಿಲ್ಲ. ಸ್ಟಾಕ್ ಎಕ್ಸ್ಚೇಂಜ್‌ಗಳಲ್ಲಿ ಹಣ ಹೂಡಿದವರು, ವಿವಿಧ ಉದ್ದಿಮೆಗಳನ್ನು ನಡೆಸುವವರು, ದಲ್ಲಾಳಿಗಳು ಹಣಮಾಡಿದರು. ಬಡವರಿಗೆ ಅದರ ಪರಿಣಾಮವೇನೂ ತಟ್ಟಲಿಲ್ಲ. ಆದರೆ ಆರ್ಥಿಕ ಪರಿಸ್ಥಿತಿ ಕೆಟ್ಟುಹೋದಾಗ ಅದು ಶ್ರೀಮಂತರನ್ನಷ್ಟೇ ಅಲ್ಲ ಅಲುಗಾಡಿಸುವುದು. ಅದರ ಕಂಪನ ಅತೀ ಬಡವನವರೆಗೆ ಇರುತ್ತದೆ. ಇದರ ವೈರುಧ್ಯವೆಂದರೆ ಆರ್ಥಿಕ ಸುಧಾರಣೆಗೆ ಪಡುವ ಪ್ರಯತ್ನಗಳೆಲ್ಲಾ ಶ್ರೀಮಂತರ ಸುಧಾರಣೆಗೆ ಸಹಕಾರಿಯಾಗುತ್ತವೆ. ಬದಲು ಬಡವರಿಗೆ ತಲುಪುವುದಿಲ್ಲ.
ಜಗತ್ತಿನ ಮುಖ್ಯವಾಗಿ ಅಮೇರಿಕಾದ ಹಣಕಾಸಿನ ವ್ಯವಸ್ಥೆ ಕುಸಿದಿರದಿದ್ದರೆ ಬಾರಕ್ ಒಬಾಮ ಅಮೇರಿಕಾದ ಅಧ್ಯಕ್ಷನಾಗಿ ಚುನಾಯಿತನಾಗಿ ಬರುತ್ತಲೂ ಇರಲಿಲ್ಲ. ಆರ್ಥಿಕ ವ್ಯವಸ್ಥೆಯ ಕುಸಿತದಿಂದ ಅತ್ಯಂತ ಭೀತಿಗೊಳಗಾಗುವವರು ಮಧ್ಯಮ ವರ್ಗದ ಜನ. ಮಕ್ಕಳ ವಿದ್ಯಾಭಾಸ, ಕುಟುಂಬದ ನಿರ್ವಹಣೆ, ಸಾಮಾಜಿಕ ಸ್ಥಾನಮಾನಗಳನ್ನು ಉಳಿಸಿಕೊಳ್ಳುವುದು, ಭವಿಷದ ಬಗೆಗಿನ ಅಸ್ಪಷ್ಟತೆ, ಕೆಲಸವಿಲ್ಲದೇ ಮನೆಯಲ್ಲಿಯೇ ಕೂಡಬೇಕಾದ ಸಂದರ್ಭ, ಮನೆಯ ಬಾಡಿಗೆ ಕೊಡಲೂ ಪರದಾದುವ ಪರಿಸ್ಥಿತಿ, ಇವೆಲ್ಲವನ್ನೂ ಕಾಣಬೇಕಾದ ಅನಿವಾರ್ಯತೆ ಅವರನ್ನು ಕಾಡುತ್ತದೆ.
ಭಾರತದ ಸಂದರ್ಭದಲ್ಲಿ ೧೯೯೦ ರ ನಂತರ ತಮ್ಮ ಕಾಲಮೇಲೆ ತಾವೇ ನಿಂತಂತಹ ಯುವ ಪೀಳಿಗೆಗೆ ಈ ಸಮಸ್ಯೆಯನ್ನು ಈ ಹಿಂದೆ ಎದುರಿಸಿದ ಸಂದರ್ಭದ ನೆನಪಿರಲಾರದು. ಹೈಸ್ಕೂಲ್ ಮುಗಿದೊಡನೆ ಸಿಕ್ಕ ಇಂಜಿನಿಯರ್ ಅಥವಾ ಇನ್ಯಾವುದೋ ಪ್ರೊಫೆಶನಲ್ ಕೋರ್ಸ್, ಅದರ ನಂತರ ಕಷ್ಟವಿಲ್ಲದೆ ದೊರೆತ ಕೆಲಸ, ಕೆಸಕ್ಕಿಂತಲೂ ಹೆಚ್ಚು ದೊರೆಯುವ ಸಂಬಳ, ಜತೆಗೆ ಹಲವಾರು ಸವಲತ್ತುಗಳು, ಓಡಾಡಲು ಸ್ವಂತ ವಾಹನ, ಉಣ್ಣಲು, ಕುಡಿಯಲು, ಕೊಳ್ಳಲು, ಮನರಂಜಿಸಲು ನಗರಗಳಲ್ಲಿ ತಲೆಯೆತ್ತಿದ ಮಾಲುಗಳು, ಮೊಬೈಲು, ಕಂಪ್ಯೂಟರ್, ಇಂಟರ್ನೆಟ್, ಅದಕ್ಕೆಲ್ಲಾ ತಕ್ಕುದಾದ ಮನೋವೃತ್ತಿ. ಇವೆಲ್ಲ ಕ್ಷಣಿಕವೆಂದು ಈ ಪೀಳಿಗೆಯ ಕೆಲವರಿಗಾದರೂ ಈಗ ತಲೆದೋರುತ್ತಿರಬಹುದು.
ಬೌಗೋಲಿಕ ಆರ್ಥಿಕ ವ್ಯವಸ್ಥೆಯ ಕುಸಿತಕ್ಕೊಳಗಾದ ಯುವಪೀಳಿಗೆಯ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ತಿಳಿಯಲು ಕಾದಿರುವೆನು.

Friday, October 17, 2008

ಅಡಿಗ ಮತ್ತು ಕನ್ನಡಿಗ

ಕಳೆದ ಜೂನನಲ್ಲಿ ಅರವಿಂದ ಅಡಿಗ ಮಂಗಳೂರಿನ ಬಗ್ಗೆ ಒಂದು ನುಡಿಚಿತ್ರವನ್ನು ಖ್ಯಾತ ಟೈಮ್ ಪತ್ರಿಕೆಯಲ್ಲಿ ಪ್ರಕಟಿಸಿದಾಗ ನನಗೆ ಯಾರೀತ ಎಂಬ ಕುತೂಹಲ ಮೂಡಿತ್ತು. ಆತನ ಬರಹ ಮತ್ತು ವಿಚಾರಗಳು ಅಂತರಾಷ್ಟ್ರೀಯ ಮಟ್ಟದಲ್ಲಿದ್ದವು. ನಾನು ಅವನ ಬರಹಗಳತ್ತ ಸೆಳೆಯಲ್ಪಟ್ಟೆ. ಆತ ಅಡಿಗನಾಗಿದ್ದುದರಿಂದ ಕನ್ನಡಿಗನಾಗಿರಬೇಕು ಅದೂ ದಕ್ಷಿಣ ಕನ್ನಡಿಗನಾಗಿರಬೇಕು ಎಂದು ಕೊಂಡೆ. ಆತನ ಪುಸ್ತಕ ಪ್ರಕಟವಾದಾಗ ಅದನ್ನು ಕೊಳ್ಳಲೆಂದು ಪುಸ್ತಕದಂಗಡಿಗೆ ಹೋಗಿದ್ದೆ. ಅಲ್ಲಿ ಅದಿರಲಿಲ್ಲ. ಅರವಿಂದ ಅಡಿಗ ಮತ್ತು ವಯ್ಟ್ ಟೈಗರ್ ಬಗ್ಗೆ ಪುಸ್ತಕದಂಗಡಿಯವನಿಗೂ ಗೊತ್ತಿರಲಿಲ್ಲ. ನಾನೂ ಆ ಪುಸ್ತಕ ತೆಗೆದುಕೊಳ್ಳಲೇಬೇಕೆಂದು ಒಂದು ಸಣ್ಣ ಚೀಟಿಯಲ್ಲಿ ಪುಸ್ತಕದ ಹೆಸರನ್ನು ಬರೆದಿಟ್ಟಿದ್ದೆ. ಕಳೆದವಾರ ಮತ್ತೆ ನೆನಪಾಯಿತು. ಬೂಕರ್ ಪ್ರಶಸ್ತಿ ಕುರಿತು ಚರ್ಚೆಗಳೂ ಪತ್ರಿಕೆಗಳಲ್ಲಿ ಬರಲು ಆರಂಭಗೊಂಡವು. ಪುಸ್ತಕ ಕೊಂಡು ಓದಲು ಮತ್ತೆ ನಿರ್ಧರಿಸಿದ್ದೇನೆ. ದೀಪಾವಳಿ ಮುಗಿಯುತ್ತಿದ್ದಂತೆ ಈ ತಿಂಗಳಂತ್ಯದಲ್ಲಿ ಕಚೇರಿ ಮತ್ತು ಮನೆಯಿಂದ ದೂರ ಹೋಗಿ ಕಡಲ ಬದಿಯಲ್ಲಿ ಕುಳಿತು ಪುಸ್ತಕ ಓದಬೇಕೆಂದು ಕೊಂಡಿದ್ದೇನೆ. ಪ್ರಯಾಣದ ಟಿಕೇಟಿನ ಜತೆಗೆ ಪುಸ್ತಕಕ್ಕೂ ಹೇಳಿದ್ದೇನೆ.

ಅಡಿಗ ಹುಟ್ಟಿದ್ದು ಮದರಾಸಿನಲ್ಲಿ (ಕನ್ನಡದಲ್ಲಿ ಬರೆಯುವಾಗ ಮದರಾಸು ಚೆನ್ನೈ ಗಿಂತ ಸೊಗಸಾಗುತ್ತದೆ!). ಓದಿದ್ದು ನಮ್ಮ ಕೆನರಾ ಮತ್ತು ಅಲೋಸಿಯಸ್ ನಲ್ಲಿ. ಕರ್ನಾಟಕದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಆತ ಮೊದಲ ರ್ರ್ಯಾಂಕ್ ಗಳಿಸಿದ್ದ. ಆತನ ಅಪ್ಪ ಸರ್ಜನ್ ಆಗಿದ್ದು ಈಗ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. ಇವೆಲ್ಲ ಮಾಹಿತಿ ಆತನಿಗೆ ಬೂಕರ್ ಅವಾರ್ಡ್ ಸಿಕ್ಕ ಮೇಲೆ ದೊರೆತಿದ್ದು.

ಕನ್ನಡದ ಕೆಲವು ಮಂದಿ ಅಡಿಗ ಕನ್ನಡ ಮತ್ತು ಕರ್ನಾಟಕಕ್ಕೆ ಅನ್ಯಾಯ ಮಾಡಿದ್ದಾನೆ ಎಂಬಂತೆ ಚರ್ಚಿಸುತ್ತಿದ್ದಾರೆ. ಆತ ಕನ್ನಡದಲ್ಲಿ ಬರೆಯಬೇಕಿತ್ತು. ಆತನಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಸರಕಾರ ಮುಂದಾಗಬಹುದು. ಆತನ ತಾಯ್ನುಡಿಯನ್ನು ಬಳಸಿ ಆತ ಸಾಹಿತ್ಯ ರಚಿಸಬೇಕಿತ್ತು. ಕರ್ನಾಟಕದಿಂದ ಹೊರಗಿರುವ ಕನ್ನಡಿಗರು ತಮ್ಮನ್ನು ತುಳುವರೆಂದೋ ಕೊಂಕಣಿಗರೆಂದೋ ಕೊಡಗರೆಂದೋ ಅಷ್ಟೇ ಗುರುತಿಸಿಕೊಳ್ಳುತ್ತಾರೆ, ಕನ್ನಡಿಗರೆಂದಲ್ಲ ವೆಂದು ಅಣಕವಾಡುತ್ತಾರೆ. ಹೊರನಾಡಿನಲ್ಲಿದ್ದು ದೇಶದಲ್ಲಿ ಅಥವಾ ವಿಶ್ವದಲ್ಲಿ ಪ್ರಖ್ಯಾತರಾದ ಕನ್ನಡಿಗರಲ್ಲಿ ಕನ್ನಡದ ಸ್ವಾಭಿಮಾನ ಇಲ್ಲ ಎಂಬಂತಹ ಮಾತುಗಳು ಚರ್ಚಿತವಾಗುತ್ತಿವೆ. ಅಡಿಗನನ್ನೂ ಮಂಗಳೂರಿನವನು ಎಂದು ಮಾಧ್ಯಮಗಳು ಗುರುತಿಸಿದರೂ ಕರ್ನಾಟಕದವನೆಂಬ ವಿಚಾರ ಹೇಳಲಿಲ್ಲ ಎಂದು ಈ ಕನ್ನಡದ ಅಭಿಮಾನಿಗಳಿಗೆ ರೊಚ್ಚು. ಆತ ತಮ್ಮವನಲ್ಲ ಎಂಬಷ್ಟು ತಿರಸ್ಕಾರ ಕೂಡ ಮೂಡಿದೆ. ನಮ್ಮ ಬೇಂದ್ರೆ, ಕುವೆಂಪು, ಕಾರಂತ, ಮಾಸ್ತಿಯವರೆಲ್ಲ ಇಂಗ್ಲಿಷಿನಲ್ಲಿ ಬರೆಯುತ್ತಿದ್ದರೆ ನೋಬೆಲ್ ಬಹುಮಾನ ಬರುತ್ತಿತ್ತು ಎನ್ನುವ ನಮಗೆ ಅರವಿಂದ ಅಡಿಗ ಇಂಗ್ಲಿಷ್ ನಲ್ಲಿ ಬರೆದು ಬೂಕರ್ ಪ್ರಶಸ್ತಿ ಬಂದಾಗ ಹೆಮ್ಮೆಯಾಗುತ್ತಿಲ್ಲವೇ? ಆತ ಕನ್ನಡದಲ್ಲಿ ಬರೆಯಬೇಕು ಎಂದು ನಾವು ಒತ್ತಾಯಿಸಬೇಕೆ? ಸಾಹಿತ್ಯವಿರಲಿ, ಇನ್ಯಾವುದೇ ಕ್ಷೇತ್ರವಿರಲಿ ಕನ್ನಡ ಮಣ್ಣಿನ ಮಗನೊಬ್ಬ ಅಂತರಾಷ್ಟ್ರೀಯ ಸ್ಥಾನವನ್ನು ಗಳಿಸುವಾಗ ನಾವು ಹೆಮ್ಮೆ ಪಟ್ಟುಕೊಳ್ಳಬೇಕಲ್ಲದೆ ಅದರ ಬಗ್ಗೆ ಅನಾವಶ್ಯಕ ಚಕಾರವೆತ್ತುವುದರಿಂದ ಅವರ ಗೌರವಕ್ಕೇನು ಕಡಿಮೆಯಾಗುವುದಿಲ್ಲ ಎಂಬುದನ್ನು ನಾವು ತಿಳಿಯಬೇಕು. ಅಡಿಗನನ್ನು ಸಾಹಿತ್ಯದ ವಿದ್ಯಾರ್ಥಿಯಾಗಿ ನಾವು ಓದಬೇಕೆ ಅಥವಾ ಆತ ಕನ್ನಡಿಗನೆಂಬ ಹೆಮ್ಮೆಯಿಂದ ಓದಬೇಕೆ?

ಒಲವಿನಿಂದ

ಬಾನಾಡಿ

Saturday, September 13, 2008

ಅಂತಿಮ ವಿದಾಯರಾತ್ರಿ ಮುಗಿದಿತ್ತು. ಮೂಡಣದಲ್ಲಿ ಕೆಂಪು ಕಣ್ಣು ತೆರೆಯುವ ಸನ್ನಾಹವಿತ್ತು.
ರಾತ್ರಿ ಎರಡು ಗಂಟೆಗೆ ಮುಗಿದ ಸಂಗೀತ, ನೃತ್ಯದ ನಂತರ ಮತ್ತೆ ಎರಡು ಗಂಟೆಯಷ್ಟಾದರೂ ಬೇಕಾಗಿ ಇದ್ದಿರಬಹುದು ಅವರಿಗೆ. ಅವನು, ಅವಳು, ಇವನು, ಇವಳು. ಗಾಡಿಯ ಗಾತ್ರ ದೊಡ್ಡದಿದ್ದರೂ ತುಂಬಬಹುದಿತ್ತು ನಾಲ್ವರನ್ನೇ.ಡ್ಯಾನ್ಸ್ ಹಾಲ್ ನಿಂದ ಹೊರಟ್ಟಿದ್ದು ಗೊತ್ತು. ಗಾಡಿ ಏರಿದ್ದು ಗೊತ್ತು. ಅವನ ಕೈಯಲ್ಲಿದ್ದ ಸಿಗರೇಟು ಇವಳ ಸ್ಕರ್ಟ್ ಕೆಳಗಿನ ತೊಡೆಗೆ ತಗುಲಿದಾಗ ಅವಳು ಚೀರಿದಳು.
ಸಿಟ್ಟಿನಿಂದ ಕಚ್ಚಿದಳು ಅವನ ತುಟಿಗಳನ್ನು. ಅವನು ಬರಸೆಳೆದಾಗ ಇವಳು ಇನ್ನೂ ಗಟ್ಟಿಯಾಗಿ ಹಿಡಿ ಎಂದಳು. ಗಾಡಿಯ ಹಿಂದಿನ ಸೀಟಿನಲ್ಲಿ ಬೆಂಕಿ ಬಿದ್ದಿದೆ ಎಂದು ಗೊತ್ತಾಗಲಿಲ್ಲ. ಸೀಟು ಒದ್ದೆಯಾಗಿತ್ತು. ಚಾಲಕನ ಕಣ್ಣುಗಳು ಅರೆ ಮುಚ್ಚುತಿದ್ದವು. ಅವಳು ಅವನಿಗೆ ಎಚ್ಚರವಿರಲಿ ಎಂದು ಕಿರುಚಾಡಿಕೊಂಡೇ ಮಾತಾಡುತ್ತಿದ್ದಳು.
ಡಿಸ್ಕ್ ನಿಂದ ಬರುತ್ತಿರುವ ಸಂಗೀತಕ್ಕೆ ಅವಳ ಕಿರುಚಾಟ ಪಲ್ಲವಿಯಾಗಿತ್ತು. ಹಿಮ್ಮೇಳದ ಕೋರಸ್ ಆಗದೆ. ಶಬ್ದಗಳು ಸಾಯುತ್ತಿದ್ದವು.
ಹೊಂಡಗಳಿದ್ದ ನಗರದ ರಸ್ತೆಯಲ್ಲಿ ಹೋಂಡಾ ಸಿಟಿ ಹಾರುತ್ತಿತ್ತು. ಇವನು ಓಡಿಸುತ್ತಿರಲಿಲ್ಲ. ಕಾಲು ಆಕ್ಸಿಲೇಟರನ್ನು ಒತ್ತುತಿತ್ತಷ್ಟೇ.
ಅಪಾರ್ಟ್‍ಮೆಂಟ್‍ನ ಗೇಟ್ ಬಳಿ ಬಂದಾಗ ಹಾಕಿದ ಬ್ರೇಕಿನ ಸದ್ದಿಗೆ ಟವರಿನಲ್ಲಿ ಮನೆಮಾಡಿದ್ದ ಗೂಬೆ ಹಾರಿಹೋಯಿತು. ಪಾರಿವಾಳಗಳು ಎದ್ದವು. ರಸ್ತೆಯಾಚೆ ಮುದುಡಿ ಮಲಗಿದ್ದ ನಾಯಿಗಳಿಗೊಮ್ಮೆ ಸಿಡಿಲು ಬಡಿದಂತಾಯಿತು. ಕುರ್ಚಿಯಲ್ಲಿ ತೂಕಡಿಸುತ್ತಿದ್ದ ಗೇಟ್ ಕೀಪರ್ ನಡುಗಿ ಕುರ್ಚಿಯೊಂದಿಗೆ ಬಿದ್ದ. ಬೀಳಲಿಲ್ಲ ಎಂದುಕೊಂಡೇ ಕುರ್ಚಿಯನ್ನು ಸರಿಯಿಡುತ್ತಲೇ ಗೇಟ್ ಹತ್ತಿರ ಹೋದ. ಕಳೆದ ತಿಂಗಳಷ್ಟೇ ಬಂದ ಗಾಡಿಯ ಪರಿಚಯವಿತ್ತು. ಒಳಗೆ ಯಾರು ಯಾರು ಎಂದು ಗುರುತಿಸುವುದು ಹೇಗೆ ಮತ್ತು ಯಾಕೆ?
ಗೇಟು ತೆರೆಯಿತು. ಲಿಫ್ಟ್‍ನ ಬಾಗಿಲೂ ತೆರೆಯಿತು. ಮನೆಯ ಬಾಗಿಲೂ ತೆರೆಯಿತು. ತೆರೆದ ಬಾಗಿಲು ಮುಚ್ಚಿದರು. ಮುಚ್ಚಿದೆಲ್ಲವನ್ನೂ ತೆರೆದರು.
ಕೇಕೆ, ಜಗಳ, ವಸ್ತುಗಳನ್ನು ಎಸೆದ ಶಬ್ದಗಳು ಮುಂಜಾನೆಯ ನೀರವತೆಯಲ್ಲಿ ಅಲೆಗಳನ್ನುಂಟು ಮಾಡಿದವು. ರಾತ್ರಿ ಮುಗಿಯುತ್ತಿದ್ದಂತೆ ಕಣ್ಣುಗಳು ಮುಚ್ಚುತಿದ್ದವು.
ದೊಪ್ಪೆಂದು ಬಿದ್ದ ಶಬ್ದವೋ, ಢಂ ಎಂದು ಸಿಡಿದ ಶಬ್ದವೋ ಗೊತ್ತಾಗಲಿಲ್ಲ.
***
ಕೆಳಗಿನ ಮನೆಯವನು ಮುಂಜಾನೆ ವಾಕ್ ಹೋಗಬೇಕೆಂದು ನಿರ್ಧರಿಸಿ ಮಲಗಿದ್ದವನಿಗೆ ಬೇಗ ಎಚ್ಚರವಾಯಿತು. ಕಿಟಿಕಿಗೆ ಹಾಕಿದ್ದ ಕರ್ಟನ್ ಡ್ರೈ ಕ್ಲೀನಿಂಗ್ ಗೆ ಕೊಟ್ಟಿದ್ದರಿಂದ ಬಾಲ್ಕನಿಯಿಂದ ಹುಟ್ಟುವ ಸೂರ್ಯ ಕಾಣುತಿದ್ದ. ವಾಕ್ ಹೋಗುವ ಮನಸಿರಲಿಲ್ಲ. ನಿದ್ದೆ ಬಿಟ್ಟ ಕಣ್ಣುಗಳನ್ನು ಉಜ್ಜುತ್ತಾ ಬಾಲ್ಕನಿಯಿಂದಲೇ ನೋಡಿದ. ಸೂರ್ಯೋದಯದ ಸುಂದರತೆಯನ್ನು. ಈ ಸೊಬಗನ್ನು ಈ ನಗರದಲ್ಲಿ ಸವಿಯಲು ಭಾಗ್ಯ ಬೇಕಷ್ಟೆ ಎಂದುಕೊಂಡ. ರಾತ್ರೆ ಮಿಸ್ಸಾದ ಎಸ್‍ಎಮ್‍ಎಸ್ ಗಳನ್ನು ನೋಡಲೆಂದು ತೆಗೆದುಕೊಂಡ ಮೊಬೈಲ್‍ನಿಂದಲೇ ಸೂರ್ಯೋದಯದ ಚಿತ್ರಗಳನ್ನು ತೆಗೆಯಲು ಆರಂಭಿಸಿದ.
ಪೇಪರ್ ಓದಿ ಆದ ನಂತರ ಸುದ್ದಿ ನೋಡೋಣವೆಂದು ಟಿ.ವಿ. ಆನ್ ಮಾಡಿದರೆ ಫ್ಲ್ಯಾಟ್ ವೊಂದರಲ್ಲಿ ಇಂದು ಮುಂಜಾನೆ ವೇಳೆ ನಡೆದ ಕೊಲೆಯೋ, ಆತ್ಮಹತ್ಯೆಯೋ ಎಂಬ ಸುದ್ದಿ ಬ್ರ್‍ಏಕ್ ಆಗುತ್ತಿತ್ತು. ಹೊರಗಡೆ ಸದ್ದು. ಬಾಲ್ಕನಿಯಲ್ಲಿ ಬಂದು ನೋಡಿದರೆ ಟಿ.ವಿ. ಕ್ಯಾಮರಗಳು, ಒಬಿ ವ್ಯಾನ್ ಗಳು ಅಪಾರ್ಟ್‍ಮೆಂಟ್‍ನ ಹೊರಗೆ ನಿಂತಿವೆ. ಗೇಟಿನವನೊಡನೆ ಸೆಣಸಾಡುತ್ತಾರೆ. ಒಳಗೆ ಬರಲು.
ಸುದ್ದಿ ಬ್ರೇಕ್ ಆಗಿದ್ದು ತನ್ನ ಮನೆಯ ಮೇಲಿನ ಪ್ಲ್ಯಾಟ್‍ನಲ್ಲಿಯೇ ಎಂದು ಗೊತ್ತಾಯಿತು. ಟಿವಿ ಆರಿಸಿ ಮೊಬೈಲ್ ನಲ್ಲಿದ್ದ ಫೋಟೋಗಳನ್ನು ಡೌನ್‍ಲೋಡ್ ಮಾಡಿ ಗೆಳೆಯರಿಗೆ ಕಳುಹಿಸಬೇಕೆಂದು ಕಂಪ್ಯೂಟರ್ ಆನ್ ಮಾಡಿದ.
ಒಲವಿನಿಂದ
ಬಾನಾಡಿ

Thursday, August 28, 2008

"ಶಕ್ತಿಶಾಲಿ" ಹಳ್ಳಿ

ಅದೊಂದು ಬೃಹತ್ ಕಂಪನಿ ತನ್ನ ಉತ್ಪಾದನೆಗಳಿಂದ ಭಾರತದ ಹಳ್ಳಿಗಳನ್ನು ಹೇಗೆ "ಶಕ್ತಿಶಾಲಿ"ಗೊಳಿಸುತ್ತಿದೆ ಎಂದು ತನ್ನ ಪಾಲುದಾರರಿಗೆ ತಿಳಿಸಲು ಒಂದು ಸಂವಹನ ಪ್ರಕ್ರಿಯೆಯನ್ನು ತಯಾರು ಮಾಡುವ ಕೆಲಸದಲ್ಲಿ ನಾನೂ ಒಳಗೊಂಡೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ತನ್ನ ಉತ್ಪಾದನೆಗಳನ್ನು ಮಾರಾಟಮಾಡುವ ಆ ಕಂಪನಿಯ ಕೆಲಸದ ತಾಣವೊಂದು ಪಂಜಾಬಿನ ಹಳ್ಳಿಯೊಂದರಲ್ಲಿತ್ತು. ನಗರದಿಂದ ರೈಲು ಅಥವಾ ಡೀಲಕ್ಸ್ ಬಸ್ಸುಗಳಿರದಿದ್ದುದರಿಂದ ನಾನು ಮತ್ತು ಕ್ಯಾಮರಮ್ಯಾನ್ ಗೌತಮ್ ಸಾಮಾನ್ಯ ಬಸ್ಸೊಂದರಲ್ಲಿ ರಾತ್ರಿಯಿಡೀ ಪ್ರಯಾಣಬೆಳೆಸಿ ಹಳ್ಳಿಯನ್ನು ತಲಪಿದೆವು. ಅಲ್ಲಿ ಕಂಪೆನಿಯ ಅತಿಥಿ ಗೃಹದಲ್ಲಿ ಫ್ರೆಷ್ ಆಗಿ ಮುಂಜಾನೆ ನಮ್ಮ ಕೆಲಸದಲ್ಲಿ ತೊಡಗಿದೆವು. ಕಂಪೆನಿಯು ಹಳ್ಳಿಯ ಶಾಲೆಗಳಿಗೆ ನೀರಿನ ವ್ಯವಸ್ಥೆ, ಬೆಂಚು, ಕಂಪ್ಯೂಟರ್‍‍ಗಳನ್ನು ನೀಡಿತ್ತು. ಹಾಗಾಗಿ ಕೆಲವು ಶಾಲೆಗಳಿಗೆ ಹೋಗೋಣವೆಂದು ನಾನು ನಿರ್ಧರಿಸಿದೆ. ನಾವು ಜೀಪಿನಲ್ಲಿ ಕುಳಿತು ಪಂಜಾಬಿನ ಹಸಿರು ಗದ್ದೆಗಳೆಡೆಯಿಂದ ಹಾದು ಹೋಗುವ ಹೆದ್ದಾರಿ ಬಿಟ್ಟು ಹಳ್ಳಿಗಳ ಸಪೂರದ ರಸ್ತೆಗೆ ಬಂದೆವು. ಪಂಜಾಬ್ ಒಂದು ಶ್ರೀಮಂತ ರಾಜ್ಯ ಎಂಬ ನನ್ನ ಭಾವನೆಯನ್ನು ಅಲ್ಲಿನ ಹಳ್ಳಿಗಳು ಬಿಂಬಿಸುತ್ತಿರಲಿಲ್ಲ. ಕೂಲಿಕೆಲಸ ಮಾಡುತ್ತಿರುವ ಸರ್ದಾರ್‍‍ಗಳು, ಬೆಂಚಿಲ್ಲದೇ ನೆಲದಲ್ಲಿ ಓದುವ ಮಕ್ಕಳು, ಅದರೆಡೆಯಲ್ಲೊಂದು ಆಶಾಕಿರಣವೆಂಬಂತೆ ಹಳ್ಳಿಯ ಶಾಲೆಯ ಅಧ್ಯಾಪಕಿಯೊಬ್ಬಳು ಅತ್ಯಂತ ಆನಂದದಿಂದ ಮಕ್ಕಳಿಗೆ ಪಾಠಮಾಡುವ ರೀತಿ ಕಂಡು ಸೋಜಿಗವೆನಿಸಿತು. ವಿವಿಧ ಆಟೋಟಗಳಲ್ಲಿ ಆ ಶಾಲೆಗೆ ಜಿಲ್ಲಾ ಮತ್ತು ರಾಜ್ಯ ಮಟ್ಟದ ಬಹುಮಾನಗಳು ಬಂದಿದ್ದವು. ನಾವು ಕಂಪ್ಯೂಟರ್‍‍ಗಳನ್ನು ಕೆಲಸಮಾಡುವ ಸ್ಥಿತಿಯಲ್ಲಿ ಕಾಣಿಸಲಾಗಲಿಲ್ಲ. ಕಾರಣ ಕರೆಂಟಿರಲಿಲ್ಲ. ನೀರಿನ ನಳ್ಳಿಗಳನ್ನು ತೆರೆದಾಗಲೂ ನೀರು ಬರಲಿಲ್ಲ. ಕರೆಂಟಿರಲಿಲ್ಲ. ಸೆಖೆಯಲ್ಲಿ ನೆಲದ ಮೇಲೆ ಕುಳಿತು ಓದುತ್ತಿದ್ದ ಮಕ್ಕಳ ಉತ್ಸಾಹ, ಉಲ್ಲಾಸಗಳನ್ನು ಅನಿವಾರ್ಯವಾಗಿ ಕ್ಯಾಮರದಲ್ಲಿ ತುಂಬಿಕೊಂಡೆವು.ಪಂಜಾಬಿನ ಹಳ್ಳಿಗಳ ಇನ್ನೊಂದು ಮುಖವನ್ನು ನೋಡಲು ಈ ಎಲ್ಲಾ ಮುಖವನ್ನು ನೋಡಬೇಕಾಯಿತು. ಕಂಪೆನಿಯ ಕೆಲಸಕ್ಕೆ ಬೇಕಾದ ಸಾಮಾಗ್ರಿಯನ್ನು ಹವಾ ನಿಯಂತ್ರಿತ ಕೊಠಡಿಗಳಲ್ಲಿ ಅತ್ಯಾಧುನಿಕ ಉಪಕರಣಗಳನ್ನಿಟ್ಟು ಕೆಲಸಮಾಡುವ 'ಕ್ರಿಯೇಟಿವ್ ಟೀಮ್' ತಮಗೆ ಬೇಕಾದಂತೆ ತಯಾರು ಮಾಡುತ್ತಿದೆ. ಈ ಮುಖಗಳು ನನ್ನನ್ನು ಬಹಳವಾಗಿ ಕಾಡುತ್ತಿರುತ್ತವೆ.


Tuesday, August 26, 2008

ಮದಿರೆಯ ಬಟ್ಟಲು ಖಾಲಿಯಾಗಿದೆ.

ಮದಿರೆಯ ಬಟ್ಟಲು ಖಾಲಿಯಾಗಿದೆ.

ಸುರಿದು ಸುರಿದು ಹೀರಿಯಾದ ಮೇಲೆ ನದಿಯಾಗಿದೆ. ಸಾಗರ ಸೇರಲೆಂದು ಹೊರಟ ನದಿ ಬತ್ತಿ ಹೋಗಿದೆ. ತುಂಬಿ ಹೋದ ಬಟ್ಟಲಿಂದ ಹರಿದು ಹೋದ ಹನಿಗಳು ಕಾಯುತ್ತಿವೆ ಕಣ್ಣ ಮೂಲೆಯಲ್ಲಿ ಕುಳಿತು. ಸಂಗಾತಿಯ ಸನಿಹಕ್ಕೆ, ಬೀಸುತ್ತಿರುವ ತಂಗಾಳಿಗೆ. ಕನಸುಗಳು ಕಣ್ಣಂಚಿನಲ್ಲಿ ಮೂಡುತ್ತವೆ. ಮುಂಜಾನೆಯಾಗುವುದೇ ಬೇಡವೆನಿಸುತ್ತದೆ. ಕನಸುಗಳು ತೇಲುತ್ತವೆ, ಮೋಡವಾಗುತ್ತವೆ. ಹನಿಯಾಗುತ್ತವೆ. ಮತ್ತೆ ತುಂಬುತ್ತವೆ ನದಿ, ಕಡಲು. ಅಪ್ಪಲಿಸುವ ತೆರೆಗಳು ಹಿಡಿಯಲಾಗದ ತೊಳಲಾಟಗಳು.

ಮದಿರೆಯ ಬಟ್ಟಲು ಖಾಲಿಯಾಗಿದೆ. ಸನಿಹ ಕುಳಿತ ಸ್ನೇಹ ಮೌನವಾಗಿದೆ. ಮೌನದ ಅಬ್ಬರಕ್ಕೆ ಎದೆಯೊಡೆದುಕೊಳ್ಳುವಷ್ಟು ಭಯ ತುಂಬಿದೆ. ಮೌನವೂ ಮಾತಾಡತೊಡಗಿದೆ. ತಂಗಾಳಿ ಬರಲೆಂದು ಕಿಟಿಕಿ ತೆರೆದು ಕೊಂಡರೆ ರಸ್ತೆಯಂಚಿನಲ್ಲಿ ಓಡುತ್ತವೆ ಬದುಕುಗಳು. ಮದಿರೆಯ ಬಟ್ಟಲು ಖಾಲಿಯಾಗಿದೆ.

ಮದಿರೆಯ ಬಟ್ಟಲು ಖಾಲಿಯಾಗಿದೆ. ಮನದೊಳಗೇನದು ಯುದ್ಧವೋ, ಪ್ರಳಯವೋ ಅಲ್ಲ ಗುಣವಾಗದ ಕಾಯಿಲೆಯೋ. ಅರ್ಥವಾಗದ ಕಲೆ ಯಾವುದು? ಕಾವ್ಯ ಯಾವುದು? ಪ್ರಶ್ನೆಗಳನ್ನೇ ಕುಡಿದು ಬಿಡಬೇಕು. ಮದಿರೆಯ ಬಟ್ಟಲು ಖಾಲಿಯಾಗಿದೆ.

ಮದಿರೆಯ ಬಟ್ಟಲು ಖಾಲಿಯಾಗಿದೆ. ರಾತ್ರಿಯೆಲ್ಲಾ ಮಲಗಿದೆ. ಬಾನು ತುಂಬಾ ಚುಕ್ಕೆಯ ಚಾದರಹೊದ್ದು. ನಿಂತೇ ಇರುವ ಕಂಬಗಳನ್ನು ಮಲಗಲು ಬಿಡಿ. ಹಿಡಿದುಕೊಳ್ಳಬೇಡಿ. ಕಾದು ಕುಳಿತಿದ್ದಾನೆ ಮುಂಜಾನೆಯ ಸೂರ್ಯ.

ಮದಿರೆಯ ಬಟ್ಟಲು ಖಾಲಿಯಾಗಿದೆ. ತೊರೆಯಾಗಿ ಹರಿಯಬಾರದೇ ಶಿವ ಜಡೆಯಿಂದ ದೇವಗಂಗೆಯಾಗಿ. ತುಂಬಿಕೊಳ್ಳಬಾರದೇ ಎದೆಯೊಳಗಿನ ಮಡುವಿನಲ್ಲಿ. ಈಜಾಡುವೆವು. ಬತ್ತಲಾಗಿ. ಬರಿದು ಬರಿದು ಮೈಯಲ್ಲಿ ಎಲ್ಲವನ್ನೂ ನೋಡುತ್ತಾ. ಭಕ್ತಿಯಲಿ ಶಿವನ ವರಿಸುವ ಅಕ್ಕನಾಗುವೆ. ಬಿಟ್ಟ ಜಡೆಯಲ್ಲಿ ಮತ್ತೆ ಹುಟ್ಟಿ ಬರಬೇಕೆನ್ನುವೆ.

ಮದಿರೆಯ ಬಟ್ಟಲು ಖಾಲಿಯಾಗಿದೆ.ಕಾದು ಕುಳಿತ ಕೆಂಪು ತುಟಿಗಳು ಕೆಂಡವಾಗಿವೆ. ಸುಡಲೆಂದು ನನ್ನನ್ನೇ ಕಾಯುತ್ತಿವೆ. ಪ್ರೇಮಾಮೃತ ಸುರಿಸಿ ತಣಿಸಲೇನು ಆ ತುಟಿಗಳನು?

ಮದಿರೆಯ ಬಟ್ಟಲು ಖಾಲಿಯಾಗಿದೆ.ಯಾಕೆ ಸಂಭ್ರಮ. ತುಂಬು ತಿಂಗಳ ತಣ್ಪಿಗೋ? ಮುಸುಕಿನೊಳಗಿನ ಮಿಲನಕೋ? ನನ್ನನ್ನೇ ಕರಗಿಸಿ ಬಿಡು. ನಿನ್ನೊಳಗೆ ನಾನಾಗುವೆ. ಮದಿರೆಯಿಲ್ಲದ ನಾನೂ ಖಾಲಿ ಖಾಲಿ. ಮದಿರೆಯ ಬಟ್ಟಲೂ ಖಾಲಿ ಖಾಲಿ.
ಒಲವಿನಿಂದ

ಬಾನಾಡಿ

Saturday, August 9, 2008

'ಬರು' ಅವರು ಹೊರಟಾಗ

ಟೈಂಸ್ ಆಫ್ ಇಂಡಿಯಾ ಪತ್ರಿಕೆಯ ಸಂಪಾದಕನಾಗುವುದು ಒಂದೊಮ್ಮೆ ದೇಶದ ಎರಡನೇ ಅತ್ಯಂತ ಉನ್ನತ ಸ್ಥಾನವಾಗಿತ್ತು. ದಿಲೀಪ್ ಪಡ್‍ಗಾಂವ್‍ಕರ್‍ ನಂತರ ಆ ಪತ್ರಿಕೆಯ ಲಕ್ಷಣ ಮತ್ತು ಅದನ್ನು ಸಂಪಾದಿಸುವವರ ಪ್ರಾಮುಖ್ಯತೆ ಇಳಿಯಿತು.
ಇಂದು ಯಾವುದೇ ಪತ್ರಿಕೆ ಅದರ ಸಂಪಾದಕರ ಹೆಸರಿನಿಂದ ನಡೆಯುತ್ತದೆ ಎನ್ನಲಾಗುವುದಿಲ್ಲ. ಬೆರಳೆಣಿಕೆಯಷ್ಟು ಪತ್ರಕರ್ತರಷ್ಟೇ ಇಂದು ಓದುಗರಲ್ಲಿ ಮತ್ತು ಸಮಾಜದಲ್ಲಿ ಗೌರವ ಮತ್ತು ಮನ್ನಣೆಯನ್ನು ಪಡೆದಿದ್ದಾರೆ.
ಮಾಧ್ಯಮದವರಿಗೆ ಅನ್ವಯವಾಗುವ ಹಲವಾರು ಪದಗಳು ನನಗೆ ತಿಳಿದಿರುವುದು ಸಂತೋಷಕೊಡುತ್ತದೆ.
ಮಾಧ್ಯಮದಲ್ಲಿ ಬರುವ ಸುದ್ದಿಗಳನ್ನು ನೋಡಿದಾಗ, ಓದಿದಾಗ ನಮ್ಮ ಮನಸ್ಸಿನಲ್ಲಿ ಆ ಮಾಧ್ಯಮದ ವ್ಯಕ್ತಿಗಳ ಬಗ್ಗೆ ತಿಕ್ಕಲುಗಳು, ಎಡೆಬಿಡಂಗಿಗಳು, ತೆವಲು ತೀರಿಸುವವರು, ತಲೆಹಿಡುಕರು, ಲಫಂಗರು ಇತ್ಯಾದಿ ಪದಗಳು ಮೂಡಿಬಂದರೆ ಅದೇನು ಆಶ್ಚರ್ಯದ ಸಂಗತಿಯಲ್ಲ. ಈ ತರದ ವರ್ಣನೆಗಳನ್ನು ಓದಿದ ಪತ್ರಕರ್ತರು ಉರಿದು ಬೀಳುತ್ತಾರೆ. ಅವರು ಉಪಯೋಗಿಸುವ ಪದಗಳು ಅವರಿಗೇ ಅರ್ಥವಾಗುವುದಿಲ್ಲ ಇನ್ನು ನಾನು ಉಪಯೋಗಿಸುವ ಪದಗಳು ಅವರಿಗೆ ಅರ್ಥವಾಗದು ಎಂಬ ಉದ್ದಟತನವನ್ನು ನಾನೂ ಹೊಂದಿದರೆ ನಾನೂ ಒಬ್ಬ ಯಶಸ್ವಿ ಪತ್ರಕರ್ತನಾಗುತ್ತೇನೆ. ಮಾಧ್ಯಮದವರ ಪ್ರಕಾರ ಅವರಿಗೆ ಗೊತ್ತಿಲ್ಲದ ವಿಚಾರ ಸಮಾಜದಲ್ಲಿಲ್ಲ. ಇನ್ನು ಸ್ವ ವಿಮರ್ಶೆ ಮಾಡಿಕೊಳ್ಳುವ ಸಾಮರ್ಥ್ಯ ಅವರಲ್ಲಿ ಎಲ್ಲಿದೆ. ಮಾಧ್ಯಮವೆನ್ನುವುದು ಸಮಾಜದ ಕನ್ನಡಿ. ನಾವು ಹಾಗಿರಲು ನೀವೇ ಕಾರಣ ಎಂದು ಮತ್ತೆ ತಮ್ಮ ಎಡೆಬಿಡಂಗಿತನವನ್ನು ತೋರಿಸಿಯಾರು.
ಮೊನ್ನೆ ಪತ್ರಕರ್ತನೊಬ್ಬನು ದೇಶದ ಹಿರಿಯ ಕೈಗಾರಿಕೋದ್ಯಮಿಯೊಬ್ಬರನ್ನು ಏಕವಚನದಿಂದ ಕರೆದು ಮಾತನಾಡಿಸುತ್ತಿದ್ದ. ಅದನ್ನು ಕಂಡ ಬಹಳಷ್ಟು ಮಂದಿ ಆತನ ಕೊಬ್ಬನ್ನು ಜರೆಯುತ್ತಾ ತನ್ನ ತಂದೆಯ ವಯಸ್ಸಿನ ಹಿರಿಯರನ್ನು ಏಕವಚನದಲ್ಲಿ ಕರೆದು ಮಾತಾನಾಡಿಸುವ ಈ ತುಚ್ಛ ಯಾರು ಎಂದಾಗ ಒಬ್ಬರು ಆತ ಪತ್ರಕರ್ತ ಎಂದು ಹೇಳಿದರು. ಮಾಧ್ಯಮದ ಮಂದಿ ತಾವು ಜಾರಿಬಿದ್ದ ಕೊಳಚೆಗುಂಡಿಯಿಂದ ತನ್ನಷ್ಟು ಶುಭ್ರ ಇನ್ಯಾರು ಇಲ್ಲ ಎಂದು ಚೀರಿ ಹೇಳುವಾಗ ದಿಗ್ಭ್ರಮೆ ಮೂಡುತ್ತದೆ.
ದೇಶದ ಅತ್ಯತ್ತಮ ಮಾಧ್ಯಮ ಹುದ್ದೆಯನ್ನು ಪಡೆಯುವ ಕನಸುಗಳನ್ನು ಹೊತ್ತವರಿಗೆ ಇಂದು ಸ್ವಲ್ಪವಾದರೂ ಗೌರವವನ್ನು ಕೊಡುವ ಹುದ್ದೆಯೆಂದರೆ ಪ್ರಧಾನಿಯ ಮಾಧ್ಯಮ ಸಲಹೆಗಾರನ ಹುದ್ದೆ. ಅರ್ಥಾತ್ ಪ್ರಿನ್ಸಿಪಾಲ್ ಇನ್‍ಪಾರ್‍ಮೇಷನ್ ಆಫೀಸರ್ ಹುದ್ದೆ.
ಈಗ ತಾನೆ ಆ ಹುದ್ದೆಯಿಂದ ಸ್ವಯಂ ನಿವೃತ್ತಿಯಾದ ಸಂಜಯ ಬರು ಅವರು ಮತ್ತಷ್ಟು ಘನತೆಯನ್ನು ತಂದು ಕೊಟ್ಟಿದ್ದಾರೆ.
ಕನ್ನಡಿಗರಾದ ಎಚ್. ವೈ. ಶಾರದಾಪ್ರಸಾದ್, ಐ. ರಾಮಮೋಹನ್ ರಾವ್, ನರೇಂದ್ರ ಎ ಯಂತಹವರಿಂದ ಅತ್ಯಂತ ಘನತೆಯನ್ನು ಪಡೆದ ಈ ಹುದ್ದೆಯ ಗೌರವವನ್ನು ಅವರು ಕಾಯ್ದು ಕೊಂಡರು.
ಫೈನಾನ್ಸಿಯಲ್ ಎಕ್ಸ್‍ಪ್ರೆಸ್‍ನ ಮುಖ್ಯ ಸಂಪಾದಕರಾಗಿದ್ದ ಸಂಜಯ್ ಬರು ದೆಹಲಿಯ ಪ್ರತಿಷ್ಟಿತ ಜವಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದವರು.
ಸೂಕ್ಷ್ಮ ಬರವಣಿಗೆಗಳಿಂದ ಹೆಸರು ಮಾಡಿದ್ದ ಬರು ಅವರು ಪ್ರಧಾನ ಮಂತ್ರಿಯ ಮಾಧ್ಯಮ ಸಲಹೆಗಾರರಾಗಿ ಆಯ್ಕೆ ಯಾದುದು ಪತ್ರಕರ್ತರಿಗೆಲ್ಲಾ ಆಶ್ಚರ್ಯಮೂಡಿಸಿತ್ತು.
ಅತ್ಯಂತ ಪ್ರಭಾವಿ ಹುದ್ದೆಯಲ್ಲಿದ್ದೂ ಏನೇನೋ ಕರಾಮತ್ತು ಮಾಡಬಹುದಾಗಿದ್ದ ಸಂಜಯ ಬರು ಅವರು ತನ್ನ ಮಗಳ ಜತೆಯಿರಲೆಂದು ಸ್ವಯಂ ನಿವೃತ್ತಿ ಹೊಂದಿದ್ದಾರೆ. ಅವರಿಗೆ ಅಧಿಕಾರ ಸಿಕ್ಕಿದಷ್ಟೇ ಆಶ್ಚರ್ಯ ಅವರು ನಿವೃತ್ತಿ ಘೋಷಿಸಿದಾಗಲೂ ಆಯಿತು.
ಮಾಮೂಲಿ ತಿಕ್ಕಲುತನದ ಪತ್ರಕರ್ತನಂತೆ ಆತ ವರ್ತಿಸಲಿಲ್ಲ. ಅವರು ತಮ್ಮ ಹುದ್ದೆಯ ಗೌರವವನ್ನು ಎತ್ತಿ ಹಿಡಿದು ಹೊರಟಿದ್ದಾರೆ.
ಬರು ಅವರು ನನಗೇನು ವೈಯಕ್ತಿಕ ಅಥವಾ ವ್ಯಾವಹಾರಿಕ ಸಂಬಂಧಿಯಲ್ಲ. ನಾನು ಬರೆದುದನ್ನು ಆತ ಓದಲಾರರು. ಹುದ್ದೆಯ ಗೌರವಕ್ಕೆ ಕುಂದು ಬಾರದಂತೆ ನಡೆದ ಬರು ಅವರನ್ನು ಕಂಡಾಗ ಖುಷಿಯಗುತ್ತದೆ. ಹೆಮ್ಮೆಯಾಗುತ್ತದೆ. ಮಾಧ್ಯಮದ ವ್ಯಕ್ತಿಯೊಬ್ಬ ತನ್ನ ಕ್ಷೇತ್ರದಲ್ಲಿ ಅತ್ಯಂತ ದೊಡ್ಡ ಹುದ್ದೆಯನ್ನು ಬಯಸುವುದಾದರೆ ಅದು ಪ್ರಧಾನ ಮಂತ್ರಿಯ ಮಾಧ್ಯಮ ಸಲಹೆಗಾರ. ಆ ಹುದ್ದೆಯ ಘನತೆ ಇನ್ನೂ ಉಳಿದಿದೆ.
ದಿನಾ ಬೆಳಗೆದ್ದು ನಾನು ಓದುವ ಟೈಂಸ್ ಆಫ್ ಇಂಡಿಯಾದ ಸಂಪಾದಕ ಯಾರು ಎಂದರೆ ಸಂವಹನದ ವಿದ್ಯಾರ್ಥಿಯಾಗಿಯೂ ನನಗೆ ಗೊತ್ತಿಲ್ಲ! ಪತ್ರಿಕೆಯನ್ನೆಲ್ಲಾ ಜಾಲಾಡಿ ನೋಡಿ ಹೇಳ್ತೇನೆ. ಒಂದೊಂದು ಮಾರುಕಟ್ಟೆಗೆ ಒಬ್ಬೊಬ್ಬ ಸಂಪಾದಕ!
ಒಲವಿನಿಂದ
ಬಾನಾಡಿ.

Wednesday, July 30, 2008

ಬಿಟ್ಟು ಹೋದ ಗಾಡಿ

ಕವನಗಳು ಬಹಳ ಖಾಸಗಿಯಾಗಿ ಓದಲೆಂದಿರುವವು ಎಂದು ನನ್ನ ನಂಬುಗೆ. ಸಂಕಲನವೊಂದು ಬಂದ ನಂತರ ಬರೆದ ಕೆಲವು ಕವನಗಳು ಲ್ಯಾಪಿನಲ್ಲಿವೆ. ಅವುಗಳಲ್ಲಿ ಒಂದು 'ಬಿಟ್ಟು ಹೋದ ಗಾಡಿ'. ಬರೆದು ಬಹಳ ಸಮಯವಾಯಿತು. ಮೊನ್ನೆಯ ಸರಣಿ ಬಾಂಬುಗಳ ನಂತರ ಇದನ್ನು ಕನಿಷ್ಟ ನನ್ನ ಬ್ಲಾಗ್ ಓದುವ ಗೆಳೆಯರೊಡನೆ ಹಂಚೋಣವೆನಿಸಿತು. ಇಷ್ಟವಾಗದಿದ್ದರೆ ಹಾಗೆ ಬಿಟ್ಟು ಬಿಡಿ.

Click photo to view

Thursday, July 24, 2008

ಬತ್ತಿದ ಶಂಕರಿ ನದಿ

ಕಥೆಗಾರ ಎಂ. ವ್ಯಾಸ ಇನ್ನಿಲ್ಲ!!
ಎಂ. ವ್ಯಾಸ ಅವರ ಕತೆಗಳು ಕನ್ನಡ ಮಾತ್ರವಲ್ಲ ಜಗತ್ತಿನ ಯಾವುದೇ ಭಾಷೆಯ ಸಾಹಿತ್ಯದಲ್ಲಿ ವಿಭಿನ್ನವಾಗಿವೆ. ಸುಮಾರು ಇಪ್ಪತ್ತು ವರ್ಷಗಳಿಂದಲೂ ಅವರ ಕಥೆ ಕವನ ಪುಸ್ತಕಗಳೆಂದರೆ ಒಂದೇ ಓದಿಗೆ ಮುಗಿಸಿ ಬಿಡುತ್ತಿದ್ದ ನಾನು ಕೆಲವು ತಿಂಗಳುಗಳ ಹಿಂದಷ್ಟೇ ಅವರ ಕೆಲವು ಕಥಾ ಸಂಕಲನಗಳನ್ನು ಓದಿ ಮುಗಿಸಿದೆ. ಮತ್ತೆ ಅವರ ಕೆಲವು ಪುಸ್ತಕಗಳನ್ನು ಓದ ಬೇಕೆಂದು ಕೊಂಡಿದ್ದೆ. ಶಂಕರಿ ನದಿ, ದುರ್ಗಾಪುರದ ಪರಿಸರವನ್ನು ನಿರ್ಮಿಸಿದವರು ಅವರು. ಪ್ರತಿ ಕಥೆಗಳಲ್ಲೂ ಸಾವು, ಕಾಮ, ಬದುಕಿನ ಕುರಿತಾದ ಅಲೌಕಿಕ ಅನುಭವಗಳನ್ನು ಹೊತ್ತು ಕೊಂಡು ಬರೆಯುತ್ತಿದ್ದ ವ್ಯಾಸರನ್ನು ಓದುವುದೆಂದರೆ ಮೈ ಜುಂ ಅನಿಸಿಕೊಳ್ಳುವುದೆಂದೇ ಅರ್ಥೆ. ಈ ವಾರಾಂತ್ಯದಲ್ಲಿ ನಿಮ್ಮ ಕಥೆಗಳನ್ನು ಮತ್ತೆ ಓದಿ ನಿಮಗೆ ಅರ್ಪಿಸುವುವೆ ನನ್ನ ಶ್ರದ್ಧಾಂಜಲಿ.
ಕಾಸರಗೋಡಿನಲ್ಲಿ ಜೀವನ ನಡೆಸಿದ ಎಂ. ವ್ಯಾಸ ಅವರು ಚಿಕೂನ್ ಗುನ್ಯ ಕ್ಕೆ ಬಲಿಯಾಗಿದ್ದಾರೆ ಎಂದರೆ ಅವರ ಕಥೆಗಳಂತೆ ಇನ್ಯಾವುದೋ ತಿರುವು ಪಡೆದುಕೊಳ್ಳುವುದೋ ಎಂಬ ಕುತೂಹಲದಲ್ಲಿದ್ದೇನೆ.
ಕನ್ನಡದ ಮೇಲ್ತರಗತಿಯ ವಿಮರ್ಶಕರ ಕಣ್ಣಿಗೆ ಬೀಳದ ವ್ಯಾಸ, ಅಕಾಡೆಮಿಕ್ ಆಗಿ ಅಥವಾ ಪ್ರಶಸ್ತಿಗಳಿಗಾಗಿ ಲಾಬಿ ನಡೆಸದ ಎಂ. ವ್ಯಾಸ, ತಪಸ್ಸಿನಂತೆ ನಮಗೆ ಕವನ, ಕಥೆಗಳನ್ನು ನೀಡಿದ ವ್ಯಾಸ ನಿಜವಾಗಿಯೂ ಖಾಲಿ ಜಾಗ ಬಿಟ್ಟು ಎಲ್ಲಿ ಹೋಗಿದ್ದೀರಿ. ಶಂಕರಿ ನದಿ ಬತ್ತಿ ಹೋಗಿದೆ.

Saturday, July 19, 2008

ಬಾರದ ಮಳೆಗೆ ಒಂದು ಓಲೆ...
ನೀನು ಕಟ್ಟಿಟ್ಟ ಮೋಡಗಳು ಹಳಸಾಗಿವೆ ನೋಡು. ಚೆಲ್ಲಿ ಬಿಡು ಕಡಲ ಒಡಲಿಂದ ಬಾನ ಮೇಲೆ ತಲುಪಿ ದಣಿದಾಗ ಹೊರ ಹೊರಟ ಬೆವರ ಹನಿಗಳ. ನಮಗೂ ಸ್ವಲ್ಪ ಕೊಡು. ಗಂಟಲೊಣಗಿದೆ. ಉಗುಳು ನುಂಗಲು ಕಷ್ಟ. ಮತ್ತೆ ಅನ್ನ ಉಣ್ಣುವುದೆಂತು. ಗದ್ದೆಯಲ್ಲಿ ಪೈರಾದರೆ ತಾನೆ. ತೆನೆಯಾಗುವುದು. ಭತ್ತವಾಗುವುದು. ಅಕ್ಕಿಯಾಗುವುದು. ಅಕ್ಕಿ ಬೆಂದು ಅನ್ನವಾಗುವುದು.
ಎಲ್ಲಿ ಹೊರಟೆ ಕಣ್ಣು ಮುಚ್ಚಾಲೆಯಾಡಲು. ಯಾರು ನಿನ್ನ ಗೆಳತಿ. ಸಡಿಲಿಸು ನಿನ್ನ ಅಪ್ಪುಗೆಯ. ಹಬ್ಬಿಸು ಕರಿಮೋಡಗಳ ಬಾನು ತುಂಬಾ. ಕವಿಯಲಿ ಕತ್ತಲೆ. ಅಪ್ಪಿಕೊಳ್ಳಲಿ ಮೋಡಗಳು. ಮಿಂಚಾಗಳು. ಸಿಡಿಲಾಗಲು. ಗುಡುಗಾಗಲು. ಸುರಿಯಲಿ ಧರೆಯಲಿ ಆ ಶುದ್ಧ ಜಲ. ಹೀರಿಕೊಳ್ಳಲಿ ಗಿಡ ಮರ. ಗದ್ದೆ ತೋಟ. ಕೆರೆ ಕಾಲುವೆ ತುಂಬಿ ಹರಿಯಲಿ. ನಿನ್ನ ಬರುವಿಕೆಗಾಗಿ ಕಾಯುತ್ತಿದ್ದೇವೆ. ಕೈಚಾಚಿ. ಕಣ್ತೆರೆದು. ಬಾಯಗಲಿಸಿ. ಸುರಿದು ಬಿಡು. ವರ್ಷಧಾರೆಯ.
ಕಾಗದದ ದೋಣಿಗಳು ಕಾಯುತ್ತವೆ ಸಣ್ಣ ಕಂದಗಳ ಕೈಗಳಲಿ. ಹರಿವ ತೋಡಿನ ಸೆಳವಿಗೆ. ಒಂದೊಂದು ಕನಸುಗಳನ್ನು ದಡದಾಚೆ ದಾಟಿಸಲು. ಸುರಿದು ನೋಡು ಮಕ್ಕಳ ಕಿರುನಗೆಯ ಮೇಲೆ ಹತ್ತು ಇನ್ನೊಂದು ಹನಿಗಳ. ಅರಳುವುದು ನೋಡು ಅವರ ಕಣ್ಣುಗಳು. ಯಾಕೆ ಮರೆಯಾಗಿ ನಿಂತೆ ನಿನಗೆ ಪುಟ್ಟ ಪುಟಾಣಿಗಳೆಂದರೆ ಪ್ರೀತಿಯಿಲ್ಲವೇ?
ಒಂದೇ ಕೊಡೆ ಹಿಡಿದುಕೊಂಡು ಹೋದ ಪ್ರೇಮಿಗಳು ಅಂಟಿಕೊಂಡು ನಿನ್ನಲ್ಲಿ ಜಳಕವಾಡುವುದು ಹೇಗೆ? ಸುರಿಯುತ್ತಾ ಸುರಿಯುತ್ತಾ ಇರಲಾರೆಯಾ? ಹೊದ್ದುಕೊಂಡು ಮಲಗಬೇಕೆಂದವರಿಗೆ ನೀನಿಲ್ಲವಲ್ಲ. ನೀನು ಸುರಿಯುವ ಶಬ್ದವೇ ಜೋಗುಳ ನಮಗೆಲ್ಲಾ. ಯಾಕೆ ಓಡಿಸುವೆ ನಮ್ಮ ನಿದ್ದೆಯನ್ನು.
ಮುಂಗಾರು ಮಳೆಯ ನಂತರ ಗಾಳಿಪಟ ಹಾರಿಸಿದ ಭಟ್ಟರನ್ನೂ ಮರೆತೆಯಾ? ನಮ್ಮ ಯೋಗ. ಬಾ ಬೇಗ. ಸುರಿದು ಬಾ. ಪ್ರೇಮಿಗಳು ನಿನ್ನ ಕಾವ್ಯಕ್ಕೆ ಕಾಯುತ್ತಿದ್ದಾರೆ. ಸುರಿದು ಸುರಿದು ಬಿಡದೆ ಬಾ. ಕಾಣೆಯಾಗಿದೆ ಕೆಮ್ಮು. ಒಣಗಿ ಕುಳಿತಿದೆ ಒಳಗೆ. ನೀನು ಬಂದಾಗ, ಹೋಗದೇ ನಿಂತಾಗ, ಸುಡಲೆಂದು ಕಾಯುತಿವೆ- ಹಪ್ಪಳ, ಸಂಡಿಗೆ, ಗೇರು ಹಲಸಿನ ಬೀಜ. ಅದೆಲ್ಲೋ ಮೂಲೆಯಲ್ಲಿ.
ಸುರಿದು ಸುರಿದು ಇಲ್ಲೆ ಇರು. ಮರೆತು ಕೂಡ ಹೋಗಬೇಡ. ಮಕ್ಕಳು ಕಾಯುತ್ತವೆ ಶಾಲೆಗೆ ರಜೆಹಾಕಿ ನಿನ್ನೊಡನೆ ಕುಳಿತು ಅಜ್ಜಿಯ ಕತೆ ಕೇಳಲು. ಇನ್ನೊಂದು ಮಳೆಗಾಲ ಉಳಿದರೆ ಸಾಕಪ್ಪ ಎನ್ನುವ ಅಜ್ಜಿಯ ಆಶೆಗೆ ನೀನು ಅವಕಾಶವನ್ನೇ ಕೊಡದೆ ಎಲ್ಲಿ ಅಡಗಿದೆ. ಬಂದು ಬಿಡು. ಮುಗಿಯುವುದರೊಳಗೆ ಆಷಾಢ, ಶ್ರಾವಣ. ಬೆಂದು ಹೋಗಿವೆ ಅವು ನಿನ್ನ ಕಾದು ಕಾದು.
ನಿನ್ನ ಕಡಲ ಒಡಲಲ್ಲಿಯೇ ಅದೆಷ್ಟು ಚಿಪ್ಪುಗಳು ತೆರೆದು ನಿಂತಿವೆ ಒಂದೊಂದು ಹನಿಗಾಗಿ. ಹನಿಗಳು ಮುತ್ತಾಗಲು.
ಯಾವ ಚಿಪ್ಪಿನಲ್ಲಿ..ಯಾವ ಹನಿಯು ಮುತ್ತಾಗುವುದೊ..ತಿಳಿಯದಾಗಿದೆ
ಮುಂಗಾರು ಮಳೆಯೇ..ಅನಿಸುತಿದೆ ಯಾಕೊ ಇಂದು..ಕೊಲ್ಲು ಹುಡುಗಿ ಒಮ್ಮೆ ನನ್ನ..ಹಾಗೆ ಸುಮ್ಮನೆಸುರಿಯುವ ಸೋನೆಯು ಸೂಸಿದೆ..ಹಾಡುಗಳು ಮೌನವಾಗಿವೆ.

Friday, July 18, 2008

ನೆಲ್ಸನ್ ಮಂಡೇಲಾ.


ನೆಲ್ಸನ್ ಮಂಡೇಲಾ. ಒಂದು ತಲೆಮಾರಿನ ಜನರು ಆತನನ್ನೇ ಇಂದಿಗೂ ವಿಶ್ವನಾಯಕನನ್ನಾಗಿ ಕಾಣುತ್ತಿದ್ದಾರೆ. ನನಗೂ ಆತ ಬಹಳ ಪ್ರಿಯ. ಇಂದು ಆತನ ತೊಂಭತ್ತನೇ ಜನ್ಮ ದಿನ. ಟೈಮ್ ಪತ್ರಿಕೆಯಲ್ಲಿ ನಾಯಕತ್ವದ ಬಗ್ಗೆ ಆತ ನೀಡಿದ ಎಂಟು ಪಾಠಗಳು ಅರಿತುಕೊಳ್ಳಬೇಕಾದವು. ಆತನ ಬದುಕು ಸ್ಫೂರ್ತಿದಾಯಕ. ಭಲೇ... ಕತ್ತಲೆ ನಾಡಿನ ಕರಿಯ ನಾಯಕ. ನಿನಗಿದೋ ಹುಟ್ಟುಬ್ಬ ಶುಭಾಳು.

ನಿನ್ನ ಬದುಕು ಅಮರ.

Thursday, July 17, 2008

ಮೊನ್ನೆ ರಿಟೈರ್ ಆದ ರಮೇಶಣ್ಣ

ರಮೇಶಣ್ಣ ನಾವು ಬೆಳೆಯುತ್ತಿದ್ದಾಗ ನಮಗೆಲ್ಲಾ ಆದರ್ಶ. ನನಗೆ ನೆನಪುಗಳು ಮೆದುಳಿನಲ್ಲಿ ಅರಂಭಿಸಿದ ದಿನಗಳಿರಬಹುದು.ರಮೇಶಣ್ಣ ಕಾಲೇಜಿಗೆ ಹೋಗುತ್ತಿದ್ದರು.ನಾನು ನೋಡಿದ ಮೊದಲ ಕಾಲೇಜು ಹುಡುಗ ಅವರೇ.ಶುಕ್ರವಾರದ ಉದಯವಾಣಿಯ ಚಲನಚಿತ್ರ ಜಾಹೀರಾತುಗಳಿಂದ ಇಳಿದು ಬಂದ ಅಮಿತಾಭ್ ಬಚ್ಚನ್ ಅವರಾಗಿದ್ದರು.ಅವರ ಕ್ರಾಪ್, ಶರ್ಟಿನ ಕಾಲರ್, ಪ್ಯಾಂಟಿನ ಬಾಟಮ್.ನಮ್ಮಿಂದ ದೊಡ್ಡವರು ಆದರೆ ಅವರಿಂದ ಚಿಕ್ಕವರು ಅದನ್ನು ಕಂಡು ಅನುಕರಿಸುತ್ತಿದ್ದರು. ಅವರೊಮ್ಮೆ ನಮ್ಮ ಭಟ್ಟರ ಅಂಗಡಿಯಿಂದ ಇಡೀ ಊರಿಗೆ ಲಾಡು ಹಂಚಿದ್ದರು.ಅದು ಅವರು ಬಿ.ಕಾಮ್. ಪಾಸಾಗಿದ್ದಕ್ಕೋ ಅಥವಾ ಮಣಿಪಾಲದ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಸಿಕ್ಕಿದ್ದಕ್ಕೋ...ನನ್ನ ನೆನಪು ಇನ್ನೂ ದಟ್ಟವಾಗಿಲ್ಲ. ಅಷ್ಟು ಸಣ್ಣವನಿದ್ದೆ ನಾನು.ಸ್ವಲ್ಪ ವರ್ಷದ ನಂತರ ಅವರು ಮಣಿಪಾಲದ ಬ್ಯಾಂಕ್ ಸೇರಿದರು.ಕೆಲಸಕ್ಕೆ ಸೇರಿದ್ದು ಸೀದಾ ಬೆಂಗಳೂರಿನಲ್ಲಿ.ನಮ್ಮೂರಿನಿಂದ ಯಾರಾದರೂ ಹೊರ ಊರಿಗೆ ಕೆಲಸಕ್ಕೆ ಹೋಗುವುದಾದರೆ ಅದು ಬೊಂಬಾಯಿಗೆ.ಆದರೆ ಇವರು ಹೋದದ್ದು ಬೆಂಗಳೂರಿಗೆ.ಆಗ ಮಂಗಳೂರಿನಿಂದ ಬೆಂಗಳೂರಿಗೆ ರೈಲು ಇತ್ತು. ಮೀಟರ್ ಗೇಜ್. ಹಳೆಯದು.ಮಧ್ಯಾಹ್ನ ಎರಡಕ್ಕೆ ನಮ್ಮ ಊರಿನಿಂದ ಐದು ಕಿಲೋ ಮೀಟರ್ ದೂರದಿಂದ ಹೋಗುವ ಬಸ್ಸಿನಲ್ಲಿ ಅವರು ಮಂಗಳೂರಿಗೋ, ಪುತ್ತೂರಿಗೋ ಹೋಗುತ್ತಿದ್ದರು.ಬೆಂಗಳೂರು ರೈಲು ಹಿಡಿಯಲು.ಬೆಂಗಳೂರಿನಲ್ಲಿ ಕೆಲವು ವರ್ಷ ಇದ್ದವರು ಮತ್ತೆ ಬೇರೆ ಬೇರೆ ಊರುಗಳಿಗೆ ವರ್ಗವಾದರು.ನಮ್ಮ ಊರಿನ ಬ್ಯಾಂಕ್‍ನ ಮ್ಯಾನೇಜರ್ ಗಳು ಮೂರು ವರ್ಷಕ್ಕೊಮ್ಮೆ ಬದಲಾಗುತ್ತಿದ್ದರು. ನಾವು ಆಗ, ರಮೇಶಣ್ಣ ಇಲ್ಲಿಗೆ ಯಾವಾಗ ಬರಬಹುದು ಎಂದು ಯೋಚಿಸುತ್ತಿದ್ದೇವು.ರಮೇಶಣ್ಣ ಬರಲೇ ಇಲ್ಲ.ಅವರು ಬೆಂಗಳೂರು, ದಾವಣಗೆರೆ, ಮಣಿಪಾಲ, ಹೈದರಾಬಾದ್, ಮುಂಬಯಿ ಅಂತ ಬೇರೆ ಊರು ಸುತ್ತಿದರು.ಬ್ಯಾಂಕ್‍ನಲ್ಲಿ ದೊಡ್ಡ ಮ್ಯಾನೇಜರ್ ಆದರು. ಮೊನ್ನೆ ರಿಟೈರ್ ಆಗುವಾಗ ಜಿ.ಎಂ. ಆಗಿದ್ದರು.ಬ್ಯಾಂಕ್‍ನಲ್ಲಿ ಡಿ.ಜಿ.ಎಂ., ಎ.ಜಿ.ಎಂ., ಸಿ.ಜಿ.ಎಂ. ಮತ್ತೆ ಜಿ.ಎಂ.... ಇ.ಡಿ. ಎಂ.ಡಿ., ಸಿ.ಎಂ.ಡಿ. ಇವೆಲ್ಲ ಅಂತಸ್ತುಗಳ ಲೆಕ್ಕ ನನಗೆ ಈಗಲೂ ಗೊತ್ತಿಲ್ಲ.ಹಾಗಾಗಿ ನಾನು ಬ್ಯಾಂಕ್‍ನಲ್ಲಿಲ್ಲ!
ರಮೇಶಣ್ಣನ ಮದುವೆಗೆ ಹೊದ ನೆನಪು ನನಗಿದೆ. ಮದುವೆ ಮಂಗಳೂರಲ್ಲಿ ನಡೆದಿತ್ತು.ಸಿ.ವಿ.ನಾಯಕ್ ಹಾಲಿರಬೇಕು. ಈಗ ಅದರ ಹೆಸರು ಬದಲಾಗಿದೆಯಾ?ಊರಿನಿಂದ ಸ್ಪೆಷಲ್ ಬಸ್ ಇತ್ತು.ಚಡ್ಡಿ ಹಾಕಿಕೊಳ್ಳುತ್ತಿದ್ದ ಸಣಕಲರಾದ ನಾವೆಲ್ಲ ಸೀಟುಗಳೆಡೆಯಲ್ಲಿ ಕಿಟಿಕಿ ಹತ್ತಿರ ನಿಂತು ರೊಯ್ಯ್ ಅಂತ ಹೋದವರು.ರಮೇಶಣ್ಣನ ಮದುವೆಯಾಗಿ ವರ್ಷವಾಗುವುದರೊಳಗೆ ಅವರ ಹೆಂಡತಿಯ ಸೀಮಂತದ ಆಮಂತ್ರಣ.ನಮ್ಮ ಮನೆಯ, ಊರಿನ ಹೆಂಗಸರದು ಅದೇನೋ ಕುಹಕ ಮಾತುಗಳು.ಮದುವೆಯಾಗಿ ಒಂಭತ್ತು ತಿಂಗಳಾಗುವುದರೊಳಗೆ ಅವಳು ಹೆರುತ್ತಾಳೆ ಎಂದು.ಈ ಮಾತುಗಳು ನನಗೆ ಸರಿಯಾಗಿ ಅರ್ಥವಾಗಲು ಬಹಳ ದಿನಗಳು ಬೇಕಾಯಿತು. ನಮಗೆ ಖುಷಿ.ಅವರ ಮದುವೆ ಎನಿವರ್ಸರಿ ದಿನವೇ ಅವರಿಗೆ ಮಗುವಾಗುವುದು ಬೇಡ ಎಂಬುದು ನಮ್ಮ ಒಳ ಬಯಕೆ.ಅವರ ಎನಿವರ್ಸರಿ ಮತ್ತು ಮಗುವಿನ ಬರ್ತ್‍ಡೇ ಒಂದೇ ದಿನ ಬಂದರೆ ನಮಗೇ ನಷ್ಟ ಅಲ್ವಾ?ಸ್ವೀಟ್ ತಿನ್ನಲು, ಕೇಕ್ ತಿನ್ನಲು ದಿನ ಬೇರೆ ಬೇರೆಯಾದರೆ ಒಳ್ಳೆಯದು ಎಂಬುದು ನಮ್ಮ ಲೆಕ್ಕ.
ಮೊನ್ನೆ ರಿಟೈರ್ ಆದ ರಮೇಶಣ್ಣನಿಗೆ ಒಬ್ಬನೇ ಮಗ ದಿಲೀಪ್.ಈಗವನು ಪೈಲೆಟ್.ರಮೇಶಣ್ಣನ ಹೆಂಡತಿ ಪದ್ಮಾವತಿ ಕೂಡಾ ನಮಗೆ ಚಿಕ್ಕಂದಿನಲ್ಲೇ ಗೊತ್ತು. ಹೈಸ್ಕೂಲಿಗೆ ಹೋಗುತ್ತಿದ್ದ ಅವರಿಗೆ ತುಂಬಾ "ಸೇಲೆ".ಹೀಗೆ ಅವರ ಬಗ್ಗೆ ಜನಾಭಿಪ್ರಾಯ ಮೂಡಿಸಿದವರು ನಮ್ಮದೇ ನೆರೆಕರೆಯ ಹೆಂಗಸರು.ನಮಗೆ ಇಂಥ ದೊಡ್ಡ ಮಾತುಗಳು ಅರ್ಥವಾಗಲು ನಾವು ದೊಡ್ಡವರಾಗಬೇಕಾಯಿತು.
ಮೊನ್ನೆ ರಿಟೈರ್ ಆದ ರಮೇಶಣ್ಣ ಸೆಟ್ಲ ಆದದ್ದು ನಮ್ಮ ಊರಿನಲ್ಲಿ ಅಲ್ಲ.ಇಲ್ಲಿ ಅವರಿಗೆ ಒಂದು ದೊಡ್ಡ ಟಾರೀಸ್ ಮನೆಯಿದೆ. ಅದನ್ನು ಅವರು ಇಲ್ಲಿನ ಬ್ಯಾಂಕ್ ಮ್ಯಾನೇಜರ್‍ಗೆ ಬಾಡಿಗೆಗೆ ಕೊಟ್ಟಿದ್ದಾರೆ.ಅದಕ್ಕೆ ಬ್ಯಾಂಕ್‍ನ ಮನೆಯೆಂದೇ ಹೆಸರು.
ರಮೇಶಣ್ಣ ಬೆಂಗಳೂರಲ್ಲಿ ಮನೆ ಮಾಡಿದ್ದಾರೆ.ಪೈಲೆಟ್ ದಿಲೀಪನಿಗೆ ಇನ್ನೂ ಮದುವೆಯಾಗಿಲ್ಲ.
ಮೊನ್ನೆ ರಿಟೈರ್ ಆದ ರಮೇಶಣ್ಣ ದೊಡ್ಡ ಪಜೀತಿ ಮಾಡಿದ್ದಾರೆ ಎಂದು ಮತ್ತೆ ಹೆಂಗಸರ ಗುಂಪಿನಿಂದ ಗುಸುಗುಸು ಸುದ್ದಿ.ಈ ಸಲ ಮಾತ್ರ ಅದು ಬಹಳ ಗಂಭೀರವಾದ ಸುದ್ದಿ.ಈಗ ನಾನು ದೊಡ್ಡವನಾಗಿರುವುದರಿಂದ ಬನ್ನಿ ಅಣ್ಣ, ಬನ್ನಿ ಭಾವ ಎಂದು ಕರೆದ ಹೆಂಗಸರು ನಾನು ಏನು ಗುಸು ಗುಸು ಅಂದಾಗ ಕತೆ ಹೊರಗೆ ಬಿತ್ತು.ಕ್ಯಾಮರ ಇದ್ದು ಟಿವಿ ವರದಿಗಾರನಿರುತ್ತಿದ್ದರೆ ನಮ್ಮ ಪಾಲಿಗೆ ಇದೊಂದು ಬ್ರೇಕಿಂಗ್ ನ್ಯೂಸೇ ಆಗುತ್ತಿತ್ತು.
ಮೊನ್ನೆ ರಿಟೈರ್ ಆದ ರಮೇಶಣ್ಣನಿಗೆ "ಮಗಳೊಬ್ಬಳಿದ್ದಳೇ!!!" ಅದೇ ಆ ಸುದ್ದಿ.ಟಿವಿ ಚಾನೆಲ್ ಗಳಂತೆ ಅತಾಪತಾ ಗೊತ್ತಿಲ್ಲದ ಹೆಂಗಸರು ಲೈವ್ ಕಾಮೆಂಟ್ ತಾವಾಗಿ ಕೊಡುತ್ತಿದ್ದರಲ್ಲದೇ ಅವರೊಳಗೇ ಸುದ್ದಿಯ ವ್ಯಾಖ್ಯಾನವನ್ನೂ ಮಾಡುತ್ತಿದ್ದರು.ರಮೇಶಣ್ಣ ಒಳ್ಳೆಯ ಹುಡುಗನಾಗಿದ್ದು, ಒಳ್ಳೆಯ ವ್ಯಕ್ತಿಯಾಗಿ ಹೀಗೆ ಮಾದಬಹುದೆಂದು ನಮ್ಮ ಊರಿನ ಜನ ನಿರೀಕ್ಷಿಸಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಈ ವಿಚಾರ ತನ್ನ ಊರಿಗೆ ಗೊತ್ತಾಗದಂತೆ ಕಾಪಾಡಿಕೊಂಡು ಬಂದ ಬಗ್ಗೆ ಎಲ್ಲರಿಗೂ ಆಶ್ಚರ್ಯ!
ಮೊನ್ನೆ ರಿಟೈರ್ ಆದ ರಮೇಶಣ್ಣ ಬ್ಯಾಂಕ್ ನ ಕೆಲಸ ಆರಂಭಿಸಿದ್ದು ಬೆಂಗಳೂರಿನಲ್ಲಿ ಅಲ್ವ!ಅಲ್ಲಿ ಅವರಿಗೆ ಹುಡುಗಿಯೊಬ್ಬಳು "ತಾಗಿದಳು"ಮಗುವಾಯಿತು. ಕೆಲವು ವರ್ಷಗಳ ನಂತರ ಊರಲ್ಲಿ ರಮೇಶಣ್ಣ ಮದುವೆಯಾದ ಸುದ್ದಿ ತಿಳಿದ ಹುಡುಗಿ ಮಗುವನ್ನು ಬಿಟ್ಟು ಸತ್ತಳಂತೆ.ರಮೇಶಣ್ಣ ನಂತರ ಮಗುವನ್ನು ಅವಳ ಅಜ್ಜಿ ಮನೆಯಲ್ಲಿ ಸಾಕುವ ವ್ಯವಸ್ಥೆ ಮಾಡಿದರು.
ಅವರು ಬೇರೆ ಊರಲ್ಲಿದ್ದರೂ ಬ್ಯಾಂಕಿನ ಕೆಲಸ, ಟ್ರೈನಿಂಗ್ ಎಂದು ಬೆಂಗಳೂರಿನಲ್ಲಿ ತುಂಬಾ ದಿನ ಇರುತ್ತಿದ್ದುದು ಏಕೆ ಎಂದು ಈಗ ಎಲ್ಲಾರೂ ಊಹಿಸುತ್ತಿದ್ದಾರೆ.ಪದ್ಮಾವತಿ ಮಾತ್ರ ನಿರ್ಲಿಪ್ತ ರಾಗಿದಾರೆ. ಕತೆ ತಿಳಿದ ಅವರು ವಿಚಲಿತರಾಗಲಿಲ್ಲ.
ಮೊನ್ನೆ ರಿಟೈರ್ ಆದ ರಮೇಶಣ್ಣ ಈಗ ನಿರಾಳವಾಗಿಲ್ಲ.ಮಗನಿಗೂ ಮದುವೆ ಮಾಡಿಸಬೇಕು.ಮಗಳಿಗೂ ಮದುವೆ ಮಾಡಿಸಬೇಕು.ಹೀಗೆ ಅವರು ಎರಡೆರಡು ಮದುವೆಯ ತಯಾರಿಯಲ್ಲಿದ್ದಾರೆ.
ಅವರ ಜ್ಯೂನಿಯರ್ ಸಹೋದ್ಯೋಗಿಯೊಬ್ಬರಿಗೆ ಫೋನ್ ಮಾಡಿದಾಗ ಈ ವಿಚಾರ ಮಾತಾಡಿದರೆ 'ನಿಮಗೆ ಗೊತ್ತಿಲ್ಲವಾ ಮಾರಾಯ್ರೆ!' ಅಂತ 'ನನಗೆ ಗೊತ್ತಿಲ್ಲದ ವಿಚಾರವೇ' ದೊಡ್ಡ ಬ್ರೇಕಿಂಗ್ ಸುದ್ದಿ ಎನ್ನುವಂತೆ ಆಡಿದರು.ಬ್ಯಾಂಕ್‍ನಲ್ಲಾಗಿದ್ದರೆ ಇಂಥ ಸುದ್ದಿಯೆಲ್ಲಾ "ಸೇಫ್" ನಲ್ಲಿರುವುದು ಮಾಮೂಲು ಎಂದರು.
ಎಳವೆಯಲ್ಲಿ ನನಗೆ ಆದರ್ಶವಾಗಿದ್ದ ರಮೇಶಣ್ಣ ಇದುವರೆಗೆ ನಾನು ಬಾಯಿ ಬಿಡದಿದ್ದುದಕ್ಕೆ ಧನ್ಯವಾದ ಹೇಳಲೆಂದು " ಬಾ ಮಾರಾಯ ಬೆಂಗಳೂರಿಗೆ ಬಂದಾಗ ದೊಡ್ಡ ಬಿಯರ್ ಪಾರ್ಟಿ ಕೊಡ್ತಿನಿ ನಿನಗೆ" ಎಮ್ದರು. ನಾನು ತೋರಿಸಿದ ಹುಡುಗ ಅವರ ಮಗಳಿಗೆ ಒಪ್ಪಿಗೆಯಾಗಿದ್ದಾನೆ ಎಂದು ಮಾತ್ರ ರಮೇಶಣ್ಣನಿಗೆ ಗೊತ್ತಿಲ್ಲ.
ರಮೇಶಣ್ಣ ನೀವು ಈ ಬ್ಲಾಗ್ ಓದಿದರೆ ನಾನೇ ನಿಮಗೆ ಒಂದು ಒಳ್ಳೆಯ ಪಾರ್ಟಿಗೆ ಆಮಂತ್ರಿಸುವೆ. ಅಲ್ಲಿ ನಿಮ್ಮ ಮಗಳ ಹುಡುಗನನ್ನೂ ಬರ ಹೇಳುವೆ. ಅಷ್ಟರ ವರೆಗೆ ಕಾಯುವಿರಾ?
ಒಲವಿನಿಂದ
ಬಾನಾಡಿ.

Wednesday, July 16, 2008

ಹೂವು ಮತ್ತು ಹೆಣ್ಣು


ಸುಂದರವಾಗಿ ಆಗ ತಾನೆ ಅರಳಿದ ಹೂವೆಂದರೆ ಯಾರಿಗೆ ಪ್ರಿಯವಾಗಿರುವುದಿಲ್ಲ! ಬಳ್ಳಿ ತುಂಬ ಅರಳಿದ ಮಲ್ಲಿಗೆ, ಜಾಜಿ, ಗಿಡ ತುಂಬಾ ಕೆಂಪು, ನಸುಗೆಂಪು, ಹಳದಿ, ಬಿಳಿ ಬಣ್ಣದಿಂದ ಕಂಗೊಳಿಸುವ ಗುಲಾಬಿ, ಮರತುಂಬಾ ಅರಳಿದ ಸಂಪಿಗೆ ಕಂಡಾಗ ಮನಸ್ಸು ಮುದಗೊಳ್ಳುತ್ತದೆ. ಹೂವು ಗಿಡದಲ್ಲಿದ್ದರೇನೆ ಚಂದ. ಇದು ನನ್ನ ಅನಿಸಿಕೆ. ಭಕ್ತರಿಗೆ ಅದು ದೇವರ ಪಾದ ಸೇರಿದರೇನೆ ತಮಗೂ ಮುಕ್ತಿ ಎಂಬ ಭಾವನೆ. ಪ್ರೀತಿಸುವವರಿಗೆ ತನ್ನ ಪ್ರಿಯತಮೆಗೆ ಒಂದು ಅತಿ ಸುಂದರ ಹೂವು ಕೊಡಬೇಕೆಂಬ ಹಂಬಲ. ನಮ್ಮೂರು ಕಡೆ ಹೂವನ್ನು ಕಂಡ ಹೆಂಗಸು ಅದನ್ನು ತನ್ನ ಮುಡಿಯಲ್ಲಿಡಲು ತವಕಿಸುವಳು. ಮನೆಯಂಗಳದಲ್ಲಿ ಅರಳಿದ ಸುಂದರ ಗುಲಾಬಿಯನ್ನು ಕಿತ್ತು ಮುಡಿಯಲು ಅದೆಷ್ಟು ಹೆಣ್ಣು ಮನಸುಗಳು ಹಾತೊರೆಯುತ್ತವೆ.ಪೇಟೆಗಳಲ್ಲೂ ವೃತ್ತಗಳಲ್ಲಿ ಸುಂದರವಾಗಿ ನಿರ್ಮಿಸಿದ ಲಾನ್‍ಗಳಲ್ಲಿ ಅರಳಿನಿಂತ ಹೂವುಗಳನ್ನು ಕಂಡಾಗ ಕಣ್ಣು ತುಂಬಿ ಬರುತ್ತದೆ.
***
ಮೊನ್ನೆ ಮದುವೆಯೊಂದಕ್ಕೆ ನಾವೆಲ್ಲಾ ಸೇರಿದ್ದೆವು. ಬಾಲ್ಯದ ಗೆಳೆಯರು. ಸ್ನೇಹಿತರು. ಮದುವೆ ಹಿರಿಯಕ್ಕನ ಮಗಳದ್ದು. ಹೇಮಾ ಹುಟ್ಟಿದಾಗಿನಿಂದ ಎಲ್ಲರ ಅಚ್ಚು ಮೆಚ್ಚಿನವಳು. ಇಂದು ಮದುವೆಗೆ ಆಗುವಷ್ಟು ಬೆಳೆದಿದ್ದಾಳೆ ಎಂದಾಗ ನಾವೂ ಮುದುಕರಾಗುತ್ತಿದ್ದೇವೋ ಎಂದನಿಸಿತು.ರಘು, ಮೋಹನ, ನೀಲಾ, ಲಲಿತ, ನಾರಾಯ್ಣ, ಈಚ, ಅಚ್ಚು, ಪುತ್ತು ... ಹೀಗೆ ನಾವೆಲ್ಲ ಯಾವ್ಯಾವುದೋ ಊರಿಂದ ಬಂದಿದ್ದೆವು.
ಮದುವೆಯ ನೆಪದಲ್ಲಿ ನಮ್ಮೆಲ್ಲರ ಪುನರ್ಮಿಲನ.
ಮದುವೆಯ ಗಡಿಬಿಡಿಯಲ್ಲಿಯೇ ಬಾಯಿಯಿಂದ ಆಡಲಾಗದ ಅದೆಷ್ಟೋ ಮಾತುಗಳನ್ನು ಕಣ್ಣಿನಿಂದ ಆಡಿ ಹೋದೆವು. ಮದುವೆಗೆ ಬಂದವರೆಲ್ಲಾ ಮದುವೆ ಮುಗಿಯುತ್ತಲೇ ಅಲ್ಲಿ ಇಲ್ಲಿ ಹೊರಟರು.
ಮರುದಿನ ಆಫೀಸಿದೆ. ಮಕ್ಕಳಿಗೆ ಸ್ಕೂಲಿದೆ. ಇಲ್ಲಿವರೆಗೆ ಬಂದು ನಮ್ಮ ಹತ್ತಿರದ ಸಂಬಂಧಿಕರನ್ನು ಭೇಟಿಯಾಗಲೇ ಬೇಕು. ಕಾರಣಗಳು ಸಾಲಾಗಿ ನಿಂತವು. ನಮ್ಮನ್ನೆಲ್ಲಾ ಕರೆದುಕೊಂಡು ಬಂದು ನಿಂತ ಕಾರುಗಳಂತೆ. ನಾವೆಲ್ಲಾ ಸೇರಿದಷ್ಟೇ ವೇಗವಾಗಿ ಚದುರಿದೆವು.
ಆಕಾಶದಲ್ಲಿ ಕಾರ್ತೆಲ್ ತಿಂಗಳಲ್ಲಿ ಇರಬೇಕಾಗಿದ್ದ ಕಡುಕಪ್ಪು ಮೋಡಗಳ ಬದಲು ನೀಲಾಕಾಶದಲ್ಲಿ ಬಿಳಿಮೋಡಗಳು ಚೆಲ್ಲಿ ಹೋಗಿ ಗಳಿಗೆಗೊಂದು ಆಕಾರ ನೀಡುತ್ತಿದ್ದವು.
ಕೊನೆಗೆ ನೀಲಾ ಮತ್ತು ನಾನು ಉಳಿದೆವು. ಮದುವೆಯಾದ ಹೇಮಾ ಗಂಡನ ಮನೆಗೆ ಹೋಗುವಲ್ಲಿವರೆಗಾದರೂ ನಿಲ್ಲೋಣವೆಂದೇ ನಿಂತಿದ್ದೆ. ಎಲ್ಲರೂ ಹೋದ ನಂತರ ನಾನೂ ನೀಲಾ ಮಾತಾಡುತ್ತಾ ಹೆಜ್ಜೆಯಿಡುತ್ತಾ ನೇರವಾಗಿ ಕಡಲ ಕಿನಾರೆಯನ್ನು ತಲುಪಿದೆವು.
ಅದೆಷ್ಟೋ ದಿನಗಳಿಂದ ಹಂಚಿಕೊಳ್ಳಬೇಕಿದ್ದ ನೆನಪುಗಳನ್ನು, ಮಾತುಗಳನ್ನು, ನಗೆಯನ್ನು, ನೋವನ್ನು, ಕಿಚ್ಚನ್ನು, ಸೇಡನ್ನು, ಸಿಟ್ಟನ್ನು, ಹತಾಶೆಗಳನ್ನು ಹಂಚುತ್ತಾ ನಡೆವಾಗ ಇನ್ನೂ ಆಡಲಾಗದ ಅದೆಷ್ಟೋ ಭಾವನೆಗಳು ಪಾದದ ಅಚ್ಚಾಗಿ ನಮ್ಮನ್ನು ಹಿಂಬಾಲಿಸುತ್ತಿದ್ದವು. ನೆನಪಿನ ಕರವಸ್ತ್ರದಲ್ಲಿ ಹಳೆಯ ಗೆಳೆಯರೊಂದಿಗೆ ಹಂಚಲೆಂದೇ ಕಟ್ಟಿಟ್ಟ ಅದೆಷ್ಟೊ ವಿಚಾರಗಳು ಹಾಗೇ ಉಳಿದವು.
ಕಿನಾರೆಯ ಬಂಡೆಯಲ್ಲಿ ಕುಳಿತ ನನಗೆ ನೆನಪುಗಳು ಮತ್ತೆ ಬಾಲ್ಯದತ್ತ ಹೋಯಿತು. ರಘು, ಮೋಹನ, ನೀಲಾ ... ಎಲ್ಲರು ಅದೆಷ್ಟು ಸಲ ಇಲ್ಲಿ ಬಂದಿದ್ದೇವೆ. ಎತ್ತರವಿದ್ದ ಈಚಲ ಮರಗಳು ಇನ್ನೂ ಎತ್ತರಕ್ಕೆ ಬೆಳೆದಿವೆ. ಚಿಕ್ಕವರಿದ್ದಾಗ ವೇಷಕಟ್ಟದೆ ಮರದ ನೆರಳಲ್ಲಿ ನಾವು ಕುಣಿದ ಯಕ್ಷಗಾನ, ಪರೀಕ್ಷೆಗೆ ಓದಲೆಂದು ಕುಳಿತಿದ್ದ ಜಾಗ, ರಜೆಯಲ್ಲಿ ಆಡುತಿದ್ದ ಕ್ರಿಕೆಟ್, ವಾಲಿಬಾಲ್ ಆಟಗಳು, ಇನ್ನೂ ಹೆಸರು ಗೊತ್ತಿಲ್ಲದ ಅದೆಷ್ಟೋ ತುಂಟ ಆಟಗಳು...ನಾವೆಲ್ಲ ನಮ್ಮ ಕೈಗಳನ್ನು ಒದ್ದೆ ಮಾಡಿ ಕೈಯಲ್ಲಿ ಮರಳನ್ನು ಅದ್ದಿ ಇನ್ನೊಬ್ಬರ ಕೈಯನ್ನು ಗಟ್ಟಿಯಾಗಿ ಹಿಡಿಯುತ್ತಿದ್ದೆವು. ಹೀಗೆ ಒಬ್ಬರನ್ನೊಬ್ಬರು ನೋಯಿಸುತ್ತಿದ್ದೆವು. ದೊರಗಾದ ಹೊಯಿಗೆಯಿಂದ ಹಿಡಿಸಿಕೊಂಡ ಎಳೆಯ ಕೈಗಳು ಕೆಂಪಾಗುತ್ತಿದ್ದವು. ಕೆಲವೊಮ್ಮೆ ಯಾರಾದರೂ ಗಟ್ಟಿಯಾಗಿ ಹಿಡಿದರೆ ಆ ಕೆಂಪು ಮರುದಿನ ಕಪ್ಪಿಟ್ಟಿರುತ್ತಿತ್ತು.
ಮೊನ್ನೆ ಕೂಡ ನಾನು ಕಡಲಿನ ನೀರಿನಲ್ಲಿ ಕೈಯನ್ನು ಅದ್ದಿ ಮರಳನ್ನು ಅಂಗೈಯಲ್ಲಿ ಹಿಡಿದುಕೊಂಡೆ. ಹಳೆಯ ನೆನಪಿನ ಬಾವಿಗೆ ಬಿದ್ದ ನೀಲಾ "ನಿನ್ನ ತುಂಟತನ ಈಗ ಬೇಡ ಮಾರಾಯ" ಎಂದಳು. ಮಾತಾಡುತ್ತಾ ನಾನವಳ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡೆ. ಇನ್ನೂ ಅಮುಕಿದೆ.
ಪ್ರಬುದ್ಧನಾಗಿರುವ ನಾನು ಹೇಗೊ ಬಾಲ್ಯಕ್ಕೆ ಜಾರಿದ್ದೆ. ಅವಳಿಗೆ ನೋವಾಯಿತು. ನಾನು ಹಿಡಿದಲ್ಲಿ ಅವಳ ಕೈ ಕೆಂಪಾಯಿತು. ಅವಳು ನನ್ನನ್ನೇ ದಿಟ್ಟಿಸಿ ನೋಡಿದಳು. ತಪ್ಪು ಮಾಡಿದೆನೆ ಎಂದು ಕೊಂಡ ನಾನು ನೋವಾಯಿತೇ ಎಂದೆ. ಹೌದು ಎಂದಳು. ಅವಳು ಮರಳಿಲ್ಲದ ಅವಳ ಕೈಗಳಿಂದ ನನ್ನನ್ನು ಗಟ್ಟಿಯಾಗಿ ಹಿಡಿದಳು.
ಅವಳ ಕೈಗಳು ಸುಕೋಮಲವಾಗಿದ್ದವು. ಅವಳ ಹಿಡಿತ ನನ್ನ ಎದೆಯನ್ನು ನೋಯಿಸಿತು. ಕ್ಷಮಿಸು, ನಿನ್ನನ್ನು ನೋಯಿಸಿದಕ್ಕೆ ಎಂದೆನು. ಹೆಣ್ಣು ಒಂದು ಹೂವಿನ ಹಾಗೆ. ಕೋಮಲವಾದ ಹೂವನ್ನು ಹಿಚುಕಬೇಡ ಎಂದಳು. ಹೂವೆಂದರೆ ಅದೆಷ್ಟು ಪ್ರೀತಿಸುತ್ತಿದ್ದೆ ನೀನು. ಆದರೆ ಅದನ್ನು ಗಿಡದಿಂದ ಕೀಳದಂತೆ ನಮ್ಮೊಡನೆಯೆಲ್ಲಾ ಜಗಳವಾಡಿದ್ದೆ ನೀನು ಎಂದಳು.
***
ಹೆಣ್ಣೊಂದು ಹೂವು ಹಿಚುಕಬೇಡ ಅದನ್ನು. ಹೂವೊಂದು ಹೆಣ್ಣು ಹಿಚುಕಬೇಡ ಅದನ್ನು. ಸಮುದ್ರದ ಅಲೆಯಂತೆ ಮತ್ತೆ ಮತ್ತೆ ಮನಸ್ಸಿನ ಪುಟಗಳನ್ನು ಅಪ್ಪಲಿಸುತ್ತಿವೆ.
ಹೂವನ್ನು ಕಿತ್ತು ದೇವರಿಗೆ ಅರ್ಪಿಸುವ ಭಕ್ತರು.
ಹೂವುಗಳ ಮಾಲೆಯನ್ನು ಮಾಡಿ ರಾಜಕಾರಣಿಗಳಿಗೆ ಹಾಕುವ ಚೇಲಗಳು.
ಹೂವು ಅರಳುವ ಮೊದಲೇ ಮೊಗ್ಗಾಗಿರುವಾಗಲೇ ಕಿತ್ತು ಮಾರುಕಟ್ಟೆಯಲ್ಲಿ ಮಾರುವವರು.
ಗೊತ್ತಿಲ್ಲವೆ ಅವರಿಗೆ ಹೂವೊಂದು ಹೆಣ್ಣು. ಹೆಣ್ಣೊಂದು ಹೂವೆಂದು.
ಒಲವಿನಿಂದ
ಬಾನಾಡಿ

Saturday, June 28, 2008

ಸಮುದ್ರ ದಲ್ಲಿರಬೇಕಾದ ಮೀನು ಭೂಮಿಗೆ ಬಂದಾಗ...


ಮೊನ್ನೆ ಪೋಸ್ಟಿಸಿದ ಬುಟ್ಟಿಯಿಂದ ತಟ್ಟೆಗೆ ಬಿದ್ದ ಮೀನಿನ ಕುರಿತು ಓದಿದ ಬ್ಲಾಗಿಗರು ಮತ್ತು ಸ್ನೇಹಿತರು ಬೆಂಗಳೂರಿನಲ್ಲಿ ಮತ್ತು ಇನ್ನಿತರ ಊರಲ್ಲಿದ್ದು ಮಂಗಳೂರಿನ ಮೀನಿಗೆ ಹಾತೊರೆಯುತ್ತಿರುವುದು ಸಹಜ. ಹಾಗಾಗದಿರುವುದು ಅಸಹಜ. ಬೆಂಗಳೂರಿನವರಿಗೆ ಗಾಂಧಿನಗರದಲ್ಲಿರುವ ಫಿಶ್‍ಲ್ಯಾಂಡ್ ಒಂದು ಒಳ್ಳೆಯ ಜಾಯಿಂಟ್. ಅಲ್ಲಿಗೆ ಹೋಗದೆ ನನ್ನ ಬೆಂಗಳೂರು ಪಯಣ ಮುಗಿಯುವುದಿಲ್ಲ. ಫಿಶ್‍ಲ್ಯಾಂಡ್‍ನವರದೇ ಸ್ಟೇಟಸ್ ಬಾರ್ ನಲ್ಲಿ ಬಿಯರ್ ಹೀರುತ್ತಾ ಕಾಣೆ ತಿನ್ನುತ್ತಾ ಒಂದೆರಡು ಗಂಟೆ ಕಳೆಯುವುದು ನನ್ನ ಬದುಕಿನ ಅತ್ಯಮೂಲ್ಯ ಕ್ಷಣಗಳಲ್ಲಿ ಕೆಲವು. ಅದೆಷ್ಟು ವರ್ಷಗಳಿಂದ ಅಲ್ಲಿ ಅದೆಷ್ಟು ಬಾಟಲಿಗಳು ಖಾಲಿಯಾಗಿವೆಯೋ!! ಶಶಿಯ ಜತೆ, ರಾಜನ ಜತೆ, ಗಣೇಶನ ಜತೆ (ಕುಪ್ಪಿ ಅಲ್ಲ, ಹೆಗ್ಡೆ! - for friends), ಮೊದಲು ಪರಿಚಯಿಸಿದ್ದು ಬಹುಷಃ ಕೇಶವನಿರಬೇಕು. ಕಾಣೆ ಗಸಿ, ಏಡಿ ಗಸಿ ನನಗೆ ಬೆಂಗಳೂರಿನಲ್ಲಿರುವಾಗ ಇಲ್ಲಿ ಸಿಗುವಷ್ಟು ಚೆನ್ನಾಗಿ ಇನ್ನೆಲ್ಲಿಯೂ ಸಿಗುವುದು ಗೊತ್ತಿಲ್ಲ. ಬೆಂಗಳೂರಿನಲ್ಲಿರುವ ಅತ್ಯಂತ ರುಚಿಕರ ಮಾಂಸಹಾರಿ ರೆಸ್ಟುರಾ ಗಳ ಬಗ್ಗೆ ಒಂದು ಬರಹ ಬರೆಯಬಹುದೆಂಬ ಖಯಾಲಿ ಬರುತ್ತಿದೆ.
ಸಮುದ್ರದಲ್ಲಿರಬೇಕಾದ ಮೀನು (fish) ಭೂಮಿಗೆ (Land) ಬಂದಾಗ...Fishland...

ಒಲವಿನಿಂದ

ಬಾನಾಡಿ.

Friday, June 27, 2008

ಬುಟ್ಟಿಯಿಂದ ತಟ್ಟೆಗೆ

ಮಳೆಗಾಲ ಆರಂಭವಾಯ್ತು ಅಂದ್ರೆ ಕಡಲಿಗೆ ಹೋಗುವವರಿಗೆ ರಜೆ. ಇದು ಈ ವರ್ಷದ ಕೊನೆ ಕಂತು. 'ಕಾಣೆ' ಮೀನಿಗೆ ಕಿಲೋ ಒಂದಕ್ಕೆ ರೂ. ೩೬೦/- . ಸಣ್ಣ ಮೀನು -ಕೊಳ್ಳ ತರು - ಸಾರಿಗೆ ಆಗಬಹುದು ಎನ್ನುತ್ತಾನೆ ಸಾಯ್ಬ.


ಕಾಣೆ ಮೀನು - ಅಪರೂಪದ ರುಚಿ. ಹಾಗಾಗಿ ಮಂಗಳೂರಲ್ಲಿ ಅಪರೂಪ! ಎಲ್ಲ ಬೆಂಗಳೂರಿಗೆ ಬರುತ್ತದೆ.


ಮಳೆ ಶುರುವಾಯ್ತೆಂದರೆ ಮುಗಿದ ಮೀನಿನ ಬುಟ್ಟಿಯೂ ನೆನೆಯುತ್ತದೆ - ಮಳೆಯಲ್ಲಿ - ಆ ಹಳೆ ದಿನಗಳನ್ನು. ಜತೆಗಿದ್ದ ಹತ್ತು ಹದಿನೈದು ಬುಟ್ಟಿಗಳನ್ನು. ಈಗ ಒಂಟಿ ಯಾಗಿ ನೆನೆಯುತ್ತಿದೆ.


ದಿನದ ವ್ಯಾಪಾರ ಕುದುರಿಸಿ ಕೈಗೆ ಸಿಕ್ಕ ಹಣ ಜೇಬಿಗೆ ಸೇರಿದಾಗ ಮನಸ್ಸಿನ ಸಂತೋಷ ತುಟಿಯಲ್ಲಿ ಅರಳಿದೆ ಮುಗುಳು ನಗೆಯ ಮಲ್ಲಿಗೆಯಾಗಿ.


ಕೊನೆಗೂ ಬುಟ್ಟಿಯಿಂದ ತಟ್ಟೆಗೆ ಬರುವ ಆತುರ...