Thursday, April 26, 2007

ಜೀವನದ ಎತ್ತರಕ್ಕೆ ಹತ್ತುವ ಸಮಯ!

ಹತ್ತನೇ ತರಗತಿಯ ಮಕ್ಕಳಿಗೆಲ್ಲಾ ಇವತ್ತು ಬಹಳ ಮಹತ್ವದ ದಿನ. ಬಹಳಷ್ಟು ಮಕ್ಕಳ ಜೀವನದ ಪ್ರಶ್ನೆಗೆ ಉತ್ತರ ಸಿಗಬಹುದು. ಬಹಳಷ್ಟು ಜನ ಮಕ್ಕಳು ಇನ್ನೂ ಬದುಕಿನ ಕವಲು ದಾರಿಯಲ್ಲಿರಬಹುದು. ಇನ್ನಷ್ಟು ಮಕ್ಕಳು ಅದರಲ್ಲೂ ಹಳ್ಳಿಯಲ್ಲಿರುವ, ಅಶಿಕ್ಷಿತ ತಂದೆತಾಯಂದಿರ ಮಕ್ಕಳು ತಮ್ಮ ಬದುಕಿನ ಈ ಘಟ್ಟದ ಬಗ್ಗೆ ಅಷ್ಟೊಂದು ಮಹತ್ವವನ್ನು ಅನುಭವಿಸದೇ ಇರಬಹುದು.

ನನ್ನ ನೆನಪು ನನ್ನ ಹತ್ತನೇ ತರಗತಿಗೆ ಹೋಗುತ್ತಿದೆ. ನಮ್ಮ ಗಣಿತದ ವಿಶ್ವನಾಥ ಮೇಸ್ಟ್ರು ನಮಗೆ ಬಹಳ ಬುದ್ಧಿ ಹೇಳಿದ್ದರು. ಇದು ನಿಮ್ಮ ಜೀವನದ ಮಹತ್ವದ ಕ್ಷಣಗಳು. ಓದಿರಿ. ಇಲ್ಲಿ ಕಳಕೊಂಡ ಸಮಯ ಮತ್ತು ಅವಕಾಶಗಳನ್ನು ಜೀವನದಲ್ಲಿ ಎಲ್ಲೂ ಮತ್ತೆ ಪಡೆಯಲಾರಿರಿ. ಅವರ ಮಾತುಗಳನ್ನು ಕೆಲವಷ್ಟೇ ಮಂದಿ ಅರ್ಥೈಸಿದರು. ನಮ್ಮ ಸರಕಾರಿ ಹೈಸ್ಕೂಲ್ ನಲ್ವತ್ತು ಪ್ರತಿಶತ ಫಲಿತಾಂಶ ನೀಡಿತ್ತು. ನಾನು ಕೂಡ ಪಾಸಾಗಿದ್ದೆ.

ನನ್ನ ಓರಗೆಯವರಲ್ಲಿ ಹಾಗೂ ಹಿಂದಿನ ವರ್ಷಗಳಲ್ಲಿ ಪಾಸಾಗದವರನ್ನು ಕಂಡು ನಮ್ಮ ಹಳ್ಳಿಯ ಶ್ರಮಿಕರು ನೀನೂ ಕೂಡ ತಯಾರಾಗುತ್ತಿದ್ದಿ. ಮುಂದಿನ ವರ್ಷ ನಮ್ಮೊಂದಿಗೆ ತೋಟದಲ್ಲಿ ದುಡಿಯಲು. ನನ್ನ ಮೇಲೆ ಕೆಲವರಿಗೆ ಭರವಸೆ ಇತ್ತು ಅನ್ನಬೇಕು. ನಾನೂ ಗಂಭೀರವಾಗಿ ಓದಲ್ಲಿಲ್ಲ ಕಾಣುತ್ತದೆ. ಓದಲೆಂದು ಗುಡ್ಡದ ಮೇಲೆ ಹೋಗುತ್ತಿದ್ದೆ. ಓದುವ ದಿನಗಳ ರಜಾ ಸಮಯದಲ್ಲಿ ಬೆಳಗಿನಿಂದಲೇ ಗುಡ್ಡ ಏರುತ್ತಿದ್ದೆ. ಬಿಸಿಲು. ಗುಡ್ಡದ ಗೇರು ಮರಗಳು ಹೂಬಿಟ್ಟು ಇನ್ನೇನು ಗೇರು ಬೀಜಗಳೂ ಹುಟ್ಟುತಿವೆ. ಕಡಲ ಬದಿಯ ತಂಪು ಗಾಳಿ ಉರಿವ ಬಿಸಿಲನ್ನು ತಣ್ಣಾಗಾಗಿಸಿತ್ತು.

ಎಕಾಗ್ರತೆಗೆ ಬಹಳಷ್ಟು ಅಡ್ಡಿಗಳು. ಗುಡ್ಡದ ಬದಿಯಿಂದ ಓಡಾಡುವ ಬಸ್ಸು. ಗೋಳಿಕಟ್ಟೆಯ ಬೀಡಿ ಬ್ರಾಂಚ್ ಗೆ ಹೋಗುವ ಬೀಡಿ ಹುಡುಗಿ, ಹೆಂಗಸರು. ಬೇಸಿಗೆಯಲ್ಲಿ ನಡೆಯುವ ಮದುವೆ, ಇನ್ನಿತರ ಸಮಾರಂಭಗಳಲ್ಲಿ ಪಾಲ್ಗೊಳ್ಳಬೇಕೆಂಬ ಉತ್ಸುಕತೆಯ ಕನಸುಗಳು. ಜತೆಗೆ ಹೊಟ್ಟೆಯ ಚುರುಗುಟ್ಟುವಿಕೆ. ಬೆಳಿಗ್ಗೆ ತಿಂದ ಗೋಧಿ ದೋಸೆ ಕರಗುತ್ತಿದೆ. ಕೈ ಜೇಬಿಗೆ ಹೋಗುತ್ತದೆ. ಕಿಸೆಯಲ್ಲಿ ಸುಮಾರು ನಾಲ್ಕು ರೂಪಾಯಿ ಇರಬೇಕು. ಪೇಟೆಗೆ ಹೋಗಿ ಮೀನಿನ ಊಟ ಮಾಡಿ ಬರಬಹುದಲ್ಲವೇ? ಬಸ್ಸಿನಲ್ಲಿ ಹೋಗಲು ಐವತ್ತು ಪೈಸೆ, ಬರಲು ಐವತ್ತು ಪೈಸೆ. ಊಟಕ್ಕೆ ಎರಡೂವರೆ ರೂಪಾಯಿ. ಬಜೆಟು ಸರಿ ಇದೆ. ಸರಿ ಏನು? ಇನ್ನೂ ಐವತ್ತು ಪೈಸೆ ಮಿಗಿತೆ. ಆಗಲೇ ಅರ್ಥಶಾಸ್ತ್ರದ ಅರಿವು. ಸಿದ್ದಾಂತಗಳು ಗೊತ್ತಿಲ್ಲದಿದ್ದರೂ ಕೆಲಸ ಗೊತ್ತಲ್ಲ.

ಓದಲೆಂದು ಹೋದವನು ಪೇಟೆಗೆ ಹೋಗಿ ಸಮಯ ಹಾಳು ಮಾಡುವುದು ಅಕ್ಕನಿಗೆ ಗೊತ್ತಾಯಿತು. ಬೈಗಳು. ಅಮ್ಮನಿಗೆ ದೂರು. ಬೊಂಬಾಯಿ ಯಲ್ಲಿದ್ದ ಅಣ್ಣನಿಗೂ ಪತ್ರ ಬರೆದು ತಿಳಿಸಿದಳು. ಅಕ್ಕ ನನ್ನ ಮೇಲೆ ಇಟ್ಟ ಪ್ರೀತಿ ಮಮತೆ. ಈಗ ಅಕ್ಕ ತನ್ನ ಮಕ್ಕಳಿಗೆ ಹೇಳುತ್ತಿರಬಹುದು. ಅವರ ಬಗ್ಗೆ ದೂರು ನನಗೆ ಬರುತ್ತಿಲ್ಲ. ಅವರು ಓದುತ್ತಿರಬಹುದು.

ಹತ್ತನೇ ತರಗತಿಯ ಮಧ್ಯಾವಧಿ ಪರೀಕ್ಷೆಯ ಮಧ್ಯಾವಧಿಯಲ್ಲೇ ನನ್ನ ಬಾಬಾ ತೀರಿಹೋದರು. ಎರಡು ಪರೀಕ್ಷೆ ಬರೆಯಲೇ ಇಲ್ಲ. ಕ್ಲಾಸಿನಲ್ಲಿ ಉತ್ತರ ಪತ್ರಿಕೆ ಹಂಚುವಾಗ ನನ್ನ ಉತ್ತರ ಪತ್ರಿಕೆ ಇಲ್ಲ ದಿದ್ದುದಕ್ಕೆ ಅಧ್ಯಾಪಕರು "ನೀನು ಪರೀಕ್ಷೆಗೇ ಚಕ್ಕರ್ ಹೊಡೆದಿಯಾ?" ಎಂದು ಅಣಕಿಸಿದರು. ಉಮ್ಮಲಿಸುತ್ತಿದ್ದ ದುಃಖದಲ್ಲಿ ಅವರ ಬಹಳ ಹತ್ತಿರ ಹೋಗಿ "ನನ್ನ ತಂದೆ ತೀರಿ ಹೋಗಿದ್ದರು" ಎಂದಾಗ ಹೋಗು ಕುಳಿತುಕೋ ಎಂದು ಅಷ್ಟೇ ಅಸಡ್ಡೆಯಿಂದ ಹೇಳಿದ್ದರು.

ನನ್ನ ಸಹಪಾಠಿಗಳು ಸಾಕ್ಷಿಯಾಗಿ ಕ್ಲಾಸಿನ ನಂತರ ಹೇಳಿದರು: ಹೌದು. ಕೆಮೆಸ್ಟ್ರಿ ಪರೀಕ್ಷೆ ದಿವಸ ನಿಮ್ಮ ಮನೆಯ ಕಡೆಯಿಂದ ನಾವು ಹೊಗೆ ನೋಡಿದ್ದೇವೆ ಎಂದು. ಅದು ನನ್ನ ಅಪ್ಪನ ದೇಹವನ್ನು ಸುಟ್ಟ ಚಿತೆಯ ಹೊಗೆ. ಮಾವಿನ ಮರದ ಹಸಿ ಕೊಂಬೆಗಳು, ತೆಂಗಿನ ಕಾಯಿಯ ಸಿಪ್ಪೆ ಹೊಗೆ ಕಾರದೇ ಧಗ ಧಗ ಉರಿಯುತ್ತದೆಯೇನು?

ಏಪ್ರಿಲ್ ತಿಂಗಳೇ ಇರಬೇಕು. ಪರೀಕ್ಷೆ ಫಲಿತಾಂಶ ಬಂದಿದೆ. ಆರಾಮವಾಗಿ ಶಾಲೆಗೆ ಹೋಗಿ ಕಾಯುತ್ತಿದ್ದೇವೆ. ಕೆಲವರನ್ನು ಬಿಟ್ಟರೆ ಇನ್ಯಾರಿಗೂ ಆಸಕ್ತಿ ಇರಲ್ಲಿಲ್ಲ.


ಫಲಿತಾಂಶ ನೋಡಿ ಮನೆಗೆ ಬರುತ್ತೇನೆ. ಸಮಯ ಸುಮಾರು ಎರಡು ಕಳೆದಿರಬೇಕು. ಹೊರಗಡೆ ಬಿಸಿಲು. ಬಸ್ಸಿಳಿದು ಗುಡ್ಡವಿಳಿದು ಬರಬೇಕಾದರೆ ಮುಖ ಬಾಡಿತ್ತು. ಮನೆಯಲ್ಲೆಲ್ಲರೂ ನಾನು ಪಾಸಾಗಿಲ್ಲ ವೆಂದೇ ನನ್ನ ಮುಖ ನೋಡಿ ತಿಳಿದರು. ನಾನು ಪಾಸಾಗಿದ್ದೇನೆ ಎಂದು ನಾನು ಹೇಳಿದಾಗ ನನ್ನ ಅಮ್ಮ ಮಾತ್ರ ನಂಬಿದರು. ಬಿಸಿಲಿಗೆ ಮಗನ ಮುಖ ಬಾಡಿದೆ. ಫೇಲಾಗಿಲ್ಲ ಎಂದು ಎಲ್ಲರಿಗೂ ಭರವಸೆ ನೀಡಿದಳು.

ನಾನಿನ್ನೂ ಆ ಪಾಸ್ ಕುರಿತು ಆಚರಿಸಿಲ್ಲ. ಬದುಕೇ ಒಂದು ಆಚರಣೆ. ಹತ್ತನೆ ತರಗತಿ ನಿಜಕ್ಕೂ ಜೀವನದ ಎತ್ತರಕ್ಕೆ ಏರುವ ಸಮಯ.

ಪಾಸಾಗದ ಎಲ್ಲಾ ವಿದ್ಯಾರ್ಥಿಗಳ ಜತೆಗೆ ನಾನಿದ್ದೇನೆ. ಮುಂದಿನ ಸಲ ಖಂಡಿತಾ ಪಾಸಾಗುವಿರಿ.

ನೂರಕ್ಕೆ ತೊಂಬತೊಂಭತ್ತು ಶೇಕಡಾ ಸಿಕ್ಕಿಲ್ಲ ವೆಂದು ವ್ಯಥಿಸುವ ವಿದ್ಯಾರ್ಥಿಗಿಂತ ಕನಿಷ್ಟ ಶೇಕಡಾದಲ್ಲಿ ಪಾಸಾದ ವಿದ್ಯಾರ್ಥಿಯ ಖುಷಿ ಹೆಚ್ಚಿನದು.


ಒಲವಿನಿಂದ, ಪ್ರೀತಿಯಿಂದ
ಬಾನಂಚಿನಲ್ಲಿ ಹಾರುವ ಬಾನಾಡಿNo comments:

Post a Comment