Saturday, May 19, 2007

ಸಂಬಂಧಗಳ ಸ್ವ-ರೂಪ

ಅವಳ ಬಗ್ಗೆ ಕೂಡ ಬರೆಯಬೇಕಂತೆ. ಅವಳೇನೂ ನನ್ನ ಬ್ಲಾಗ್ ಬಗ್ಗೆ ಹೆಚ್ಚು ಹಚ್ಚಿಕೊಂಡಿಲ್ಲ. ಅವಳು ದೊಡ್ಡದೊಂದು ಕಂಪನಿಯಲ್ಲಿ ಉತ್ತಮ ಹುದ್ದೆಯಲ್ಲಿದ್ದಾಳೆ. ಅವಳ ಅಪ್ಪ-ಅಮ್ಮ "ಸಕತ್ ರಿಚ್". ಅಮ್ಮನಾದರೋ ನಗರದ ಪ್ರಸಿದ್ಧ ವೈದ್ಯೆಯೆಂದು ಪ್ರಖ್ಯಾತಿಗೊಂಡವಳು. ಅಪ್ಪ ತನ್ನ ಕೆಲಸದಲ್ಲಿ ಸದಾಕಾಲ ಮಗ್ನ. ಅವಳೂ ಕೂಡ ಒಬ್ಬ ಉತ್ತಮ ಉದ್ಯಮಿಯನ್ನು ಮದುವೆಯಾಗಿದ್ದಾಳೆ. ಅವರಿಬ್ಬರೂ ಬಹಳ ಅನ್ಯೋನ್ಯವಾಗಿದ್ದಾರೆ. ಅವಳು ಒಂದು ನಗರದಲ್ಲಿದ್ದರೆ ಅವನು ಇನ್ನೊಂದು ನಗರಕ್ಕೆ ತನ್ನ ಕಾರ್ಯಕ್ಕಾಗಿ ಹೋದರೆ ಅವಳಿಗೆ ಮಧ್ಯಾಹ್ನದ ಊಟ ತನ್ನಿಂದ ತಾನಾಗಿ ಬಂದಿರುತ್ತದೆ. ಆತ ಅಲ್ಲಿಂದ ಇಲ್ಲಿನ ಯಾವುದೋ ರೆಸ್ಟಾರೆಂಟ್‍ಗೆ ತಿಳಿಸಿ ಅವಳಿಗಾಗಿ ಕಳುಹಿಸುತ್ತಾನೆ. ಜಂಬದ ಕೋಳಿ ಅವಳು. ಎಲ್ಲರಲ್ಲೂ ಹೇಳುತ್ತಾಳೆ: ನೋಡು, ನನ್ನ ಗಂಡ ಊರಲ್ಲಿಲ್ಲದಿದ್ದರೂ ನನ್ನ ಬಗ್ಗೆ ಅದೆಷ್ಟು ಕಾಳಜಿ ವಹಿಸಿದ್ದಾನೆ. ಅವಳ ಸಹಕರ್ಮಿ ಇನ್ನೊಬ್ಬಳಿಗೆ ಹೊಟ್ಟೆ ಕಿಚ್ಚಾಗುತ್ತದೆ.
ಅವಳು ಎಲ್ಲರಲ್ಲೂ ಜಗಳ ಆಡುವವಳು. ಜಗಳ ಅವಳ ಬದುಕಿನ ಅವಿಭಾಜ್ಯ ಅಂಗ ಅನ್ನುವಂತೆ ಅವಳು ಜಗಳವಾಡುತ್ತಾಳೆ. ಅವಳ ಜಗಳ ಅವಳ ಸ್ನೇಹಿತರಿಗೆಲ್ಲಾ ಸದಾ ಚರ್ಚೆಯ ವಿಷಯ. ಅವಳು ಜಗಳ ಆಡದಿದ್ದರೆ ಅದು ಸುದ್ದಿ. ಒಂದು ಸಲ ನನ್ನ ಜತೆಯೂ ಎಲ್ಲರೆದುರು ಜಗಳವಾಡಿದಳು. ನನ್ನ ಉಳಿದ ಸ್ನೇಹಿತರು ಆಶ್ಚರ್ಯ ಪಟ್ಟರು. ಮತ್ತೆ ಸಮಾಧಾನ ಹೊಂದಿದರು. ನಾಯಿ ಬಾಲ ಎಂದು ನೇರವಾಗದಲ್ಲ. ಅವಳ ಜಗಳ, ಅವಳ ಅಹಂಭಾವ, ಅವಳ ಜೀವನ ಶೈಲಿ ಒಬ್ಬ ಮಾನಸಿಕ ತಜ್ಞನಿಗೆ ಬಹಳ ಕುತೂಹಲಕಾರಿ ವಿಷಯವಾಗಬಲ್ಲುದು. ಅವಳನ್ನು ಅರ್ಥೈಸಿದವರು ಬಹಳ ಕಡಿಮೆಯೆನ್ನಬೇಕು. ಅವಳ ಗಂಡ ಅವಳ ಜತೆ ಹೇಗೆ ಜೀವನ ನಡೆಸುತ್ತಾನೆ ಎಂದು ಎಲ್ಲರು ಆಶ್ಚರ್ಯ ಪಡುತ್ತಾರೆ. ಅವನೂ ಅವನ ಕೆಲಸದಲ್ಲಿ ಬಹಳ ಚಾಣಾಕ್ಷ. ದೊಡ್ದ ದೊಡ್ಡ ವ್ಯವಹಾರಗಳನ್ನು ಚಾಕಚಕ್ಯತೆಯಿಂದ ನಿರ್ವಹಿಸುತ್ತಾನೆ. ಅವನ ಬಗ್ಗೆ ಅವಳಿಂದ ಬಹಳ ಕೇಳಿದ್ದೇನೆ. ಅವಳು ಜತೆಗಿದ್ದರೆ ಮಾತಾಡುವುದನ್ನು ನಿಲ್ಲಿಸುವುದಿಲ್ಲ. ಹಾಗಾಗಿ ಅವಳ ಎಲ್ಲ ವಿಚಾರಗಳನ್ನು ಮುಕ್ತವಾಗಿ ಹಂಚುತ್ತಾಳೆ. ಅದೇ ರೀತಿ ನಮ್ಮೊಳಗಿನ ವಿಷಯಗಳನ್ನೂ ಆಕೆ ಅವಳ ಗಂಡನೊಡನೆ ಹಂಚುತ್ತಾಳೆ.
ಆಕೆ ಮದುವೆಯಾಗಿ ದಶಕಗಳೇ ಸಂದರೂ ಇನ್ನೂ ಮಗು ಬೇಡ ಎಂದಿದ್ದಾಳೆ. ನಾನು ಕೇಳಿದೆ ಯಾಕೆ ಈ ನಿರ್ಧಾರ ಎಂದು. ನೋಡು ನಾನು ಎಷ್ಟು ಕೆಟ್ಟದಾಗಿ ನನ್ನ ಜೀವನವನ್ನು ನಡೆಸುತ್ತಿದ್ದೇನೆ. ನನಗೆ ನನ್ನಂತಹವೇ ಬದುಕು ನಡೆಸುವ ಇನ್ನೊಂದು ಜೀವವನ್ನು ತರಲು ಮನಸ್ಸಿಲ್ಲ ಎಂದಳು. ಆಕೆಯ ಅಪ್ಪ ಅಮ್ಮ ಅವಳ ಜೀವನದಲ್ಲಿ ಜೀವನದ ಉತ್ಸಾಹದಲ್ಲಿ ಪಾಲ್ಗೊಳ್ಳಲೇ ಇಲ್ಲ. ಆಕೆ ಪ್ರಸಿದ್ಧ ವೈದ್ಯೆಯಾಗಿದ್ದುದರಿಂದ ಆಸ್ಪತ್ರೆ, ಮನೆ ಮತ್ತೆ ಆಸ್ಪತ್ರೆಯಿಂದ ರೋಗಿಗಳ ಕರೆ ಬಂದಾಗ ತಿರುಗಿ ಆಸ್ಪತ್ರೆ. ಅಪ್ಪನೂ ಅದೆ ರೀತಿ. ಕೆಲಸ. ಕೆಲಸ. ಇವಳನ್ನು ನೋಡಿ ಕೊಳ್ಳಲು ಒಬ್ಬಾಕೆ ಕೆಲಸದಾಳನ್ನು ಇಟ್ಟು ಕೊಂಡಿದ್ದರು. ಆ ಕೆಲಸದಾಕೆಯೇ ಇವಳಿಗೆ ಸರ್ವಸ್ವ. ಎಲ್ಲಾ ಅವಳ ಮೇಲೆ ಅವಲಂಬಿತ. ಅವಳು ಹೇಳುತ್ತಾಳೆ: ನನ್ನ ಹೆಸರು ನೋಡಿದೆಯಾ, ಇದು ನನ್ನ ಅಪ್ಪ ಅಮ್ಮ ಇಟ್ಟ ಹೆಸರಲ್ಲ. ನಾನು ಸ್ಕೂಲಿಗೆ ಸೇರಲು ಹೋದಾಗ ನನ್ನ ಕೆಲಸದವಳು ಮೇಸ್ಟ್ರಲ್ಲಿ ಹೇಳಿದ ಹೆಸರು. ಲಚ್ಚಮ್ಮ! ನಾನು ಅವಳಿಗೆ ಪ್ರೀತಿಯ ಲಚ್ಚಮ್ಮ ಆಗಿದ್ದೆ. ಅದನ್ನೆ ಹೇಳಿದಳು. ನನ್ನ ನಿಜವಾದ ಹೆಸರು ರೂಪಾ. ನಾನು ಇಂದು ಇಷ್ಟು ದೊಡ್ಡ ಕಂಪನಿಯಲ್ಲಿ ಇಂತಹ ಉತ್ತಮ ಹುದ್ದೆಯಲ್ಲಿ, ನನ್ನ ಸ್ನೇಹಿತರ ವಲಯದಲ್ಲಿ ಎಲ್.ಕೆ.ಕುಮಾರ್ ಅಂತಲೇ ಕರೆಸಿಕೊಳ್ಳುವವಳು. ಎಲ್ಲರಿಗೂ ಎಲ್‍ಕೆ. ಕೇಳಿದರೆ ಲಕ್ಷ್ಮಿ ಕೆ ಕುಮಾರ್ ಅಂತೇನೆ, ಅಂದಳು.
ಸಂಸಾರದ ಎರಡೂ ಗಾಲಿಗಳಾದ ಗಂಡ ಹೆಂಡಿರು ತಮ್ಮದೇ ವೈಯಕ್ತಿಕ ಬದುಕಿನ, ವೃತ್ತಿಯ ಮಹಾತ್ವಾಕಾಂಕ್ಷೆಯ ಬೆನ್ನೇರಿ ಕುಟುಂಬ ಎಂಬ ಸಂಸ್ಥೆಯನ್ನು ಮರೆತಾಗ ಎಲ್‍ಕೆ ಯಂತಹವರು ಹುಟ್ಟುತ್ತಾರೆ. ಅಪ್ಪ ಅಮ್ಮನ ಪ್ರೀತಿ, ಮಮತೆ, ವಾತ್ಸಲ್ಯ ಅವಳಿಗೆ ಸಿಗಲ್ಲಿಲ್ಲ. ಹಣವಿತ್ತು ಬೇಕಾದಷ್ಟು. ಹೆಸರಿತ್ತು. ಇಂದೂ ಕೂಡಾ ಯಾರಾದರೂ ಅವಳ ಪರಿಚಯವಿಲ್ಲದವರಿಗೆ ಅವಳ ತಾಯಿಯ ಹೆಸರು ಹೇಳಿದರೆ ಸಾಕು. ಓ ಆ ಡಾಕ್ಟರಮ್ಮನ ಮಗಳೋ ಎಂದು ಗುರುತು ಹಿಡಿಯುವರು. ಅಮ್ಮನ ಹೆಸರು-ಕೀರ್ತಿ ಅಂತಹದ್ದು. ಮೊನ್ನೆ ನನ್ನ ಸ್ನೇಹಿತನೊಬ್ಬ ಸಿಕ್ಕಿದ ಅವನು ಹೇಳಿದ. ನೋಡು ಆ ನಿನ್ನ ಎಲ್‍ಕೆ "ಸಕತ್ ರಿಚ್" ಅಲ್ವಾ ಅಂತ. ಆಗಿರಬೇಕು ಎಂದೆ. ಅವನು, ನೋಡು ನನ್ನ ಅಣ್ಣನ ಜತೆ ಅವಳ ಗಂಡನೊಂದಿಗೆ ಅವರ ಮನೆಗೆ ಅವರೊಳಗಿನ ಬಿಸಿನೆಸ್‍ ಗೆ ಹೋಗಿದ್ದೆ. ಎಂಥ ಮನೆ, ಏನು ಶ್ರೀಮಂತರಪ್ಪಾ ಎಂದ. ಹೌದು ಎಂದೆ. ಅದಕ್ಕೇನೆ ಅವಳು ಅಷ್ಟು ಜಂಬದಿಂದಿದ್ದಾಳೆ.
ಎಲ್‍ಕೆ ನಿನ್ನ ಬಗ್ಗೆ ಬರೆದುದನ್ನು ಸ್ವಚ್ಚ ಮನಸ್ಸಿನಿಂದ ಸ್ವೀಕರಿಸುವೆ ಎಂಬ ನಂಬಿಕೆಯಿಂದಲೇ ಬರೆದಿದ್ದೇನೆ. ನಿನಗೆ ಇದೆಲ್ಲಾ ಕ್ಷುಲ್ಲಕ. ನಿನ್ನ ಒಳ ಹೊರಗಿನ ಬದುಕಿನ ನಡುವಿನ ಆಳ ಅಷ್ಟು. ಬದುಕು ಸುಂದರವಿರಲಿ. ಅಷ್ಟೇ.
ಒಲವಿನಿಂದ
ಬಾನಾಡಿ.

2 comments:

  1. ಲಚ್ಚಿಯಂಥವರ ವಿಚಾರ ನಿಜಕ್ಕೂ ಚರ್ಚೆ ಮಾಡಬೇಕಾದದ್ದೆ..ಅಕ್ಕ-ಪಕ್ಕ ಸುತ್ತ ಮುತ್ತ ಇಂಥಾ ಎಷ್ಟೋ ಲಚ್ಚ-ಲಚ್ಚಿಯರು ಇದಾರೆ..ಇನ್ನೂ ಹೆಚ್ಚು ಹೆಚ್ಚು ಕಾಣಸಿಗುತ್ತಾರೆ ಕೂಡಾ! ಅದು ನಾವೆಲ್ಲರೂ ಆರಿಸಿಕೊಂಡಿರುವ ಪ್ರಸ್ತುತ ಜೀವನಶೈಲಿಯ ಪ್ರೀತಿಯ ಕೊಡುಗೆ! :(

    ಇಂಥ ಲಚ್ಚಿಯರ ಮನಃಸ್ಥಿತಿಯ ಒಳಹೊಕ್ಕು ಒಮ್ಮೆ ಜಾಲಾಡಿದರೆ ಕಲಿಯಬಹುದಾದಂಥ ಅನೇಕ ಪಾಠಗಳು ಸಿಗುತ್ತವೆ..ಇನ್ನು ಹೆಚ್ಚು ಹೆಚ್ಚು ವಿಚಾರಗಳು ನಿಮ್ಮ ಬರಹಗಳಲ್ಲಿ ಮೂಡಿಬರಲಿ

    ReplyDelete
  2. ನಿಮ್ಮ ಕಾಮೆಂಟ್‍ಗೆ ವಂದನೆಗಳು.

    ReplyDelete