Saturday, April 28, 2007

ಯಾವುದು ಧರ್ಮ?

ಅವತ್ತು ನಮ್ಮ ಕಾಲೇಜು ದಿನಾಚರಣೆ. ರಾತ್ರಿ ಸುಮಾರು ಹನ್ನೊಂದು ಗಂಟೆ ಹೊತ್ತಿಗೆ ನಾವೆಲ್ಲರೂ ಅಂದ್ರೆ ನಮ್ಮ ಕಾಲೇಜಿನ ಸಹಪಾಠಿಗಳು ಉತ್ಸವ ಮುಗಿಸಿ ಅವರವರ ರೂಮ್ ಗಳಿಗೆ ಹೊರಟೆವು. ಒಂದಿಬ್ಬರು ಮಿತ್ರರು ಮನೆ ದೂರವಿದ್ದುದರಿಂದ ನಮ್ಮ ರೂಮ್ ನಲ್ಲೇ ರಾತ್ರಿ ಉಳಿದರು. ಅವರೆಲ್ಲಾ ಬಂದಿದುದರಿಂದ ನಾವೂ ಅದೂ ಇದೂ ಮಾತಾಡುತ್ತಾ ಇನ್ನೂ ಬಹಳ ರಾತ್ರಿ ನಿದ್ದೆಯೇ ಮಾಡಿರಲ್ಲಿಲ್ಲ. ಸುಮಾರು ಮೂರು ಗಂಟೆಯಾಗಿರಬಹುದು. ನಾವು ಮಲಗಿದ್ದಲ್ಲೇ ಮಾತಾಡುತ್ತಿದ್ದೇವು. ಹೊರಗಡೆ ಯಾರೋ ಬಂದಂತೆ ಆಯಿತು. ನಮ್ಮದು ಸುಮಾರು ಏಳೆಂಟು ರೂಮ್ ಗಳು ಸಾಲಾಗಿ ಇದ್ದವು. ಎಲ್ಲಾ ರೂಮ್‌ಗಳ ಬಾಗಿಲುಗಳ ಚಿಲಕಗಳನ್ನು ಹೊರಗಿನಿಂದ ಹಾಕಿದಂತೆ ಎಣಿಸಿತು. ನಾನು ಬಾಗಿಲು ತೆಗೆಯಲು ನೋಡಿದೆ. ಹೌದು ಹೊರಗಿನಿಂದ ಬಾಗಿಲು ಹಾಕಿದ್ದು ಖಾತ್ರಿಯಾಯಿತು. ನಮ್ಮ ರೂಮ್‌ಗೆ ಹಿಂದಿನಿಂದಲೂ ಬಾಗಿಲಿತ್ತು. ನಮ್ಮ ಗೆಳೆಯರೊಬ್ಬರ ರೂಮಿಗೂ ಹಿಂದಿನಿಂದ ಬಾಗಿಲಿತ್ತು. ನಾನು ಹಿಂದಿನ ಬಾಗಿಲಿನಲ್ಲಿ ಹೋಗಿ ಅವರನ್ನು ಎಚ್ಚರಿಸಿದ್ದೆ. ಪಾಪ ಆತ ತನ್ನ ತಂಗಿ ಮತ್ತು ಅಕ್ಕನವರ ಜತೆ ಇದ್ದನು. ಏನು ನಡೆಯುತ್ತಿದೆ ಎಂದು ನಾವು ನಾವೇ ವಿಚಾರಿಸಿದೆವು. ಕಾಲೇಜಿನ ಹುಡುಗರೇ ಏನೋ ಕೀಟಲೆ ಮಾಡಲು ತೊಡಗಿರಬೇಕೆಂದು ಕೊಂಡೆವು. ನಾನು ಮತ್ತು ಗೆಳೆಯರು ಸೇರಿ ರೂಮ್‌ಗಳ ಬದಿಯಿಂದ ಬಂದು ಜೋರಾಗಿ ಬೊಬ್ಬೆ ಹೊಡೆದೆವು. ಬಂದವರೆಲ್ಲಾ ನಮ್ಮ ಅನಿರೀಕ್ಷಿತ ಬೊಬ್ಬೆಯಿಂದ ಗಾಬರಿಗೊಂಡರು. ಕೆಲವರು ಓಡಿದರು. ನಾವು ಕಲ್ಲು ಎಸೆಯಲು ಆರಂಭಿಸಿದೆವು. ನಮ್ಮ ಆಕ್ರಮಣವನ್ನು ತಿಳಿದ ಅವರೆಲ್ಲರೂ ಓಡಿದರು. ನಾವು ನಮ್ಮ ರೂಮ್‌ಗಳ ಮಾಲಿಕ ಅಲ್ಲೇ ಪಕ್ಕದಲ್ಲಿದ್ದ ಅವರ ಮನೆಗೆ ಹೋಗಿ ವಿಚಾರ ತಿಳಿಸಿದೆವು. ಅವರು ಕೂಡ ಬಂದರು. ಎಲ್ಲರೂ ಓಡಿ ಹೋಗಿಲ್ಲ ಎಂದು ನಾವು ಎಣಿಸಿದ್ದೆವು. ಹಾಗಾಗಿ ಜಾಗ್ರತೆಯಿಂದ ಯಾರಾದರೂ ಇದ್ದಾರ ಎಂದು ಮನೆಮಾಲೀಕ ಸೇರಿ ಹುಡುಕಿದೆವು. ಕೊನೆಗೊಬ್ಬ ಓಡಿದ. ನಾವು ಟಾರ್ಚ್ ಬೆಳಕು ಬಿಟ್ಟೆವು. ಆತ ಗುಡ್ಡ ಹಳ್ಳ ಎಂದು ಗಣಿಸದೇ ಓಟಕ್ಕಿತ್ತ. ಎಲ್ಲಾ ಹೋದರು ಎಂದು ಖಾತ್ರಿಯಾದ ಮೇಲೆ ನಮಗೆಲ್ಲಾ ಮತ್ತೆ ಸ್ವಲ್ಪ ಸಮಾಧಾನ ವಾಯಿತು. ನನ್ನ ಗೆಳೆಯನ ಸಹೋದರಿಯರು ಹೆದರಿದ್ದರು. ಎಲ್ಲರಿಗೂ ಧೈರ್ಯ ಕೊಟ್ಟವ ಮನೆ ಮಾಲಿಕ. ನಮ್ಮ ರೂಮ್‌ಗಳ ಸಾಲಿಗೇ ಬೆಂಕಿಯಿಡಲು ಬಂದಿದ್ದಾರೆ ಎಂದು ಆತ ಹೇಳಿದ. ನಮಗೆ ಇದೆಲ್ಲಾ ಅರ್ಥವಾಗಿಲ್ಲ. ನಾವಂದೆವು. ಇದ್ಯಾರೋ ಕಾಲೇಜಿನ ಹುಡುಗರೇ ಕೀಟಲೆ ಮಾಡಲು ಬಂದಿರ ಬೇಕು ಎಂದು. ನಮ್ಮ ಮನೆಮಾಲಿಕ ಮೊಯಿನುದ್ದೀನ್ ಹೇಳಿದ. ಪೇಟೆಯಲ್ಲಿ ಕೋಮು ಗಲಭೆ ಆರಂಭವಾಗಿದೆ. ಕಳೆದೆರಡು ದಿನಗಳಿಂದ ಮಸೀದಿಗಳಿಗೆ ಹಾಗೂ ದೇವಸ್ಥಾನಗಳಿಗೆ ಆಕ್ರಮಣವಾಗುತ್ತಿದೆ. ಮುಸಲ್ಮಾನರ ದೊಡ್ಡ ದೊಡ್ಡ ಮನೆಗಳಿಗೆ, ಹಿಂದುಗಳ ಭಜನಾ ಮಂದಿರಗಳಿಗೆ ಬೆಂಕಿಹಾಕುವ ಪ್ರಯತ್ನದಲ್ಲಿದ್ದಾರೆ ಕಿಡಿಗೇಡಿಗಳು ಎಂದು ಆತ ಹೇಳಿದ. ನೀವು ಎಚ್ಚರದಿಂದೆದ್ದು ನಮ್ಮ ರೂಮ್‌ಗಳಿಗೆ ಬೆಂಕಿ ಬೀಳದಂತೆ ಮಾಡಿದಕ್ಕೆ ಆತ ಧನ್ಯವಾದ ಹೇಳಿದ. ನನಗೆ ಆತ ಎರಡು ತಿಂಗಳ ಬಾಡಿಗೆಯನ್ನೂ ಮನ್ನ ಮಾಡಿದ. ನಾವು ಮುಗ್ದರಾಗಿ ಈ ಕೋಮುಗಲಭೆಯ ಬಗ್ಗೆ ಹೆಚ್ಚು ತಿಳಿದಿರಲ್ಲಿಲ್ಲ. ಬೇರಾವುದೋ ಊರಿನಲ್ಲಿ ಗಲಭೆಯಾದಾಗ ನಾವು ಕೂಡ ಬಹಳ ತೀವ್ರವಾಗಿ ಪ್ರತಿಸ್ಪಂದಿಸುತ್ತಿದ್ದೇವು. ಗಲಭೆ ಆರಂಭವಾಗಿ ಮೂರ್ನಾಲ್ಕು ದಿನವಾಗಿತ್ತಂತೆ. ಪತ್ರಿಕೆಗಳಿಗಾಗಲೀ ಜನರಿಗಾಗಲೀ ಈ ಕುರಿತು ಹೆಚ್ಚಿನ ಮಾಹಿತಿ ಇರಲ್ಲಿಲ್ಲ. ಪೋಲೀಸ್ ಪಡೆಯವರು ಗಲಭೆ ಜಾಸ್ತಿಯಾಗಬಾರದೆಂದು ಯಾವುದೇ ಪತ್ರಿಕೆಗಳಲ್ಲಿ ಈ ವಿಚಾರ ಬರದಂತೆ ಎಚ್ಚರಿಕೆ ವಹಿಸಿದ್ದರು. ನಮ್ಮ ಈ ಗಲಭೆಯಲ್ಲಿ ಸುಮಾರು ಹತ್ತು ಹೆಣ ಬಿದ್ದಿದೆ ಎಂದು ನಮಗೆ ತಿಳಿಯಿತು. ಆದರೆ ಯಾವುದೇ ಪತ್ರಿಕೆ ವರದಿ ಮಾಡಲ್ಲಿಲ್ಲ. ಮೊಯಿನುದ್ದೀನ್ ಗಲ್ಫ್ ದೇಶದಲ್ಲಿ ದುಡಿದು ಊರಿಗೆ ವಾಪಾಸಾಗಿದ್ದ. ಬಂಜರು ಭೂಮಿಯಲ್ಲಿ ತೆಂಗಿನ ಗಿಡ ನೆಟ್ಟು ಬೋರ್‌ವೆಲ್ ಹಾಕಿದ್ದ. ಜತೆಗೆ ರೂಮ್‌ಗಳನ್ನು ಕಟ್ಟಿಸಿ ನಮ್ಮಂತಹ ಹಳ್ಳಿಯ ಹುಡುಗರಿಗೆ ಬಾಡಿಗೆಗೆ ಕೊಟ್ಟಿದ್ದ. ಆತನೂ ನಾವೂ ಒಂಥರ ಸ್ನೇಹಿತರೇ. ಆತನು ಕೆಲವೊಮ್ಮೆ ನಮ್ಮ ಪೇಟೆಯ ಬಾರ್‌ನಲ್ಲಿ ನಮಗೆ ಸಿಗುತ್ತಿದ್ದ. ನಮ್ಮನ್ನು ಕಂಡು ಮುಗುಳ್ನ್ಗುತ್ತಿದ್ದ. ಅಲ್ಲಿ ಸಿಕ್ಕಿದ್ದನ್ನು ತನ್ನ ಮುದಿ ಅಪ್ಪನಿಗೆ ಹೇಳಬೇಡಿ ಎಂದು ಆತನು ನಮಗೆ ಮೊದಲೇ ಸೂಚಿಸಿದ್ದ. ಆತ ಸ್ವಲ್ಪ ದಿನಗಳ ನಂತರ ಹೇಳಿದ್ದ. ಆತನಲ್ಲೂ ಬಂದೂಕು ಇತ್ತಂತೆ. ಆದರೆ ಕೋಮು ಗಲಭೆಯಿದೆಯೆಂದು ಅದನ್ನು ಹೊರ ತೆಗೆಯಲ್ಲಿಲ್ಲ. ಇಲ್ಲ ದಿದ್ದರೆ ಅವತ್ತು ಕನಿಷ್ಟ ಎರಡು ಹೆಣ ಬೀಳುತ್ತಿತ್ತು ಎಂದು. ಗಲಾಟೆಯ ನಂತರ ಒಂದು ವಾರ ಪೋಲೀಸರಿಬ್ಬರು ಬಂದು ನಮ್ಮ ರೂಮ್‌ಗಳ ಪಕ್ಕ ಠಿಕಾಣಿ ಹೂಡಿದ್ದರು. ಪಾಳಿಯಲ್ಲಿ ಬರುತ್ತಿದ್ದ ಅವರೂ ನಮಗೆ ಸ್ನೇಹಿತರಾದರು.

ಒಲವಿನಿಂದ
ಬಾನಾಡಿ

Friday, April 27, 2007

ಸಾವು ನಮಗೆ ಎಲ್ಲಿಂದಲೂ ಬರಬಹುದು!

ಸಾವಿಗೆ ದಾರಿ ಬೇಡ. ಅದು ಹೋದಲ್ಲಿ ದಾರಿಯಾಗುತ್ತದೆ. ನಗರವಿರಲಿ, ಹಳ್ಳಿಯಿರಲಿ ಅದು ಹುಡುಕುತ್ತದೆ. ಮಕ್ಕಳಿರಲಿ, ಮುದುಕರಿರಲಿ ಅದರ ಆಯ್ಕೆ ಅದಕ್ಕೇ. ನಾವು ಎಣಿಸಿದಂತೆ ಅದನ್ನು ನರ್ತಿಸಲಾಗುವುದಿಲ್ಲ. ಕೆಲವೊಮ್ಮೆ ಸಾವು ನಿಗೂಢ ಆದಷ್ಟೇ ಅದಕ್ಕೆ ಒಳಗಾದವರೂ ನಿಗೂಢರಾಗಿರುತ್ತಾರೆ. ನನ್ನ ದೊಡ್ಡಜ್ಜನ ಮಗನ ಮಗಳ ಮಗಳು ಅಂದರೆ ನನ್ನ ಅಕ್ಕನ ಮಗಳು ಕಮಲ ಬಾವಿಗೆ ಬಿದ್ದು ಸತ್ತಾಗ ನಾನು ಐದನೆ ಕ್ಲಾಸಿನಲ್ಲಿದ್ದೆ. ಅವಳೇಕೆ ಸತ್ತಳು ಎಂದು ನನಗೀಗಲೂ ನಿಗೂಢ. ಅವಳು ಸತ್ತು ಎರಡು ವರ್ಷ ನಂತರ ಅಕ್ಕನಿಗೆ ಮತ್ತೊಂದು ಮಗುವಾಯಿತು. ಗಂಡು ಮಗು. ಶಿವಪ್ಪ. ಆತ ದೊಡ್ಡವನಾದ. ಅದು ಇದೂ ಎಂದು ಅವನು ಓದುವುದರಲ್ಲಿ ಜಾಣನಾಗಿರಲ್ಲಿಲ್ಲ ಅಂತ ಕಾಣುತ್ತದೆ. ಅವನಿಗೆ ಹದಿನೆಂಟು ವರ್ಷವಾಗಿರಬೇಕು ಆಗ ಅವನು ಉಡುಪಿಗೆ ಕೆಲಸಕ್ಕೆ ಹೋದ. ನನ್ನ ಅಣ್ಣನ ಮಗ ಅಲ್ಲಿ ಯಾವುದೋ ಕೆಲಸದಲ್ಲಿ ಇದ್ದ. ಆವರಿಬ್ಬರೂ ಒಳ್ಳೆಯ ಗೆಳೆಯರಾಗಿದ್ದುದರಿಂದ ಅವರಿಬ್ಬರೂ ಕೆಲಸಕ್ಕೆ ಜತೆಗೆ ಹೋದರು. ಒಂದು ದಿನ ಸಂಜೆ ಶಿವಪ್ಪ ರೂಮಿಗೆ ಬರಲ್ಲಿಲ್ಲ. ನನ್ನ ಅಣ್ಣನ ಮಗ ಅವನು ಊರಿಗೆ ಹೋಗಿರಬಹುದೆಂದು ಊರಿಗೆ ಫೋನ್ ಮಾಡಿದ. ಊರಿಗೆ ಬಂದ ಸುದ್ದಿ ತಿಳಿಯಲಿಲ್ಲ. ದಿನಗಳು ಒಂದು, ಎರಡು ಎಂದು ಉರುಳತೊಡಗಿದವು. ಮೂರು ದಿನಗಳ ನಂತರ ಗುಡ್ಡದಲ್ಲಿನ ಮರವೊಂದರಲ್ಲಿ ಒಬ್ಬ ವ್ಯಕ್ತಿಯ ದೇಹ ನೇತಾಡುವ ವಿಚಾರ ತಿಳಿಯಿತು. ನೋಡಿದರೆ ಶಿವಪ್ಪನದು. ಸತ್ತು ಮೂರು ದಿನವಾಗಿರಬಹುದು. ಉಟ್ಟ ಬಟ್ಟೆಗಳಿಂದಲೇ ಪರಿಚಯ ಸಿಕ್ಕಿತು. ಆತನೂ ಏಕೆ ಸತ್ತ ಎಂಬುದು ನಿಗೂಢ. ಕತೆಗಳು ತುಂಬಾ ಕಟ್ಟಿದವು. ಆದರೆ ಯಾವುದೇ ಕತೆಗೆ ಸಾವು ಇಷ್ಟು ಹತ್ತಿರ ಬರಬೇಕೇ ಎಂದು ಸಾಬೀತು ಪಡಿಸಲಾಗಿಲ್ಲ. ನನ್ನ ಆ ಅಕ್ಕನ ಗಂಡ ಕಳೆದ ವರ್ಷ ಸತ್ತರು. ಸತ್ತ ಸುದ್ದಿ ನನಗೆ ತಿಳಿದರೂ ವಯಸ್ಸಾದ ನನ್ನ ಅಮ್ಮನಿಗೆ ಅದನ್ನು ತಿಳಿಸುವ ವಿಚಾರ ನನಗೆ ಹಿಡಿಸಲಿಲ್ಲ. ಅಮ್ಮನಿಗೆ ನನ್ನ ಆ ಭಾವನ ಬಗ್ಗೆ ಮಮತೆ ಇರಬಹುದು. ಆತ ಸತ್ತ ಮೇಲೆ ದುಃಖವಾಗಬಹುದು ಎಂದು ನಾನು ಯೋಚಿಸಿದ್ದೆ. ಕೊನೆಗೆ ಏನೋ ಮಾತಾಡುವಾಗ ಆ ಅಕ್ಕನ ಇನ್ನೊಬ್ಬ ಮಗ ಬೆಂಗಳೂರಿನಿಂದ ಬಂದಿದ್ದನ್ನು ಹೇಳಿ ಅವನ ಅಪ್ಪ ಮೊನ್ನೆ ಸತ್ತು ಹೋದರು ಎಂದು ಅಮ್ಮನಿಗೆ ಹೇಳಿದೆ. ಅಮ್ಮ ನಾನೆಣಿಸಿದಷ್ಟು ವಿಚಲಿತಲಾಗಲ್ಲಿಲ್ಲ. ಅವಳ ವಯಸ್ಸು, ಅವಳು ಪಟ್ಟ ಬವಣೆ ಅವಳನ್ನು ಹಾಗೆ ಮಾಡಿದ್ದಿರಬಹುದು. ಅವಳು ನನ್ನಿಂದಲೂ ಹೆಚ್ಚು ಸಾವನ್ನು ಕಂಡಿರಬಹುದು. ಅವಳ ಕೊನೆಯ ಮಗು ನನ್ನ ತಮ್ಮ ಹುಟ್ಟಿ ಹದಿನೈದು ದಿನಕ್ಕೆ ಸತ್ತಾಗ ಅವಳು ಅಷ್ಟು ಹೊತ್ತು ಅತ್ತಿಲ್ಲ ದಿರಬಹುದು. ಅಂದು ನಾನು ಶಾಲೆಯಿಂದ ಬಂದಾಗ ಅಮ್ಮನ ಹೆರಿಗೆ ಮತ್ತು ಮಗುವಿನ ಆರೈಕೆಗೆ ಬಂದಿದ್ದ ಮೇಲಿನ ಮನೆಯ ಅತ್ತೆ ಮತ್ತಿತರರು ಚಿಂತಾಕ್ರಾಂತರಾಗಿದ್ದರು. ನಾನು ಬಂದೊದನೆ ಅತ್ತೆ ಹೇಳಿದರು. ಮಗು ತೀರಿ ಹೋಯಿತು. ನಿನ್ನ ಅಪ್ಪ ಅದನ್ನು ತೋಟದ ಆಚೆ ಮಣ್ಣು ಮಾಡಿದರು ಎಂದು. ನಾನು ಅತ್ತೆ. ಜೋರಾಗಿ ಅತ್ತೆ. ನನಗೆ ಗೊತ್ತಿಲ್ಲ ಏಕೆ ಅಳುವುದೆಂದು. ನನ್ನಲ್ಲಿ ಯಾವುದೇ ಭಾವನಾತ್ಮಕ ಸಂಬಂಧವನ್ನು ಬೆಳಿಸಿಕೊಳ್ಳಲಾಗದ ಹದಿನೈದು ದಿನಗಳ ಸಣ್ಣ ಮಗು ಸತ್ತಾಗ ಆರೇಳು ವರ್ಷದ ನಾನು ಅತ್ತದ್ದು ನನ್ನ ಹೃದಯದ ಒಳಗಿನಿಂದ ಇರಬಹುದು. ಸಾವು ಹುಟ್ಟಿದ ಹದಿನೈದು ದಿನಗಳೊಳಗೆ ಬಂದು ಬಿಟ್ಟಿತು. ಹುಟ್ಟು ಮತ್ತು ಸಾವನ್ನು ಆ ಜೀವ ಬಹಳ ಬೇಗ ಬೇಗನೆ ಅನುಭವಿಸಿತು. ಸಾವು ನಾವು ಕರೆದಾಗ ಬರುವುದಿಲ್ಲ. ಅದರ ದಾರಿ ಅದರ ಸಮಯ ಅದಕ್ಕೆ. ನನ್ನ ಮಾವ ತನ್ನ ಮಗ ತನ್ನಲ್ಲಿ ಹೇಳದೇ ಕೇಳದೇ ಹುಡುಗಿಯೊಬ್ಬಳನ್ನು ಮದುವೆಯಾದ ಎಂದು ವಿಷಕುಡಿದು ಬಿಟ್ಟಿದ್ದರು. ಅವರಿಗೆ ಮೊದಲೇ ಆರಾಮವಿಲ್ಲ. ನರಗಳ ದೌರ್ಬಲ್ಯ. ಜತೆಗೆ ಆಲೋಪತಿ ಔಷಧಿ ತಿಂದರೆ ಆಗುವುದಿಲ್ಲ. ಎರಡು ದಿನ ಮೂರ್ಛಿತರಾಗಿದ್ದ ಅವರು ಸಾಯಲಿಲ್ಲ. ಹಳೆಯ ಕಾಯಿಲೆ ಎಲ್ಲಾ ಮುಗಿಯಿತು ಎಂದು ಹೇಳುತಿದ್ದರು. ಒಂದೆರಡು ವರ್ಷದ ನಂತರವೂ ಅವರ ವಿಷ ಜಾರಿಲ್ಲ ಅಂತ ಕಾಣುತ್ತದೆ. ಸಾವು ಅವರ ಹತ್ತಿರ ಸುಳಿಯಲಿಲ್ಲ. ಸಾವಿಗೆ ಅದರದೇ ಆದ ದಾರಿ. ಅದರದೇ ಆದ ಸಮಯ. ನಮ್ಮ ಕೈಯಲ್ಲಿ ಅದಿಲ್ಲ.
ಒಲವಿನಿಂದ
ಬಾನಾಡಿ.

Thursday, April 26, 2007

ಜೀವನದ ಎತ್ತರಕ್ಕೆ ಹತ್ತುವ ಸಮಯ!

ಹತ್ತನೇ ತರಗತಿಯ ಮಕ್ಕಳಿಗೆಲ್ಲಾ ಇವತ್ತು ಬಹಳ ಮಹತ್ವದ ದಿನ. ಬಹಳಷ್ಟು ಮಕ್ಕಳ ಜೀವನದ ಪ್ರಶ್ನೆಗೆ ಉತ್ತರ ಸಿಗಬಹುದು. ಬಹಳಷ್ಟು ಜನ ಮಕ್ಕಳು ಇನ್ನೂ ಬದುಕಿನ ಕವಲು ದಾರಿಯಲ್ಲಿರಬಹುದು. ಇನ್ನಷ್ಟು ಮಕ್ಕಳು ಅದರಲ್ಲೂ ಹಳ್ಳಿಯಲ್ಲಿರುವ, ಅಶಿಕ್ಷಿತ ತಂದೆತಾಯಂದಿರ ಮಕ್ಕಳು ತಮ್ಮ ಬದುಕಿನ ಈ ಘಟ್ಟದ ಬಗ್ಗೆ ಅಷ್ಟೊಂದು ಮಹತ್ವವನ್ನು ಅನುಭವಿಸದೇ ಇರಬಹುದು.

ನನ್ನ ನೆನಪು ನನ್ನ ಹತ್ತನೇ ತರಗತಿಗೆ ಹೋಗುತ್ತಿದೆ. ನಮ್ಮ ಗಣಿತದ ವಿಶ್ವನಾಥ ಮೇಸ್ಟ್ರು ನಮಗೆ ಬಹಳ ಬುದ್ಧಿ ಹೇಳಿದ್ದರು. ಇದು ನಿಮ್ಮ ಜೀವನದ ಮಹತ್ವದ ಕ್ಷಣಗಳು. ಓದಿರಿ. ಇಲ್ಲಿ ಕಳಕೊಂಡ ಸಮಯ ಮತ್ತು ಅವಕಾಶಗಳನ್ನು ಜೀವನದಲ್ಲಿ ಎಲ್ಲೂ ಮತ್ತೆ ಪಡೆಯಲಾರಿರಿ. ಅವರ ಮಾತುಗಳನ್ನು ಕೆಲವಷ್ಟೇ ಮಂದಿ ಅರ್ಥೈಸಿದರು. ನಮ್ಮ ಸರಕಾರಿ ಹೈಸ್ಕೂಲ್ ನಲ್ವತ್ತು ಪ್ರತಿಶತ ಫಲಿತಾಂಶ ನೀಡಿತ್ತು. ನಾನು ಕೂಡ ಪಾಸಾಗಿದ್ದೆ.

ನನ್ನ ಓರಗೆಯವರಲ್ಲಿ ಹಾಗೂ ಹಿಂದಿನ ವರ್ಷಗಳಲ್ಲಿ ಪಾಸಾಗದವರನ್ನು ಕಂಡು ನಮ್ಮ ಹಳ್ಳಿಯ ಶ್ರಮಿಕರು ನೀನೂ ಕೂಡ ತಯಾರಾಗುತ್ತಿದ್ದಿ. ಮುಂದಿನ ವರ್ಷ ನಮ್ಮೊಂದಿಗೆ ತೋಟದಲ್ಲಿ ದುಡಿಯಲು. ನನ್ನ ಮೇಲೆ ಕೆಲವರಿಗೆ ಭರವಸೆ ಇತ್ತು ಅನ್ನಬೇಕು. ನಾನೂ ಗಂಭೀರವಾಗಿ ಓದಲ್ಲಿಲ್ಲ ಕಾಣುತ್ತದೆ. ಓದಲೆಂದು ಗುಡ್ಡದ ಮೇಲೆ ಹೋಗುತ್ತಿದ್ದೆ. ಓದುವ ದಿನಗಳ ರಜಾ ಸಮಯದಲ್ಲಿ ಬೆಳಗಿನಿಂದಲೇ ಗುಡ್ಡ ಏರುತ್ತಿದ್ದೆ. ಬಿಸಿಲು. ಗುಡ್ಡದ ಗೇರು ಮರಗಳು ಹೂಬಿಟ್ಟು ಇನ್ನೇನು ಗೇರು ಬೀಜಗಳೂ ಹುಟ್ಟುತಿವೆ. ಕಡಲ ಬದಿಯ ತಂಪು ಗಾಳಿ ಉರಿವ ಬಿಸಿಲನ್ನು ತಣ್ಣಾಗಾಗಿಸಿತ್ತು.

ಎಕಾಗ್ರತೆಗೆ ಬಹಳಷ್ಟು ಅಡ್ಡಿಗಳು. ಗುಡ್ಡದ ಬದಿಯಿಂದ ಓಡಾಡುವ ಬಸ್ಸು. ಗೋಳಿಕಟ್ಟೆಯ ಬೀಡಿ ಬ್ರಾಂಚ್ ಗೆ ಹೋಗುವ ಬೀಡಿ ಹುಡುಗಿ, ಹೆಂಗಸರು. ಬೇಸಿಗೆಯಲ್ಲಿ ನಡೆಯುವ ಮದುವೆ, ಇನ್ನಿತರ ಸಮಾರಂಭಗಳಲ್ಲಿ ಪಾಲ್ಗೊಳ್ಳಬೇಕೆಂಬ ಉತ್ಸುಕತೆಯ ಕನಸುಗಳು. ಜತೆಗೆ ಹೊಟ್ಟೆಯ ಚುರುಗುಟ್ಟುವಿಕೆ. ಬೆಳಿಗ್ಗೆ ತಿಂದ ಗೋಧಿ ದೋಸೆ ಕರಗುತ್ತಿದೆ. ಕೈ ಜೇಬಿಗೆ ಹೋಗುತ್ತದೆ. ಕಿಸೆಯಲ್ಲಿ ಸುಮಾರು ನಾಲ್ಕು ರೂಪಾಯಿ ಇರಬೇಕು. ಪೇಟೆಗೆ ಹೋಗಿ ಮೀನಿನ ಊಟ ಮಾಡಿ ಬರಬಹುದಲ್ಲವೇ? ಬಸ್ಸಿನಲ್ಲಿ ಹೋಗಲು ಐವತ್ತು ಪೈಸೆ, ಬರಲು ಐವತ್ತು ಪೈಸೆ. ಊಟಕ್ಕೆ ಎರಡೂವರೆ ರೂಪಾಯಿ. ಬಜೆಟು ಸರಿ ಇದೆ. ಸರಿ ಏನು? ಇನ್ನೂ ಐವತ್ತು ಪೈಸೆ ಮಿಗಿತೆ. ಆಗಲೇ ಅರ್ಥಶಾಸ್ತ್ರದ ಅರಿವು. ಸಿದ್ದಾಂತಗಳು ಗೊತ್ತಿಲ್ಲದಿದ್ದರೂ ಕೆಲಸ ಗೊತ್ತಲ್ಲ.

ಓದಲೆಂದು ಹೋದವನು ಪೇಟೆಗೆ ಹೋಗಿ ಸಮಯ ಹಾಳು ಮಾಡುವುದು ಅಕ್ಕನಿಗೆ ಗೊತ್ತಾಯಿತು. ಬೈಗಳು. ಅಮ್ಮನಿಗೆ ದೂರು. ಬೊಂಬಾಯಿ ಯಲ್ಲಿದ್ದ ಅಣ್ಣನಿಗೂ ಪತ್ರ ಬರೆದು ತಿಳಿಸಿದಳು. ಅಕ್ಕ ನನ್ನ ಮೇಲೆ ಇಟ್ಟ ಪ್ರೀತಿ ಮಮತೆ. ಈಗ ಅಕ್ಕ ತನ್ನ ಮಕ್ಕಳಿಗೆ ಹೇಳುತ್ತಿರಬಹುದು. ಅವರ ಬಗ್ಗೆ ದೂರು ನನಗೆ ಬರುತ್ತಿಲ್ಲ. ಅವರು ಓದುತ್ತಿರಬಹುದು.

ಹತ್ತನೇ ತರಗತಿಯ ಮಧ್ಯಾವಧಿ ಪರೀಕ್ಷೆಯ ಮಧ್ಯಾವಧಿಯಲ್ಲೇ ನನ್ನ ಬಾಬಾ ತೀರಿಹೋದರು. ಎರಡು ಪರೀಕ್ಷೆ ಬರೆಯಲೇ ಇಲ್ಲ. ಕ್ಲಾಸಿನಲ್ಲಿ ಉತ್ತರ ಪತ್ರಿಕೆ ಹಂಚುವಾಗ ನನ್ನ ಉತ್ತರ ಪತ್ರಿಕೆ ಇಲ್ಲ ದಿದ್ದುದಕ್ಕೆ ಅಧ್ಯಾಪಕರು "ನೀನು ಪರೀಕ್ಷೆಗೇ ಚಕ್ಕರ್ ಹೊಡೆದಿಯಾ?" ಎಂದು ಅಣಕಿಸಿದರು. ಉಮ್ಮಲಿಸುತ್ತಿದ್ದ ದುಃಖದಲ್ಲಿ ಅವರ ಬಹಳ ಹತ್ತಿರ ಹೋಗಿ "ನನ್ನ ತಂದೆ ತೀರಿ ಹೋಗಿದ್ದರು" ಎಂದಾಗ ಹೋಗು ಕುಳಿತುಕೋ ಎಂದು ಅಷ್ಟೇ ಅಸಡ್ಡೆಯಿಂದ ಹೇಳಿದ್ದರು.

ನನ್ನ ಸಹಪಾಠಿಗಳು ಸಾಕ್ಷಿಯಾಗಿ ಕ್ಲಾಸಿನ ನಂತರ ಹೇಳಿದರು: ಹೌದು. ಕೆಮೆಸ್ಟ್ರಿ ಪರೀಕ್ಷೆ ದಿವಸ ನಿಮ್ಮ ಮನೆಯ ಕಡೆಯಿಂದ ನಾವು ಹೊಗೆ ನೋಡಿದ್ದೇವೆ ಎಂದು. ಅದು ನನ್ನ ಅಪ್ಪನ ದೇಹವನ್ನು ಸುಟ್ಟ ಚಿತೆಯ ಹೊಗೆ. ಮಾವಿನ ಮರದ ಹಸಿ ಕೊಂಬೆಗಳು, ತೆಂಗಿನ ಕಾಯಿಯ ಸಿಪ್ಪೆ ಹೊಗೆ ಕಾರದೇ ಧಗ ಧಗ ಉರಿಯುತ್ತದೆಯೇನು?

ಏಪ್ರಿಲ್ ತಿಂಗಳೇ ಇರಬೇಕು. ಪರೀಕ್ಷೆ ಫಲಿತಾಂಶ ಬಂದಿದೆ. ಆರಾಮವಾಗಿ ಶಾಲೆಗೆ ಹೋಗಿ ಕಾಯುತ್ತಿದ್ದೇವೆ. ಕೆಲವರನ್ನು ಬಿಟ್ಟರೆ ಇನ್ಯಾರಿಗೂ ಆಸಕ್ತಿ ಇರಲ್ಲಿಲ್ಲ.


ಫಲಿತಾಂಶ ನೋಡಿ ಮನೆಗೆ ಬರುತ್ತೇನೆ. ಸಮಯ ಸುಮಾರು ಎರಡು ಕಳೆದಿರಬೇಕು. ಹೊರಗಡೆ ಬಿಸಿಲು. ಬಸ್ಸಿಳಿದು ಗುಡ್ಡವಿಳಿದು ಬರಬೇಕಾದರೆ ಮುಖ ಬಾಡಿತ್ತು. ಮನೆಯಲ್ಲೆಲ್ಲರೂ ನಾನು ಪಾಸಾಗಿಲ್ಲ ವೆಂದೇ ನನ್ನ ಮುಖ ನೋಡಿ ತಿಳಿದರು. ನಾನು ಪಾಸಾಗಿದ್ದೇನೆ ಎಂದು ನಾನು ಹೇಳಿದಾಗ ನನ್ನ ಅಮ್ಮ ಮಾತ್ರ ನಂಬಿದರು. ಬಿಸಿಲಿಗೆ ಮಗನ ಮುಖ ಬಾಡಿದೆ. ಫೇಲಾಗಿಲ್ಲ ಎಂದು ಎಲ್ಲರಿಗೂ ಭರವಸೆ ನೀಡಿದಳು.

ನಾನಿನ್ನೂ ಆ ಪಾಸ್ ಕುರಿತು ಆಚರಿಸಿಲ್ಲ. ಬದುಕೇ ಒಂದು ಆಚರಣೆ. ಹತ್ತನೆ ತರಗತಿ ನಿಜಕ್ಕೂ ಜೀವನದ ಎತ್ತರಕ್ಕೆ ಏರುವ ಸಮಯ.

ಪಾಸಾಗದ ಎಲ್ಲಾ ವಿದ್ಯಾರ್ಥಿಗಳ ಜತೆಗೆ ನಾನಿದ್ದೇನೆ. ಮುಂದಿನ ಸಲ ಖಂಡಿತಾ ಪಾಸಾಗುವಿರಿ.

ನೂರಕ್ಕೆ ತೊಂಬತೊಂಭತ್ತು ಶೇಕಡಾ ಸಿಕ್ಕಿಲ್ಲ ವೆಂದು ವ್ಯಥಿಸುವ ವಿದ್ಯಾರ್ಥಿಗಿಂತ ಕನಿಷ್ಟ ಶೇಕಡಾದಲ್ಲಿ ಪಾಸಾದ ವಿದ್ಯಾರ್ಥಿಯ ಖುಷಿ ಹೆಚ್ಚಿನದು.


ಒಲವಿನಿಂದ, ಪ್ರೀತಿಯಿಂದ
ಬಾನಂಚಿನಲ್ಲಿ ಹಾರುವ ಬಾನಾಡಿWednesday, April 25, 2007

ಅಪ್ಪಣೆ

ಒಳಗೆ ಬರಲು ಅಪ್ಪಣೆ
ಕೇಳಿದೆ ನಾನು ನಿನ್ನ
ಒಳಗೆ ಬರಲು

.........

ಸಾಯಲೆಂದೆ ಬಂದೆ ನಾನು
ನೀನು
ಆ ಸಾವಿನಲ್ಲೂ ಹುಟ್ಟಿಸಿದೆ
ನನ್ನನ್ನು
ನಿನ್ನನ್ನು
ಮತ್ತೊಂದು ಜೀವವನ್ನು

...................

(ನನ್ನ ಕವನದ ಕೆಲವು ಭಾಗಗಳು)
ಇಷ್ಟವಾದರೆ ಹೇಳಿ.

ಬದುಕಿನ ಕ್ಷಣಗಳು

ಅಂತರ್ಜಾಲದಲ್ಲಿ ಕೆಲ ಕ್ಷಣಗಳನ್ನು ನಾವು ಕಳೆಯುವುದಿಲ್ಲ. ಬದಲು ದಾಖಲಿಸುತ್ತೇವೆ. ನಮ್ಮ ಈ ಕ್ಷಣಿಕವಾದ ಮತ್ತು ಅಪೂರ್ವವಾದ ಸಂಗತಿಗಳು, ಸಂಗಾತಿಗಳು ನಮ್ಮೊಡನಿದ್ದಾಗ ನಮಗೇನು ಬೇಕು ಹೇಳಿ.
ಸಮುದ್ರದಲ್ಲಿ ತೆರೆಗಳಿಲ್ಲದಿದ್ದರೆ ಹೇಗೆ?
ಅದೆಷ್ಟು ನೀರಸ.
ಬದುಕಲ್ಲೂ ಹಾಗೇ
ತೆರೆಗಳಿರಬೇಕು.
ನೋಡೋಣ ಮುಂದಿನ ದಾರಿ ಹೇಗೆ ಕಾಣುತ್ತವೆ, ಕಾಡುತ್ತವೆ ಎಂದು.

ಒಲವಿನಿಂದ

ಬಾನಾಡಿ.