Tuesday, July 17, 2007

ನಿಲ್ಲದ ಮಾತು

ಅವಳಿಗೆ ಫೋನ್‌ ಮಾಡಿದರೆ ಅದಕ್ಕಾಗೆ ಕಾದು ಕುಳಿತ್ತಂತೆ ಒಂದೇ ಬೆಲ್‌ಗೆ ಎತ್ತಿದಳು. ಇಷ್ಟೊತ್ತಿನಲ್ಲಿ ಅವಳು ಫೋನ್ ಹತ್ತಿರ ಕುಳಿತು ಕಾಯುತ್ತಿರುವ ಸಮಯವಲ್ಲ. ನಾನು ಫೋನ್ ಮಾಡಿಲ್ಲವೆಂದು ದುಃಖದಲ್ಲಿದ್ದಾಳಂತೆ. ಅಯ್ಯೋ ನಾನು ನಿನ್ನೆ ಫೋನ್ ಮಾಡಿದ್ದೆನಲ್ಲಾ! ನಿನ್ನೆ ಅವಳಿಗೆ ಮೊನ್ನೆ, ಆ ಮೊನ್ನೆಯಂತೆ ಆಗಿದೆ. ಯಾಕೆ? ಬೇಸರವೇ? ಕೆಲಸವೇನೂ ಇಲ್ಲವಾ? ಫೋನ್ ಮಾಡಿದ್ದು ನಾನು ಮಾತಾಡಲೆಂದು. ಹಲೋ ಎಂಬ ಒಂದು ಮಾತು ಬಿಟ್ಟರೆ ಉಳಿದಂತೆ ನಾನು ಅವಳಿಗೆ ಕಿವಿಯಾಗಿಯೇ ಇದ್ದೆ. ಮಾತು, ಮಾತು, ಮಾತು. ನನಗೂ ಮಾತಾಡಲು ಬಹಳವಿತ್ತು. ಯಾಕೆ ನನ್ನನ್ನು ಮಾತಾಡಲು ಬಿಟ್ಟಿಲ್ಲ. ನನಗೂ ಸಿಟ್ಟು ಬರಬೇಡವೇ? ಇನ್ನು ಮುಂದೆ ಫೋನೇ ಮಾಡುವುದಿಲ್ಲ ಎಂದು ಹೇಳಬೇಕಿತ್ತೇ?

ಬಸ್ಸಿನಲ್ಲೂ ಹಾಗೇನೆ. ಇಬ್ಬರಿಗೂ ಒಂದೇ ಸೀಟು ಸಿಕ್ಕರಂತು ನಾವು ಇಳಿಯುವ ಸ್ಟಾಪ್ ಬಂದರೂ ಇಳಿಯದಷ್ಟು ಮಾತು. ಈ ಮಾತಿನ ಅರಗಿಣಿ ಒಂದು ದಿನ ಮಾತ್ರ ಮಾತಿಲ್ಲದೆ ಗೂಬೆ ತರ ಇದ್ದಳು. ಅವತ್ತು ಸೋಮವಾರ. ಅದರ ಹಿಂದಿನ ಶನಿವಾರ ನಾನು ಮತ್ತು ಶಿವ ಸಿನಿಮಾಕ್ಕೆ ಹೋಗಿದ್ದ ಸುದ್ದಿ ಎಲ್ಲರಿಗೂ ಶಿವನೇ ಪ್ರಚಾರಮಾಡಿದ್ದ. ಅವಳಿಗೂ ಅದು ಗೊತ್ತಾಯಿತು. ಸಂಜೆಯ ಮೂರುಗಂಟೆಯ ಷೋಗೆ ನಾವು ಎರಡು ಗಂಟೆಗೇ ಹೋಗಿ ಬರುವಾಗ ಏಳು ಗಂಟೆ ಕಳೆದಿರಬೇಕು. ಪ್ರತಿ ಶನಿವಾರದ ಸಂಜೆಗಳಂತೆ ಆ ಶನಿವಾರ ಯಾರೂ ಗುಳಿಗ ತಾಣದ ಹತ್ತಿರದ ಗೋಳಿಮರದ ಕಟ್ಟೆಗೆ ಬರಲ್ಲಿಲ್ಲ. ಅವಳು ಮಾತ್ರ ಬಂದು ಅಲ್ಲಿ ಗಂಟೆಗಟ್ಟಲೇ ಕಾದು ಹೋಗಿದ್ದಳು. ಮೀನು ಮಾರುವ ಚೆಲ್ಲಿಯಮ್ಮನಿಂದ ಮೀನು ಕೂಡ ಕಟ್ಟಿಸಿಕೊಂಡು ಹೋಗಬೇಕಾಯಿತು ಅವಳಿಗೆ. ಸಂಜೆಯ ಕೊನೆಯ ಬಸ್ಸು ಹೊರಟಿತು, ಚೆಲ್ಲಿಯಮ್ಮನಿಗೆ ಹೋಗಬೇಕು, ಹಾಗಾಗಿ ಉಳಿದ ಮೀನನ್ನು ಇವಳಿಗೆ ಕೊಟ್ಟು ಚೆಲ್ಲಿಯಮ್ಮ ಬಸ್ಸು ಹತ್ತಿದಳು. ಮನೆಗೆ ಬಂದು ಮೀನನ್ನು ಕೊಯ್ದು, ಅದನ್ನು ಅಡುಗೆಗೆ ತಯಾರಿಸುವುದರಲ್ಲಿ, ಅದಕ್ಕೆ ಮಸಾಲೆಯನ್ನು ಅರೆಯಲು ಕೂಡ ಅವಳ ಅಮ್ಮ ಅವಳಿಗೇ ಹೇಳಿದರಂತೆ. ನಮ್ಮನ್ನೆಲ್ಲಾ ಮಸಾಲೆಯೆಂದು ತಿಳಿದು ಚೆನ್ನಾಗಿ ಅರೆದಿರಬೇಕು ಎಂದು ನಾವು ತಮಾಷೆಮಾಡಿದಾಗ ಅವಳಿಗೆ ಕೋಪಬಂತು. ನಮ್ಮಳೊಬ್ಬ ಅವಳೊಡನೆ 'ಅರೆದ ಮಸಾಲೆಯ ಘಾಟು ಇನ್ನೂ ಇದೆ. ನೋಡವಳ ಮುಖ. ಕೆಂಪಾಗಿದೆ' ಎಂದಾಗ ಅವಳ ಕಣ್ಣಲ್ಲಿ ನೀರು ಬಂತೇ ಎಂದು ನಾನು ಅವಳ ಕಣ್ಣುಗಳಲ್ಲಿ ನನ್ನ ಕಣ್ಣುಗಳನ್ನು ಹೂಡಿದೆ. ಅವಳು ಅದರ ನಂತರ ನನ್ನಲ್ಲಿ ಮಾತಾಡಲಿಲ್ಲ. ಅವಳಿಗೆ ಕೋಪ. ನಾವು ಮಾತ್ರವೇ ಸಿನಿಮಾಕ್ಕೆ ಹೋದೆವೆಂದು. ನಾವು ಕಟ್ಟೆಗೆ ಬರುವುದಿಲ್ಲ ಎಂದು ಅವಳಲ್ಲಿ ಹೇಳಲ್ಲಿಲ್ಲವೆಂದು. ಜತೆಗೆ ಮತ್ತೆ ಸಿಕ್ಕಾಗ ಅವಳ ಜತೆ ನಾವೆಲ್ಲ ಸೇರಿ ಅವಳನ್ನು ಗೋಳು ಹೊಯ್ದಿದ್ದು. ಅಪಾದನೆಗಳು ಪಟ್ಟಿಯಾದವು. ನಾವು ಅಪರಾಧಿಗಳೆಂದು ಒಪ್ಪಿಕೊಂಡೆವು. ಅಂತು ಒಮ್ಮೆಯಾದರೂ
ಅವಳ ಬಾಯಿ ಮುಚ್ಚಿಸುವಲ್ಲಿ ನಾವು ಯಶಸ್ವಿಯಾದೆವೆಂದು ನಮ್ಮ ನಮ್ಮಲ್ಲೇ ಮಾತಾಡಿದೆವು. ಅದು ಅವಳ ಕಿವಿಗೆ ಬಿತ್ತೇನೋ ಎಂಬಂತೆ ಅವಳು ಮತ್ತೆ ನಮ್ಮೊಡನೆ ಮಾತಿಗಿಳಿದಳು. ನಂತರ ಎಂದೂ ಮಾತು ಮುಗಿಯಲ್ಲಿಲ್ಲ. ಇಂದು ಕೂಡಾ.

ಮುಗಿಯದ ಮಾತುಗಳಲ್ಲಿ ಆಡದ ಮಾತುಗಳೇ ಜಾಸ್ತಿ. ಗಂಟೆಗಟ್ಟಲೇ ಮಾತಾಡಿದರೂ ಮುಂದಿನ ಸಲ ಸಿಗುವಾಗ ಹಿಂದಿನ ಸಲ ಹೇಳಲಾಗಿಲ್ಲ ಎಂಬಲ್ಲಿಂದ ಮಾತು ಮತ್ತೆ ಮುಂದುವರಿಯುತ್ತದೆ. ನಿಲ್ಲದ ಧಾರಾವಾಹಿ. ನಾನು ಕೂಡ ಮತ್ತೆ ಮಾತು ಮುಂದುವರಿಸುವೆ.

ಭರವಸೆಯೊಂದಿಗೆ

ಒಲವಿನಿಂದ
ಬಾನಾಡಿ

3 comments:

 1. ಸದ್ಯ, ನಿಮ್ಮ ಕಥೆಯನ್ನು ಇಷ್ಟೊರೊಳಗೇ ಓದಿಕೊಂಡು ಬಿಟ್ಟೆ, ಇಲ್ಲವೆಂದಾದರೆ ಇನ್ನೊಂದೆರಡು ಎಪಿಸೋಡುಗಳು ಬಂದು ಮಧ್ಯೆ ಬ್ರೇಕ್ ಆಗುತ್ತಿತ್ತು! ಚೆನ್ನಾಗಿ ಬರ್ತಾ ಇದೆ ಕಥೆ, ಮುಂದುವರೆಸಿ...
  ಬಾನಾಡಿಯ ಹಾರಾಟ ಹಾಗೇ ಮುಂದುವರೆಯಲಿ, ಹಾರುತ್ತಾ ಹಾರುತ್ತಾ ನೀವೇನಾದ್ರೂ ಅಮೇರಿಕೆಗೆ ಬಂದರೆ ಇಲ್ಲಿ ವರ್ಷದ ಆರು ತಿಂಗಳ ಛಳಿಯಲ್ಲಿ ಹಾರದೇ ಒಳಗೇ ಕೂತಿರಬೇಕಾಗಿ ಬರಬಹುದು! :-)

  ReplyDelete
 2. ನಿಮ್ಮ ಬರಹಗಳು ಚೆನ್ನಾಗಿವೆ.. ಬಾನಾಡಿ ಹಾರಾಟ ಹೀಗೆ ಮುಂದುವರೆಯಲಿ..

  ReplyDelete
 3. ತಾವ್ಯಾರು ಅಂತ ತಿಳೀಲಿಲ್ಲ ಮಾರಾಯ್ರೇ. ನನ್ನೂರಿನ ಆಸುಪಾಸಿನ ಬಗ್ಗೆ ಬರೆದಿದ್ದೀರ. ತಾವ್ಯಾರು ಅಂತ ತಿಳೀಬಹುದಾ?

  ReplyDelete