Saturday, July 28, 2007

ಹುಡುಕುವುದು ಎಲ್ಲಿ?

ಆ ಬೆಟ್ಟದ ಬದಿಯಲ್ಲಿ ನಡೆದು ಕೊಂಡು ಹೋಗುವಾಗ ಅಲ್ಲೊಂದು ಕಣಿವೆ ಸಿಗುತ್ತದೆ. ಅದರ ಬದಿಗೇ ಒಂದು ಗುಹೆಯಂತಹ ಸ್ಥಳವಿದೆ. ಅಲ್ಲಿ ಹಿಂದೆ ಹುಲಿಗಳಿರುತ್ತಿದ್ದವೆಂದು ಹೇಳುತ್ತಿದ್ದರು. ಹುಲಿಗಳು ಬಂದು ಅವರ ಹಟ್ಟಿಯಿಂದ ದನಗಳನ್ನು ತಿನ್ನಬಹುದೆಂಬ ಹೆದರಿಕೆ ಅವರಿಗೆ. ಗುಡ್ಡಕ್ಕೆ ಮೇಯಲು ಹೋದ ದನಗಳು ಬರದಿದ್ದರೆ ಅವನ್ನು ಹುಲಿ ತಿಂದಿರಬೇಕೆಂದೆ ಜನ ನಂಬುತ್ತಿದ್ದರು. ನನಗೆ "ಗೋವಿನ ಹಾಡು" ಕೇಳಿದಾಗ ಆ ಬೆಟ್ಟ, ಅಲ್ಲಿ ಇದ್ದಿರಬಹುದಾದ ಹುಲಿ, ಊರಿನ ಜನ, ಹಟ್ಟಿ, ದನ ಎಲ್ಲಾ ಮನಸ್ಸಿನಲ್ಲಿ ಮೂಡುತ್ತದೆ. ಅಂತಹ ಜಾಗವದು.

ಅವರು ಈಗ ಅಲ್ಲಿಂದ ಜಾಗ ಬಿಟ್ಟು ಬೇರೆಡೆ ಹೋಗಿದ್ದಾರೆ. ಅಲ್ಲಿ ಈಗ ಯಾರು ಇಲ್ಲ. ಆಕೆ ಐದು ಹೆಣ್ಣು ಮತ್ತು ಎರಡು ಗಂಡು ಮಕ್ಕಳಲ್ಲಿ ಕೊನೆಯವಳು. ಬಡತನ ಮತ್ತು ಅವಿದ್ಯೆ ಎಲ್ಲವುಗಳ ಅಡಿಪಾಯವಾಗಿತ್ತು. ಅವಳಿಗೆ ಒಂದು ಕಣ್ಣು ಕೂಡ ಇರಲ್ಲಿಲ್ಲ. ವಯಸ್ಸಿಗೆ ಬಂದರೂ ಮದುವೆಯಾಗಿಲ್ಲ. ಅವಳ ಎಲ್ಲರಿಗಿಂತಲೂ ದೊಡ್ಡ ಅಕ್ಕ ತನ್ನ ನಾಲ್ಕನೆಯ ಹೆರಿಗೆಯಲ್ಲಿ ಮಗು ಜತೆ ತೀರಿದಾಗ, ಅವಳ ಭಾವನನ್ನೇ ಮದುವೆಯಾಗಬೇಕಾಯಿತು. ಮದುವೆಯಂತಹ ಸಡಗರವಲ್ಲ. ಭಾವನಿಗೆ ಎರಡನೆ ಮದುವೆ. ಅವಳಿಗೆ ಆತನನ್ನು ಮದುವೆಯಾಗುವ ಮನಸ್ಸೇನೂ ಇರಲ್ಲಿಲ್ಲ. ಅವಳಿಗೆ ಅದರ ಸಂಭ್ರಮ ಸಿಗಬೇಕೆನ್ನುವವರು ಯಾರೂ ಇಲ್ಲ. ಭಾವನ ಮಕ್ಕಳು ಸಣ್ಣವರಿದ್ದರು. ಅವರೂ ಒತ್ತಾಯಿಸಿದರು. ಚಿಕ್ಕಮ್ಮ ನಾವು ತಾಯಿಯನ್ನು ಕಳಕೊಂಡೆವು. ನೀನಾದರು ಬಂದು ನಮ್ಮನ್ನು ಬೆಳೆಸು ಎಂದು.

ಯಾರದೋ ಮನೆಗಳಲ್ಲಿ ಮಕ್ಕಳನ್ನು ನೋಡುತ್ತಿರುವವಳು ಮಕ್ಕಳ ತಾಯಿಯಾದಳು. ಮೊದಲೆರಡು ಹೆಣ್ಣಾದರೆ ಮತ್ತಿನದು ಗಂಡು. ಮತ್ತೆ ಒಂದು ಹೆತ್ತಳು. ಮಗು ಉಳಿಯಲ್ಲಿಲ್ಲ. ಮತ್ತೊಮ್ಮೆ ಗರ್ಭಿಣಿಯಾದಳು. ಗಂಡ ಮುದುಕನಾಗುತ್ತಿದ್ದಾನೆ. ಇನ್ಯಾಕೆ ಮಕ್ಕಳು ಎಂದು ಗರ್ಭಪಾತ ಮಾಡಿಸಿಕೊಂಡಳು. ಮತ್ತೆ ಕೆಲವೇ ವರ್ಷಗಳಲ್ಲಿ ಗಂಡನೂ ತೀರಿಕೊಂಡನು. ಗಂಡನ ಮೊದಲ ಹೆಂಡತಿಯ ಮಕ್ಕಳು ಮದುವೆಯಾಗಿ ಅವರ ಹೆಂಡತಿಯರೂ ಬಂದಿದ್ದಾರೆ. ತನ್ನ ಮಕ್ಕಳು ಚಿಕ್ಕವರು. ಅವರ ವಿದ್ಯೆ, ಮದುವೆ. ಕನಸುಗಳು ಹಲವು. ಕುಟುಂಬ ದೊಡ್ಡದು. ಬಡತನ ಮತ್ತೆ ಅವಿದ್ಯೆ. ಹೇಳುವವರು ಹಲವರು. ಯಾವುದನ್ನು ತೆಗೆದುಕೊಳ್ಳಬೇಕೆಂದು ಅವಳಿಗೂ ಗೊತ್ತಿಲ್ಲ. ಇಂತಹದರಲ್ಲೇ ಅವಳು ಬೆಳೆದಳು. ತೋಟ, ಗದ್ದೆ ಎಂದು ಮೈ ಮುರಿದು ದುಡಿದಳು. ದಣಿದ ಮೈಗೆ ರೋಗ ಬೇಗನೆ ಹಿಡಿಯುವುದು. ಮದ್ದು ನಾಟುವುದಿಲ್ಲ.

ಹೆಣ್ಣು ಮಕ್ಕಳಿಗೆ ಮದುವೆಯಾಗಿ ಅವರು ಮನೆಯಿಂದ ಹೋದರು. ಮಗ ಊರಲ್ಲಿ ನಿಲ್ಲುವುದಿಲ್ಲ ವೆಂದು ಎಲ್ಲೆಲ್ಲೋ ಅಳೆದ. ಕೆಲಸ ಅದು ಇದು ಎಂದು ಪರವೂರಿನವನಾದ. ವರ್ಷಕ್ಕೊಮ್ಮೆ ಬಂದರೆ ಭಾಗ್ಯ. ವಯಸ್ಸು ಓಡುತ್ತಿದೆ. ರೋಗ ರುಜಿನಗಳು ಅಪ್ಪುತ್ತವೆ. ಹತ್ತಿರದವರು ಯಾರು? ಹುಡುಕುತ್ತಿದ್ದಾಳೆ. ಮನಸ್ಸಿಗೆ ಬಂದದ್ದನ್ನೆಲ್ಲಾ ದೊಡ್ಡದಾಗಿ ಆಡುತ್ತಾಳೆ. ಅವಳ ಒಳಗೇನೂ ಇಲ್ಲ. ತೀರಿ ಹೋದ ಅಪ್ಪ ಅಮ್ಮ, ಜಗಳಾಡಿ ಮಾತೇ ಆಡದ ಅಣ್ಣ, ಊರಲ್ಲಿರದ ಮಗ - ಊರುಗೋಲು ಯಾರೆಂದು ಹುಡುಕುತ್ತಿದ್ದಾಳೆ.
ನಾನು ಅವಳಿಗೆ ಮಗನಾದರೂ ಆಗಬಾರದೇ?

ಒಲವಿನಿಂದ
ಬಾನಾಡಿ

Tuesday, July 17, 2007

ನಿಲ್ಲದ ಮಾತು

ಅವಳಿಗೆ ಫೋನ್‌ ಮಾಡಿದರೆ ಅದಕ್ಕಾಗೆ ಕಾದು ಕುಳಿತ್ತಂತೆ ಒಂದೇ ಬೆಲ್‌ಗೆ ಎತ್ತಿದಳು. ಇಷ್ಟೊತ್ತಿನಲ್ಲಿ ಅವಳು ಫೋನ್ ಹತ್ತಿರ ಕುಳಿತು ಕಾಯುತ್ತಿರುವ ಸಮಯವಲ್ಲ. ನಾನು ಫೋನ್ ಮಾಡಿಲ್ಲವೆಂದು ದುಃಖದಲ್ಲಿದ್ದಾಳಂತೆ. ಅಯ್ಯೋ ನಾನು ನಿನ್ನೆ ಫೋನ್ ಮಾಡಿದ್ದೆನಲ್ಲಾ! ನಿನ್ನೆ ಅವಳಿಗೆ ಮೊನ್ನೆ, ಆ ಮೊನ್ನೆಯಂತೆ ಆಗಿದೆ. ಯಾಕೆ? ಬೇಸರವೇ? ಕೆಲಸವೇನೂ ಇಲ್ಲವಾ? ಫೋನ್ ಮಾಡಿದ್ದು ನಾನು ಮಾತಾಡಲೆಂದು. ಹಲೋ ಎಂಬ ಒಂದು ಮಾತು ಬಿಟ್ಟರೆ ಉಳಿದಂತೆ ನಾನು ಅವಳಿಗೆ ಕಿವಿಯಾಗಿಯೇ ಇದ್ದೆ. ಮಾತು, ಮಾತು, ಮಾತು. ನನಗೂ ಮಾತಾಡಲು ಬಹಳವಿತ್ತು. ಯಾಕೆ ನನ್ನನ್ನು ಮಾತಾಡಲು ಬಿಟ್ಟಿಲ್ಲ. ನನಗೂ ಸಿಟ್ಟು ಬರಬೇಡವೇ? ಇನ್ನು ಮುಂದೆ ಫೋನೇ ಮಾಡುವುದಿಲ್ಲ ಎಂದು ಹೇಳಬೇಕಿತ್ತೇ?

ಬಸ್ಸಿನಲ್ಲೂ ಹಾಗೇನೆ. ಇಬ್ಬರಿಗೂ ಒಂದೇ ಸೀಟು ಸಿಕ್ಕರಂತು ನಾವು ಇಳಿಯುವ ಸ್ಟಾಪ್ ಬಂದರೂ ಇಳಿಯದಷ್ಟು ಮಾತು. ಈ ಮಾತಿನ ಅರಗಿಣಿ ಒಂದು ದಿನ ಮಾತ್ರ ಮಾತಿಲ್ಲದೆ ಗೂಬೆ ತರ ಇದ್ದಳು. ಅವತ್ತು ಸೋಮವಾರ. ಅದರ ಹಿಂದಿನ ಶನಿವಾರ ನಾನು ಮತ್ತು ಶಿವ ಸಿನಿಮಾಕ್ಕೆ ಹೋಗಿದ್ದ ಸುದ್ದಿ ಎಲ್ಲರಿಗೂ ಶಿವನೇ ಪ್ರಚಾರಮಾಡಿದ್ದ. ಅವಳಿಗೂ ಅದು ಗೊತ್ತಾಯಿತು. ಸಂಜೆಯ ಮೂರುಗಂಟೆಯ ಷೋಗೆ ನಾವು ಎರಡು ಗಂಟೆಗೇ ಹೋಗಿ ಬರುವಾಗ ಏಳು ಗಂಟೆ ಕಳೆದಿರಬೇಕು. ಪ್ರತಿ ಶನಿವಾರದ ಸಂಜೆಗಳಂತೆ ಆ ಶನಿವಾರ ಯಾರೂ ಗುಳಿಗ ತಾಣದ ಹತ್ತಿರದ ಗೋಳಿಮರದ ಕಟ್ಟೆಗೆ ಬರಲ್ಲಿಲ್ಲ. ಅವಳು ಮಾತ್ರ ಬಂದು ಅಲ್ಲಿ ಗಂಟೆಗಟ್ಟಲೇ ಕಾದು ಹೋಗಿದ್ದಳು. ಮೀನು ಮಾರುವ ಚೆಲ್ಲಿಯಮ್ಮನಿಂದ ಮೀನು ಕೂಡ ಕಟ್ಟಿಸಿಕೊಂಡು ಹೋಗಬೇಕಾಯಿತು ಅವಳಿಗೆ. ಸಂಜೆಯ ಕೊನೆಯ ಬಸ್ಸು ಹೊರಟಿತು, ಚೆಲ್ಲಿಯಮ್ಮನಿಗೆ ಹೋಗಬೇಕು, ಹಾಗಾಗಿ ಉಳಿದ ಮೀನನ್ನು ಇವಳಿಗೆ ಕೊಟ್ಟು ಚೆಲ್ಲಿಯಮ್ಮ ಬಸ್ಸು ಹತ್ತಿದಳು. ಮನೆಗೆ ಬಂದು ಮೀನನ್ನು ಕೊಯ್ದು, ಅದನ್ನು ಅಡುಗೆಗೆ ತಯಾರಿಸುವುದರಲ್ಲಿ, ಅದಕ್ಕೆ ಮಸಾಲೆಯನ್ನು ಅರೆಯಲು ಕೂಡ ಅವಳ ಅಮ್ಮ ಅವಳಿಗೇ ಹೇಳಿದರಂತೆ. ನಮ್ಮನ್ನೆಲ್ಲಾ ಮಸಾಲೆಯೆಂದು ತಿಳಿದು ಚೆನ್ನಾಗಿ ಅರೆದಿರಬೇಕು ಎಂದು ನಾವು ತಮಾಷೆಮಾಡಿದಾಗ ಅವಳಿಗೆ ಕೋಪಬಂತು. ನಮ್ಮಳೊಬ್ಬ ಅವಳೊಡನೆ 'ಅರೆದ ಮಸಾಲೆಯ ಘಾಟು ಇನ್ನೂ ಇದೆ. ನೋಡವಳ ಮುಖ. ಕೆಂಪಾಗಿದೆ' ಎಂದಾಗ ಅವಳ ಕಣ್ಣಲ್ಲಿ ನೀರು ಬಂತೇ ಎಂದು ನಾನು ಅವಳ ಕಣ್ಣುಗಳಲ್ಲಿ ನನ್ನ ಕಣ್ಣುಗಳನ್ನು ಹೂಡಿದೆ. ಅವಳು ಅದರ ನಂತರ ನನ್ನಲ್ಲಿ ಮಾತಾಡಲಿಲ್ಲ. ಅವಳಿಗೆ ಕೋಪ. ನಾವು ಮಾತ್ರವೇ ಸಿನಿಮಾಕ್ಕೆ ಹೋದೆವೆಂದು. ನಾವು ಕಟ್ಟೆಗೆ ಬರುವುದಿಲ್ಲ ಎಂದು ಅವಳಲ್ಲಿ ಹೇಳಲ್ಲಿಲ್ಲವೆಂದು. ಜತೆಗೆ ಮತ್ತೆ ಸಿಕ್ಕಾಗ ಅವಳ ಜತೆ ನಾವೆಲ್ಲ ಸೇರಿ ಅವಳನ್ನು ಗೋಳು ಹೊಯ್ದಿದ್ದು. ಅಪಾದನೆಗಳು ಪಟ್ಟಿಯಾದವು. ನಾವು ಅಪರಾಧಿಗಳೆಂದು ಒಪ್ಪಿಕೊಂಡೆವು. ಅಂತು ಒಮ್ಮೆಯಾದರೂ
ಅವಳ ಬಾಯಿ ಮುಚ್ಚಿಸುವಲ್ಲಿ ನಾವು ಯಶಸ್ವಿಯಾದೆವೆಂದು ನಮ್ಮ ನಮ್ಮಲ್ಲೇ ಮಾತಾಡಿದೆವು. ಅದು ಅವಳ ಕಿವಿಗೆ ಬಿತ್ತೇನೋ ಎಂಬಂತೆ ಅವಳು ಮತ್ತೆ ನಮ್ಮೊಡನೆ ಮಾತಿಗಿಳಿದಳು. ನಂತರ ಎಂದೂ ಮಾತು ಮುಗಿಯಲ್ಲಿಲ್ಲ. ಇಂದು ಕೂಡಾ.

ಮುಗಿಯದ ಮಾತುಗಳಲ್ಲಿ ಆಡದ ಮಾತುಗಳೇ ಜಾಸ್ತಿ. ಗಂಟೆಗಟ್ಟಲೇ ಮಾತಾಡಿದರೂ ಮುಂದಿನ ಸಲ ಸಿಗುವಾಗ ಹಿಂದಿನ ಸಲ ಹೇಳಲಾಗಿಲ್ಲ ಎಂಬಲ್ಲಿಂದ ಮಾತು ಮತ್ತೆ ಮುಂದುವರಿಯುತ್ತದೆ. ನಿಲ್ಲದ ಧಾರಾವಾಹಿ. ನಾನು ಕೂಡ ಮತ್ತೆ ಮಾತು ಮುಂದುವರಿಸುವೆ.

ಭರವಸೆಯೊಂದಿಗೆ

ಒಲವಿನಿಂದ
ಬಾನಾಡಿ

Saturday, July 14, 2007

ಮತ್ತೊಮ್ಮೆ ನೆನೆದೆವು

ಹಿತ್ತಿಲ ಮರೆಯಲ್ಲಿದ್ದ ಆ ಹೂವಿನ ಗಿಡದಲ್ಲಿ ಹೂವಾಗುವುದು ಯಾರಿಗೂ ಗೊತ್ತೇ ಆಗುತ್ತಿರಲ್ಲಿಲ್ಲ. ಆದರೆ ಅವಳಿಗೆ ಆ ಹೂವಿನ ಗಿಡ ಮತ್ತು ಅಲ್ಲಿ ಅರಳುವ ಹೂವುಗಳು ಅಂದರೆ ಬಲು ಪ್ರೀತಿ. ಅದಕ್ಕಾಗಿಯೇ ಎಂಬಂತೆ ಅವಳು ಕಾದು ಕುಳಿತು ಕೊಳ್ಳುತ್ತಿದ್ದಳು. ಅವಳಿಗೆ ಆ ಹೂವಿನ ಗಿಡ ಮತ್ತು ಅದರಲ್ಲಿ ಅರಳುತ್ತಿರುವ ಹೂವುಗಳೇ ಒಂದು ಬಗೆಯ ಸ್ನೇಹಿತೆಯರು. ಅವಳೂ ಕೂಡ ಆ ಹೂವಿನಗಿಡದಂತೆ. ಮನೆಯಲ್ಲಿದ್ದರೂ ಮರೆಯಲ್ಲಿರುತ್ತಿದ್ದಳ. ಅವಳು ಮನೆಯಲ್ಲಿರುವ ವಿಷಯ ಹೊರಗಿನವರು ಯಾರಾದರೂ ಬಂದರೆ ಗೊತ್ತಾಗುತ್ತಿರಲ್ಲಿಲ್ಲ. ಅವಳಿದ್ದಾಳೆಂದರೆ ಮಾತ್ರ ಗೊತ್ತು. ಅಥವಾ ನಮ್ಮಂತಹವರು ಅವಳ ಬಗ್ಗೆ ಕುತೂಹಲವಿರಿಸಿ ಅವಳ ಮನೆಗೆ ಬಂದರೆ ಅವಳು ಅಕಸ್ಮಾತಾಗಿ ಸಿಕ್ಕರೆ ಅವಳ ಇರುವಿಕೆಯ ಅರಿವಾಗುತ್ತಿತ್ತು.

ನದಿಯ ಬದಿಗೆ ಈಜಳು ಹೊರಟ ಹುಡುಗರ ಗುಂಪಿಗೆ ಅವಳು ಸಿಕ್ಕಿದರೆ ಖಂಡಿತಾ ಅವಳು ಅವರ ಜತೆ ಸೇರುತ್ತಾಳೆ. ಬೇಸಗೆಯ ಬಿಸಿಲಿಗೆ ಮುದ ನೀಡುವ ನದಿಯ ನೀರಿನಲ್ಲಿ ಈಜಾಡುತ್ತಾ ಕಾಲ ಕಳೆಯುವುದು ಅವಳಿಗೂ ಇಷ್ಟ. ಹುಡುಗರಾದರೋ ಬೆಳಗಿನಿಂದ ಸಂಜೆಯ ವರೆಗೆ ನದಿಯ ಬದಿಯಲ್ಲೇ ಕಾಲ ಕಳೆಯಲೆಂದೇ ಹುಟ್ಟಿದವರಂತೆ ಅಲ್ಲಿರುತ್ತಿದ್ದರು. ನದಿಯಾಚೆಗಿರುವ ಮಾವಿನ ಮರದಿಂದ ಹಣ್ಣುಗಳನ್ನು ಕೀಳುವುದು, ತೋಟದಲ್ಲಿದ್ದ ಅನಾನಸು, ಗದ್ದೆಯಿಂದ ಕಬ್ಬು, ಗೆಣಸು, ಸೌತೆಕಾಯಿ, ಎಳನೀರು, ಹಲಸಿನ ಕಾಯಿ, ನೆಲ್ಲಿಕಾಯಿ, ಸೀತಾಫಲ, ಗಿಡದಲ್ಲೇ ಹಣ್ಣಾದ ಬಾಳೆಹಣ್ಣು ಇನ್ನು ಏನೇನು ಅಲ್ಲಿ ಸಿಗುವುದೋ ಅದೆಲ್ಲವನ್ನು ತಂದು ಒಟ್ಟಿಗೆ ಸೇರಿ ತಿಂದು ಹೊಟ್ಟೆಯ ಹಸಿವನ್ನು ನೀಗುತ್ತಿದ್ದರು.

ಮನೆಯವರಿಗಂತು ಈ ಹುಡುಗರೆಲ್ಲಾ ಏನೂ ಕೆಲಸಕ್ಕೆ ಬಾರದವರೆಂದೇ ನಂಬಿಕೆ. ಮನೆಯ ಹೆಂಗಸರು, ಈ ಹುಡುಗರು ಮನೆಯಲ್ಲಿದ್ದರೆ ಮಾಡುವ ರಂಪಾಟಗಳಿಗಿಂತ ಎಲ್ಲಾದರೂ ಹಾಳಾಗಿ ಹೋಗಲಿ ಎಂಬಂತೆ ಇವರ ಗೋಜಿಗೆ ಹೋಗುವುದಿಲ್ಲ. ಗಂಡಸರು ಅಲ್ಲಿ ಇಲ್ಲಿ ಕೆಲಸ ಎಂದು ಹೋಗಿರುತ್ತಾರೆ. ಹುಡುಗರು ತಮ್ಮ ಮನೆಗೆ ಬಂದ ಅತ್ತೆಯ, ಚಿಕ್ಕಮ್ಮನ ಮಕ್ಕಳ ಜತೆ ಸೇರಿದರೆ ಅದು ಸುಮ್ಮನಿರುವವರಲ್ಲ. ನದಿಯ ನೀರು ಈ ಮಕ್ಕಳಿಗೆ ಸಾಕಷ್ಟು ಇತ್ತು. ಕ್ರಮೇಣ ನದಿ ಒಣಗಳು ಆರಂಭವಾಗುತ್ತದೆ. ಕೊನೆಗೊಮ್ಮೆ ಅದು ಮರುಭೂಮಿಯಾಗುತ್ತದೆ. ಮತ್ತೆ ದಿಡೀರನೆ ಮಳೆ ಬರುತ್ತದೆ. ನೀರು ತುಂಬುತ್ತದೆ. ನೆರೆ ಬರುತ್ತದೆ. ನದಿಯ ಹತ್ತಿರ ಯಾರೂ ಮಕ್ಕಳನ್ನು ಬಿಡುವುದಿಲ್ಲ. ಮಕ್ಕಳೇ ಯಾಕೆ ದೊಡ್ಡವರೂ ಹೆದರುತ್ತಾರೆ. ಒಂದು ವಾರವಿಡೀ ಬಿಡದೆ ಸುರಿದ ಮಳೆಗೆ ಈ ಹುಡುಗರೆಲ್ಲಾ ಎಲ್ಲಿ ಹೋದರೆಂದು ಕೇಳಿಕೊಂಡು ಬರುವಂತೆ ನದಿಯ ನೀರು ಮನೆಯ ಜಗಲಿಗೂ ಬರುತ್ತದೆ. ಶಾಲೆಯ ಪುಸ್ತಕಗಳು ಒದ್ದೆಯಾಗಬಾರದೆಂದು ಅವುಗಳಿಗೆ ಪ್ಲಾಸ್ಟಿಕ್ ಕವರ್ ಹಾಕಿ ಚೀಲದೊಳಗಿಟ್ಟರೆ ತೆರೆಯುವ ಮನಸೂ ಮಕ್ಕಳಿಗಿರುವುದಿಲ್ಲ. ಬಚ್ಚಲು ಕೋಣೆಯ ಬೆಂಕಿಗೆ ಹಾಕಿ ಗೇರು ಬೀಜವನ್ನೋ, ಹಲಸಿನ ಬೀಜವನ್ನೋ, ಹುಣಸೆ ಹಣ್ಣಿನ ಬೀಜವನ್ನೋ ಸುಟ್ಟು ತಿನ್ನುತ್ತಾ ಕುಳಿತರೆ ನೀರು ಬಿಸಿಯಾಗಿರುತ್ತದೆ. ಹಂಡೆ ತುಂಬಿರುವ ಬಿಸಿನೀರನ್ನು ಖಾಲಿ ಮಾಡುವಷ್ಟು ಸ್ನಾನ ಮಾಡಿದರೂ ಸಾಲದು. ನೀರಿಗೇನು ಬರವಿಲ್ಲ. ಭಗೀರಥ ಗಂಗೆಯನ್ನು ಧರೆಗೆ ತರಿಸಿದಂತೆ ಮೇಲಿಂದ ಸುರಿಯುತ್ತಿರುತ್ತದೆ. ಕೆರೆಯಲ್ಲಿ, ಕಣಿವೆಯಲ್ಲಿ, ಬಾವಿಯಲ್ಲಿ, ಗದ್ದೆಯಲ್ಲಿ, ತೋಟದಲ್ಲಿ ಎಲ್ಲೆಲ್ಲೂ ನೀರೇ ನೀರು.

ಬಿಡಿಸಿದ ಕೊಡೆಯನ್ನು ಮಳೆಗೆ ಹಿಡಿಯುತ್ತಾ ಹೋದರೆ ಅವಳು ಯಾರು ಎಂಬುದನ್ನು ಗುರುತಿಸಲು ಅವಳುಟ್ಟ ಲಂಗ ಅಥವಾ ಅವಳು ನಡೆಯುವ ಶೈಲಿಯನ್ನು ನೋಡಬೇಕು. ಬೆಳಿಗ್ಗೆ ಬಿಸಿಲಿದ್ದುದರಿಂದ ಶಾಲೆಗೆ ಹೋಗುವಾಗ ಕೊಡೆ ಕೊಂಡೊಯ್ಯಲು ಮರೆತಿದ್ದುದರಿಂದ ಸಂಜೆ ಸುರಿದ ಮಳೆಯಲ್ಲಿ ನೆನೆದು ಬರಬೇಕಾಗಬಹುದು. ಅಕಸ್ಮಾತ್ ಆಕೆ ದಾರಿಯಲ್ಲಿ ಸಿಕ್ಕಿದರೆ ಅವಳ ಕೊಡೆಯೊಳಗೆ ನುಸುಳಿ ಇಬ್ಬರೂ ಒದ್ದೆಯಾಗಿ ಮನೆಗೆ ತಲುಪಬಹುದು.

ಮಳೆಗಾಲದ ಆರಂಭ. ನದಿಯಲ್ಲಿನ್ನೂ ನೀರು ತುಂಬಿಲ್ಲ. ಮಳೆ ಕೂಡ ಪಾಳಿಯಲ್ಲಿ ಬಂದಂತೆ ದಿನಕೊಮ್ಮೆಯೋ ಎರಡು ಸರ್ತಿಯೋ ಬರುತ್ತಿದೆ. ಅವಳು ಸಿಕ್ಕಿದಳು. ನೆನಪುಗಳು ಹತ್ತಿರವಾದುವು. ಕುಸಲೋಪರಿ, ಕುಟುಂಬದ ಕುರಿತಾದ ಮಾತುಗಳು ಮುಗಿದು, ಮಳೆ ಬೆಳೆಯ ಬಗ್ಗೆಯೂ ಮಾತಾಡಿಯಾಯಿತು. ತೋಟದ ಬದಿಯಿಂದ ನದಿಯ ಪಕ್ಕ ಹೋಗೋಣವೆಂದು ಹೊರಟೆವು. ಹೊರಟ್ಟಿದ್ದು ಆ ಹಿತ್ತಳ ಮರೆಯ ಗಿಡದ ಹತ್ತಿರದಿಂದಲೇ. ಮರವೂ ಬೆಳೆದಿದೆ ಎಂದನಿಸಿತು. ನಾವೂ. ಮೆಟ್ಟಿಲಿಳಿಯುವಾಗ ನನ್ನ ಕೈ ಹಿಡಿದಳು. ತೋಟದ ಮಧ್ಯದಿಂದ ಎಳೆಬಿಸಿಲುಕೋಲು. ನಾವು ಮಾತ್ರ ಎಂದೆಣಿಸಿರಲ್ಲಿಲ್ಲ. ನಮ್ಮ ಜತೆಗಿದ್ದ ಆ ಮಾವಿನ ಮರ, ಹಲಸಿನ ಮರ, ನದಿಯ ದಡದಲ್ಲಿದ್ದ ಕಲ್ಲುಗಳು ಮತ್ತೆ ಬಂದಿರಾ ಬನ್ನಿ ಬನ್ನಿ ಎಂದು ಹಾಡುವಂತನಿಸಿತು. ಕೈಕೈ ಹಿಡಿದು ನಾವಿಬ್ಬರೂ ನಕ್ಕೆವು. ಬರೆ ನಗುತ್ತಿದ್ದೆವು. ನಮ್ಮೊಳಗಿನ ಮಾತುಗಳಿಗೆ ಪದ ಬೇಕಾಗಿರಲ್ಲಿಲ್ಲ. ಹೀಗೆ ನಕ್ಕು ಬಹಳ ದಿನವಾಗಿರಬೇಕು. ಆಕಾಶದಲ್ಲಿ ಮೋಡಗಳು ಕೊಡೆ ಹಿಡಿದಿದ್ದವು. ಮರಗಳು ಗಾಳಿ ಬೀಸುತ್ತಿದ್ದವು.

ಒಳಗಿನಿಂದ ನಾವು ಹೊರಗೆ ಬಂದಿದ್ದೆವು.

ಅಷ್ಟೇ.

ಒಲವಿನಿಂದ
ಬಾನಾಡಿ