Monday, May 7, 2007

ಹಳೆಯದೊಂದು ಹೊಸ ಸಂಬಂಧ

ಅವಳನ್ನು ನನ್ನ ಬಾಲ್ಯದ ಸ್ನೇಹಿತೆಯೆನ್ನಬಹುದು. ಯಾಕೆಂದರೆ ನಾವಿಬ್ಬರೂ ಸುಮಾರು ಆರನೆ ತರಗತಿಯಿಂದ ಒಬ್ಬರನ್ನೊಬ್ಬರು ತಿಳಿದಿದ್ದೆವು. ನಮ್ಮಲ್ಲಿ ಸ್ನೇಹವಿತ್ತು. ಕಾರಣ ನಾವು ಇಬ್ಬರೂ ಒಂದೇ ತರಗತಿಯಲ್ಲಿ ಓದುತ್ತಿದ್ದೆವು. ಆಕೆ ಬೇರೆ ಶಾಲೆಯಲ್ಲಿ. ಹಾಗಾಗಿ ನಾವು ಸಹಪಾಠಿಗಳಾಗಿರಲ್ಲಿಲ್ಲ. ನಮ್ಮ ಭೇಟಿಯೂ ಅಷ್ಟೊಂದು ಸಲ ಆಗುತ್ತಿರಲಿಲ್ಲ. ವರ್ಷಕ್ಕೆ ಏಳೆಂಟು ಬಾರಿ ಎನ್ನಬಹುದು. ನಾವೇನೂ ಸಂಬಂಧಿಕರೂ ಆಗಿಲ್ಲ. ನಮ್ಮ ಸ್ನೇಹ ತುಂಬಾ ವರ್ಷಗಳ ವರೆಗೆ ಮುಂದುವರಿದಿತ್ತು. ಅಂದರೆ ನಾವಿಬ್ಬರೂ ನಮ್ಮ ಪಾಠಗಳ ಬಗ್ಗೆ, ಓದಿದ ಪುಸ್ತಕಗಳ ಬಗ್ಗೆ, ನೋಡಿದ ಯಕ್ಷಗಾನಗಳ ಬಗ್ಗೆ ಅಥವಾ ನಮ್ಮ ಇಬ್ಬರ ಪರಿಚಯವಿರುವವರ ಬಗ್ಗೆ ಮಾತಾಡುತ್ತಿದ್ದೇವು. ಅವಳು ಅವಳ ಮನೆಯವರ ಬಗ್ಗೆಯೂ ಒಮ್ಮೊಮ್ಮೆ ಮಾತಾಡುತ್ತಿದ್ದಳು. ಅವಳು ಸುಂದರವಾಗಿದ್ದಳು. ನಮ್ಮ ಹತ್ತನೆ ತರಗತಿಯ ನಂತರ ಒಂದು ವರ್ಷ ನಮ್ಮೊಳಗೆ ಯಾವುದೇ ಸಂಪರ್ಕವಿರಲ್ಲಿಲ್ಲ. ಒಂದು ವರ್ಷದ ನಂತರ ಅವಳಿಗೆ ಮದುವೆಯಾದ ಕುರಿತು ತಿಳಿಯಿತು. ಹುಡುಗ ನಮ್ಮೂರಲ್ಲಿದ್ದಾತ. ಆಗ ದೊಡ್ಡ ನಗರದಲ್ಲಿ ಒಳ್ಳೆಯ ಕೆಲಸದಲ್ಲಿದ್ದ. ಅವನ ಬಗ್ಗೆ ನನ್ನ ಮನೆಯವರಿಗೆ ಗೊತ್ತಿತ್ತು. ನನಗೆ ಗೊತ್ತಿರಲಿಲ್ಲ. ಆತ ನನ್ನಿಂದ ಸುಮಾರು ಹದಿನೈದು ವರ್ಷ ದೊಡ್ಡವನಿರಬೇಕು. ಹಾಗಾಗಿ ನನಗೆ ಆತನ ಪರಿಚಯವಿರಲ್ಲಿಲ್ಲ. ಆತನು ಊರಲ್ಲಿದ್ದಾಗ ನಾನಿನ್ನೂ ಚಿಕ್ಕವನಿದ್ದೆ. ನನ್ನ ಸ್ನೇಹಿತೆಯ ಪರಿಚಯ ನನ್ನ ಅಕ್ಕ, ಅಮ್ಮನವರಿಗೆ ಇತ್ತು. ನನ್ನ ಸ್ನೇಹಿತೆಯ ಮದುವೆಯ ಕುರಿತು ಹೇಳಿದಾಗ ಅವರು ಹುಡುಗಿಗೆ ಒಳ್ಳೆಯ ಹುಡುಗ ಸಿಕ್ಕಿದ ಎಂಬ ಅಭಿಪ್ರಾಯಪಟ್ಟಿದ್ದರು. ನಾನು ಕಾಲೇಜು ತಲಪುವ ವೇಳೆಗೆ ಅವರಿಗೆ ಇಬ್ಬರು ಮಕ್ಕಳೂ ಆಗಿದ್ದರು. ನಗರದಲ್ಲಿ ಒಮ್ಮೆ ಅವರನ್ನು ಭೇಟಿಯಾಗಿ ಅವರ ಮನೆಗೂ ಹೋಗಿದ್ದೆ. ಆಕೆ ತುಂಬಾ ಪ್ರೀತಿಯಿಂದ ನನ್ನನ್ನು ಆದರಿಸಿದಳು. ಅವಳ ಗಂಡನೂ ನನ್ನ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಹೊಂದಿದ್ದ. ನನ್ನ ತಂದೆ ತಾಯಿ ಕುಟುಂಬದ ಬಗ್ಗೆ ಆತ ತಿಳಿದಿದ್ದುದರಿಂದ ನನ್ನ ಮೇಲೆಯೂ ಒಳ್ಳೆಯ ಅಭಿಪ್ರಾಯ ಹೊಂದಿದ್ದ. ನಾನೂ ಆತನನ್ನು ಒಳ್ಳೆಯ ಸ್ನೇಹಿತ ಎಂದು ತಿಳಿದಿದ್ದೆ. ಅವನ ಮಕ್ಕಳೂ ನನಗೆ ಪ್ರಿಯರೆನಿಸಿದರು. ಆತನ ಕೆಲಸದ ಬಗ್ಗೆಯೂ ಹೇಳಿದ. ಕಾಲೇಜಿಗೆ ಹೋಗುತ್ತಿದ್ದ ನಾನೂ ಅವನಂತೆ ಒಳ್ಳೆಯ ಕೆಲಸ ಹಿಡಿಯಬೇಕು ಎಂದು ಯೋಚಿಸಿದ್ದೆ. ಒಟ್ಟಿನಲ್ಲಿ ಆ ಕುಟುಂಬ ನನಗೆ ತುಂಬಾ ಹತ್ತಿರದವರಂತೆ ಕಂಡುಬಂದರು.ಮತ್ತೆ ಕೆಲವು ಬಾರಿ ಅವರ ಮನೆಗೆ ಹೋಗುವ ಅವಕಾಶವಾಯಿತು ನನಗೆ. ಆತ ತನ್ನ ಕೆಲಸದ ಮೇಲೆ ಬಹಳ ನಿಷ್ಟನಾಗಿದ್ದ. ಬಹಳ ಸಮಯ ಕೆಲಸದ ಸ್ಥಳದಲ್ಲಿಯೇ ಕಳೆಯುತ್ತಿದ್ದ. ಮನೆಗೆ ಬಂದರೂ ಕೆಲಸದ ಬಗ್ಗೆಯೇ ಯೋಚಿಸುವಂತೆ ಕಾಣುತ್ತಿದ್ದ. ಆಕೆಯೂ ಉತ್ತಮ ಗೃಹಿಣಿಯಾಗಿದ್ದಳು. ಗಂಡನ ಅವಶ್ಯಕತೆಗಳನ್ನು ಸಮಯಕ್ಕನುಗುಣವಾಗಿ ನಿರ್ವಹಿಸಿ, ಅತಿಥಿಯಾದಂತಹ ನನ್ನ ಬಗ್ಗೆಯು ಕಾಳಜಿ ವಹಿಸಿ, ಮಕ್ಕಳ ಕಡೆಯೂ ಗಮನಕೊಡುತ್ತಿದ್ದಳಲ್ಲದೇ ನೆರೆಕರೆಯವರಲ್ಲಿಯೂ ಉತ್ತಮ ಸಂಬಂಧವನ್ನಿಟ್ಟಿದ್ದಳು. ಹಾಗೆಂದು ನನಗೆ ಕಂಡಿತು.ಈಗ ಅವರ ಮಕ್ಕಳು ಬೆಳೆದು ದೊಡ್ಡವರಾಗಿದ್ದಾರೆ. ಒಬ್ಬ ಕಲಿಯಲೆಂದು ಅವರಿಂದ ಬೇರೆಯಾಗಿ ಇನ್ಯಾವುದೋ ನಗರದಲ್ಲಿದ್ದಾನೆ. ಇನ್ನೊಬ್ಬ ಅದೇ ನಗರದಲ್ಲಿ ಓದುತ್ತಿದ್ದಾನೆ. ಗಂಡ ಅದೇ ಕೆಲಸಕ್ಕೆ ಅಷ್ಟೇ ಮುತುವರ್ಜಿಯಿಂದ ಹೋಗುತ್ತಿದ್ದಾನೆ. ಈಗ ನನ್ನ ಕೆಲಸ, ಬದುಕಿನ ಬಗ್ಗೆಯೂ ಆತ ಹೆಮ್ಮೆ ಪಡುತ್ತಾನೆ. ನನಗೂ ಕೆಲವೊಂದು ಕಿವಿಮಾತುಗಳನ್ನು ಹೇಳುತ್ತಾನೆ. ಈಗ ನಮ್ಮ ಭೇಟಿ ಬಹಳ ಅಪರೂಪ.
ನಮ್ಮಿಬ್ಬರ ಸ್ನೇಹಿತ ಮೊನ್ನೆ ಅಪರೂಪಕ್ಕೆ ಸಿಕ್ಕಿದ. ಆತನ ಜತೆ ಬಹಳ ಮಾತುಕತೆಯಾಯಿತು. ನನ್ನ ಆ ಸ್ನೇಹಿತೆಯ ಕುರಿತೂ ಆತ ಹೇಳಿದ. ಆಕೆಯ ಗಂಡ ಈಗಲೂ ಕೆಲಸದಲ್ಲಿದ್ದಾನಂತೆ. ಇನ್ನು ಮೂರ್ನಾಲ್ಕು ವರ್ಷಗಳಲ್ಲಿ ಆತ ನಿವೃತ್ತಿಯಾಗಬಹುದು. ಈಕೆಯ ಮಕ್ಕಳೂ ಕಾಲೇಜು, ಓದು, ಟ್ಯೂಷನ್, ಸ್ನೇಹಿತರು ಎಂದು ಬಿಜಿಯಾಗಿದ್ದಾರೆ. ಆಕೆ ಒಬ್ಬಂಟಿ. ಆಕೆಗೆ ಒಂಟಿತನ ಬಹಳ ಕಾಡುತ್ತಿದೆಯಂತೆ. ಆ ದಂಪತಿಗಳ ನಡುವೆ ಸುಮಾರು ಹತ್ತರಿಂದ ಹದಿನೈದು ವರ್ಷಗಳ ಅಂತರವಿರಬೇಕು. ಹಾಗಾಗಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಅವರಿಬ್ಬರು ಒಂದೇ ಮಟ್ಟದಲ್ಲಿ ಇಲ್ಲ. ಆದರೆ ಆ ಅನ್ಯೋನತೆ, ಪ್ರೀತಿ ಇನ್ನೂ ಮುಂದುವರಿದಂತೆ ಕಾಣುತ್ತದೆ. ನನ್ನ ಸ್ನೇಹಿತ ಹೇಳಿದ ಆಕೆಗೆ ಇನ್ಯಾವನೋ ಜತೆಗೆ ಅಫೇರ್ ಇದೆ ಎಂದು. ನನಗೆ ನಂಬಲಾಗುತ್ತಿಲ್ಲ. ಅವಳ ಹೊಸ ಸ್ನೇಹಿತನ ಬಗ್ಗೆಯೂ ಆತ ಹೇಳಿದ್ದ. ಅವನೂ ನಮಗಿಬ್ಬರಿಗೂ ಪರಿಚಿತ. ನಾನು ಅವಳಿಗೆ ಫೋನ್ ಮಾಡಿ ಅಭಿನಂದಿಸಬೇಕೆಂದಿದ್ದೆ. ಅವಳ ಹೊಸ ಸಂಬಂಧಕ್ಕಾಗಿ. ಅದಿನ್ನೂ ಆಗಿಲ್ಲ.

ಬಾನಾಡಿ

2 comments:

 1. ಸಂಬಂಧಗಳೇ ಹಾಗೆ , ಇದರ ಬಗ್ಗೆ ಯೋಚಿಸಿದಾಗೆಲ್ಲಾ ಆಶ್ಚರ್ಯವಾಗುತ್ತದೆ. ಮನುಷ್ಯ ತಾನು ಯಾರು, ಸಮಾಜದಲ್ಲಿ ತನ್ನ ಪಾತ್ರ ಎನು ಎಂದು ಕೂಡ ಅರಿಯದೇ ಸಂಬಂಧಗಳಲ್ಲಿ ಮುಳುಗುತ್ತಾನಲ್ಲ.
  ತಮಿಳ್ ದ್ರಾವಿಡ ರೆವಲ್ಯೂಷನ್ ಮಾಡಿದ ನೇತಾರ ಪೆರಿಯಾರ್
  ೭೩ ವಯಸ್ಸಿನಲ್ಲಿ, ಚಿಕ್ಕ ಹುಡುಗಿಯ ಜೊತೆ ಸಂಬಂಧ ಬೆಳಸಿದಾಗ, ತಾನು ಸಮಾಜದಲ್ಲಿ ಡೆಮೊಗಾಡ್ ಆಗಿದ್ದಿನಿ ಎಂಬ ಒಂದು ವಿಚಾರ ಬರಲಿಲ್ಲ. ಹಾಗೇಯೆ ಎನ್.ಟಿ.ಆರ್ ಸಂಬಂಧ ಬಗ್ಗೆ ಕೂಡ ಬಗ್ಗೆ ಅನಿಸುತ್ತದೆ.

  ReplyDelete
 2. ಅಡ್ಡಬಿದ್ದೆ!
  ನಿಮ್ಮ ಬ್ಲಾಗಿಗೆ ನನ್ನ ಮೊದಲ ಭೇಟಿಯಿದು...Impressive!
  ನಿಮ್ಮ ಬರವಣಿಗೆಯ ಧಾಟಿ,ವಿಚಾರ ನಿಜಕ್ಕೂ ಹಿಡಿಸಿತು.
  ಇನ್ನು ಮುಂದೆ ಆಗಾಗ ಬಂದು ಹೋಗ್ತಾ ಇರ್ತೇನೆ...ಯಾಕಂದ್ರೆ ನಿಮ್ಮನೆ ಅಡ್ರೆಸ್ಸನ್ನ ನನ್ನ ಬ್ಲಾಗಿನಲ್ಲಿ ಹಾಕೊಂಡಿದೀನಿ! :)

  ಆದ್ರೂ ಎಲ್ಲ ಮುಗಿವ ವೇಳೆಗೆ ಈ ನಿಮ್ಮ ಮಾತುಗಳು "ನಾನು ಅವಳಿಗೆ ಫೋನ್ ಮಾಡಿ ಅಭಿನಂದಿಸಬೇಕೆಂದಿದ್ದೆ.ಅವಳ ಹೊಸ ಸಂಬಂಧಕ್ಕಾಗಿ.ಅದಿನ್ನೂ ಆಗಿಲ್ಲ." ಕುಹಕದಂತೆ ತೋರಿದವು. ಯಾಕೆಂದು ಅರ್ಥವಾಗ್ಲಿಲ್ಲ...(:ಯೋ)

  ReplyDelete