Saturday, June 23, 2007

ದನದ ಜಾತ್ರೆ


ಬಹಳ ದಿನಗಳಿಂದ ಬರೆಯಲಾಗಿಲ್ಲ. ಆರಂಭದ ಉತ್ಸಾಹ ಅಳಿಯಿತೇ ಎಂಬ ದಿಗಿಲು. ಮತ್ತೆ ಬರೆಯಲಾಗದ್ದಕ್ಕೆ ಸಮಜಾಯಿಸಿ. ಬರೆಯಲು ವಿಚಾರಗಳು ಆಗಾಗ ಅರಬ್ಬಿ ಸಮುದ್ರದ ತೆರೆಗಳಂತೆ ಒಂದೇ ಸಮನೆ ಬರುತ್ತಿದೆ. ಅಲ್ಲ ಸುರಿಯುವ ಮಳೆಯಲ್ಲಿ ಅಷ್ಟೊತ್ತು ಕುಳಿತು ಬರೆಯುವುದಕ್ಕಿಂತ ಮಳೆಯ ನಿನಾದಕ್ಕೆ ಕಿವಿಕೊಟ್ಟು ಕುಳಿತರಾಗದೇ ಎಂಬ ಅನಿಸಿಕೆ.
ಸನಾತನಧರ್ಮದ ಮಠಾಧಿಪತಿಗಳಲ್ಲೊಬ್ಬರಾದ ರಾಘವೇಶ್ವರ ಭಾರತೀಯವರ ಕಾಮಧುಗಾ ಎಲ್ಲೆಡೆ ಅಭಿರುಚಿ ಹುಟ್ಟಿಸಿದೆ ಅಲ್ಲದೇ ಅದೊಂದು ಧಾರ್ಮಿಕ ಮಹತ್ವತೆಯನ್ನು ಪಡೆದುಕೊಂಡು ಹೈನುಗಾರಿಕೆಯವರು, ಪರಿಸರತಜ್ಞರು, ಚಿಂತಕರು ಮತ್ತು ಬುದ್ಧಿಜೀವಿಗಳೆಂದು ಎಣಿಸಿಕೊಂಡವರು ಭಾಗವಹಿಸುತ್ತಿದ್ದಾರೆ. ಗೋ ಪ್ರೇಮಿಗಳನ್ನು ಒಂದೆಡೆ ತರಲಾಗುತ್ತಿದೆ. ಈ ಕುರಿತು ನಾನೂ ಕೆಲವು ಅಭಿಪ್ರಾಯಗಳನ್ನು ಹೊಂದಿ ನನ್ನದೇ ಪ್ರತಿಕ್ರಿಯೆಯನ್ನು ನೀಡಿದ್ದೆ. ಆದರೆ ಇಲ್ಲಿ ಆ ಬಗ್ಗೆ ಬರೆಯುವುದ್ದಿಲ್ಲ. ಕೆಲವೊಂದು ಕುತೂಹಲ ಸಂಗತಿಗಳು ಇತ್ತೀಚೆಗೆ ನನ್ನ ಅನುಭವಕ್ಕೆ ಬಂದಿರುವುದನ್ನು ಮಾತ್ರ ದಾಖಲಿಸುತ್ತೇನೆ. ಈ ಅನುಭವಗಳಿಗೆ ನಾನು ತಟಸ್ಥ.
ಗೋ ಸಂರಕ್ಷಣೆಯ ಹೆಸರಿನಲ್ಲಿ ಕಳೆದ ಕೆಲವು ತಿಂಗಳುಗಳ ಹಿಂದೆ ಮಂಗಳೂರು ಇದುವರೆಗೆ ಕಾಣದ ಕೋಮು ದಳ್ಳುರಿ ಕಂಡಿತು. ಕರ್ಫ್ಯೂ ಅಂದರೇನು ಅನ್ನುವುದು ಜನಕ್ಕೆ ತಿಳಿಯಿತು. ಕಾಶ್ಮೀರದಲ್ಲಿ ಪ್ರತಿದಿನ ಕರ್ಫ್ಯೂ ಆದಾಗ ಓದಿ ಪತ್ರಿಕೆ ಮಡಿಚಿಡುತ್ತಿದ್ದ ಜನಕ್ಕೆ ಅದರ ಅರ್ಥ ತಿಳಿಯಿತು.ಬೀಫ್ ಮಂಗಳೂರಿನಲ್ಲಿ ಸಾಮಾನ್ಯವಾಗಿ ಸಿಗುತ್ತದೆ. ಅದು ದನದ ಮಾಂಸವೆಂದು ನನಗೆ ಗೊತ್ತಿಲ್ಲ. ಬೀಫ್ ತಿನ್ನುವರೊಬ್ಬರ ಪ್ರಕಾರ ತಿನ್ನಲು ಹೋರಿ ಅಥವಾ ಕೋಣಗಳನ್ನು ಮಾತ್ರ ಬಳಸುತ್ತಾರಂತೆ. ದನ ಅಥವಾ ಎಮ್ಮೆಗಳನ್ನು ಕೊಲ್ಲುವುದಿಲ್ಲವಂತೆ. ಸತ್ಯ ನನಗೆ ಗೊತ್ತಿಲ್ಲ. ನಾನು ಎಳವೆಯಲ್ಲಿದ್ದಾಗ ನಮ್ಮ ಊರಿನ ಮಸೀದಿಯ ಪಕ್ಕದ ಅಂಗಡಿಯಲ್ಲಿ ಕುಳಿತು ಕೇಳಿದ ಮಾತಿನ ಪ್ರಕಾರ ಸ್ಥಳೀಯ ಮುಸ್ಲಿಮರು ಅವರ ಹಬ್ಬದಂದು ಒಂದು 'ಹೋರಿ ಕರು'ವನ್ನು ಮಾಂಸಮಾಡಿ ಹಂಚಿ ಅಡುಗೆಮಾಡಿದ್ದರು. ಅವರ ಊಟಕ್ಕೆ ನಮ್ಮೂರಿನ ದಲಿತರನ್ನೂ ಕರೆದಿದ್ದರು.
ಮಂಗಳೂರಿನ ಬಾವುಟಗುಡ್ಡೆಯಲ್ಲಿ ದಶಕದ ಹಿಂದೆ ಸಂಜೆ ಹೊತ್ತಿಗೆ 'ಚಲಿಸುವ ಹೋಟೇಲ್''ಗಳಲ್ಲಿ ಬೀಫ್ ಸಿಗುತ್ತಿತ್ತು. ಪರಾಟ ಅಥವಾ ಪಾವ್ (ಬನ್ನು) ಸೇರಿಸಿ ಬೀಫ್ ಸುಕ್ಕ ತಿಂದು ಅದರ ಮೇಲೊಂದು ಖಡಕ್ ಚಾಯ್ ಕುಡಿಯುವುದು ಕೆಲವರ ರೂಢಿಯಾಗಿತ್ತು. ಮಂಗಳೂರಿನ ಸ್ನೇಹಿತೆಯೊಬ್ಬಳ ಮನೆಗೆ ನಾನು ಮತ್ತು ನನ್ನ ಕೊಡಗಿನ ಮಿತ್ರರೊಬ್ಬರು ಹೋಗಿದ್ದಾಗ ಹಂದಿ ಮಾಂಸವಿಲ್ಲವೆಂದು ಬೀಫ್ ತಂದಿದ್ದರು.
ಮಂಗಳೂರಿನಿಂದ ಅಷ್ಟೊಂದು ದೂರವಿಲ್ಲದ ಕೇರಳದಲ್ಲಿ ಬೀಫ್ ಯಾವುದೇ ಮಾಂಸಹಾರಿ ಹೋಟೇಲ್‍ಗಳಲ್ಲಿ ಸಾಮಾನ್ಯವಾಗಿ ಸಿಗುತ್ತದೆ. ಕೇರಳದಲ್ಲಿ ಇನ್ನೂ ದಕ್ಷಿಣಕ್ಕೆ ಹೋದರೆ ಬಹಳಷ್ಟು ಕಡೆ ಸಿಗುತ್ತದೆ. ಅದಕ್ಕಾಗಿ ಅದು 'ದೇವರ ಸ್ವಂತ ರಾಜ್ಯ' = ಗಾಡ್ಸ್ ಓನ್ ಕಂಟ್ರಿ. ವಿದೇಶಿಯರು ಭಾರತಕ್ಕೆ ಬಂದರೆ ಅಲ್ಲಿ ಹೋಗದೆ ಬಿಡುವುದಿಲ್ಲ.
ಮೂವತ್ತಮೂರು ಕೋಟಿ ದೇವತೆಗಳ ನಿವಾಸಸ್ಥಾನವಾದ ಗೋವು ಚಲಿಸುವ ದೇವಾಲಯ. ಪವಿತ್ರವಾದ ಪಂಚಗವ್ಯವನ್ನು ನೀಡುವ ಚಲಿಸುವ ತೀರ್ಥಾಲಯ. ರೋಗ ನಿವಾರಣೆಯ ದೃಷ್ಟಿಯಿಂದ ಚಲಿಸುವ ಔಷಧಾಲಯ.
ನನಗೆ ನೆನಪಾಗುವುದು ಮುಡ್ನಾಕೂಡು ಚಿನ್ನಸ್ವಾಮಿಯವರ "ನಾನೊಂದು ಮರವಾಗಿದ್ದರೆ" ಕವನ.
....................................
ಮಳೆ ಹನಿಗಳು ನಾನು ಶ್ವಪಚನೆಂದು
ಹಿಂದೆ ಸರಿಯುತ್ತಿರಲ್ಲಿಲ್ಲ. ನಾನು
ಬೇರೂರಿ ಕುಡಿಯಿಡುತ್ತಿರುವಾಗ ಭೂ ದೇವಿ
ಮಡಿ ಮಡಿ ಎಂದು ಓಡುತ್ತಿರಲ್ಲಿಲ್ಲ
ಪವಿತ್ರ ಗೋವು ನನ್ನ ತೊಗಟೆಗೆ ತನ್ನ ಮೈ ಉಜ್ಜಿ
ತುರಿಕೆ ತೀರಿಸಿಕೊಳ್ಳುವಾಗ ಅದರ ಅಂಗಾಂಗಗಳಲ್ಲಿ
ಅಡರಿಕೊಂಡ ಮುಕ್ಕೋಟಿ ದೇವತೆಗಳು
ನನ್ನನ್ನು ಮುಟ್ಟಿಸಿಕೊಳ್ಳುತ್ತಿದ್ದರು
......................................

ಕನ್ನಡ ಸಾಹಿತ್ಯದಲ್ಲಿ ಇನ್ನೂ ಇಂತಹ ಮತ್ತೊಂದು ನೆನಪಲ್ಲಿ ಉಳಿದಿರುವುದು ಲಕ್ಷ್ಮಣ್ ಅವರ 'ಸಂಬೋಳಿ' ಆತ್ಮಕಥನದ ಒಂದು ಪ್ಯಾರ. (ಪ್ರಕಟಣೆ:೨೦೦೩- ಆನಂದ ಕಂದ ಗ್ರಂಥಮಾಲೆ, ಮಲ್ಲಾಡಿಹಳ್ಳಿ, ಚಿತ್ರದುರ್ಗ ಜಿಲ್ಲೆ ).
ಓದಿ:
ಊರಳ್ಳಿಯಲ್ಲಿ ಅವಾಗೊಂದು, ಇವಾಗೊಂದು ಎಮ್ಮೆ, ದನ ಸಾಯ್ತಿದ್ದೋ. ಅದ್ನ ಹೊತ್ಕಂಡ್ಬಂದು ಕುಯ್ದು ಮನ್ಗೋಂದು ಗುಡ್ಡೆ ಹಾಕ್ತಿದ್ರು. ಆವಾಗ ನಮ್ಮಟ್ಟಿ ಜನ್ಗಳ ಮುಖದ್ಮೇಲೆ ನಿರಾಳ, ನೆಮ್ಮದಿ ನರ್ತಿಸ್ತಿತ್ತು. ನಮ್ಮಟ್ಟಿಯ ಎಲ್ಲಾ ಮನೆಗಳ ಒಲೆ ಬೆಂಕಿ ಕಾಣ್ತಿತ್ತು. ತಮ್ಮ್ ತಮ್ಮ ಪಾಲ್ಗೆ ಬಂದ ಬಾಡ್ನ ಎಷ್ಟು ಬೇಕೋ ಅಷ್ಟನ್ನ ಯಸರು ಮಾಡಿ ಉಳ್ದಿದ್ನ ಬಳ್ಸಿ ಮಂಕ್ರಿಯಲ್ಲಾಕಿ ಬಿಸಿಲ್ನಲ್ಲಿ ಒಣಗ್ಸಿ ಮಡಿಕಂತಿದ್ದೋ. ಕಾರ ಅರ್ದಾಗ ಒಂದೊಂದು ಬಳಸ್ಲನ್ನ ಸುಟ್ಕಂಡು ಹಿಟ್ಗೆ ನೆಂಚ್ಕಂಡು ತಿನ್ತಿದ್ದೋ. ಒಂದೊಂದು ಸಾತಿ ವಣ್ಪುಡಿ ಯಸರ್ನೂ ಮಾಡ್ತಿದ್ದೋ. ಮತ್ತೆ ಊರಳ್ಳಿಯೊಳ್ಗೆ ದನ, ಎಮ್ಮೆ ಯಾವಾಗ ಸಾಯ್ತಾವೆ ಅಂತ ಕಾಯ್ತಿದ್ದೋ. ನಮ್ಮಟ್ಟಿ ಜನ್ಗಳು ಉಸಿರಿದ್ದು ಯಣಗಳಂಥಾಗಿದ್ರು. ನಮ್ಮ ಪಾಲ್ಗೆ ನಗು, ಸಂತೋಷ ಕನ್ಸಾಗಿತ್ತು.

ಒಲವಿನಿಂದ

ಬಾನಾಡಿ