Friday, December 21, 2007

ನೇರದಾರಿಯವರು

ನೀಲಿ ಬಾನಿನಲ್ಲಿ ತುಂಬಿದ ಚಂದಿರ ಚೆಲ್ಲುವ ಬೆಳದಿಂಗಳಿಗೆ ನಿನ್ನ ಕೆನ್ನೆಯು ಹೊಳೆಯುವಾಗ ನನ್ನ ಮನಸ್ಸು ಖಾಲಿಖಾಲಿಯಾಗಿತ್ತು. ನಿನ್ನ ಕೈ ಹಿಡಿದು ಅದುಮುತ್ತಿದ್ದಾಗ ತೆಳುಬಿಳಿಮೋಡಗಳು ಚಂದಿರನನ್ನು ಮರೆಯಾಗಿಸುತ್ತಿದ್ದವು. ಕೊಕ್ಕರೆ ಬೆಟ್ಟದ ಮೇಲಿನ ಬಂಡೆಯ ಮೇಲೆ ಕುಳಿತು ನಿನಗಾಗಿ ಕಾದು ಕಾದು ರಾಮಣ್ಣ ಗೌಡರ ನಾಯಿ ನನ್ನನ್ನು ಬೆನ್ನಟ್ಟಿಕೊಂಡು ಬಂದಾಗ ನಾನು ಸಾಬುವಿನ ಸಹಾಯದಿಂದ ನಿಮ್ಮ ಮನೆಯಂಗಳದಲ್ಲೇ ಬಂದು ನಿಂತಾಗ ನಿನ್ನ ಅತ್ತೆಯ ಮಗ ಸುರೇಶನು ನನಗೆ ಸಿಕ್ಕಿದ್ದು ಆಕಸ್ಮಿಕವೊ ಅನಿರೀಕ್ಷಿತವೋ ತಿಳಿಯದು.

ನಮ್ಮ ನಮ್ಮ ಕನಸುಗಳಿಗೆ ಖಾಲಿಹಾಳೆಗಳು ಅಕ್ಷರದ ಚಿತ್ರ ಮೂಡಿಸಿದಾಗ ದೊರೆತ ಆನಂದಕ್ಕೆ ಪಾರವೇ ಇಲ್ಲವೇ?

ಕನಸಿನಲ್ಲಿ ಬರಬೇಡ. ನನ್ನೆದುರು ಬಂದಾಗ ಏಕೆ ಸುಮ್ಮನಿರುವೆ. ಮತ್ತೊಮ್ಮೆ ಕೊಟ್ಟು ಬಿಡು ನಿನ್ನ ಕೈಗಳನ್ನು. ಅದುಮಿಡುವೆ. ನನ್ನೊಳಗಿನ ಬೆಳದಿಂಗಳನು ನಿನ್ನ ಮನಸಿನ ತುಂಬಾ ತುಂಬಿ ಬಿಡುವೆನು.

ಇನ್ನೊಮ್ಮೆ ಸಿಕ್ಕಾಗ ಮರೆಯಬೇಡ.
ಒಲವಿನಿಂದ
ಬಾನಾಡಿ

Saturday, December 8, 2007

ಪುಸ್ತಕದೊಳಗಿನ ಅಕ್ಷರಗಳು

ನೀನು ಕಳುಹಿಸಿದ ಪುಸ್ತಕ ಸಿಕ್ಕಿತು. ಅದು ಬರೇ ಪುಸ್ತಕವಾಗಿದ್ದರೆ ನಾನು ಅದರ ಬಗ್ಗೆ ಬರೇ ಥಾಂಕ್ಸ್ ಹೇಳಲು ಫೋನ್ ಮಾಡುತ್ತಿದ್ದೆ. ನನ್ನ ನಿನ್ನ ಜತೆಗಿನ ಅದೆಷ್ಟೋ ಕ್ಷಣಗಳನ್ನು ಆ ಪುಸ್ತಕ ಮಾತಾಡುತ್ತಿದ್ದುದರಿಂದ ನನಗೆ ನಿನ್ನನ್ನು ನೆನಪಿಸುವುದು ನಿನ್ನೊಡನೆ ನನ್ನನ್ನು ಮತ್ತೆ ತೆರೆದಿಡುವುದು ಅನಿವಾರ್ಯ ಅನಿಸುತ್ತಿದೆ. ಖಾಸಗಿ ಅಂಚೆಯಲ್ಲಿ ಅದನ್ನು ನೀನು ಕಳುಹಿಸಿದರೂ ಅದರೊಳಗಿನ ಪುಟಗಳು ನಮ್ಮೊಳಗಿನ ಖಾಸಗಿ ಕ್ಷಣಗಳನ್ನು ಮತ್ತೆ ಮತ್ತೆ ಓದಿ ಹೇಳುತ್ತಿದ್ದವು. ಮುಳಿಹುಲ್ಲಿನ ಗುಡ್ಡದ ಕಪ್ಪು ಬಂಡೆಯ ಮೇಲೆ ಕುಳಿತು ಎದುರಿನ ಗುಡ್ಡದಾಚೆಗಿರುವ ಅರಬ್ಬೀ ಸಮುದ್ರದಲ್ಲಿ ನಿಧಾನವಾಗಿ ಇಳಿಯುವ ಕೆಂಪು ಸೂರ್ಯ ನಿನ್ನ ಕೆನ್ನೆಯ ಗುಳಿಯಲ್ಲಿ ಮೂಡಿಸಿದ ಪ್ರತಿಫಲನದ ಚಿತ್ರಕ್ಕೆ ಬಣ್ಣ ಕೊಟ್ಟ ಕ್ಷಣಗಳು ಆ ಪುಸ್ತಕದಲ್ಲಿದ್ದವು. ಎಲ್ಲ ಬಿಟ್ಟು ಮುಂಬಯಿಗೋ ಗೋವಾಕ್ಕೋ ಮದ್ರಾಸಿಗೋ ಹೋಗೋಣವೆಂದು ಹೊರಟ ನಾನು ಸೀದಾ ಸೋಮೇಸ್ವರದ ಕಡಲಕರೆಯ ಬಂಡೆಮೇಲೆ ಕುಳಿತ್ತಿದ್ದಾಗ ಅದೆಲ್ಲಿಂದಲೋ ಬಂದ ನಿನ್ನನ್ನು ಕಂಡ ನಾನು ಬರೆದ ಟಿಪ್ಪಣಿಗಳು ಆ ಪುಸ್ತಕದಲ್ಲಿದ್ದವು. ಮತ್ತೆ ಎಷ್ಟೋ ದಿನಗಳು ನನಗೆ ಅರಬ್ಬಿ ಸಮುದ್ರವೇ ನನ್ನ ಎಲ್ಲವೂ ಆಗಿತ್ತು. ಅದರಲ್ಲಿ ಬರುವ ಒಂದೊಂದು ತೆರೆಯು ನನ್ನನ್ನು ಮಾತಾಡಿಸಿತ್ತು. ಆ ಮಾತುಗಳಿಗೆ ಅಕ್ಷರ ರೂಪ ಕೊಡಲು ಸಿಕ್ಕಿದ್ದು ಆ ಪುಸ್ತಕ. ಸಮುದ್ರದ ಏರಿಳಿತಗಳು ನನ್ನನ್ನು ಹತ್ತಿರ ಕರೆದು ಬದುಕಿನ ಪಾಠ ಹೇಳಿದ್ದವು.ನನ್ನ ಈ ಚಿಕ್ಕ ಪುಸ್ತಕವನ್ನು ನನ್ನ ಅಂತರಾಳದ ಒಂದಂಗವೆಂದೇ ತಿಳಿದಿದ್ದೆ. ಅದರೊಳಗಿನ ಅಕ್ಷರಗಳಿಗೆ ಅರ್ಥವನ್ನು ನಾನೊಬ್ಬನೇ ಅರಿತಿದ್ದೆ. ಆದರೆ ಆ ಪುಸ್ತಕ ನಿನಗೆ ಸಿಕ್ಕಿದಾಗ ನಾನು ನಿನಗೆ ಅರ್ಥವಾಗಿದ್ದೆ. ನೀನು ಆ ಅರ್ಥಗಳಿಗೆ ಶಬ್ದವಾಗಿದ್ದೆ. ನಿನ್ನಿಂದ ಆ ಪುಸ್ತಕ ಬಂದೊಡನೆ ಅದನ್ನು ಬಿಡಿಸಿದೆ. ಅದರಲ್ಲಿ ನಿನ್ನ ಕೈಯ ಬೆರಳುಗಳೆಡೆಯ ಬೆವರಿನ ಹನಿಗಳ ವಾಸನೆಯಿತ್ತು. ಆ ಕಂಪಿಗೆ ನಾನು ಎಲ್ಲೆಲ್ಲಾ ಓಡಿ ಬಂದೆ ಎನಿಸಿತು. ಈಚಲ ಕಾಡಿನ ಮಧ್ಯೆ ಗೇರು ಮರದಲ್ಲಿ ಮರಕೋತಿ ಆಡಿದ್ದರಿಂದ ಹಿಡಿದು, ಒಣಹುಲ್ಲುಗಳಿಗೆ ಬೆಂಕಿಕೊಟ್ಟು ಚಳಿಕಾಯಿಸುತ್ತಿದ್ದಾಗ ಬೆಂಕಿಗೆ ಬಿದ್ದು ಆದ ಗಾಯದ ನೆನಪಲ್ಲಿ ನೀನು ನನಗಿಟ್ಟ ಅಡ್ಡ ಹೆಸರು ಕೂಡ ನೆನಪಿಗೆ ಬಂತು.

ನನಗೆ ಪುಸ್ತಕ ಸಿಕ್ಕಿದೊಡನೆ ಅದರಲ್ಲಿ ನಾನು ಬರೆದಿಟ್ಟ ಹಳೆಯ ನೆನಪುಗಳನ್ನು ಕೆದಕುವಾಗೆಲ್ಲಾ ನನ್ನ ಜತೆಗಿದ್ದುದು ನೀನು. ನಿನ್ನಲ್ಲಿ ನಾನು ಹೇಳಿದ್ದನ್ನು, ಹೇಳದೇ ಇದ್ದುದ್ದನ್ನು, ಮತ್ತೆ ಮತ್ತೆ ನೀನು ಕೇಳಿದಾಗ ಹೇಳಿದನ್ನು ಎಲ್ಲವನ್ನು ನಾನು ನೆನಪಿಸಿದೆ. ಆ ಸಂಜೆ ನಿನ್ನನ್ನು ಬಿಡಲೆಂದು ನಿನ್ನ ಮನೆಗೆ ಬಂದ ನನಗೆ ನಿನ್ನಮ್ಮ ಕೊಟ್ಟ ದೋಸೆಯ ನೆನಪು.

ಮತ್ತೆ ಅದೇ ಪುಸ್ತಕದ ಖಾಲಿ ಹಾಳೆಗಳಿಗೆ ಅಕ್ಷರಗಳನ್ನು ಮೂಡಿಸಲು ನೋಡುತ್ತೇನೆ. ಅಕ್ಷರಗಳು ಅಳಿಯವು. ಅವುಗಳು ಅರ್ಥವನ್ನು ಕೊಡಬಹುದು. ಇಂದಲ್ಲ. ನಾಳೆ.

ನನಗೇನು ಗೊತ್ತು. ನಿನಗೇನು ಗೊತ್ತು. ಹೊಸತು ಹಳತಾಗಿದೆ. ಹಳತು ಮತ್ತೆ ಹೊಸತಾಗಿದೆ. ಉರುಳಿದ ಎಲೆಗಳಿಗೆ
ಜೀವ ಕೊಟ್ಟು ಹಸಿರನ್ನು ಕಾಣಬೇಕಿದೆ.
ಕನಸಿನಲ್ಲಿ ಬಂದ ಮೊಲಗಳು ಬೆಳಗ್ಗೆ ಎದ್ದೊಡನೆ ಹೊಲದಾಚೆ ಸತ್ತು ಬಿದ್ದಿದೆ. ನೆನಪಿನೊಂದಿಗೆ.
ಒಲವಿನಿಂದ
ಬಾನಾಡಿ

Sunday, December 2, 2007

ಸಂತೃಪ್ತ

ಬೇಸಿಗೆಯಲ್ಲಿ ಸಣ್ಣಗೆ ಹರಿಯುವ ನದಿ. ಮಳೆಗಾಲದಲ್ಲಿ ಉಕ್ಕಿ ಹರಿಯುವುದು. ಋತುಗಳು ಬದಲಾಗುವುದನ್ನು ಹಕ್ಕಿಗಳು, ಮರಗಳು, ಗಿಡಗಳು, ಪೈರು, ಹಣ್ಣು ಹಂಪಲು, ತರಕಾರಿ, ಬಾವಲಿಗಳು, ಗೂಬೆಗಳು, ಗಿಳಿಗಳು ತಮ್ಮಷ್ಟಕ್ಕೆ ಹೇಳಿ ಹೋಗುತ್ತವೆ. ಶುನಕಗಳಂತು ತಮ್ಮ ಪ್ರೇಮೋತ್ಕರ್ಷವನ್ನು ಒಂದು ಋತುವಿಗೆ ಸೀಮಿತಗೊಳಿಸುತ್ತವೆ. ನಿನ್ನೆಯ ಚಳಿ ಎಷ್ಟಿತ್ತು, ನಾಳೆಯ ಚಳಿ ಏನಾಗಬಹುದು ಎಂಬ ವಿಚಾರಕ್ಕೆ ಟೀವಿ, ಪೇಪರು, ಇಂಟರ್‍‍ನೆಟ್‍ಗಳ ಮೊರೆ ಹೋಗಬೇಕಿಲ್ಲ. ತನ್ನಷ್ಟಕ್ಕೇ ಅವುಗಳ ಮಾಹಿತಿಗಳು ಬೇಕಾದಷ್ಟು ಬೇಕಾದಂತೆ ಬಂದು ಬಿಡುತ್ತವೆ. ಈ ಪ್ರಕೃತಿಯ ಸೆರಗಿನಲ್ಲಿದ್ದುಕೊಂಡೇ ಅದರ ಆಳವನ್ನು, ಅರ್ಥಗಳನ್ನು ಹುಡುಕುತ್ತಾ ಅವನ್ನು ಬದುಕಿನ ಒಳಗೆಯೂ ಹುಡುಕುತ್ತಾ ಇರುವವರ ಲೋಕದ ಬಗ್ಗೆ ನನಗೆ ಹೆಮ್ಮೆ. ಕೆಲವೊಮ್ಮೆ ಅವೆಲ್ಲವನ್ನೂ ಮುಟ್ಟಿ ನೋಡಿ ಮತ್ತೆ ಅವೆಲ್ಲವನ್ನೂ ಕಳಕೊಂಡು ಎಲ್ಲೋ ಮಹಾನಗರದ ಅದೆಷ್ಟೋ ಸಂಖ್ಯೆಗಳ ಬಹುಮಹಡಿ ಕಟ್ಟಡಗಳ ಬಹು ಮನೆಗಳಲ್ಲಿ ಒಂದಾದ ನಮ್ಮದೇ ಗೂಡಿನಲ್ಲಿ ಕುಳಿತು ಮುಂಜಾವಿನ ಸೂರ್ಯನ ನೆತ್ತರ ಓಕುಳಿಯನ್ನು ನೋಡಲೂ ಆಗದ ಮನಸಿನಲ್ಲಿದ್ದಾಗ ವ್ಯಥೆ. ಬೇಸರ.