Friday, December 21, 2007

ನೇರದಾರಿಯವರು

ನೀಲಿ ಬಾನಿನಲ್ಲಿ ತುಂಬಿದ ಚಂದಿರ ಚೆಲ್ಲುವ ಬೆಳದಿಂಗಳಿಗೆ ನಿನ್ನ ಕೆನ್ನೆಯು ಹೊಳೆಯುವಾಗ ನನ್ನ ಮನಸ್ಸು ಖಾಲಿಖಾಲಿಯಾಗಿತ್ತು. ನಿನ್ನ ಕೈ ಹಿಡಿದು ಅದುಮುತ್ತಿದ್ದಾಗ ತೆಳುಬಿಳಿಮೋಡಗಳು ಚಂದಿರನನ್ನು ಮರೆಯಾಗಿಸುತ್ತಿದ್ದವು. ಕೊಕ್ಕರೆ ಬೆಟ್ಟದ ಮೇಲಿನ ಬಂಡೆಯ ಮೇಲೆ ಕುಳಿತು ನಿನಗಾಗಿ ಕಾದು ಕಾದು ರಾಮಣ್ಣ ಗೌಡರ ನಾಯಿ ನನ್ನನ್ನು ಬೆನ್ನಟ್ಟಿಕೊಂಡು ಬಂದಾಗ ನಾನು ಸಾಬುವಿನ ಸಹಾಯದಿಂದ ನಿಮ್ಮ ಮನೆಯಂಗಳದಲ್ಲೇ ಬಂದು ನಿಂತಾಗ ನಿನ್ನ ಅತ್ತೆಯ ಮಗ ಸುರೇಶನು ನನಗೆ ಸಿಕ್ಕಿದ್ದು ಆಕಸ್ಮಿಕವೊ ಅನಿರೀಕ್ಷಿತವೋ ತಿಳಿಯದು.

ನಮ್ಮ ನಮ್ಮ ಕನಸುಗಳಿಗೆ ಖಾಲಿಹಾಳೆಗಳು ಅಕ್ಷರದ ಚಿತ್ರ ಮೂಡಿಸಿದಾಗ ದೊರೆತ ಆನಂದಕ್ಕೆ ಪಾರವೇ ಇಲ್ಲವೇ?

ಕನಸಿನಲ್ಲಿ ಬರಬೇಡ. ನನ್ನೆದುರು ಬಂದಾಗ ಏಕೆ ಸುಮ್ಮನಿರುವೆ. ಮತ್ತೊಮ್ಮೆ ಕೊಟ್ಟು ಬಿಡು ನಿನ್ನ ಕೈಗಳನ್ನು. ಅದುಮಿಡುವೆ. ನನ್ನೊಳಗಿನ ಬೆಳದಿಂಗಳನು ನಿನ್ನ ಮನಸಿನ ತುಂಬಾ ತುಂಬಿ ಬಿಡುವೆನು.

ಇನ್ನೊಮ್ಮೆ ಸಿಕ್ಕಾಗ ಮರೆಯಬೇಡ.
ಒಲವಿನಿಂದ
ಬಾನಾಡಿ

Saturday, December 8, 2007

ಪುಸ್ತಕದೊಳಗಿನ ಅಕ್ಷರಗಳು

ನೀನು ಕಳುಹಿಸಿದ ಪುಸ್ತಕ ಸಿಕ್ಕಿತು. ಅದು ಬರೇ ಪುಸ್ತಕವಾಗಿದ್ದರೆ ನಾನು ಅದರ ಬಗ್ಗೆ ಬರೇ ಥಾಂಕ್ಸ್ ಹೇಳಲು ಫೋನ್ ಮಾಡುತ್ತಿದ್ದೆ. ನನ್ನ ನಿನ್ನ ಜತೆಗಿನ ಅದೆಷ್ಟೋ ಕ್ಷಣಗಳನ್ನು ಆ ಪುಸ್ತಕ ಮಾತಾಡುತ್ತಿದ್ದುದರಿಂದ ನನಗೆ ನಿನ್ನನ್ನು ನೆನಪಿಸುವುದು ನಿನ್ನೊಡನೆ ನನ್ನನ್ನು ಮತ್ತೆ ತೆರೆದಿಡುವುದು ಅನಿವಾರ್ಯ ಅನಿಸುತ್ತಿದೆ. ಖಾಸಗಿ ಅಂಚೆಯಲ್ಲಿ ಅದನ್ನು ನೀನು ಕಳುಹಿಸಿದರೂ ಅದರೊಳಗಿನ ಪುಟಗಳು ನಮ್ಮೊಳಗಿನ ಖಾಸಗಿ ಕ್ಷಣಗಳನ್ನು ಮತ್ತೆ ಮತ್ತೆ ಓದಿ ಹೇಳುತ್ತಿದ್ದವು. ಮುಳಿಹುಲ್ಲಿನ ಗುಡ್ಡದ ಕಪ್ಪು ಬಂಡೆಯ ಮೇಲೆ ಕುಳಿತು ಎದುರಿನ ಗುಡ್ಡದಾಚೆಗಿರುವ ಅರಬ್ಬೀ ಸಮುದ್ರದಲ್ಲಿ ನಿಧಾನವಾಗಿ ಇಳಿಯುವ ಕೆಂಪು ಸೂರ್ಯ ನಿನ್ನ ಕೆನ್ನೆಯ ಗುಳಿಯಲ್ಲಿ ಮೂಡಿಸಿದ ಪ್ರತಿಫಲನದ ಚಿತ್ರಕ್ಕೆ ಬಣ್ಣ ಕೊಟ್ಟ ಕ್ಷಣಗಳು ಆ ಪುಸ್ತಕದಲ್ಲಿದ್ದವು. ಎಲ್ಲ ಬಿಟ್ಟು ಮುಂಬಯಿಗೋ ಗೋವಾಕ್ಕೋ ಮದ್ರಾಸಿಗೋ ಹೋಗೋಣವೆಂದು ಹೊರಟ ನಾನು ಸೀದಾ ಸೋಮೇಸ್ವರದ ಕಡಲಕರೆಯ ಬಂಡೆಮೇಲೆ ಕುಳಿತ್ತಿದ್ದಾಗ ಅದೆಲ್ಲಿಂದಲೋ ಬಂದ ನಿನ್ನನ್ನು ಕಂಡ ನಾನು ಬರೆದ ಟಿಪ್ಪಣಿಗಳು ಆ ಪುಸ್ತಕದಲ್ಲಿದ್ದವು. ಮತ್ತೆ ಎಷ್ಟೋ ದಿನಗಳು ನನಗೆ ಅರಬ್ಬಿ ಸಮುದ್ರವೇ ನನ್ನ ಎಲ್ಲವೂ ಆಗಿತ್ತು. ಅದರಲ್ಲಿ ಬರುವ ಒಂದೊಂದು ತೆರೆಯು ನನ್ನನ್ನು ಮಾತಾಡಿಸಿತ್ತು. ಆ ಮಾತುಗಳಿಗೆ ಅಕ್ಷರ ರೂಪ ಕೊಡಲು ಸಿಕ್ಕಿದ್ದು ಆ ಪುಸ್ತಕ. ಸಮುದ್ರದ ಏರಿಳಿತಗಳು ನನ್ನನ್ನು ಹತ್ತಿರ ಕರೆದು ಬದುಕಿನ ಪಾಠ ಹೇಳಿದ್ದವು.ನನ್ನ ಈ ಚಿಕ್ಕ ಪುಸ್ತಕವನ್ನು ನನ್ನ ಅಂತರಾಳದ ಒಂದಂಗವೆಂದೇ ತಿಳಿದಿದ್ದೆ. ಅದರೊಳಗಿನ ಅಕ್ಷರಗಳಿಗೆ ಅರ್ಥವನ್ನು ನಾನೊಬ್ಬನೇ ಅರಿತಿದ್ದೆ. ಆದರೆ ಆ ಪುಸ್ತಕ ನಿನಗೆ ಸಿಕ್ಕಿದಾಗ ನಾನು ನಿನಗೆ ಅರ್ಥವಾಗಿದ್ದೆ. ನೀನು ಆ ಅರ್ಥಗಳಿಗೆ ಶಬ್ದವಾಗಿದ್ದೆ. ನಿನ್ನಿಂದ ಆ ಪುಸ್ತಕ ಬಂದೊಡನೆ ಅದನ್ನು ಬಿಡಿಸಿದೆ. ಅದರಲ್ಲಿ ನಿನ್ನ ಕೈಯ ಬೆರಳುಗಳೆಡೆಯ ಬೆವರಿನ ಹನಿಗಳ ವಾಸನೆಯಿತ್ತು. ಆ ಕಂಪಿಗೆ ನಾನು ಎಲ್ಲೆಲ್ಲಾ ಓಡಿ ಬಂದೆ ಎನಿಸಿತು. ಈಚಲ ಕಾಡಿನ ಮಧ್ಯೆ ಗೇರು ಮರದಲ್ಲಿ ಮರಕೋತಿ ಆಡಿದ್ದರಿಂದ ಹಿಡಿದು, ಒಣಹುಲ್ಲುಗಳಿಗೆ ಬೆಂಕಿಕೊಟ್ಟು ಚಳಿಕಾಯಿಸುತ್ತಿದ್ದಾಗ ಬೆಂಕಿಗೆ ಬಿದ್ದು ಆದ ಗಾಯದ ನೆನಪಲ್ಲಿ ನೀನು ನನಗಿಟ್ಟ ಅಡ್ಡ ಹೆಸರು ಕೂಡ ನೆನಪಿಗೆ ಬಂತು.

ನನಗೆ ಪುಸ್ತಕ ಸಿಕ್ಕಿದೊಡನೆ ಅದರಲ್ಲಿ ನಾನು ಬರೆದಿಟ್ಟ ಹಳೆಯ ನೆನಪುಗಳನ್ನು ಕೆದಕುವಾಗೆಲ್ಲಾ ನನ್ನ ಜತೆಗಿದ್ದುದು ನೀನು. ನಿನ್ನಲ್ಲಿ ನಾನು ಹೇಳಿದ್ದನ್ನು, ಹೇಳದೇ ಇದ್ದುದ್ದನ್ನು, ಮತ್ತೆ ಮತ್ತೆ ನೀನು ಕೇಳಿದಾಗ ಹೇಳಿದನ್ನು ಎಲ್ಲವನ್ನು ನಾನು ನೆನಪಿಸಿದೆ. ಆ ಸಂಜೆ ನಿನ್ನನ್ನು ಬಿಡಲೆಂದು ನಿನ್ನ ಮನೆಗೆ ಬಂದ ನನಗೆ ನಿನ್ನಮ್ಮ ಕೊಟ್ಟ ದೋಸೆಯ ನೆನಪು.

ಮತ್ತೆ ಅದೇ ಪುಸ್ತಕದ ಖಾಲಿ ಹಾಳೆಗಳಿಗೆ ಅಕ್ಷರಗಳನ್ನು ಮೂಡಿಸಲು ನೋಡುತ್ತೇನೆ. ಅಕ್ಷರಗಳು ಅಳಿಯವು. ಅವುಗಳು ಅರ್ಥವನ್ನು ಕೊಡಬಹುದು. ಇಂದಲ್ಲ. ನಾಳೆ.

ನನಗೇನು ಗೊತ್ತು. ನಿನಗೇನು ಗೊತ್ತು. ಹೊಸತು ಹಳತಾಗಿದೆ. ಹಳತು ಮತ್ತೆ ಹೊಸತಾಗಿದೆ. ಉರುಳಿದ ಎಲೆಗಳಿಗೆ
ಜೀವ ಕೊಟ್ಟು ಹಸಿರನ್ನು ಕಾಣಬೇಕಿದೆ.
ಕನಸಿನಲ್ಲಿ ಬಂದ ಮೊಲಗಳು ಬೆಳಗ್ಗೆ ಎದ್ದೊಡನೆ ಹೊಲದಾಚೆ ಸತ್ತು ಬಿದ್ದಿದೆ. ನೆನಪಿನೊಂದಿಗೆ.
ಒಲವಿನಿಂದ
ಬಾನಾಡಿ

Sunday, December 2, 2007

ಸಂತೃಪ್ತ

ಬೇಸಿಗೆಯಲ್ಲಿ ಸಣ್ಣಗೆ ಹರಿಯುವ ನದಿ. ಮಳೆಗಾಲದಲ್ಲಿ ಉಕ್ಕಿ ಹರಿಯುವುದು. ಋತುಗಳು ಬದಲಾಗುವುದನ್ನು ಹಕ್ಕಿಗಳು, ಮರಗಳು, ಗಿಡಗಳು, ಪೈರು, ಹಣ್ಣು ಹಂಪಲು, ತರಕಾರಿ, ಬಾವಲಿಗಳು, ಗೂಬೆಗಳು, ಗಿಳಿಗಳು ತಮ್ಮಷ್ಟಕ್ಕೆ ಹೇಳಿ ಹೋಗುತ್ತವೆ. ಶುನಕಗಳಂತು ತಮ್ಮ ಪ್ರೇಮೋತ್ಕರ್ಷವನ್ನು ಒಂದು ಋತುವಿಗೆ ಸೀಮಿತಗೊಳಿಸುತ್ತವೆ. ನಿನ್ನೆಯ ಚಳಿ ಎಷ್ಟಿತ್ತು, ನಾಳೆಯ ಚಳಿ ಏನಾಗಬಹುದು ಎಂಬ ವಿಚಾರಕ್ಕೆ ಟೀವಿ, ಪೇಪರು, ಇಂಟರ್‍‍ನೆಟ್‍ಗಳ ಮೊರೆ ಹೋಗಬೇಕಿಲ್ಲ. ತನ್ನಷ್ಟಕ್ಕೇ ಅವುಗಳ ಮಾಹಿತಿಗಳು ಬೇಕಾದಷ್ಟು ಬೇಕಾದಂತೆ ಬಂದು ಬಿಡುತ್ತವೆ. ಈ ಪ್ರಕೃತಿಯ ಸೆರಗಿನಲ್ಲಿದ್ದುಕೊಂಡೇ ಅದರ ಆಳವನ್ನು, ಅರ್ಥಗಳನ್ನು ಹುಡುಕುತ್ತಾ ಅವನ್ನು ಬದುಕಿನ ಒಳಗೆಯೂ ಹುಡುಕುತ್ತಾ ಇರುವವರ ಲೋಕದ ಬಗ್ಗೆ ನನಗೆ ಹೆಮ್ಮೆ. ಕೆಲವೊಮ್ಮೆ ಅವೆಲ್ಲವನ್ನೂ ಮುಟ್ಟಿ ನೋಡಿ ಮತ್ತೆ ಅವೆಲ್ಲವನ್ನೂ ಕಳಕೊಂಡು ಎಲ್ಲೋ ಮಹಾನಗರದ ಅದೆಷ್ಟೋ ಸಂಖ್ಯೆಗಳ ಬಹುಮಹಡಿ ಕಟ್ಟಡಗಳ ಬಹು ಮನೆಗಳಲ್ಲಿ ಒಂದಾದ ನಮ್ಮದೇ ಗೂಡಿನಲ್ಲಿ ಕುಳಿತು ಮುಂಜಾವಿನ ಸೂರ್ಯನ ನೆತ್ತರ ಓಕುಳಿಯನ್ನು ನೋಡಲೂ ಆಗದ ಮನಸಿನಲ್ಲಿದ್ದಾಗ ವ್ಯಥೆ. ಬೇಸರ.

Sunday, September 23, 2007

ಅನಾಮಿಕರು

ಇಲ್ಲಿಲ್ಲದವರೂ ಎಲ್ಲೂ ಇಲ್ಲವೇ? ಇಲ್ಲಿ ಅಂದರೆ ಇಂಟರ್‍ನೆಟ್‍ನಲ್ಲಿ! ಇಂದಿನವರು ಏನೂ ಬೇಕಾದರೂ ಮೊದಲೊಮ್ಮೆ ಗೂಗಲ್ ಮಾಡಿಯೇ ಮುಂದುವರಿಯುತ್ತಾರೆ. ಏನೇ ಸಮಸ್ಯೆ ಇರಲಿ, ಏನನ್ನೂ ಹುಡುಕ ಬೇಕೆಂದುಕೊಳ್ಳಿ ಮೊದಲೊಮ್ಮೆ ಗೋಗಲ್ ಮಾಡಿಯೇ ಮುಂದುವರಿಯುತ್ತೇವೆ. ಮಕ್ಕಳ ಶಾಲೆಯ ಪ್ರವೇಶವಿರಬಹುದು, ಬೆಳಿಗೆದ್ದು ಹಲ್ಲುಜ್ಜಲು ತೆಗೆದುಕೊಳ್ಳಬೇಕಾದ ಪೇಸ್ಟ್ ಆಗಿರಬಹುದು, ಕಳೆದು ಹೋದ ಗೆಳೆಯ/ಗೆಳತಿಯರಿರ ಬಹುದು. ಅನೌಪಚಾರಿಕ ಮಾತುಕತೆಯಲ್ಲಿ ನಮಗೆ ಅರ್ಥವಾಗದ ಯಾವುದೊ ಶಬ್ದ, ವಸ್ತು, ವಿಷಯವಿರಲಿ ಕಂಪ್ಯೂಟರ್ ಹತ್ತಿರ ಬಂದು ಅದನ್ನು ಗೂಗಲ್ ಮಾಡಿ ನೋಡಿಯೇ ಆಗಬೇಕು. ಗೂಗಲ್ ನಲ್ಲಿ ಇಲ್ಲದ್ದು ಈ ಪ್ರಪಂಚದಲ್ಲಿ ಇದೆ ಎಂದರೆ ನಮಗೇ ಕುತೂಹಲವಾಗಬಹುದು ಎಂಬಂತಿದೆ.

ಈ ಗೂಗಲ್ ಇಲ್ಲದ ಲೋಕವನ್ನು ಹಿಂದೆ ನೋಡಿದ್ದ ನಾವು ಗೂಗಲ್ ಬಂದ ಮೇಲೆ ಕನ್ನಡಕವನ್ನು ರೂಢಿಯಾಗಿಸಿದವರು ಕನ್ನಡಕವಿಲ್ಲದೆ ಪಡುವ ಚಡಪಡಿಕೆಯಂತೆ ಮಾಡುತ್ತೇವೆ. ಬಾಸ್ ಕೆಲಸ ಕೊಟ್ಟರೆ ಮೊದಲು ಗೂಗಲ್ ನಲ್ಲಿ ಆ ಕುರಿತು ಏನಿದೆಯೆಂದು ನೋಡು. ಹೆಂಡತಿ ಅಥವಾ ಗಂಡ ಏನಾದರೂ ಹೇಳಿದರೆ ಅದರ ಕುರಿತು ಗೂಗಲ್‍ನಲ್ಲಿ ನೋಡು. ಮಕ್ಕಳಿಗಂತೂ ಈ ಗೂಗಲ್ ಬಿಟ್ಟರೆ ಪ್ರಪಂಚವೆ ಇಲ್ಲ.

ಮೊನ್ನೆ ನಾವೆಲ್ಲರೂ ಕೂತು ನಮ್ಮ ನಮ್ಮ ಹೆಸರುಗಳನ್ನು ಗೂಗಲ್ ಮಾಡಿ ನೋಡಿದೆವು. ನಮ್ಮ ಉಲ್ಲೇಖಗಳು ಎಷ್ಟಿವೆ ಎಂದು ಮೊದಲು ನೋಡಿದೆವು. ಹಾಗೆ ನೋಡುವುದು ಕೆಲವರಿಗೆ ದಿನನಿತ್ಯದ ಕೆಲಸ. ಅದರಿಂದ ಅವರ ಜನಪ್ರಿಯತೆಯನ್ನು ಅಳೆಯುತ್ತಾರೆ. ನಿಮ್ಮ ಹೆಸರುಗಳನ್ನು ಹಾಕಿ ಗೋಗಲ್ ಮಾಡಿದಾಗ ಅದೆಲ್ಲೋ ಅಸಂಬದ್ಧ ಸೈಟ್‍ನಲ್ಲಿ ಕಂಡು ಬಂತಾದರೋ ನಿಮ್ಮ ಮಂಡೆ ಮತ್ತೂ ಬಿಸಿಯಾಗುತ್ತದೆ.

ನನ್ನೊಬ್ಬ ಹಳೆಯ ಗೆಳೆಯನನ್ನು ನಾನು ಕಳೆದುಕೊಂಡಿದ್ದೆ. ಆತನ ವಿಳಾಸವಿರಲ್ಲಿಲ್ಲ. ಸುಮಾರು ಹದಿನೈದು ವರ್ಷಗಳಾಗಿರಬಹುದು ನಮ್ಮ ಸಂಪರ್ಕವಿಲ್ಲದೆ. ಅವನ ಹೆಸರನ್ನು ಹಾಕಿ ಹುಡುಕಿದೆ. ಸುಲಭದಲ್ಲಿ ಸಿಗಲ್ಲಿಲ್ಲ. ಅವನ್ ಹೆಸರಿನ ಇನ್ನೆಷ್ಟೋ ಮಂದಿ ಸಿಕ್ಕಿದರು. ಕೊನೊಗೊಂದು ಕಡೆ ಅವನ ಪೂರ್ತಿ ಸಿ.ವಿ. ಸಿಕ್ಕಿ ಬಿಟ್ಟಿತು. ಅವನು ಎಲ್ಲೆಲ್ಲಾ ಕೆಲಸ ಮಾಡಿದ್ದ, ಎಲ್ಲೆಲ್ಲಾ ಏನೆಲ್ಲ ಪ್ರಾಜೆಕ್ಟ್ ಮಾಡಿದ್ದ, ಇತ್ಯಾದಿ ಬರೆದು ಇನ್ಯಾವುದೋ ಕೆಲಸಕ್ಕೆ ಅರ್ಜಿಯನ್ನು ಆನ್‍ಲೈನ್ ಆಗಿ ಕಳಿಸಿದ್ದ. ಆತನನ್ನು ಸಂಪರ್ಕಿಸಹೊರಟರೆ ಆತ ಹೊಸ ಕೆಲಸ ಸಿಕ್ಕಿ ಇತ್ತೀಚಿನವರಿಗೂ ಕಾಣದಾಗಿ ಬಿಟ್ಟಿದ್ದಾನೆ.

ನಮ್ಮ ಕೆಲವು ಸ್ನೇಹಿತರ ಕ್ಷೇಮ ಸಮಾಚಾರ ಕೇಳಬೇಕೆಂದರೆ ಅವರನ್ನು ಗೂಗಲ್ ಮಾಡಿ. ಇಂಟರ್‍ನೆಟ್‍ನಲ್ಲಿ ಜನಪ್ರಿಯರಾಗಿದ್ದರೆ ನಿಮಗೆ ಅವರ ಹೆಜ್ಜೆ ಹೆಜ್ಜೆಯನ್ನೂ ಗುರುತಿಸಿಕೊಂಡು ಹೋಗಬಹುದು. ಕೆಲವರ ದೈನಂದಿನ ಕಾರ್ಯಸೂಚಿಯು ಸಿಗಬಹುದು. ಇಷ್ಟೆಲ್ಲಾ ಆದರೂ ನಮಗೆ ಒಬ್ಬರನ್ನೊಬ್ಬರು ಭೇಟಿಯಾಗಿ ನಿರಾಳವಾಗಿ ಮನಸ್ಸಿನ ಪದರಗಳನ್ನು ಬಿಚ್ಚಿಡಲು ಸಮಯವಿರುವುದಿಲ್ಲ. ಕಾರಣ ನಾವೆಲ್ಲ ಇಂಟರ್‍‍ನೆಟ್‍ನಲ್ಲಿ ಇನ್ಯಾರನ್ನೋ ಕಾಯುತ್ತಿದ್ದೇವೆ.

ಈ ಬ್ಲಾಗನ್ನು ಹುಟ್ಟಿಸಿದಂದಿನಿಂದ ನಾನು ಕೆಲವು ದಿನ ಹೊಸ ಹೆಂಡತಿಯ ಜತೆ ನಡೆಯುವಂತೆ ಆಗಾಗ ಭೇಟಿ ನೀಡಿ ನನ್ನ ಮನಸ್ಸಿನಲ್ಲಿದ್ದುದ್ದನು ಕಕ್ಕಿ ಬಿಡುತ್ತಿದ್ದೆ. ಕೆಲವು ತಿಂಗಳಾದ ಮೇಲೆ ಹೆಂಡತಿ ಹಳತಾದಂತೆ ಬ್ಲಾಗ್ ಕೂಡ ಹಳತಾಗಿ ಏನಾದರೂ ಬರೆಯಲೇ ಬೇಕೆಂಬ ಉತ್ಕಟತೆ ಕಡಿಮೆಯಾಯಿತೊ ಅಂತನಿಸಿದೆ. ನನ್ನ ಇನ್ನೊಂದು ಬ್ಲಾಗನ್ನು ಮಲಗಲು ಹಾಗೇ ಬಿಟ್ಟಿದ್ದೇನೆ. ಮನೆಯಲ್ಲಿ, ಆಫೀಸಲ್ಲಿ ಕೆಲಸ ಕಡಿಮೆಯಾದಾಗ ನಮ್ಮನ್ನು ನಾವು ಬಿಜಿಯಾಗಿಡಲು ಇದೊಂದು ಮಾಧ್ಯಮ ಹುಟ್ಟಿಕೊಂಡಿದೆ.

ನಂತರ ನೋಡಿ ಇದನ್ನು ಎಷ್ಟು ಜನ ನೋಡಿದರು ಎಂದು ಲೆಕ್ಕ ವಿಡಲು ಒಂದು ಕಿಂಡಿಯನ್ನೂ ಸೃಷ್ಟಿಸಿದ್ದೇನೆ. ಅಲ್ಲ ಬ್ಲಾಗ್ ಇರುವುದು ನನ್ನಷ್ಟಕ್ಕೇ ಇರಲು. ಈ ಎಲ್ಲಾ ಲೆಕ್ಕಗಳನ್ನು ಇಟ್ಟುಕೊಂಡು ನಮ್ಮ ಅಹಂ ಅನ್ನು ತಣಿಸುವುದೆಂದರೆ ನಮಗೆ ನಾವು ಮಾಡುವ ಒಂದು ತರದ ಅಪರಾಧ.


ಇಂಟರ್‍ನೆಟ್‍ನಾಚೆಯು ಅದೇನೋ ಇದೆ ಎಂಬುದರ ಬಗ್ಗೆನೇ ಮುಂದೆ ಬರೆಯಬೇಕಿದ್ದೇನೆ.
(ಈ ಟಿಪ್ಪಣಿ ನನ್ನ ನೆನಪಿಗೆ)

ಒಲವಿನಿಂದ
ಬಾನಾಡಿ

Friday, September 7, 2007

ನಂಬಿಗಸ್ತ

ಅವರು ನಮ್ಮ ತಾಲೂಕು ಮಟ್ಟದಲ್ಲಿಯೇ ಹೆಸರುವಾಸಿಯಾದ ಡಾಕ್ಟರ್. ತಾಲೂಕಿನ ನಾಲ್ಕು ಸರಕಾರಿ ಆಸ್ಪತ್ರೆಗಳಿಗೆ ವಾರಕ್ಕೊಮ್ಮೆಯೋ ಎರಡು ಸರ್ತಿಯೋ ಬಂದು ರೋಗಿಗಳಿಗೆ ಮದ್ದು ಕೊಡುತ್ತಿದ್ದರು. ಅವರ ಮದ್ದಿನ ಗುಣವೋ ಅಥವಾ ಕೈಗುಣವೋ ಅವರು ಹತ್ತಿರ ಹೋದವರಿಗೆ ತಮ್ಮ ಕಾಯಿಲೆ ಗುಣಮುಖಗೊಳಿಸಿದ ಸಂತಸ. ಮತ್ತೆ ತಾವು ಯಾವಾಗ ಕಾಯಿಲೆ ಬೀಳುತ್ತೇವೋ ಎಂದು ಕಾದು ಕುಳಿತುಕೊಂಡಿರುತ್ತಾರೆ ಜನ. ಅವರ ಸ್ವಂತ ಚಟಗಳಲ್ಲಿ ಒಂದಾದ ಎಲೆ ಅಡಿಕೆ ತಿನ್ನುವ ಕಾರ್ಯ ಮಾತ್ರ ಅವರ ಹೆಸರನ್ನು ಎಲ್ಲಕ್ಕಿಂತ ಹೆಚ್ಚು ಜನಪ್ರಿಯ ಗೊಳಿಸಿರಬೇಕು. ಅವರನ್ನು ಭೇಟಿಯಾಗಲು ಹೋಗುವ ರೋಗಿಗಳಲ್ಲಿ ಅವರಿಗೆ ಒಬ್ಬರು ವೀಳ್ಯದೆಲೆ ತೆಗೆದುಕೊಂಡು ಹೋದರೆ ಇನ್ನೊಬ್ಬರು ಅಡಿಕೆ ತೆಗೆದುಕೊಂಡು ಹೋಗುತ್ತಾರೆ. ಮತ್ತೊಬ್ಬರು ಹೊಗೆಸೊಪ್ಪಿನ ಕಟ್ಟನ್ನೆ ಹಿಡಿದು ನಿಂತರೆ ಏನಿಲ್ಲದವರು ಸ್ವಲ್ಪ ಸುಣ್ಣವನ್ನಾದರೂ ತಂದೇ ತರುತ್ತಾರೆ. ಕವಳ ಹಾಕುವ ಅವರ ಚಟ ಮಾತ್ರ ರೋಗಿಯ ಯಾವುದೆ ತರದ ರೋಗಗಳನ್ನು ನೋಡಿಯೂ ಬಿಟ್ಟಿಲ್ಲ.

ಇಂತಹ ಜನಪ್ರಿಯರು ಇನ್ನಿಲ್ಲವಾದಾಗ ನಾವು ಕಳೆದುಕೊಂಡಿದ್ದೇನು ಎಂಬುದ್ದಕ್ಕಿಂತ ಅವರಿದ್ದಾಗ ನಾವು ಪಡೆದಿದ್ದೇನು ಎಂಬುದು ಮುಖ್ಯವಾಗುತ್ತದೆ. ನಾನಾಗ ಬಹಳ ಸಣ್ಣವನಿದ್ದೆ. ನಮ್ಮ ಸರಕಾರಿ ಆಸ್ಪತ್ರೆ ಬಹಳ ದೊಡ್ಡದಿತ್ತು. ಆರೇಳು ಕೊಠಡಿಗಳು, ವರಾಂಡ, ಜಗಲಿ ಇತ್ಯಾದಿ ಎಲ್ಲಾ ಸೇರಿ ನನಗಾಗ ಬಹಳ ದೊಡ್ಡದಾಗಿ ಕಂಡಿತ್ತು. ನಾನು ಅಮ್ಮನೊಟ್ಟಿಗೆ ಮದ್ದಿಗೆ ಹೋಗಿದ್ದೆ. ಡಾಕ್ಟರ್ ಅವರ ಹತ್ತಿರ ಪರೀಕ್ಷಿಸಿ ಔಷಧಕ್ಕಾಗಿ ಕಂಪೌಂಡರ್ ಹತ್ತಿರ ಹೋಗಬೇಕಾಯಿತು. ಡಾಕ್ಟರ್ ರೂಂ ನಿಂದ ಕಂಪೌಂಡರ್ ರೂಮಿಗೆ ಹೋಗಲು ಎರಡು ದಾರಿಗಳಿವೆ. ಒಂದು ದಾರಿಯಲ್ಲಿ ನಾನು ಹೋದರೆ ಅಮ್ಮ ಇನ್ನೊಂದು ದಾರಿಯಲ್ಲಿ ಹೋಗಿದ್ದಿರಬೇಕು. ನನಗೆ ದಾರಿ ತಪ್ಪಿತು. ಗೋಳೋ ಎಂದು ಅಳಲು ಶುರು ಮಾಡಿದೆ. ಅಮ್ಮ ಕಾಣಿರಲ್ಲಿಲ್ಲ. ಅಮ್ಮನೆಲ್ಲಿಯೆಂದು ಹುಡುಕಿದೆ. ಸಿಗಲ್ಲಿಲ್ಲ. ನನ್ನ ಅಳು ತಾರಕಕ್ಕೆ ಏರಿರಬೇಕು. ಜನ ನನ್ನ ಅಮ್ಮನ್ನನ್ನು ಹುಡುಕಲು ಅನಿಯಾದರು. ಅಷ್ಟೊತ್ತಿಗೆ ಅವಳು ಬಂದಳು. ಒಂದರೆ ಕ್ಷಣದಲ್ಲಿ ನಾನೆಬ್ಬಿಸಿದ ರೊಚ್ಚು ಆಸ್ಪತ್ರೆಯ ವಾತಾವರಣವನ್ನು ಬದಲಿಸಿತ್ತು.

ನಾವು ಹೈಸ್ಕೂಲಿಗೆ ಹೋಗುತ್ತಿದ್ದಾಗ ಗಾಂಧಿ ಜಯಂತಿಯ ಸಂದರ್ಭದಲ್ಲಿ ಹುಡುಗರಾದ ನಾವೆಲ್ಲರು ಸೇರಿ ಆ ಆಸ್ಪತ್ರೆಯ ಹೊರಾವರಣವನ್ನು ಶುಚಿಗೊಳಿಸಿ ಕೆಲವು ಗಿಡಗಳನ್ನು ನೆಟ್ಟಿದ್ದೆವು. ನಂತರ ಆಸ್ಪತ್ರೆಯ ಕಂಪೌಂಡರ್ ಕೊಟ್ಟ ಪೆಪ್ಪರ್ ಮೆಂಟ್ ಗಳನ್ನು ತಿಂದೆವು. ಅದು ಮುಗಿದ ಮೇಲೆ ಹತ್ತಿರವಿದ್ದ ಮೈದಾನದಲ್ಲಿ ಸೈಕಲ್ ಮೆಟ್ಟುತ್ತಾ, ಐಸ್ ಕ್ಯಾಂಡಿ ತಿಂದೆವು.

ಆಸ್ಪತ್ರೆಯ ಕಂಪೌಂಡರ್ ಮಲೆಯಾಳೀಯಾಗಿದ್ದ ಎಂದು ನೆನಪು. ಆದರೆ ಆತ ಬಹಳ 'ಬಿಳಿ' ಬಣ್ಣದವನಾಗಿದ್ದ. ಅವನಿಗೆ ಪರಿಸರದ ಹೆಣ್ಣು ಮಕ್ಕಳೊಡನೆ ಪ್ರೇಮ ವ್ಯವಹಾರವಿತ್ತು. ಹೆಣ್ಣು ಮಕ್ಕಳಿದ್ದ ಹಿರಿಯರೆಲ್ಲಾ ಅವನನ್ನು ಇಷ್ಟ ಪಡುತ್ತಿರಲ್ಲಿಲ್ಲ. ಅವನ ಬಗ್ಗೆ ಕೆಟ್ಟದಾಗಿ ತಮ್ಮ ಮನೆಯ ಹೆಣ್ಣು ಮಕ್ಕಳಿಗೆ ಹೇಳುತಿದ್ದರು. ಕೊನೆಗೊಮ್ಮ ಆತ ನಮ್ಮೂರಿನ ಒಬ್ಬ ಹುಡಿಗಿಯೊಂದಿಗೆ ಪರಾರಿಯಾಗಿಯೂ ಬಿಟ್ಟ. ಆತನ ಬಿಳಿ ಅಂಗಿ ಪ್ಯಾಂ ಟ್ ಗಳು, 'ಬಿಳಿ' ಬಣ್ಣ, ಕೆಲವೊಮ್ಮೆ ಬಿಳಿ ಷೂ ಕೂಡಾ ನಮಗೆ ನಮ್ಮ ಕಲ್ಪನೆಯಲ್ಲಿದ್ದ ದೆವ್ವವನ್ನು ನೆನಪಿಸುತ್ತಿತ್ತು.

ರಾತ್ರಿ ಕೆಲವೊಮ್ಮೆ ಅವನನ್ನು ಕಂಡವರು ದೆವ್ವ ಎಂದು ಹೆದರುತ್ತಿದ್ದರು. ಒಂದು ಸಲ ನಮ್ಮ ನೆಂಟರೊಬ್ಬರು ಬಿಳಿ ಪಂಚೆ ಹಾಗೂ ಬಿಳಿಅಂಗಿ ತೊಟ್ಟು ರಾತ್ರಿ ಹೋಗುತ್ತಿದ್ದುದನ್ನು ಕಂಡ ಹುಡುಗಿಯೊಬ್ಬಳು ಆತ ಕಂಪೌಂಡರ್ ಎಂದು ತಿಳಿದು ಆತನ ಮೇಲೆ ಕಲ್ಲೆಸಿದ್ದಳು. ನಾವು ಕೂಡಾ ಕತ್ತಲಾದ ಮೇಲೆ ದೂರದಲ್ಲಿ ಯಾರಾದರೂ ಬಿಳಿ ಬಟ್ಟೆ ಯುಟ್ಟು ಬಂದರೆ ಕಂಪೌಂಡರ್ ಎಂದು ಹೇಳಿ ಕೊಳ್ಳುತ್ತಿದ್ದೇವು.

ಹೊಸ ಡಾಕ್ಟರ್‍ಗಿಂತ ಹಳೆ ಕಂಪೌಂಡರ್ ಹೆಚ್ಚು ನಂಬಿಗಸ್ತ.

Saturday, July 28, 2007

ಹುಡುಕುವುದು ಎಲ್ಲಿ?

ಆ ಬೆಟ್ಟದ ಬದಿಯಲ್ಲಿ ನಡೆದು ಕೊಂಡು ಹೋಗುವಾಗ ಅಲ್ಲೊಂದು ಕಣಿವೆ ಸಿಗುತ್ತದೆ. ಅದರ ಬದಿಗೇ ಒಂದು ಗುಹೆಯಂತಹ ಸ್ಥಳವಿದೆ. ಅಲ್ಲಿ ಹಿಂದೆ ಹುಲಿಗಳಿರುತ್ತಿದ್ದವೆಂದು ಹೇಳುತ್ತಿದ್ದರು. ಹುಲಿಗಳು ಬಂದು ಅವರ ಹಟ್ಟಿಯಿಂದ ದನಗಳನ್ನು ತಿನ್ನಬಹುದೆಂಬ ಹೆದರಿಕೆ ಅವರಿಗೆ. ಗುಡ್ಡಕ್ಕೆ ಮೇಯಲು ಹೋದ ದನಗಳು ಬರದಿದ್ದರೆ ಅವನ್ನು ಹುಲಿ ತಿಂದಿರಬೇಕೆಂದೆ ಜನ ನಂಬುತ್ತಿದ್ದರು. ನನಗೆ "ಗೋವಿನ ಹಾಡು" ಕೇಳಿದಾಗ ಆ ಬೆಟ್ಟ, ಅಲ್ಲಿ ಇದ್ದಿರಬಹುದಾದ ಹುಲಿ, ಊರಿನ ಜನ, ಹಟ್ಟಿ, ದನ ಎಲ್ಲಾ ಮನಸ್ಸಿನಲ್ಲಿ ಮೂಡುತ್ತದೆ. ಅಂತಹ ಜಾಗವದು.

ಅವರು ಈಗ ಅಲ್ಲಿಂದ ಜಾಗ ಬಿಟ್ಟು ಬೇರೆಡೆ ಹೋಗಿದ್ದಾರೆ. ಅಲ್ಲಿ ಈಗ ಯಾರು ಇಲ್ಲ. ಆಕೆ ಐದು ಹೆಣ್ಣು ಮತ್ತು ಎರಡು ಗಂಡು ಮಕ್ಕಳಲ್ಲಿ ಕೊನೆಯವಳು. ಬಡತನ ಮತ್ತು ಅವಿದ್ಯೆ ಎಲ್ಲವುಗಳ ಅಡಿಪಾಯವಾಗಿತ್ತು. ಅವಳಿಗೆ ಒಂದು ಕಣ್ಣು ಕೂಡ ಇರಲ್ಲಿಲ್ಲ. ವಯಸ್ಸಿಗೆ ಬಂದರೂ ಮದುವೆಯಾಗಿಲ್ಲ. ಅವಳ ಎಲ್ಲರಿಗಿಂತಲೂ ದೊಡ್ಡ ಅಕ್ಕ ತನ್ನ ನಾಲ್ಕನೆಯ ಹೆರಿಗೆಯಲ್ಲಿ ಮಗು ಜತೆ ತೀರಿದಾಗ, ಅವಳ ಭಾವನನ್ನೇ ಮದುವೆಯಾಗಬೇಕಾಯಿತು. ಮದುವೆಯಂತಹ ಸಡಗರವಲ್ಲ. ಭಾವನಿಗೆ ಎರಡನೆ ಮದುವೆ. ಅವಳಿಗೆ ಆತನನ್ನು ಮದುವೆಯಾಗುವ ಮನಸ್ಸೇನೂ ಇರಲ್ಲಿಲ್ಲ. ಅವಳಿಗೆ ಅದರ ಸಂಭ್ರಮ ಸಿಗಬೇಕೆನ್ನುವವರು ಯಾರೂ ಇಲ್ಲ. ಭಾವನ ಮಕ್ಕಳು ಸಣ್ಣವರಿದ್ದರು. ಅವರೂ ಒತ್ತಾಯಿಸಿದರು. ಚಿಕ್ಕಮ್ಮ ನಾವು ತಾಯಿಯನ್ನು ಕಳಕೊಂಡೆವು. ನೀನಾದರು ಬಂದು ನಮ್ಮನ್ನು ಬೆಳೆಸು ಎಂದು.

ಯಾರದೋ ಮನೆಗಳಲ್ಲಿ ಮಕ್ಕಳನ್ನು ನೋಡುತ್ತಿರುವವಳು ಮಕ್ಕಳ ತಾಯಿಯಾದಳು. ಮೊದಲೆರಡು ಹೆಣ್ಣಾದರೆ ಮತ್ತಿನದು ಗಂಡು. ಮತ್ತೆ ಒಂದು ಹೆತ್ತಳು. ಮಗು ಉಳಿಯಲ್ಲಿಲ್ಲ. ಮತ್ತೊಮ್ಮೆ ಗರ್ಭಿಣಿಯಾದಳು. ಗಂಡ ಮುದುಕನಾಗುತ್ತಿದ್ದಾನೆ. ಇನ್ಯಾಕೆ ಮಕ್ಕಳು ಎಂದು ಗರ್ಭಪಾತ ಮಾಡಿಸಿಕೊಂಡಳು. ಮತ್ತೆ ಕೆಲವೇ ವರ್ಷಗಳಲ್ಲಿ ಗಂಡನೂ ತೀರಿಕೊಂಡನು. ಗಂಡನ ಮೊದಲ ಹೆಂಡತಿಯ ಮಕ್ಕಳು ಮದುವೆಯಾಗಿ ಅವರ ಹೆಂಡತಿಯರೂ ಬಂದಿದ್ದಾರೆ. ತನ್ನ ಮಕ್ಕಳು ಚಿಕ್ಕವರು. ಅವರ ವಿದ್ಯೆ, ಮದುವೆ. ಕನಸುಗಳು ಹಲವು. ಕುಟುಂಬ ದೊಡ್ಡದು. ಬಡತನ ಮತ್ತೆ ಅವಿದ್ಯೆ. ಹೇಳುವವರು ಹಲವರು. ಯಾವುದನ್ನು ತೆಗೆದುಕೊಳ್ಳಬೇಕೆಂದು ಅವಳಿಗೂ ಗೊತ್ತಿಲ್ಲ. ಇಂತಹದರಲ್ಲೇ ಅವಳು ಬೆಳೆದಳು. ತೋಟ, ಗದ್ದೆ ಎಂದು ಮೈ ಮುರಿದು ದುಡಿದಳು. ದಣಿದ ಮೈಗೆ ರೋಗ ಬೇಗನೆ ಹಿಡಿಯುವುದು. ಮದ್ದು ನಾಟುವುದಿಲ್ಲ.

ಹೆಣ್ಣು ಮಕ್ಕಳಿಗೆ ಮದುವೆಯಾಗಿ ಅವರು ಮನೆಯಿಂದ ಹೋದರು. ಮಗ ಊರಲ್ಲಿ ನಿಲ್ಲುವುದಿಲ್ಲ ವೆಂದು ಎಲ್ಲೆಲ್ಲೋ ಅಳೆದ. ಕೆಲಸ ಅದು ಇದು ಎಂದು ಪರವೂರಿನವನಾದ. ವರ್ಷಕ್ಕೊಮ್ಮೆ ಬಂದರೆ ಭಾಗ್ಯ. ವಯಸ್ಸು ಓಡುತ್ತಿದೆ. ರೋಗ ರುಜಿನಗಳು ಅಪ್ಪುತ್ತವೆ. ಹತ್ತಿರದವರು ಯಾರು? ಹುಡುಕುತ್ತಿದ್ದಾಳೆ. ಮನಸ್ಸಿಗೆ ಬಂದದ್ದನ್ನೆಲ್ಲಾ ದೊಡ್ಡದಾಗಿ ಆಡುತ್ತಾಳೆ. ಅವಳ ಒಳಗೇನೂ ಇಲ್ಲ. ತೀರಿ ಹೋದ ಅಪ್ಪ ಅಮ್ಮ, ಜಗಳಾಡಿ ಮಾತೇ ಆಡದ ಅಣ್ಣ, ಊರಲ್ಲಿರದ ಮಗ - ಊರುಗೋಲು ಯಾರೆಂದು ಹುಡುಕುತ್ತಿದ್ದಾಳೆ.
ನಾನು ಅವಳಿಗೆ ಮಗನಾದರೂ ಆಗಬಾರದೇ?

ಒಲವಿನಿಂದ
ಬಾನಾಡಿ

Tuesday, July 17, 2007

ನಿಲ್ಲದ ಮಾತು

ಅವಳಿಗೆ ಫೋನ್‌ ಮಾಡಿದರೆ ಅದಕ್ಕಾಗೆ ಕಾದು ಕುಳಿತ್ತಂತೆ ಒಂದೇ ಬೆಲ್‌ಗೆ ಎತ್ತಿದಳು. ಇಷ್ಟೊತ್ತಿನಲ್ಲಿ ಅವಳು ಫೋನ್ ಹತ್ತಿರ ಕುಳಿತು ಕಾಯುತ್ತಿರುವ ಸಮಯವಲ್ಲ. ನಾನು ಫೋನ್ ಮಾಡಿಲ್ಲವೆಂದು ದುಃಖದಲ್ಲಿದ್ದಾಳಂತೆ. ಅಯ್ಯೋ ನಾನು ನಿನ್ನೆ ಫೋನ್ ಮಾಡಿದ್ದೆನಲ್ಲಾ! ನಿನ್ನೆ ಅವಳಿಗೆ ಮೊನ್ನೆ, ಆ ಮೊನ್ನೆಯಂತೆ ಆಗಿದೆ. ಯಾಕೆ? ಬೇಸರವೇ? ಕೆಲಸವೇನೂ ಇಲ್ಲವಾ? ಫೋನ್ ಮಾಡಿದ್ದು ನಾನು ಮಾತಾಡಲೆಂದು. ಹಲೋ ಎಂಬ ಒಂದು ಮಾತು ಬಿಟ್ಟರೆ ಉಳಿದಂತೆ ನಾನು ಅವಳಿಗೆ ಕಿವಿಯಾಗಿಯೇ ಇದ್ದೆ. ಮಾತು, ಮಾತು, ಮಾತು. ನನಗೂ ಮಾತಾಡಲು ಬಹಳವಿತ್ತು. ಯಾಕೆ ನನ್ನನ್ನು ಮಾತಾಡಲು ಬಿಟ್ಟಿಲ್ಲ. ನನಗೂ ಸಿಟ್ಟು ಬರಬೇಡವೇ? ಇನ್ನು ಮುಂದೆ ಫೋನೇ ಮಾಡುವುದಿಲ್ಲ ಎಂದು ಹೇಳಬೇಕಿತ್ತೇ?

ಬಸ್ಸಿನಲ್ಲೂ ಹಾಗೇನೆ. ಇಬ್ಬರಿಗೂ ಒಂದೇ ಸೀಟು ಸಿಕ್ಕರಂತು ನಾವು ಇಳಿಯುವ ಸ್ಟಾಪ್ ಬಂದರೂ ಇಳಿಯದಷ್ಟು ಮಾತು. ಈ ಮಾತಿನ ಅರಗಿಣಿ ಒಂದು ದಿನ ಮಾತ್ರ ಮಾತಿಲ್ಲದೆ ಗೂಬೆ ತರ ಇದ್ದಳು. ಅವತ್ತು ಸೋಮವಾರ. ಅದರ ಹಿಂದಿನ ಶನಿವಾರ ನಾನು ಮತ್ತು ಶಿವ ಸಿನಿಮಾಕ್ಕೆ ಹೋಗಿದ್ದ ಸುದ್ದಿ ಎಲ್ಲರಿಗೂ ಶಿವನೇ ಪ್ರಚಾರಮಾಡಿದ್ದ. ಅವಳಿಗೂ ಅದು ಗೊತ್ತಾಯಿತು. ಸಂಜೆಯ ಮೂರುಗಂಟೆಯ ಷೋಗೆ ನಾವು ಎರಡು ಗಂಟೆಗೇ ಹೋಗಿ ಬರುವಾಗ ಏಳು ಗಂಟೆ ಕಳೆದಿರಬೇಕು. ಪ್ರತಿ ಶನಿವಾರದ ಸಂಜೆಗಳಂತೆ ಆ ಶನಿವಾರ ಯಾರೂ ಗುಳಿಗ ತಾಣದ ಹತ್ತಿರದ ಗೋಳಿಮರದ ಕಟ್ಟೆಗೆ ಬರಲ್ಲಿಲ್ಲ. ಅವಳು ಮಾತ್ರ ಬಂದು ಅಲ್ಲಿ ಗಂಟೆಗಟ್ಟಲೇ ಕಾದು ಹೋಗಿದ್ದಳು. ಮೀನು ಮಾರುವ ಚೆಲ್ಲಿಯಮ್ಮನಿಂದ ಮೀನು ಕೂಡ ಕಟ್ಟಿಸಿಕೊಂಡು ಹೋಗಬೇಕಾಯಿತು ಅವಳಿಗೆ. ಸಂಜೆಯ ಕೊನೆಯ ಬಸ್ಸು ಹೊರಟಿತು, ಚೆಲ್ಲಿಯಮ್ಮನಿಗೆ ಹೋಗಬೇಕು, ಹಾಗಾಗಿ ಉಳಿದ ಮೀನನ್ನು ಇವಳಿಗೆ ಕೊಟ್ಟು ಚೆಲ್ಲಿಯಮ್ಮ ಬಸ್ಸು ಹತ್ತಿದಳು. ಮನೆಗೆ ಬಂದು ಮೀನನ್ನು ಕೊಯ್ದು, ಅದನ್ನು ಅಡುಗೆಗೆ ತಯಾರಿಸುವುದರಲ್ಲಿ, ಅದಕ್ಕೆ ಮಸಾಲೆಯನ್ನು ಅರೆಯಲು ಕೂಡ ಅವಳ ಅಮ್ಮ ಅವಳಿಗೇ ಹೇಳಿದರಂತೆ. ನಮ್ಮನ್ನೆಲ್ಲಾ ಮಸಾಲೆಯೆಂದು ತಿಳಿದು ಚೆನ್ನಾಗಿ ಅರೆದಿರಬೇಕು ಎಂದು ನಾವು ತಮಾಷೆಮಾಡಿದಾಗ ಅವಳಿಗೆ ಕೋಪಬಂತು. ನಮ್ಮಳೊಬ್ಬ ಅವಳೊಡನೆ 'ಅರೆದ ಮಸಾಲೆಯ ಘಾಟು ಇನ್ನೂ ಇದೆ. ನೋಡವಳ ಮುಖ. ಕೆಂಪಾಗಿದೆ' ಎಂದಾಗ ಅವಳ ಕಣ್ಣಲ್ಲಿ ನೀರು ಬಂತೇ ಎಂದು ನಾನು ಅವಳ ಕಣ್ಣುಗಳಲ್ಲಿ ನನ್ನ ಕಣ್ಣುಗಳನ್ನು ಹೂಡಿದೆ. ಅವಳು ಅದರ ನಂತರ ನನ್ನಲ್ಲಿ ಮಾತಾಡಲಿಲ್ಲ. ಅವಳಿಗೆ ಕೋಪ. ನಾವು ಮಾತ್ರವೇ ಸಿನಿಮಾಕ್ಕೆ ಹೋದೆವೆಂದು. ನಾವು ಕಟ್ಟೆಗೆ ಬರುವುದಿಲ್ಲ ಎಂದು ಅವಳಲ್ಲಿ ಹೇಳಲ್ಲಿಲ್ಲವೆಂದು. ಜತೆಗೆ ಮತ್ತೆ ಸಿಕ್ಕಾಗ ಅವಳ ಜತೆ ನಾವೆಲ್ಲ ಸೇರಿ ಅವಳನ್ನು ಗೋಳು ಹೊಯ್ದಿದ್ದು. ಅಪಾದನೆಗಳು ಪಟ್ಟಿಯಾದವು. ನಾವು ಅಪರಾಧಿಗಳೆಂದು ಒಪ್ಪಿಕೊಂಡೆವು. ಅಂತು ಒಮ್ಮೆಯಾದರೂ
ಅವಳ ಬಾಯಿ ಮುಚ್ಚಿಸುವಲ್ಲಿ ನಾವು ಯಶಸ್ವಿಯಾದೆವೆಂದು ನಮ್ಮ ನಮ್ಮಲ್ಲೇ ಮಾತಾಡಿದೆವು. ಅದು ಅವಳ ಕಿವಿಗೆ ಬಿತ್ತೇನೋ ಎಂಬಂತೆ ಅವಳು ಮತ್ತೆ ನಮ್ಮೊಡನೆ ಮಾತಿಗಿಳಿದಳು. ನಂತರ ಎಂದೂ ಮಾತು ಮುಗಿಯಲ್ಲಿಲ್ಲ. ಇಂದು ಕೂಡಾ.

ಮುಗಿಯದ ಮಾತುಗಳಲ್ಲಿ ಆಡದ ಮಾತುಗಳೇ ಜಾಸ್ತಿ. ಗಂಟೆಗಟ್ಟಲೇ ಮಾತಾಡಿದರೂ ಮುಂದಿನ ಸಲ ಸಿಗುವಾಗ ಹಿಂದಿನ ಸಲ ಹೇಳಲಾಗಿಲ್ಲ ಎಂಬಲ್ಲಿಂದ ಮಾತು ಮತ್ತೆ ಮುಂದುವರಿಯುತ್ತದೆ. ನಿಲ್ಲದ ಧಾರಾವಾಹಿ. ನಾನು ಕೂಡ ಮತ್ತೆ ಮಾತು ಮುಂದುವರಿಸುವೆ.

ಭರವಸೆಯೊಂದಿಗೆ

ಒಲವಿನಿಂದ
ಬಾನಾಡಿ

Saturday, July 14, 2007

ಮತ್ತೊಮ್ಮೆ ನೆನೆದೆವು

ಹಿತ್ತಿಲ ಮರೆಯಲ್ಲಿದ್ದ ಆ ಹೂವಿನ ಗಿಡದಲ್ಲಿ ಹೂವಾಗುವುದು ಯಾರಿಗೂ ಗೊತ್ತೇ ಆಗುತ್ತಿರಲ್ಲಿಲ್ಲ. ಆದರೆ ಅವಳಿಗೆ ಆ ಹೂವಿನ ಗಿಡ ಮತ್ತು ಅಲ್ಲಿ ಅರಳುವ ಹೂವುಗಳು ಅಂದರೆ ಬಲು ಪ್ರೀತಿ. ಅದಕ್ಕಾಗಿಯೇ ಎಂಬಂತೆ ಅವಳು ಕಾದು ಕುಳಿತು ಕೊಳ್ಳುತ್ತಿದ್ದಳು. ಅವಳಿಗೆ ಆ ಹೂವಿನ ಗಿಡ ಮತ್ತು ಅದರಲ್ಲಿ ಅರಳುತ್ತಿರುವ ಹೂವುಗಳೇ ಒಂದು ಬಗೆಯ ಸ್ನೇಹಿತೆಯರು. ಅವಳೂ ಕೂಡ ಆ ಹೂವಿನಗಿಡದಂತೆ. ಮನೆಯಲ್ಲಿದ್ದರೂ ಮರೆಯಲ್ಲಿರುತ್ತಿದ್ದಳ. ಅವಳು ಮನೆಯಲ್ಲಿರುವ ವಿಷಯ ಹೊರಗಿನವರು ಯಾರಾದರೂ ಬಂದರೆ ಗೊತ್ತಾಗುತ್ತಿರಲ್ಲಿಲ್ಲ. ಅವಳಿದ್ದಾಳೆಂದರೆ ಮಾತ್ರ ಗೊತ್ತು. ಅಥವಾ ನಮ್ಮಂತಹವರು ಅವಳ ಬಗ್ಗೆ ಕುತೂಹಲವಿರಿಸಿ ಅವಳ ಮನೆಗೆ ಬಂದರೆ ಅವಳು ಅಕಸ್ಮಾತಾಗಿ ಸಿಕ್ಕರೆ ಅವಳ ಇರುವಿಕೆಯ ಅರಿವಾಗುತ್ತಿತ್ತು.

ನದಿಯ ಬದಿಗೆ ಈಜಳು ಹೊರಟ ಹುಡುಗರ ಗುಂಪಿಗೆ ಅವಳು ಸಿಕ್ಕಿದರೆ ಖಂಡಿತಾ ಅವಳು ಅವರ ಜತೆ ಸೇರುತ್ತಾಳೆ. ಬೇಸಗೆಯ ಬಿಸಿಲಿಗೆ ಮುದ ನೀಡುವ ನದಿಯ ನೀರಿನಲ್ಲಿ ಈಜಾಡುತ್ತಾ ಕಾಲ ಕಳೆಯುವುದು ಅವಳಿಗೂ ಇಷ್ಟ. ಹುಡುಗರಾದರೋ ಬೆಳಗಿನಿಂದ ಸಂಜೆಯ ವರೆಗೆ ನದಿಯ ಬದಿಯಲ್ಲೇ ಕಾಲ ಕಳೆಯಲೆಂದೇ ಹುಟ್ಟಿದವರಂತೆ ಅಲ್ಲಿರುತ್ತಿದ್ದರು. ನದಿಯಾಚೆಗಿರುವ ಮಾವಿನ ಮರದಿಂದ ಹಣ್ಣುಗಳನ್ನು ಕೀಳುವುದು, ತೋಟದಲ್ಲಿದ್ದ ಅನಾನಸು, ಗದ್ದೆಯಿಂದ ಕಬ್ಬು, ಗೆಣಸು, ಸೌತೆಕಾಯಿ, ಎಳನೀರು, ಹಲಸಿನ ಕಾಯಿ, ನೆಲ್ಲಿಕಾಯಿ, ಸೀತಾಫಲ, ಗಿಡದಲ್ಲೇ ಹಣ್ಣಾದ ಬಾಳೆಹಣ್ಣು ಇನ್ನು ಏನೇನು ಅಲ್ಲಿ ಸಿಗುವುದೋ ಅದೆಲ್ಲವನ್ನು ತಂದು ಒಟ್ಟಿಗೆ ಸೇರಿ ತಿಂದು ಹೊಟ್ಟೆಯ ಹಸಿವನ್ನು ನೀಗುತ್ತಿದ್ದರು.

ಮನೆಯವರಿಗಂತು ಈ ಹುಡುಗರೆಲ್ಲಾ ಏನೂ ಕೆಲಸಕ್ಕೆ ಬಾರದವರೆಂದೇ ನಂಬಿಕೆ. ಮನೆಯ ಹೆಂಗಸರು, ಈ ಹುಡುಗರು ಮನೆಯಲ್ಲಿದ್ದರೆ ಮಾಡುವ ರಂಪಾಟಗಳಿಗಿಂತ ಎಲ್ಲಾದರೂ ಹಾಳಾಗಿ ಹೋಗಲಿ ಎಂಬಂತೆ ಇವರ ಗೋಜಿಗೆ ಹೋಗುವುದಿಲ್ಲ. ಗಂಡಸರು ಅಲ್ಲಿ ಇಲ್ಲಿ ಕೆಲಸ ಎಂದು ಹೋಗಿರುತ್ತಾರೆ. ಹುಡುಗರು ತಮ್ಮ ಮನೆಗೆ ಬಂದ ಅತ್ತೆಯ, ಚಿಕ್ಕಮ್ಮನ ಮಕ್ಕಳ ಜತೆ ಸೇರಿದರೆ ಅದು ಸುಮ್ಮನಿರುವವರಲ್ಲ. ನದಿಯ ನೀರು ಈ ಮಕ್ಕಳಿಗೆ ಸಾಕಷ್ಟು ಇತ್ತು. ಕ್ರಮೇಣ ನದಿ ಒಣಗಳು ಆರಂಭವಾಗುತ್ತದೆ. ಕೊನೆಗೊಮ್ಮೆ ಅದು ಮರುಭೂಮಿಯಾಗುತ್ತದೆ. ಮತ್ತೆ ದಿಡೀರನೆ ಮಳೆ ಬರುತ್ತದೆ. ನೀರು ತುಂಬುತ್ತದೆ. ನೆರೆ ಬರುತ್ತದೆ. ನದಿಯ ಹತ್ತಿರ ಯಾರೂ ಮಕ್ಕಳನ್ನು ಬಿಡುವುದಿಲ್ಲ. ಮಕ್ಕಳೇ ಯಾಕೆ ದೊಡ್ಡವರೂ ಹೆದರುತ್ತಾರೆ. ಒಂದು ವಾರವಿಡೀ ಬಿಡದೆ ಸುರಿದ ಮಳೆಗೆ ಈ ಹುಡುಗರೆಲ್ಲಾ ಎಲ್ಲಿ ಹೋದರೆಂದು ಕೇಳಿಕೊಂಡು ಬರುವಂತೆ ನದಿಯ ನೀರು ಮನೆಯ ಜಗಲಿಗೂ ಬರುತ್ತದೆ. ಶಾಲೆಯ ಪುಸ್ತಕಗಳು ಒದ್ದೆಯಾಗಬಾರದೆಂದು ಅವುಗಳಿಗೆ ಪ್ಲಾಸ್ಟಿಕ್ ಕವರ್ ಹಾಕಿ ಚೀಲದೊಳಗಿಟ್ಟರೆ ತೆರೆಯುವ ಮನಸೂ ಮಕ್ಕಳಿಗಿರುವುದಿಲ್ಲ. ಬಚ್ಚಲು ಕೋಣೆಯ ಬೆಂಕಿಗೆ ಹಾಕಿ ಗೇರು ಬೀಜವನ್ನೋ, ಹಲಸಿನ ಬೀಜವನ್ನೋ, ಹುಣಸೆ ಹಣ್ಣಿನ ಬೀಜವನ್ನೋ ಸುಟ್ಟು ತಿನ್ನುತ್ತಾ ಕುಳಿತರೆ ನೀರು ಬಿಸಿಯಾಗಿರುತ್ತದೆ. ಹಂಡೆ ತುಂಬಿರುವ ಬಿಸಿನೀರನ್ನು ಖಾಲಿ ಮಾಡುವಷ್ಟು ಸ್ನಾನ ಮಾಡಿದರೂ ಸಾಲದು. ನೀರಿಗೇನು ಬರವಿಲ್ಲ. ಭಗೀರಥ ಗಂಗೆಯನ್ನು ಧರೆಗೆ ತರಿಸಿದಂತೆ ಮೇಲಿಂದ ಸುರಿಯುತ್ತಿರುತ್ತದೆ. ಕೆರೆಯಲ್ಲಿ, ಕಣಿವೆಯಲ್ಲಿ, ಬಾವಿಯಲ್ಲಿ, ಗದ್ದೆಯಲ್ಲಿ, ತೋಟದಲ್ಲಿ ಎಲ್ಲೆಲ್ಲೂ ನೀರೇ ನೀರು.

ಬಿಡಿಸಿದ ಕೊಡೆಯನ್ನು ಮಳೆಗೆ ಹಿಡಿಯುತ್ತಾ ಹೋದರೆ ಅವಳು ಯಾರು ಎಂಬುದನ್ನು ಗುರುತಿಸಲು ಅವಳುಟ್ಟ ಲಂಗ ಅಥವಾ ಅವಳು ನಡೆಯುವ ಶೈಲಿಯನ್ನು ನೋಡಬೇಕು. ಬೆಳಿಗ್ಗೆ ಬಿಸಿಲಿದ್ದುದರಿಂದ ಶಾಲೆಗೆ ಹೋಗುವಾಗ ಕೊಡೆ ಕೊಂಡೊಯ್ಯಲು ಮರೆತಿದ್ದುದರಿಂದ ಸಂಜೆ ಸುರಿದ ಮಳೆಯಲ್ಲಿ ನೆನೆದು ಬರಬೇಕಾಗಬಹುದು. ಅಕಸ್ಮಾತ್ ಆಕೆ ದಾರಿಯಲ್ಲಿ ಸಿಕ್ಕಿದರೆ ಅವಳ ಕೊಡೆಯೊಳಗೆ ನುಸುಳಿ ಇಬ್ಬರೂ ಒದ್ದೆಯಾಗಿ ಮನೆಗೆ ತಲುಪಬಹುದು.

ಮಳೆಗಾಲದ ಆರಂಭ. ನದಿಯಲ್ಲಿನ್ನೂ ನೀರು ತುಂಬಿಲ್ಲ. ಮಳೆ ಕೂಡ ಪಾಳಿಯಲ್ಲಿ ಬಂದಂತೆ ದಿನಕೊಮ್ಮೆಯೋ ಎರಡು ಸರ್ತಿಯೋ ಬರುತ್ತಿದೆ. ಅವಳು ಸಿಕ್ಕಿದಳು. ನೆನಪುಗಳು ಹತ್ತಿರವಾದುವು. ಕುಸಲೋಪರಿ, ಕುಟುಂಬದ ಕುರಿತಾದ ಮಾತುಗಳು ಮುಗಿದು, ಮಳೆ ಬೆಳೆಯ ಬಗ್ಗೆಯೂ ಮಾತಾಡಿಯಾಯಿತು. ತೋಟದ ಬದಿಯಿಂದ ನದಿಯ ಪಕ್ಕ ಹೋಗೋಣವೆಂದು ಹೊರಟೆವು. ಹೊರಟ್ಟಿದ್ದು ಆ ಹಿತ್ತಳ ಮರೆಯ ಗಿಡದ ಹತ್ತಿರದಿಂದಲೇ. ಮರವೂ ಬೆಳೆದಿದೆ ಎಂದನಿಸಿತು. ನಾವೂ. ಮೆಟ್ಟಿಲಿಳಿಯುವಾಗ ನನ್ನ ಕೈ ಹಿಡಿದಳು. ತೋಟದ ಮಧ್ಯದಿಂದ ಎಳೆಬಿಸಿಲುಕೋಲು. ನಾವು ಮಾತ್ರ ಎಂದೆಣಿಸಿರಲ್ಲಿಲ್ಲ. ನಮ್ಮ ಜತೆಗಿದ್ದ ಆ ಮಾವಿನ ಮರ, ಹಲಸಿನ ಮರ, ನದಿಯ ದಡದಲ್ಲಿದ್ದ ಕಲ್ಲುಗಳು ಮತ್ತೆ ಬಂದಿರಾ ಬನ್ನಿ ಬನ್ನಿ ಎಂದು ಹಾಡುವಂತನಿಸಿತು. ಕೈಕೈ ಹಿಡಿದು ನಾವಿಬ್ಬರೂ ನಕ್ಕೆವು. ಬರೆ ನಗುತ್ತಿದ್ದೆವು. ನಮ್ಮೊಳಗಿನ ಮಾತುಗಳಿಗೆ ಪದ ಬೇಕಾಗಿರಲ್ಲಿಲ್ಲ. ಹೀಗೆ ನಕ್ಕು ಬಹಳ ದಿನವಾಗಿರಬೇಕು. ಆಕಾಶದಲ್ಲಿ ಮೋಡಗಳು ಕೊಡೆ ಹಿಡಿದಿದ್ದವು. ಮರಗಳು ಗಾಳಿ ಬೀಸುತ್ತಿದ್ದವು.

ಒಳಗಿನಿಂದ ನಾವು ಹೊರಗೆ ಬಂದಿದ್ದೆವು.

ಅಷ್ಟೇ.

ಒಲವಿನಿಂದ
ಬಾನಾಡಿ


Saturday, June 23, 2007

ದನದ ಜಾತ್ರೆ


ಬಹಳ ದಿನಗಳಿಂದ ಬರೆಯಲಾಗಿಲ್ಲ. ಆರಂಭದ ಉತ್ಸಾಹ ಅಳಿಯಿತೇ ಎಂಬ ದಿಗಿಲು. ಮತ್ತೆ ಬರೆಯಲಾಗದ್ದಕ್ಕೆ ಸಮಜಾಯಿಸಿ. ಬರೆಯಲು ವಿಚಾರಗಳು ಆಗಾಗ ಅರಬ್ಬಿ ಸಮುದ್ರದ ತೆರೆಗಳಂತೆ ಒಂದೇ ಸಮನೆ ಬರುತ್ತಿದೆ. ಅಲ್ಲ ಸುರಿಯುವ ಮಳೆಯಲ್ಲಿ ಅಷ್ಟೊತ್ತು ಕುಳಿತು ಬರೆಯುವುದಕ್ಕಿಂತ ಮಳೆಯ ನಿನಾದಕ್ಕೆ ಕಿವಿಕೊಟ್ಟು ಕುಳಿತರಾಗದೇ ಎಂಬ ಅನಿಸಿಕೆ.
ಸನಾತನಧರ್ಮದ ಮಠಾಧಿಪತಿಗಳಲ್ಲೊಬ್ಬರಾದ ರಾಘವೇಶ್ವರ ಭಾರತೀಯವರ ಕಾಮಧುಗಾ ಎಲ್ಲೆಡೆ ಅಭಿರುಚಿ ಹುಟ್ಟಿಸಿದೆ ಅಲ್ಲದೇ ಅದೊಂದು ಧಾರ್ಮಿಕ ಮಹತ್ವತೆಯನ್ನು ಪಡೆದುಕೊಂಡು ಹೈನುಗಾರಿಕೆಯವರು, ಪರಿಸರತಜ್ಞರು, ಚಿಂತಕರು ಮತ್ತು ಬುದ್ಧಿಜೀವಿಗಳೆಂದು ಎಣಿಸಿಕೊಂಡವರು ಭಾಗವಹಿಸುತ್ತಿದ್ದಾರೆ. ಗೋ ಪ್ರೇಮಿಗಳನ್ನು ಒಂದೆಡೆ ತರಲಾಗುತ್ತಿದೆ. ಈ ಕುರಿತು ನಾನೂ ಕೆಲವು ಅಭಿಪ್ರಾಯಗಳನ್ನು ಹೊಂದಿ ನನ್ನದೇ ಪ್ರತಿಕ್ರಿಯೆಯನ್ನು ನೀಡಿದ್ದೆ. ಆದರೆ ಇಲ್ಲಿ ಆ ಬಗ್ಗೆ ಬರೆಯುವುದ್ದಿಲ್ಲ. ಕೆಲವೊಂದು ಕುತೂಹಲ ಸಂಗತಿಗಳು ಇತ್ತೀಚೆಗೆ ನನ್ನ ಅನುಭವಕ್ಕೆ ಬಂದಿರುವುದನ್ನು ಮಾತ್ರ ದಾಖಲಿಸುತ್ತೇನೆ. ಈ ಅನುಭವಗಳಿಗೆ ನಾನು ತಟಸ್ಥ.
ಗೋ ಸಂರಕ್ಷಣೆಯ ಹೆಸರಿನಲ್ಲಿ ಕಳೆದ ಕೆಲವು ತಿಂಗಳುಗಳ ಹಿಂದೆ ಮಂಗಳೂರು ಇದುವರೆಗೆ ಕಾಣದ ಕೋಮು ದಳ್ಳುರಿ ಕಂಡಿತು. ಕರ್ಫ್ಯೂ ಅಂದರೇನು ಅನ್ನುವುದು ಜನಕ್ಕೆ ತಿಳಿಯಿತು. ಕಾಶ್ಮೀರದಲ್ಲಿ ಪ್ರತಿದಿನ ಕರ್ಫ್ಯೂ ಆದಾಗ ಓದಿ ಪತ್ರಿಕೆ ಮಡಿಚಿಡುತ್ತಿದ್ದ ಜನಕ್ಕೆ ಅದರ ಅರ್ಥ ತಿಳಿಯಿತು.ಬೀಫ್ ಮಂಗಳೂರಿನಲ್ಲಿ ಸಾಮಾನ್ಯವಾಗಿ ಸಿಗುತ್ತದೆ. ಅದು ದನದ ಮಾಂಸವೆಂದು ನನಗೆ ಗೊತ್ತಿಲ್ಲ. ಬೀಫ್ ತಿನ್ನುವರೊಬ್ಬರ ಪ್ರಕಾರ ತಿನ್ನಲು ಹೋರಿ ಅಥವಾ ಕೋಣಗಳನ್ನು ಮಾತ್ರ ಬಳಸುತ್ತಾರಂತೆ. ದನ ಅಥವಾ ಎಮ್ಮೆಗಳನ್ನು ಕೊಲ್ಲುವುದಿಲ್ಲವಂತೆ. ಸತ್ಯ ನನಗೆ ಗೊತ್ತಿಲ್ಲ. ನಾನು ಎಳವೆಯಲ್ಲಿದ್ದಾಗ ನಮ್ಮ ಊರಿನ ಮಸೀದಿಯ ಪಕ್ಕದ ಅಂಗಡಿಯಲ್ಲಿ ಕುಳಿತು ಕೇಳಿದ ಮಾತಿನ ಪ್ರಕಾರ ಸ್ಥಳೀಯ ಮುಸ್ಲಿಮರು ಅವರ ಹಬ್ಬದಂದು ಒಂದು 'ಹೋರಿ ಕರು'ವನ್ನು ಮಾಂಸಮಾಡಿ ಹಂಚಿ ಅಡುಗೆಮಾಡಿದ್ದರು. ಅವರ ಊಟಕ್ಕೆ ನಮ್ಮೂರಿನ ದಲಿತರನ್ನೂ ಕರೆದಿದ್ದರು.
ಮಂಗಳೂರಿನ ಬಾವುಟಗುಡ್ಡೆಯಲ್ಲಿ ದಶಕದ ಹಿಂದೆ ಸಂಜೆ ಹೊತ್ತಿಗೆ 'ಚಲಿಸುವ ಹೋಟೇಲ್''ಗಳಲ್ಲಿ ಬೀಫ್ ಸಿಗುತ್ತಿತ್ತು. ಪರಾಟ ಅಥವಾ ಪಾವ್ (ಬನ್ನು) ಸೇರಿಸಿ ಬೀಫ್ ಸುಕ್ಕ ತಿಂದು ಅದರ ಮೇಲೊಂದು ಖಡಕ್ ಚಾಯ್ ಕುಡಿಯುವುದು ಕೆಲವರ ರೂಢಿಯಾಗಿತ್ತು. ಮಂಗಳೂರಿನ ಸ್ನೇಹಿತೆಯೊಬ್ಬಳ ಮನೆಗೆ ನಾನು ಮತ್ತು ನನ್ನ ಕೊಡಗಿನ ಮಿತ್ರರೊಬ್ಬರು ಹೋಗಿದ್ದಾಗ ಹಂದಿ ಮಾಂಸವಿಲ್ಲವೆಂದು ಬೀಫ್ ತಂದಿದ್ದರು.
ಮಂಗಳೂರಿನಿಂದ ಅಷ್ಟೊಂದು ದೂರವಿಲ್ಲದ ಕೇರಳದಲ್ಲಿ ಬೀಫ್ ಯಾವುದೇ ಮಾಂಸಹಾರಿ ಹೋಟೇಲ್‍ಗಳಲ್ಲಿ ಸಾಮಾನ್ಯವಾಗಿ ಸಿಗುತ್ತದೆ. ಕೇರಳದಲ್ಲಿ ಇನ್ನೂ ದಕ್ಷಿಣಕ್ಕೆ ಹೋದರೆ ಬಹಳಷ್ಟು ಕಡೆ ಸಿಗುತ್ತದೆ. ಅದಕ್ಕಾಗಿ ಅದು 'ದೇವರ ಸ್ವಂತ ರಾಜ್ಯ' = ಗಾಡ್ಸ್ ಓನ್ ಕಂಟ್ರಿ. ವಿದೇಶಿಯರು ಭಾರತಕ್ಕೆ ಬಂದರೆ ಅಲ್ಲಿ ಹೋಗದೆ ಬಿಡುವುದಿಲ್ಲ.
ಮೂವತ್ತಮೂರು ಕೋಟಿ ದೇವತೆಗಳ ನಿವಾಸಸ್ಥಾನವಾದ ಗೋವು ಚಲಿಸುವ ದೇವಾಲಯ. ಪವಿತ್ರವಾದ ಪಂಚಗವ್ಯವನ್ನು ನೀಡುವ ಚಲಿಸುವ ತೀರ್ಥಾಲಯ. ರೋಗ ನಿವಾರಣೆಯ ದೃಷ್ಟಿಯಿಂದ ಚಲಿಸುವ ಔಷಧಾಲಯ.
ನನಗೆ ನೆನಪಾಗುವುದು ಮುಡ್ನಾಕೂಡು ಚಿನ್ನಸ್ವಾಮಿಯವರ "ನಾನೊಂದು ಮರವಾಗಿದ್ದರೆ" ಕವನ.
....................................
ಮಳೆ ಹನಿಗಳು ನಾನು ಶ್ವಪಚನೆಂದು
ಹಿಂದೆ ಸರಿಯುತ್ತಿರಲ್ಲಿಲ್ಲ. ನಾನು
ಬೇರೂರಿ ಕುಡಿಯಿಡುತ್ತಿರುವಾಗ ಭೂ ದೇವಿ
ಮಡಿ ಮಡಿ ಎಂದು ಓಡುತ್ತಿರಲ್ಲಿಲ್ಲ
ಪವಿತ್ರ ಗೋವು ನನ್ನ ತೊಗಟೆಗೆ ತನ್ನ ಮೈ ಉಜ್ಜಿ
ತುರಿಕೆ ತೀರಿಸಿಕೊಳ್ಳುವಾಗ ಅದರ ಅಂಗಾಂಗಗಳಲ್ಲಿ
ಅಡರಿಕೊಂಡ ಮುಕ್ಕೋಟಿ ದೇವತೆಗಳು
ನನ್ನನ್ನು ಮುಟ್ಟಿಸಿಕೊಳ್ಳುತ್ತಿದ್ದರು
......................................

ಕನ್ನಡ ಸಾಹಿತ್ಯದಲ್ಲಿ ಇನ್ನೂ ಇಂತಹ ಮತ್ತೊಂದು ನೆನಪಲ್ಲಿ ಉಳಿದಿರುವುದು ಲಕ್ಷ್ಮಣ್ ಅವರ 'ಸಂಬೋಳಿ' ಆತ್ಮಕಥನದ ಒಂದು ಪ್ಯಾರ. (ಪ್ರಕಟಣೆ:೨೦೦೩- ಆನಂದ ಕಂದ ಗ್ರಂಥಮಾಲೆ, ಮಲ್ಲಾಡಿಹಳ್ಳಿ, ಚಿತ್ರದುರ್ಗ ಜಿಲ್ಲೆ ).
ಓದಿ:
ಊರಳ್ಳಿಯಲ್ಲಿ ಅವಾಗೊಂದು, ಇವಾಗೊಂದು ಎಮ್ಮೆ, ದನ ಸಾಯ್ತಿದ್ದೋ. ಅದ್ನ ಹೊತ್ಕಂಡ್ಬಂದು ಕುಯ್ದು ಮನ್ಗೋಂದು ಗುಡ್ಡೆ ಹಾಕ್ತಿದ್ರು. ಆವಾಗ ನಮ್ಮಟ್ಟಿ ಜನ್ಗಳ ಮುಖದ್ಮೇಲೆ ನಿರಾಳ, ನೆಮ್ಮದಿ ನರ್ತಿಸ್ತಿತ್ತು. ನಮ್ಮಟ್ಟಿಯ ಎಲ್ಲಾ ಮನೆಗಳ ಒಲೆ ಬೆಂಕಿ ಕಾಣ್ತಿತ್ತು. ತಮ್ಮ್ ತಮ್ಮ ಪಾಲ್ಗೆ ಬಂದ ಬಾಡ್ನ ಎಷ್ಟು ಬೇಕೋ ಅಷ್ಟನ್ನ ಯಸರು ಮಾಡಿ ಉಳ್ದಿದ್ನ ಬಳ್ಸಿ ಮಂಕ್ರಿಯಲ್ಲಾಕಿ ಬಿಸಿಲ್ನಲ್ಲಿ ಒಣಗ್ಸಿ ಮಡಿಕಂತಿದ್ದೋ. ಕಾರ ಅರ್ದಾಗ ಒಂದೊಂದು ಬಳಸ್ಲನ್ನ ಸುಟ್ಕಂಡು ಹಿಟ್ಗೆ ನೆಂಚ್ಕಂಡು ತಿನ್ತಿದ್ದೋ. ಒಂದೊಂದು ಸಾತಿ ವಣ್ಪುಡಿ ಯಸರ್ನೂ ಮಾಡ್ತಿದ್ದೋ. ಮತ್ತೆ ಊರಳ್ಳಿಯೊಳ್ಗೆ ದನ, ಎಮ್ಮೆ ಯಾವಾಗ ಸಾಯ್ತಾವೆ ಅಂತ ಕಾಯ್ತಿದ್ದೋ. ನಮ್ಮಟ್ಟಿ ಜನ್ಗಳು ಉಸಿರಿದ್ದು ಯಣಗಳಂಥಾಗಿದ್ರು. ನಮ್ಮ ಪಾಲ್ಗೆ ನಗು, ಸಂತೋಷ ಕನ್ಸಾಗಿತ್ತು.

ಒಲವಿನಿಂದ

ಬಾನಾಡಿ

Thursday, May 31, 2007

ಗೇರುಮರದ ಕೆಳಗೆ

ಆಕೆ ಬಡ ಮುಸ್ಲಿಂ ಕುಟುಂಬದ ಹುಡುಗಿ. ತರುಣಿ. ವಯಸ್ಸೆಷ್ಟೆಂದು ನನಗೆ ಅಂದಾಜು ಮಾಡಲಾಗಿಲ್ಲ. ಬ್ರಾಹ್ಮಣರ, ದಲಿತರ, ಶೂದ್ರರ, ಗಾಣಿಗರ, ಕುಂಬಾರರ ಮತ್ತೊಂದು ಕ್ರಿಶ್ಚಿಯನ್‌ರ ಮನೆಗಳ ನಡುವೆ ಅದೊಂದೇ ಮುಸ್ಲಿಂ ಕುಟುಂಬ ಅಲ್ಲಿತ್ತು. ಆಕೆಯ ಅಮ್ಮನಿಗೆ ಮೂರು ಹೆಣ್ಣು ಮಕ್ಕಳು. ನಾಲ್ಕು ಗಂಡು ಮಕ್ಕಳು. ಆಕೆ ಅವರಲ್ಲಿ ಹಿರಿಯವಳಿರಬೇಕು. ಆಕೆಯ ಅಪ್ಪನ ಮೊದಲ ಹೆಂಡತಿಯ ಮಗ ಮತ್ತು ಸೊಸೆ ಅವರ ನಾಲ್ಕು ಮಕ್ಕಳು ಕೂಡಾ ಅವರ ಜತೆಯಲ್ಲೇ ಇದ್ದರು. ಕಿಟ್ಟಣ್ಣ ಭಟ್ಟರ ತೋಟದ ಬದಿಯಲ್ಲಿರುವ ಗುಡ್ಡದ ಇಳಿಜಾರಿನಲ್ಲಿ ಅವರ ಮನೆ. ಮುಳಿಹುಳ್ಳಿನ ಮಾಡು. ಮನೆ ಬಿಟ್ಟರೆ ಅವರಿಗೆ ಅಲ್ಲಿ ಜಾಗವೇನೂ ಇಲ್ಲ. ಮನೆ ಮುಂದೆ ಒಂದು ತೆಂಗಿನ ಮರ ಇದ್ದ ನೆನಪು. ತೆಂಗಿನ ಮರದ ಪಕ್ಕದಲ್ಲೇ ಒಂದು ಬಾವಿ. ಅದೆಷ್ಟು ಆಳವಿತ್ತೆಂದರೆ ಮೇಲಿನಿಂದ ನೋಡಿದರೆ ಕೆಳಗೆ ತಳ ಕಾಣುತ್ತಿರಲ್ಲಿಲ್ಲ. ಅದರಲ್ಲಿ ಬೇಸಿಗೆಯಲ್ಲಂತು ನೀರೇ ಇರುತ್ತಿರಲ್ಲಿಲ್ಲ. ನೀರಿಗಾಗಿ ಅವರು ಭಟ್ಟರ ತೋಟದಾಚೆಯ ತೋಡಿನ ಕಟ್ಟದಿಂದ ಅಥವಾ ಅಲ್ಲೇ ಪಕ್ಕದಲ್ಲಿರುವ ಕೆರೆಯಿಂದ ನೀರು ತರಬೇಕಾಗುತ್ತಿತ್ತು. ಅವಳ ಅಮ್ಮನಿಗೆ ಯಾವಾಗಲೂ ಉಬ್ಬಸ. ಅವಳ ತಮ್ಮನೊಬ್ಬನಿಗೂ ಆ ಉಬ್ಬಸ ಮುಂದುವರಿದಿತ್ತು. ತೋಟದಾಚೆಯ ಕೆರೆಯಿಂದ ನೀರು ತರಬೇಕಾದರೆ ವಾಮಾಸು ಬರುವಾಗ ಕನಿಷ್ಟ ಇಪ್ಪತ್ತೈದು ಮೆಟ್ಟಿಲು ಹತ್ತಿ ಬರಬೇಕಿತ್ತು. ಕೊಡದಲ್ಲಿ ತುಂಬಿದ ನೀರನ್ನು ಉಬ್ಬಸದಿಂದ ಹೊತ್ತು ತರುತ್ತಿದ್ದ ಅವಳ ಅಮ್ಮನನ್ನು ಕಂಡಾಗ ದುಃಖವಾಗುತ್ತಿತ್ತು. ಅವಳು, ಅವಳ ತಂಗಿ, ಅವಳ ಅಣ್ಣನ ಹೆಂಡತಿ ಬೀಡಿ ಕಟ್ಟುತ್ತಿದ್ದರು. ಬೀಡಿ ಮನೆಯಲ್ಲಿಯೇ ಕಟ್ಟುವುದು. ಅದನ್ನು ದಿನಕ್ಕೊಮ್ಮೆ ಅಥವಾ ಎರಡು ದಿನಕ್ಕೊಮ್ಮೆ ಹತ್ತಿರ ಬೀಡಿ ಬ್ರಾಂಚಿಗೆ ತೆಗೆದುಕೊಂಡು ಹೋಗಿ ಅಲ್ಲಿಂದ ಮತ್ತೆ ಹೊಗೆಸೊಪ್ಪು ಮತ್ತು ಬೀಡಿ ಎಲೆ ತರಬೇಕಿತ್ತು. ಕೆಲವೊಮ್ಮೆ ಪರಿಸರದ ಹೆಂಗಸರೆಲ್ಲಾ ಒಟ್ಟಾಗಿ ಸೇರಿ ಬೀಡಿ ಬ್ರಾಂಚಿಗೆ ಹೋಗುತ್ತಾರೆ. ಕೆಲವೊಮ್ಮೆ ಒಬ್ಬೊಬ್ಬರೇ ಹೋಗುತ್ತಾರೆ. ಅವರವರ ಕೆಲಸ ಪುರುಸೊತ್ತನ್ನು ಅನುಸರಿಸಿ ಹೋಗುತ್ತಾರೆ. ಬೀಡಿ ಬ್ರಾಂಚ್ ಇರುವಲ್ಲಿ ಒಂದು ದೊಡ್ಡ ಅಂಗಡಿ, ಒಂದು ಸಣ್ಣ ಅಂಗಡಿ, ಒಂದು ಸಣ್ಣ ಹೋಟೇಲು, ಒಂದು ಸಲೂನ್, ಚಿನ್ನದ ಕೆಲಸ ಮಾಡುವವನ ಒಂದು ಸಣ್ಣ ಅಂಗಡಿಗಳಿದ್ದವು. ದೊಡ್ಡ ಅಂಗಡಿಯವನ ಮನೆಯೂ ಅಲ್ಲೇ ಪಕ್ಕದಲ್ಲಿತ್ತು. ಆ ಅಂಗಡಿಯಲ್ಲಿ ಕೆಲಸ ಮಾಡಲು ಒಬ್ಬ ಯುವಕನೂ ಇದ್ದ. ಆ ಅಂಗಡಿಯವನಲ್ಲಿ ಎರಡು ಮೂರು ಹಸುಗಳಿದ್ದವು. ಆ ಯುವಕನೂ ಬಹಳ ಚುರುಕಿನವ ಹಾಗೂ ಸ್ಥಳೀಯರಿಗೆಲ್ಲರಿಗೂ ಆತ್ಮೀಯ. ಬೀಡಿಯ ಬ್ರಾಂಚ್‌ಗೆ ಬರುತ್ತಿದ್ದ ಅವಳ ಜತೆ ಅವನಿಗೆ ಸಲುಗೆಯಾಯಿತು. ಇಬ್ಬರೂ ಯೌವನದ ಹೊಳೆಯಲ್ಲಿ ಈಜಾಡುತ್ತಿದ್ದರು. ಇಬ್ಬರಲ್ಲೂ ಪ್ರೇಮಕ್ಕಿಂತ ಪ್ರಣಯ ಹೆಚ್ಚಾಗಿತ್ತು ಎಂದು ನಮಗೆ ಅನಿಸಿದ್ದು ನಾವು ಅವರಿಬ್ಬರನ್ನೂ ಗುಡ್ಡದ ಗೇರು ಬೀಜದ ಮರವೊಂದರ ಕೆಳಗಿನಿಂದ ಕಂಡಾಗ. ಶಾಲೆ ಬಿಟ್ಟು ಬಂದ ನಾವು ಹಳ್ಳಿದಾರಿಯಲ್ಲಿ ನಿಧಾನವಾಗಿ ಹೋಗುತ್ತಿದ್ದೇವು. ಅನೀರೀಕ್ಷಿತವಾಗಿ ನಮ್ಮನ್ನು ಕಂಡ ಅವರು ಎದ್ದು ಹೋದರು. ನಮ್ಮನ್ನು ಅವರು ಕಂಡೇ ಇಲ್ಲ ಎಂಬಂತೆ ಹೋದರು. ಏನೂ ಅರಿಯದ ನಾವು ಮನೆಗೆ ಬಂದು ನಮ್ಮೆದುರು ಕಂಡ ಘಟನೆಯನ್ನು ನಮ್ಮದೇ ಆದ ಮುಗ್ದ ರೀತಿಯಲ್ಲಿ ಹೇಳಿದೆವು. ಅಯ್ಯೋ ಇವರು ನಮ್ಮ ಮಕ್ಕಳನ್ನೂ ಹಾಳು ಮಾಡುತ್ತಾರೆ ಎಂದು ನಮ್ಮ ಅಮ್ಮ ಅಣ್ಣ ಎಲ್ಲ ಹೇಳುತ್ತಿದ್ದರು. ಅವರಿಬ್ಬರ ಬಗ್ಗೆ ಕೆಟ್ಟದಾಗಿ ಮಾತಾಡಿದರು. ನನ್ನ ಮನದಲ್ಲಿ ಅವರ ಆ ಚಿತ್ರ ಆ ದಾರಿಯಾಗಿ ಹೋಗುತ್ತಿದ್ದಾಗ ಆಗುತ್ತಿತ್ತು. ಆದರೆ ಅವರು ಕಾಮಕೇಳಿಯಲ್ಲಿ ತೊಡಗಿದ್ದಾರೆಂದು ನನಗೆ ಅರಿವಾಗ ಬೇಕಾದರೆ ನಾನು ದೊಡ್ಡವನಾಗಿದ್ದೆ.
ಒಲವಿನಿಂದ
ಬಾನಾಡಿ

Thursday, May 24, 2007

ಸಾಹಿತ್ಯ ಮತ್ತೆ ಓದಬಹುದೇ

ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ನಿಧನಗೊಂಡಾಗ ಸಾಹಿತ್ಯ ಲೋಕ ಜತೆಗೆ ಅದಕ್ಕಿಂತ ಇನ್ನೂ ದೊಡ್ಡದಿರುವ ಸಹೃದಯರ ಲೋಕ ಪರಿತಪಿಸಿತು. ಆ ಪರಿತಾಪ ಮತ್ತು ನೋವು ಬಹಳಷ್ಟು ಕನ್ನಡ ಬ್ಲಾಗ್‌ಗಳಲ್ಲಿ, ಅಂಕಣಗಳಲ್ಲಿ, ಪತ್ರಿಕೆಗಳಲ್ಲಿ ಬರಹವಾಗಿ ಮೂಡಿ ಬಂತು. ತೇಜಸ್ವಿಯವರ 'ಕರ್ವಾಲೋ' ಕಾದಂಬರಿಯನ್ನು ಅವರು ಜೀವಂತವಿದ್ದಾಗ ಓದಿದಕ್ಕಿಂತ ಹೆಚ್ಚು ಜನ ಈಗ ಓದುತ್ತಿರಬಹುದು. ಕೆಲವರು ಮತ್ತೊಮ್ಮೆ ಅವರ ಪುಸ್ತಕಗಳನ್ನು ಓದಿ ಅವರ ನೆನಪನ್ನು ತಂದು ಅವರಿಗೆ ಶ್ರದ್ಧಾಂಜಲಿ ನೀಡಬಹುದು. ನಾನು ಅವರ ನಿಧನದ ಒಂದು ತಿಂಗಳು ಮುಂಚೆ ಅವರೆಲ್ಲಾ ಕಥೆಗಳನ್ನು ಓದಿದ್ದೆ. ಅವರ ಹುಲಿಯೂರಿನ ಸರಹದ್ದುಗಳು, ಲಿಂಗ ಬಂದ, ತಬರನ ಕಥೆಗಳನ್ನು ಮತ್ತೆ ಓದಿದ್ದೆ. ಜತೆಗೆ ರುದ್ರಪ್ರಯಾಗದ ಭಯಾನಕ ನರಭಕ್ಷಕನನ್ನು ಓದಲು ತೊಡಗಿದಾಗ ಪುಸ್ತಕವನ್ನು ಕೈ ಬಿಡುತ್ತಿರಲ್ಲಿಲ್ಲ. ಎರಡು ವರ್ಷದ ಹಿಂದೆ ದೂರದ ರೈಲ್ವೇ ಪ್ರಯಾಣದಲ್ಲಿ ಅವರ ಜುಗಾರಿ ಕ್ರಾಸ್ ಅನ್ನು ಓದಿ ಮುಗಿಸಿದ್ದೆ. ಅವರ ನಿಧನ ಸುದ್ದಿ ನನ್ನ ಸಾಹಿತ್ಯ ಮಿತ್ರರಿಂದ ಎಸ್‌ಎಮ್‌ಎಸ್ ಮೂಲಕ ಸಿಕ್ಕಿದಾಗ ನಾನು ಗುಜರಾತ್‌ನ ಮುಂದ್ರಾ ಬಂದರಿನ ಪಕ್ಕದಲ್ಲಿ ಬಿಸಿಲಿಗೆ ಒಣಗುತ್ತಿದ್ದೆ. ಆ ಬಿಸಿಲಿನ ತೀವ್ರತೆ ಎದೆಯೊಳಗೂ ಸೇರಿತ್ತು. ನಾನು ತೇಜಸ್ವಿಯವರ ಕುರಿತು ಬರೆಯಬಾರದೆಂದು ಯೋಚಿಸಿ ಅವರ ಬಗ್ಗೆನೇ ಬರೆದೆ. ಅದು ಅವರ ವ್ಯಕ್ತಿತ್ವ ಅಂತಹದ್ದಿರಬೇಕು. ಅವರ ಹತ್ತಿರವಿರದ್ದಿದ್ದರೂ ಅವರ ಪ್ರಭಾವ ಎಲ್ಲರಿಗೂ ಆಗುತ್ತಿದೆ.
ಇತ್ತೀಚೆಗೆ ಕನ್ನಡ ಸಾಹಿತ್ಯ ಮತ್ತೆ ನನ್ನನ್ನು ಆಕರ್ಷಿಸುತ್ತದೆ. ಬಹಳಷ್ಟು ಕನ್ನಡ ಓದಲು ತೊಡಗಿದ್ದೇನೆ. ಅಶೋಕ ಹೆಗಡೆಯವರ ಅಶ್ವಮೇಧ ಓದಿದೆ. ಕಂಬಾರರ ಶಿಖರ ಸೂರ್ಯ, ಸಿದ್ದಲಿಂಗಯ್ಯ ನವರ ಊರು ಕೇರಿಯ ಎರಡೂ ಆವೃತ್ತಿ, ಕೆಲವು ಪತ್ರಿಕೆಗಳಲ್ಲಿ ಬಂದ ಕಥೆ, ಹಳೆಯ ವಿಶೇಷಾಂಕ, ಶಿವ ಪ್ರಕಾಶರ ಕವನಗಳು, ನಾಟಕ, ಕಾರ್ನಾಡರ ಮದುವೆಯ ಆಲ್ಬಮ್, ನಾಗವೇಣಿಯ ಗಾಂಧಿಬಂದ, ಬರಗೂರರ ಕಥೆಗಳ ಜತೆಗೆ ಶಬರಿ ಕಾದಂಬರಿ, ಪ್ರಹ್ಲಾದ ಅಗಸನಕಟ್ಟೆ, ಮೊಗಳ್ಳಿ ಗಣೇಶ್ ಅವರ ಕಥೆಗಳು, ಶಾಂತಿನಾಥ ದೇಸಾಯರ ಸಮಗ್ರ ಕಥೆಗಳು, ಮೊಗಳ್ಳಿಯವರ ಕವನಗಳು, ನಾ. ಮೊಗಸಾಲೆಯವರ ಕೆಲವು ಕವನಗಳು, ಅಡಿಗರ ಕವನಗಳು, ನರಸಿಂಹ ಸ್ವಾಮಿಯವರ ಕವನಗಳು (ನೋಡಿ ಶಿಲಾಲತೆಯಿಂದ ತೆಗೆದುಕೊಂಡ ಬಾನಾಡಿ ಹಾಡು ಇದೇ ಬ್ಲಾಗ್‌ನಲ್ಲಿ), ಅಡಿಗರ ಭೂಮಿಗೀತಕ್ಕೆ ಬರೆದ ಅನಂತಮೂರ್ತಿಯವರ ಮುನ್ನುಡಿ ಅದೆಷ್ಟು ಮನಪ್ರಚೋದಕ! ಕನ್ನಡದಲ್ಲಿ ಓದುವಂತಹ ಸಾಹಿತ್ಯವಿದೆ. ಸಹೃದಯರೂ ಬರುತ್ತಿದ್ದಾರೆ. ಕಳಪೆ ಸಾಹಿತ್ಯ ಕಡಿಮೆಯಾಗಿ ಮೌಲಿಕ ಸಾಹಿತ್ಯ ಮತ್ತೆ ಬರಲಿ. ಜಯಂತ ಕಾಯ್ಕಿಣಿಯವರ ಚಾರ್‌ಮಿನಾರ್ ಕಥೆ ಓದಿದ ನಾನು ಭೂಲೋಕವನ್ನೇ ಮರೆತು ನಶಭರಿತನಂತಾಗಿದ್ದೆ. ಬರಗೂರರ 'ಜನಪದ' ಕಥೆ ಓದಿ ನಾನು ಅದೊಂದು ನಾಟಕ ಮಾಡಲು ಉತ್ತಮವಾದ ಪ್ಲಾಟ್ ಇರುವ ಕಥೆಯೆಂದು ಯೋಚಿಸುತ್ತಿರಬೇಕಾದರೆ ಅದನ್ನು ಚಲನಚಿತ್ರವನ್ನಾಗಿ ಮಾಡಿ ಕಥೆಗೆ ಸರಿಯಾದ ಬೆಲೆಕೊಟ್ಟಿದ್ದಾರೆ. ಈ ಬ್ಲಾಗ್‌ನಲ್ಲಿ ಅಶೋಕ ಹೆಗಡೆಯವರ ಅಶ್ವಮೇಧದ ಕುರಿತು ಬರೆಯಬೇಕೆಂದು ಹೊರಟ ನಾನು ಎಲ್ಲೆಲ್ಲೋ ಹೋದೆ. ಮುಂದಿನ ಬ್ಲಾಗ್‌ನಲ್ಲಿ ಬರೆಯುವೆ ಎಂಬ ಆಸೆ. ಗೆಳತಿಯರ, ಹವ್ಯಾಸದ ನಡುವೆ ಸ್ವಲ್ಪ ಗಂಭೀರ ಚಟುವಟಿಕೆಯೂ ಈ ಬ್ಲಾಗ್‌ನಲ್ಲಿ ಆಗಲೆಂದು ಬಯಸಿದ್ದೆ. ಬ್ಲಾಗಿಸಲು ಮತ್ತೊಂದು ವಿಷಯ ಎತ್ತಿಕೊಳ್ಳುವೆ - ಕಾಮ.
ಒಲವಿನಿಂದ
ಬಾನಾಡಿ

Saturday, May 19, 2007

ಸಂಬಂಧಗಳ ಸ್ವ-ರೂಪ

ಅವಳ ಬಗ್ಗೆ ಕೂಡ ಬರೆಯಬೇಕಂತೆ. ಅವಳೇನೂ ನನ್ನ ಬ್ಲಾಗ್ ಬಗ್ಗೆ ಹೆಚ್ಚು ಹಚ್ಚಿಕೊಂಡಿಲ್ಲ. ಅವಳು ದೊಡ್ಡದೊಂದು ಕಂಪನಿಯಲ್ಲಿ ಉತ್ತಮ ಹುದ್ದೆಯಲ್ಲಿದ್ದಾಳೆ. ಅವಳ ಅಪ್ಪ-ಅಮ್ಮ "ಸಕತ್ ರಿಚ್". ಅಮ್ಮನಾದರೋ ನಗರದ ಪ್ರಸಿದ್ಧ ವೈದ್ಯೆಯೆಂದು ಪ್ರಖ್ಯಾತಿಗೊಂಡವಳು. ಅಪ್ಪ ತನ್ನ ಕೆಲಸದಲ್ಲಿ ಸದಾಕಾಲ ಮಗ್ನ. ಅವಳೂ ಕೂಡ ಒಬ್ಬ ಉತ್ತಮ ಉದ್ಯಮಿಯನ್ನು ಮದುವೆಯಾಗಿದ್ದಾಳೆ. ಅವರಿಬ್ಬರೂ ಬಹಳ ಅನ್ಯೋನ್ಯವಾಗಿದ್ದಾರೆ. ಅವಳು ಒಂದು ನಗರದಲ್ಲಿದ್ದರೆ ಅವನು ಇನ್ನೊಂದು ನಗರಕ್ಕೆ ತನ್ನ ಕಾರ್ಯಕ್ಕಾಗಿ ಹೋದರೆ ಅವಳಿಗೆ ಮಧ್ಯಾಹ್ನದ ಊಟ ತನ್ನಿಂದ ತಾನಾಗಿ ಬಂದಿರುತ್ತದೆ. ಆತ ಅಲ್ಲಿಂದ ಇಲ್ಲಿನ ಯಾವುದೋ ರೆಸ್ಟಾರೆಂಟ್‍ಗೆ ತಿಳಿಸಿ ಅವಳಿಗಾಗಿ ಕಳುಹಿಸುತ್ತಾನೆ. ಜಂಬದ ಕೋಳಿ ಅವಳು. ಎಲ್ಲರಲ್ಲೂ ಹೇಳುತ್ತಾಳೆ: ನೋಡು, ನನ್ನ ಗಂಡ ಊರಲ್ಲಿಲ್ಲದಿದ್ದರೂ ನನ್ನ ಬಗ್ಗೆ ಅದೆಷ್ಟು ಕಾಳಜಿ ವಹಿಸಿದ್ದಾನೆ. ಅವಳ ಸಹಕರ್ಮಿ ಇನ್ನೊಬ್ಬಳಿಗೆ ಹೊಟ್ಟೆ ಕಿಚ್ಚಾಗುತ್ತದೆ.
ಅವಳು ಎಲ್ಲರಲ್ಲೂ ಜಗಳ ಆಡುವವಳು. ಜಗಳ ಅವಳ ಬದುಕಿನ ಅವಿಭಾಜ್ಯ ಅಂಗ ಅನ್ನುವಂತೆ ಅವಳು ಜಗಳವಾಡುತ್ತಾಳೆ. ಅವಳ ಜಗಳ ಅವಳ ಸ್ನೇಹಿತರಿಗೆಲ್ಲಾ ಸದಾ ಚರ್ಚೆಯ ವಿಷಯ. ಅವಳು ಜಗಳ ಆಡದಿದ್ದರೆ ಅದು ಸುದ್ದಿ. ಒಂದು ಸಲ ನನ್ನ ಜತೆಯೂ ಎಲ್ಲರೆದುರು ಜಗಳವಾಡಿದಳು. ನನ್ನ ಉಳಿದ ಸ್ನೇಹಿತರು ಆಶ್ಚರ್ಯ ಪಟ್ಟರು. ಮತ್ತೆ ಸಮಾಧಾನ ಹೊಂದಿದರು. ನಾಯಿ ಬಾಲ ಎಂದು ನೇರವಾಗದಲ್ಲ. ಅವಳ ಜಗಳ, ಅವಳ ಅಹಂಭಾವ, ಅವಳ ಜೀವನ ಶೈಲಿ ಒಬ್ಬ ಮಾನಸಿಕ ತಜ್ಞನಿಗೆ ಬಹಳ ಕುತೂಹಲಕಾರಿ ವಿಷಯವಾಗಬಲ್ಲುದು. ಅವಳನ್ನು ಅರ್ಥೈಸಿದವರು ಬಹಳ ಕಡಿಮೆಯೆನ್ನಬೇಕು. ಅವಳ ಗಂಡ ಅವಳ ಜತೆ ಹೇಗೆ ಜೀವನ ನಡೆಸುತ್ತಾನೆ ಎಂದು ಎಲ್ಲರು ಆಶ್ಚರ್ಯ ಪಡುತ್ತಾರೆ. ಅವನೂ ಅವನ ಕೆಲಸದಲ್ಲಿ ಬಹಳ ಚಾಣಾಕ್ಷ. ದೊಡ್ದ ದೊಡ್ಡ ವ್ಯವಹಾರಗಳನ್ನು ಚಾಕಚಕ್ಯತೆಯಿಂದ ನಿರ್ವಹಿಸುತ್ತಾನೆ. ಅವನ ಬಗ್ಗೆ ಅವಳಿಂದ ಬಹಳ ಕೇಳಿದ್ದೇನೆ. ಅವಳು ಜತೆಗಿದ್ದರೆ ಮಾತಾಡುವುದನ್ನು ನಿಲ್ಲಿಸುವುದಿಲ್ಲ. ಹಾಗಾಗಿ ಅವಳ ಎಲ್ಲ ವಿಚಾರಗಳನ್ನು ಮುಕ್ತವಾಗಿ ಹಂಚುತ್ತಾಳೆ. ಅದೇ ರೀತಿ ನಮ್ಮೊಳಗಿನ ವಿಷಯಗಳನ್ನೂ ಆಕೆ ಅವಳ ಗಂಡನೊಡನೆ ಹಂಚುತ್ತಾಳೆ.
ಆಕೆ ಮದುವೆಯಾಗಿ ದಶಕಗಳೇ ಸಂದರೂ ಇನ್ನೂ ಮಗು ಬೇಡ ಎಂದಿದ್ದಾಳೆ. ನಾನು ಕೇಳಿದೆ ಯಾಕೆ ಈ ನಿರ್ಧಾರ ಎಂದು. ನೋಡು ನಾನು ಎಷ್ಟು ಕೆಟ್ಟದಾಗಿ ನನ್ನ ಜೀವನವನ್ನು ನಡೆಸುತ್ತಿದ್ದೇನೆ. ನನಗೆ ನನ್ನಂತಹವೇ ಬದುಕು ನಡೆಸುವ ಇನ್ನೊಂದು ಜೀವವನ್ನು ತರಲು ಮನಸ್ಸಿಲ್ಲ ಎಂದಳು. ಆಕೆಯ ಅಪ್ಪ ಅಮ್ಮ ಅವಳ ಜೀವನದಲ್ಲಿ ಜೀವನದ ಉತ್ಸಾಹದಲ್ಲಿ ಪಾಲ್ಗೊಳ್ಳಲೇ ಇಲ್ಲ. ಆಕೆ ಪ್ರಸಿದ್ಧ ವೈದ್ಯೆಯಾಗಿದ್ದುದರಿಂದ ಆಸ್ಪತ್ರೆ, ಮನೆ ಮತ್ತೆ ಆಸ್ಪತ್ರೆಯಿಂದ ರೋಗಿಗಳ ಕರೆ ಬಂದಾಗ ತಿರುಗಿ ಆಸ್ಪತ್ರೆ. ಅಪ್ಪನೂ ಅದೆ ರೀತಿ. ಕೆಲಸ. ಕೆಲಸ. ಇವಳನ್ನು ನೋಡಿ ಕೊಳ್ಳಲು ಒಬ್ಬಾಕೆ ಕೆಲಸದಾಳನ್ನು ಇಟ್ಟು ಕೊಂಡಿದ್ದರು. ಆ ಕೆಲಸದಾಕೆಯೇ ಇವಳಿಗೆ ಸರ್ವಸ್ವ. ಎಲ್ಲಾ ಅವಳ ಮೇಲೆ ಅವಲಂಬಿತ. ಅವಳು ಹೇಳುತ್ತಾಳೆ: ನನ್ನ ಹೆಸರು ನೋಡಿದೆಯಾ, ಇದು ನನ್ನ ಅಪ್ಪ ಅಮ್ಮ ಇಟ್ಟ ಹೆಸರಲ್ಲ. ನಾನು ಸ್ಕೂಲಿಗೆ ಸೇರಲು ಹೋದಾಗ ನನ್ನ ಕೆಲಸದವಳು ಮೇಸ್ಟ್ರಲ್ಲಿ ಹೇಳಿದ ಹೆಸರು. ಲಚ್ಚಮ್ಮ! ನಾನು ಅವಳಿಗೆ ಪ್ರೀತಿಯ ಲಚ್ಚಮ್ಮ ಆಗಿದ್ದೆ. ಅದನ್ನೆ ಹೇಳಿದಳು. ನನ್ನ ನಿಜವಾದ ಹೆಸರು ರೂಪಾ. ನಾನು ಇಂದು ಇಷ್ಟು ದೊಡ್ಡ ಕಂಪನಿಯಲ್ಲಿ ಇಂತಹ ಉತ್ತಮ ಹುದ್ದೆಯಲ್ಲಿ, ನನ್ನ ಸ್ನೇಹಿತರ ವಲಯದಲ್ಲಿ ಎಲ್.ಕೆ.ಕುಮಾರ್ ಅಂತಲೇ ಕರೆಸಿಕೊಳ್ಳುವವಳು. ಎಲ್ಲರಿಗೂ ಎಲ್‍ಕೆ. ಕೇಳಿದರೆ ಲಕ್ಷ್ಮಿ ಕೆ ಕುಮಾರ್ ಅಂತೇನೆ, ಅಂದಳು.
ಸಂಸಾರದ ಎರಡೂ ಗಾಲಿಗಳಾದ ಗಂಡ ಹೆಂಡಿರು ತಮ್ಮದೇ ವೈಯಕ್ತಿಕ ಬದುಕಿನ, ವೃತ್ತಿಯ ಮಹಾತ್ವಾಕಾಂಕ್ಷೆಯ ಬೆನ್ನೇರಿ ಕುಟುಂಬ ಎಂಬ ಸಂಸ್ಥೆಯನ್ನು ಮರೆತಾಗ ಎಲ್‍ಕೆ ಯಂತಹವರು ಹುಟ್ಟುತ್ತಾರೆ. ಅಪ್ಪ ಅಮ್ಮನ ಪ್ರೀತಿ, ಮಮತೆ, ವಾತ್ಸಲ್ಯ ಅವಳಿಗೆ ಸಿಗಲ್ಲಿಲ್ಲ. ಹಣವಿತ್ತು ಬೇಕಾದಷ್ಟು. ಹೆಸರಿತ್ತು. ಇಂದೂ ಕೂಡಾ ಯಾರಾದರೂ ಅವಳ ಪರಿಚಯವಿಲ್ಲದವರಿಗೆ ಅವಳ ತಾಯಿಯ ಹೆಸರು ಹೇಳಿದರೆ ಸಾಕು. ಓ ಆ ಡಾಕ್ಟರಮ್ಮನ ಮಗಳೋ ಎಂದು ಗುರುತು ಹಿಡಿಯುವರು. ಅಮ್ಮನ ಹೆಸರು-ಕೀರ್ತಿ ಅಂತಹದ್ದು. ಮೊನ್ನೆ ನನ್ನ ಸ್ನೇಹಿತನೊಬ್ಬ ಸಿಕ್ಕಿದ ಅವನು ಹೇಳಿದ. ನೋಡು ಆ ನಿನ್ನ ಎಲ್‍ಕೆ "ಸಕತ್ ರಿಚ್" ಅಲ್ವಾ ಅಂತ. ಆಗಿರಬೇಕು ಎಂದೆ. ಅವನು, ನೋಡು ನನ್ನ ಅಣ್ಣನ ಜತೆ ಅವಳ ಗಂಡನೊಂದಿಗೆ ಅವರ ಮನೆಗೆ ಅವರೊಳಗಿನ ಬಿಸಿನೆಸ್‍ ಗೆ ಹೋಗಿದ್ದೆ. ಎಂಥ ಮನೆ, ಏನು ಶ್ರೀಮಂತರಪ್ಪಾ ಎಂದ. ಹೌದು ಎಂದೆ. ಅದಕ್ಕೇನೆ ಅವಳು ಅಷ್ಟು ಜಂಬದಿಂದಿದ್ದಾಳೆ.
ಎಲ್‍ಕೆ ನಿನ್ನ ಬಗ್ಗೆ ಬರೆದುದನ್ನು ಸ್ವಚ್ಚ ಮನಸ್ಸಿನಿಂದ ಸ್ವೀಕರಿಸುವೆ ಎಂಬ ನಂಬಿಕೆಯಿಂದಲೇ ಬರೆದಿದ್ದೇನೆ. ನಿನಗೆ ಇದೆಲ್ಲಾ ಕ್ಷುಲ್ಲಕ. ನಿನ್ನ ಒಳ ಹೊರಗಿನ ಬದುಕಿನ ನಡುವಿನ ಆಳ ಅಷ್ಟು. ಬದುಕು ಸುಂದರವಿರಲಿ. ಅಷ್ಟೇ.
ಒಲವಿನಿಂದ
ಬಾನಾಡಿ.

Wednesday, May 16, 2007

ಕುಡಿನೋಟ ಮತ್ತೊಂದು...

ಕುಡಿನೋಟ ಬರೆದ ನಂತರ ಕುಡಿಯಲೇ ಇಲ್ಲ. ನನಗೆ ಅನಿಸುತ್ತದೆ ನಾನು ಅಂತಹ ಕುಡುಕನಲ್ಲ ಎಂದು. ಇನ್ನೂ ಸ್ವಲ್ಪ ದಿನ ಕುಡಿಯದೇ ಈ ಬಿಸಿಲಿಗೆ ಕುದಿಯುತ್ತಲೇ ಇರಲೇನು? ನಾನಿನ್ನೂ ಆಗ ಶಾಲೆಯಲ್ಲಿದ್ದೆ. ನನ್ನ ದೊಡ್ಡ ಅಕ್ಕನಿಗೆ ಮದುವೆ ಯಾಗಿತ್ತು. ನಾನು ಅವಳ ಮನೆಗೆ ಹೋಗಿದ್ದೆ. ಅವರದ್ದು ಅವಿಭಕ್ತ ಕುಟುಂಬ. ಅವಳ ಗಂಡನ ಅಣ್ಣ-ಅತ್ತಿಗೆಯವರು, ತಮ್ಮಂದಿರು ಎಲ್ಲಾ ಒಂದೇ ಮನೆಯಲ್ಲಿ ಆಗ ಇದ್ದರು. ಮನೆಯೂ ದೊಡ್ಡದಿತ್ತು. ದಿನವೆಲ್ಲಾ ಗದ್ದೆಯಲ್ಲಿ, ತೋಟದಲ್ಲಿ ಕೆಲಸ ಮಾಡಿದ ಅಲ್ಲಿನ ಗಂಡಸರೆಲ್ಲಾ ಸಂಜೆ ಹೊತ್ತಿಗೆ ಪೇಟೆಗೆ ಹೊಗುವುದು ರೂಢಿ. ಆಗ ಅವರ ಪೇಟೆಯಲ್ಲಿ ಕೋಳಿ ಅಂಕವೂ ನಡೆಯುತ್ತಿತ್ತು. ಜತೆಗೆ ಅಲ್ಲಿ ಎರಡು ಸಾರಾಯಿ ಅಂಗಡಿ. ಮತ್ತೆರಡು ಶೇಂದಿ ಅಂಗಡಿ. ನಾನಿನ್ನೂ ಚಿಕ್ಕವನಾಗಿದ್ದೆ. ಅಕ್ಕನ ಮೈದುನರ ಜತೆಗೆ ನಾನೂ ಪೇಟೆಗೆ ಹೋದೆ. ಅವರು ಸ್ವಲ್ಪ ಕುಡಿಯುವ ಅಭ್ಯಾಸ ಆರಂಭಿಸಿದ್ದರು. ನನಗೆ ಗೋಲ್ಡ್‌ಸ್ಪಾಟ್ ತೆಗೆದು ಕೊಡುತ್ತಿದ್ದರು. ಅವರು ಸಾರಾಯಿ ಅಥವಾ ಭಾರತದಲ್ಲಿ ತಯಾರಾದ ವಿದೇಶಿ ಮದ್ಯವೋ ಏನನ್ನೋ ಗೋಲ್ಡ್‌ಸ್ಪಾಟ್‌ನಲ್ಲಿ ಹಾಕಿ ಕುಡಿಯುತ್ತಿದ್ದರು. ನಾನು ಮುಗ್ದವಾಗಿ ಗೋಲ್ಡ್‌ಸ್ಪಾಟ್ ಕುಡಿದು ತೇಗುತ್ತಿದ್ದೆ. ಮನೆಗೆ ಬಂದು ಅವರು ನನ್ನ ಅಕ್ಕ ನಲ್ಲಿ ಹೇಳಿದರು: ನಿಮ್ಮ ತಮ್ಮ ಕುಡಿಯುತ್ತಾನೆ ಎಂದು. ಹೊಸತಾಗಿ ಮದುವೆಯಾಗಿ ಬಂದಿದ್ದ ನನ್ನ ಅಕ್ಕಳಿಗೆ ಅದು ಕೆಟ್ಟದೆನಿಸಿತು. ನನ್ನನ್ನು ಪ್ರತ್ಯೇಕವಾಗಿ ಕರೆದು ಕೇಳಿದಳು. ನಾನಂದೆ ನಾನು ಗೋಲ್ಡ್‌ಸ್ಪಾಟ್ ಕುಡಿದುದು ಎಂದು. ಅದರಲ್ಲಿ ಅವರು ಸಾರಾಯಿಯನ್ನು ಹಾಕಿದ್ದಾರೆ ಎಂದು ಮತ್ತಷ್ಟೇ ನನಗೆ ತಿಳಿಯಿತು. ಅವರು ಅದರಲ್ಲಿ ತುಂಬಾ ಹಾಕಿರಲಿಲ್ಲವಾಗಿರಬಹುದು. ಇಲ್ಲದಿದ್ದರೆ ನನಗೆ ತಿಳಿಯುತ್ತಿರಲ್ಲಿಲ್ಲವೇ? ಕುಡಿದ ಅಮಲು ಸ್ವಲ್ಪವಾದರೂ ಆಗುತ್ತಿತ್ತು. ಮತ್ತೆ ಮುಂದಿನ ಸಲ ಹೋದಾಗ ಅವರಿಗೆ ನಾನು ಕುಡಿಯುವುದಿಲ್ಲ ಎಂದೆ ಅದಕ್ಕೆ ಅವರು ಇದು ಸಾರಾಯಿ ಅಲ್ಲ, ಮಕ್ಕಳು ಕುಡಿಯುವ ಜ್ಯೂಸ್ ಎಂದರು. ನಾನು ಏನನ್ನೂ ಕುಡಿಯಲ್ಲಿಲ್ಲ. ಬದಲು ನನ್ನ ಕಿಸೆಯಲ್ಲಿದ್ದ ಹಣದಿಂದ ಅಲ್ಲೇ ಪಕ್ಕದಲ್ಲಿದ್ದ ಐಸ್‌ಕ್ಯಾಂಡಿಯವನಿಂದ ಒಂದು ಕ್ಯಾಂಡಿ ತೆಗೆದು ಕೊಂಡೆ. ನಾನು ಕಾಲೇಜಿಗೆ ಹೋದಾಗ ನನ್ನ ಗೆಳೆಯರೆಲ್ಲಾ ಯಾವುದೋ ಸಿನಿಮಾಕ್ಕೆ ಹೋಗುವ ಕಾರ್ಯಕ್ರಮ ಹಾಕಿದ್ದರು. ನಾನು ಅವರ ಜತೆ ಸೇರಿದ್ದೆ. ಸಿನಿಮಾ ಟಿಕೇಟ್ ತೆಗೆದು ಕೊಂಡ ಮೇಲೆ ಮತ್ತೂ ಅರ್ಧ ಗಂಟೆ ಸಮಯ ವಿತ್ತು. ಗೆಳೆಯರೆಲ್ಲಾ ಸೇರಿ ಹತ್ತಿರವಿದ್ದ ಬಾರ್‌ಗೆ ಹೋಗುವುದೆಂದು ಯೋಚಿಸಿದರು. ನಾನೂ ಅವರ ಜತೆಗಿದ್ದುದರಿಂದ ಹೋದೆ. ಬಹುಷಃ ನಾನು ಮೊದಲ ಬಾರಿ ಬಾರಿಗೆ ಹೋಗಿದ್ದು ಆಗಿರಬೇಕು. ಅಲ್ಲಿ ಕೆಲವರು ಒಂದೊಂದು ಪೆಗ್ ವಿಸ್ಕಿ ತೆಗೆದು ಕೊಂಡರು. ಮತ್ತೆ ಕೆಲವರು ಇಬ್ಬರು ಮೂವರು ಸೇರಿ ಬೀಯರ್ ಹೇಳಿದರು. ಎಲ್ಲರು ಹೊಸ ಕುಡುಕರಾಗಿದ್ದುದರಿಂದ ಮೊದಲ ಪ್ರಯತ್ನದಲ್ಲೇ ಇದ್ದರು. ನಾನೂ ಇಬ್ಬರ ಜತೆಯಲ್ಲಿ ಮೂರವನೆಯಾಗಿ ಎಲ್ಲಾ ಸೇರಿ ಬೀಯರ್ ಆರ್ಡರ್ ಮಾಡಿದೆವು. ನಾನು ಸುಮಾರು ಅರ್ಧ ಗ್ಲಾಸ್ ಕುಡಿದಿರಬಹುದು. ನನಗೆ ಬಿಯರ್ ಅಷ್ಟೊಂದಾಗಿ ಸೇರುತ್ತಿರಲಿಲ್ಲ ವಾದ್ದರಿಂದ ಉಳಿದುದನ್ನು ಇನ್ನಿಬ್ಬರು ಸೇರಿ ಕುಡಿದರು. ನಾವು ಬೀಯರ್ ಕುಡಿದು ಸಿನಿಮಾ ಮಂದಿರಕ್ಕೆ ಬರಬೇಕಾದರೆ ಎಲ್ಲರೂ ಒಳ್ಳೆ ಕುಡಿದವರ ತರ ಮಾಡುತ್ತಿದ್ದರು. ನಾನು ನಾರ್ಮಲ್ ಆಗಿದ್ದೆ. ಒಂದೊಂದು ಗ್ಲಾಸ್ ಬೀಯರ್ ಕುಡಿದು ಇವರ ತಲೆಗೆ ಏರಿದರೆ ಇನ್ನು ಬಾಟಲಿ ಏರಿಸುವವರ ಪಾಡೇನು ಎಂದು ಆಗ ನಾನು ಆಲೋಚಿಸಿದ್ದೆ. ಈಗ ನನ್ನ ಕೆಲವು ಗೆಳೆಯರು ನಾಲ್ಕೈದು ಬಾಟಲಿ ಬಿಯರ್ ಅನ್ನು ಒಂದೇ ಬಾರಿಗೆ ಒಂದೇ ಬಾರಿನಲ್ಲಿ ಕುಡಿದು ಮುಗಿಸುತ್ತಾರೆ. ಆದರೂ ಸರಿಯಾಗಿ ಡ್ರೈವ್ ಮಾಡಿ ಮನೆ ತಲಪುತ್ತಾರೆ. ನಾನು ಕೂಡಾ ಒಂದು ಸಾರಿ ನನ್ನ ಮನೆಯಿಂದ ಸುಮಾರು ಹದಿನೈದು ಕಿ.ಮೀ. ದೂರವಿದ್ದ ನನ್ನ ಗೆಳೆಯರ ಮನೆಗೆ ಹೋಗಿ ಕಂಠಪೂರ್ತಿ ಕುಡಿದು ಕೈನೆಟಿಕ್ ಹೊಂಡಾ ಓಡಿಸಿ ಮನೆಗೆ ವಾಪಾಸಾಗಿದ್ದೆ. ಅಮಲಾಗಿದ್ದರೂ ನನ್ನ ಬುದ್ಧಿಯು ಕೈಯಲ್ಲಿತ್ತು. ಯಾವಾಗಲೂ ಅಡ್ಡಾದಿಡ್ಡಿ ಸ್ಕೂಟರ್ ಓಡಿಸುವ ನಾನು ಅವತ್ತು ಬಹಳ ಜಾಗ್ರತೆಯಿಂದ ಕುಡಿದಿದ್ದೇನೆ ಎಂಬ ಪ್ರಜ್ಞೆಯಿಂದ ಗಾಡಿ ಓಡಿಸುತ್ತಿದ್ದೆ. ಮತ್ತೊಂದು ಸಾರಿ ನನ್ನ ಇನ್ನೊಬ್ಬ ಗೆಳೆಯನ ಕೂಡೆ ನಾನು ಹೋಗಿದ್ದೆ ಬರುವಾಗ ಆತನೇ ಸ್ಕೂಟರ್ ಓಡಿಸಿದ. ನಾನು ಹಿಂದೆ ಕುಳಿತು ನಿದ್ದೆ ಮಾಡುತಿದ್ದೆ ಅವನ ಬೆನ್ನಿಗೆ ಒರಗಿ. ಅದೇ ಗೆಳೆಯನ ಹುಟ್ಟಿದ ಹಬ್ಬ ನಮ್ಮ ಮನೆಯಲ್ಲಿ ನಡೆಯಿತು. ಅವನಿಗೆ ಜಿನ್ ಕುಡಿಯಬೇಕೆಂದು ಅನಿಸಿ ಒಂದು ಬಾಟಲಿ ತಂದಿಟ್ಟಿದ್ದೆವು. ಅವನಿಗೆ ಕುಡಿಯುವ ಸಾಮಾರ್ಥ್ಯ ಎಷ್ಟಿದೆ ಎಂದು ನೋಡ ಬೇಕಿತ್ತು. ಆರಾಮವಾಗಿ ಕುಡಿಯುತ್ತಿದ್ದ ಅವನು ಟಾಯ್ಲೆಟ್‌ಗೆ ಹೋದಾಗ ಅವನ ಗ್ಲಾಸ್ ನಲ್ಲಿ ಮತ್ತೆ ತುಂಬಿಸಿ ಅವನಿಗೆ ಗೊತ್ತಾಗದ ಹಾಗೆ ಅವತ್ತು ಅವನು ಬಹಳ ಕುಡಿದ. ಕೊನೆಗೆ ವಾಂತಿ ಮಾಡಿದ. ಅವನ ಹುಟ್ಟು ಹಬ್ಬ ಕೆಟ್ಟು ಹೋಗಿದ್ದಕ್ಕೆ ನನಗೂ ಬೇಸರವಾಯಿತು. ಮತ್ತೆ ಎಂದೂ ಯಾರಿಗೂ ಹಾಗೆ ಮಾಡಿಲ್ಲ. ನನ್ನ ಇನ್ನೊಬ್ಬ ಗೆಳೆಯನ ಜತೆಗೆ ಕುಡಿಯಲು ಬಾರ್ ಒಂದಕ್ಕೆ ಹೋಗಿದ್ದೆ. ಅವನು ವಿಸ್ಕಿ ಕುಡಿಯುವ ಜತೆಗೆ ಬಹಳಷ್ಟು ನೀರನ್ನೂ ಕುಡಿಯುತ್ತಿದ್ದ. ನಾನು ಆರ್ಡರ್ ಮಾಡಿದ ನನ್ನ ಅಂದಿನ ಕೊನೆಯ ವೋಡ್ಕಾ ದ ಪೆಗ್ ಜಾಸ್ತಿಯಾಯ್ತು ಎಂದೆ. ಅದನ್ನೂ ಅವನು ಕುಡಿದ. ನಾನಂದೆ ಎರಡು ಡ್ರಿಂಕ್ಸ್ ಮಿಕ್ಸ್ ಮಾಡಿ ಕುಡಿದರೆ ತಲೆನೋವು ಶುರುವಾಗಬಹುದೆಂದು. ಅದಕ್ಕೆ ಅವನು ತಲೆಕೆಡಿಸಿಲ್ಲ. ಅವನಿಗೇನೂ ಆಗುವುದಿಲ್ಲ. ಕುಡಿತ ಜಾಸ್ತಿಯಾಯಿತು ಅಂತನಿಸುತ್ತದೆ. ಈ ಬ್ಲಾಗ್‌ನಲ್ಲಿ ಇನ್ನೇನಾದರು ಬರೆಯಬೇಕೆಂದಿದ್ದೇನೆ. ನೋಡೋಣ. ಮತ್ತೆ ನನ್ನ ವೈಯಕ್ತಿಕ ಅನುಭವಗಳೇನಾದರೂ ಸೇರಿಸಿ ಬರೆಯುತ್ತೇನೆ. ನನ್ನ ಅನುಭವದಲ್ಲಿ ಸೇರಿದ ಗೆಳೆಯರೆ ನಿಮಗೆ ವಂದನೆಗಳು.
ಒಲವಿನಿಂದ
ಬಾನಾಡಿ

Friday, May 11, 2007

ಕುಡಿ ನೋಟ

ಕುಡಿತದಿಂದ ಕೆಲವರಿಗೆ ಹಿಡಿತ ತಪ್ಪಿರುತ್ತದೆ. ಹಿಡಿತದಿಂದ ಕೆಲವರಿಗೆ ಕುಡಿತ ತಪ್ಪಿರುತ್ತದೆ. ನನಗೆ ನೆನಪಿಲ್ಲ ನಾನು ಯಾವಾಗ ಕುಡಿತ ಆರಂಭಿಸಿದ್ದೆ ಎಂದು. ಅಂದರೆ ಕುಡಿತ ಒಂದು ಹವ್ಯಾಸ ಅಥವಾ ಚಟವಾಗಿ ಅಲ್ಲ. ಇಂದಿಗೂ ಅದು ನನಗೆ ಚಟವಾಗಿಲ್ಲ ಅನ್ನುವುದಕ್ಕೆ ಹೆಮ್ಮೆಯೆನಿಸುತ್ತದೆ. ನಾನು ಎರಡು ವರ್ಷದ ಹಿಂದೊಮ್ಮೆ ನಾಲ್ಕು ತಿಂಗಳು ಕುಡಿದೇ ಇಲ್ಲ. ಕಾರಣ ಏನೂ ಇರಲ್ಲಿಲ್ಲ. ಅದಕ್ಕಿಂತ ಮುಂಚೆನೂ, ಈಗಲೂ ಕುಡಿತ ನನಗೆ ಬೇಕಾದಾಗ ಬೇಕಾದಷ್ಟು ಕುಡಿಯುತ್ತೇನೆ. ಇದೆಲ್ಲಾ ನೆನಪಿಗೆ ಕಾರಣ ಮನೆಯ ಪ್ರಿಜ್ ನಲ್ಲಿದ್ದ ಬಿಯರ್ ಬಾಟಲಿಗಳೆಲ್ಲ ಹೊರಗೆ ಬಂದು ಬಿಸಿಲಿಗೆ ಚಳಿಕಾಯಿಸುತ್ತಾ ಇರುವುದು. ಮೊನ್ನೆ ತಂದಿದ್ದ ಒಂದು ಕೇಸ್ ನಲ್ಲಿ ಎರಡು ಮಾತ್ರ ಮುಗಿದಿತ್ತು. ಕೆಲವು ಹೊರಗಡೇನೇ ಇತ್ತು. ಬಿಯರ್ ಕುಡಿಯುವುದು ನನಗೆ ಅಷ್ಟೊಂದು ಇಷ್ಟವಲ್ಲ. ಆದರೂ ಕೆಲವೊಮ್ಮೆ ಇಷ್ಟ. ಬೇಸಿಗೆಯಲ್ಲಿ ಅದೇ ಉತ್ತಮವಲ್ಲವೇ? ನಾನು ಎಳವೆಯಲ್ಲಿಯೇ ಶರಾಬು ಜತೆ ಸಹವಾಸ ಇಟ್ಟವನು. ಅದಕ್ಕೆಂದೇ ನಾನು ಹೇಳಿದ್ದು ನನ್ನ ಮೊದಲ ಕುಡಿತದ ನೆನಪಿಲ್ಲ ಎಂದು. ನಮ್ಮ ಆಚೆಮನೆಯವರು ಮಾಡುತ್ತಿದ್ದ ಗೇರುಬೀಜದ ಫೆನ್ನಿ, ಗಡಂಗಿನಿಂದ ಅಪ್ಪನಿಗಾಗಿ ತರುತ್ತಿದ್ದ ಶರಾಬು, ಅಪ್ಪನ ಜತೆ ಹೋಗಿ ಕುಡಿಯುತ್ತಿದ್ದ ಶೇಂದಿ, ಕುಡಿದು ತಮಾಷೆ ಮಾತಾಡುತ್ತಿದ್ದ ಮಾವ, ಸ್ವಲ್ಪವೇ ಕುಡಿದರೆ ಸಾಕು ವಾಂತಿ ಮಾಡಿ ಗಲೀಜು ಮಾಡುವ ದೊಡ್ಡಣ್ಣ, ಫೆನ್ನಿ ಕುಡಿಯಲೆಂದೇ ತನ್ನ ತವರು ಮನೆಗೆ ಹೋಗುವ ಅತ್ತಿಗೆ, ಅಕ್ಕನಿಗೆ ಮದುವೆಯಾದ ಮೊದಲ ದಿನಗಳಲ್ಲಿ ಅವಳ ಗಂಡನ ತಮ್ಮಂದಿರ ಜತೆಗೆ ಹೋಗಿ ಗೋಲ್ಡ್ ಸ್ಪಾಟ್ (ಒಂದು ರೀತಿಯ ಪ್ಯಾಂಟಾ ತರ ಪೇಯ) ನಲ್ಲೆ ಶರಾಬು ಹಾಕಿ ಕುಡಿದುದು, ಕಾಲೇಜಿನ ಸ್ನೇಹಿತರ ಜತೆಗೆ ಬಾರ್ ಗೆ ಹೋಗಿ ಬಿಯರ್ ಆರಂಭಿಸಿದುದು, ಬಿಯರ್ ಜತೆ ವಿಸ್ಕಿ ಬೆರೆಸಿ ಕುಡಿದು ಲೋಕವೇ ತಿರುಗಿದ್ದು ನೆನಪುಗಳು ತುಂಬಾ. ಕಳೆದ ಸಲ ಕೇರಳಕ್ಕೆ ಹೋದಾಗ ಅಲ್ಲಿ ಕುಡಿದ ಶೇಂದಿ (ಕಳ್ಳು) ತುಂಬಾ ದಿನ ನೆನಪಿನಲ್ಲಿದೆ. ಅಲ್ಲಿಯೇ ಅರ್ಧ ಬಾಟಲಿ ವಿಸ್ಕಿಗೆ ಶೇಕಡಾ ಅರ್ವತ್ತೈದು ಟ್ಯಾಕ್ಸ್ ಕಟ್ಟಿ ಖರೀದಿಸಿದ್ದು. ಪಾನ ನಿಷೇಧ ವಿರುವ ಗುಜರಾತ್ ಗೆ ಪ್ರತಿ ಸಾರಿ ಹೋದಾಗಲೂ ಕುಡಿದೇ ಬಂದಿದ್ದು. ಇವೆಲ್ಲಾ ನನ್ನ ಮುಂದಿನ ಬರಹಗಳಿಗೆ ಮುನ್ನುಡಿಯೋ ಎಂಬಂತೆ ನೆನಪಿಗೆ ಬರುತ್ತಿವೆ. ನಾವು ಕುಟುಂಬ ಸಮೇತ ಕೊಚ್ಚಿಯಿಂದ ಮುನ್ನಾರ್ ಗೆ ಗಾಡಿಯಲ್ಲಿ ಹೋಗುತ್ತಿದ್ದೇವು. ರಾಜ್ಯವೇ ಒಂದು ನಗರವಾಗಿರುವ ಕೇರಳದಲ್ಲಿ ಬಾರ್ ಗಳು ಇಲ್ಲ. ಬೀಯರ್ ಮತ್ತು ವೈನ್ ದೊರೆಯುತ್ತದೆ. ಇತರ ಭಾರತದಲ್ಲಿ ತಯಾರಿಸಿದ ವಿದೇಶಿ ಮದ್ಯಕ್ಕೆ ನಗರದ ಮಧ್ಯದಲ್ಲೆಲ್ಲೋ ಇರುವ ಸರಕಾರಿ ಅಂಗಡಿಗಳಿಗೆ ಹೋಗಬೇಕು. ಮುಖ್ಯ ಪೇಟೆ ಬಿಟ್ಟು ಹೊರಗೆ ಬಂದರೆ ಕಿಲೋಮೀಟರ್ ಗೆ ಒಂದರಂತೆ ಕಳ್ಳು ಶಾಪ್ ಗಳು ಕಾಣಸಿಗುತ್ತವೆ. ನಾವು ಪ್ರಯಾಣಿಸುವಾಗ ನನಗೆ ಅದೇ ಕಣ್ಣಿಗೆ ಬೀಳುತ್ತಿತ್ತು. ಕಪ್ಪು ಬಿಳಿ ಬೋರ್ಡ್ ಮಲಯಾಳದಲ್ಲಿದ್ದರೂ ಆ ನಾಲ್ಕು ಅಕ್ಷರಗಳು ನನಗೆ ಮರೆಯದೇ ನೆನಪಿನಲ್ಲಿದೆ. ವೇಗವಾಗಿ ಹೋಗುತ್ತಿದ್ದ ಕಾರಿನಲ್ಲಿ ಕುಳಿತ ನಮಗೆ ಆ ಬೋರ್ಡ್ ಕಂಡು ಡ್ರೈವರ್ ನಿಗೆ ನಿಲ್ಲಿಸಲು ಹೇಳಬೇಕಾದರೆ ತುಂಬಾ ದೂರ ತಲುಪುತ್ತಿದ್ದೇವು. ಕೊನೆಗೆ ರಸ್ತೆಯ ಒಂದು ತಿರುವಿನಲ್ಲಿ ಕಾರು ನಿಧಾನವಾದಂತೆ ಬೋರ್ಡ್ ಕೂಡಾ ಸಿಕ್ಕಿತು. ಕಾರು ನಿಲ್ಲಿಸಲು ಹೇಳಿದೆ. ಅದೊಂದು ಹಳ್ಳಿ ಪ್ರದೇಶವಾಗಿತ್ತು. ಕಳ್ಳು ಶಾಪ್ ನಲ್ಲಿ ಸುಮಾರು ಹತ್ತು ಹದಿನೈದು ಮಂದಿ ಇದ್ದರು. ನಾನೂ ಹೋಗಿ ಒಂದು ಕುಪ್ಪಿ (ಬಾಟಲಿ) ಕಳ್ಳಿಗೆ ಹೇಳಿದೆ. ಅಲ್ಲೇ ಕಲ್ಲ ಬೆಂಚಿನಲ್ಲಿ ಕುಳಿತು ಹೀರಲು ತೊಡಗಿದೆ. ಎಲ್ಲರೂ ನನ್ನನ್ನೇ ನೋಡುತ್ತಿದ್ದರು. ಇನ್ಯಾರಿಗಾದರೂ ಒಂದು ಕುಪ್ಪಿ ಕಳ್ಳು ತೆಗೆದು ಕೊಡುವುದೋ ಎಂದು ಯೋಚಿಸಿದೆ. ಹಾಗೆ ತೆಗೆದು ಕೊಡುವುದು ವಾಡಿಕೆ. ಅಂದರೆ ಕಳ್ಳು ಕುಡಿಯುವವರ ಸ್ನೇಹ. ನನಗೆ ಅಷ್ಟೊಂದು ಸಮಯವಿರಲ್ಲಿಲ್ಲ. ಮಧ್ಯಾಹ್ನ ಹನ್ನೆರಡು ಕಳೆದಿರುವುದರಿಂದ ಕಾರಲ್ಲಿ ಇದ್ದ ಉಳಿದವರಿಗೆ ಹಸಿವಾಗಿತ್ತು. ಹಣ ಕೊಟ್ಟು ನಾನು ಮತ್ತೆ ಕಾರಿಗೆ ಹತ್ತಿದೆ. ಕೇರಳದಲ್ಲಿ ಕೊಟ್ಟಾಯಂ ಜಿಲ್ಲೆ ಕಳ್ಳಿಗೆ ಬಹಳ ಹೆಸರುವಾಸಿ. ಅಲ್ಲಿಯ ತೆಂಗಿನ ಮರದ ಕಳ್ಳು ಬೆಳಿಗ್ಗೆ ಕುಡಿದರೆ ಧಾರವಾಡದ ಎಮ್ಮೆಯ ಆಗಷ್ಟೇ ಕರೆದ ಬಿಸಿ ಹಾಲಿನಂತೆ ರುಚಿಯಾಗಿರುತ್ತದೆ. ಜತೆಗೆ ನಂಜಿಕೊಳ್ಳಲ್ಲು ಚೆಮ್ಮೀನ್ ಇದ್ದರೆ ಬದುಕೇ ಎಂದೆಂದೂ ಹೀಗೇ ಇರಲಿ ಎಂಬ ಒಂದು ಮಲಯಾಳ ಹಾಡು ನೆನಪಾಗುತ್ತದೆ. ಕಳ್ಳು ಕುಡಿದು ಮುನ್ನಾರ್ ತಲುಪಿದ ನಮಗೆ ರಿಸಾರ್ಟ್ ನಲ್ಲಿ ಕುಡಿಯಲು ಬೀಯರ್ ಮತ್ತು ವೈನ್ ಮಾತ್ರ ಸಿಗುತ್ತಿತ್ತು. ಕೊಚ್ಚಿಯ ಹಳೇ ಅರಮನೆ ಹೋಟೆಲ್ ನಲ್ಲಿ ರೊಮ್ಯಾಂಟಿಕ್ ಆಗಿ ವೈನ್ ಕುಡಿದ ನನಗೆ ಮತ್ತೆ ವಿಸ್ಕಿ ಕುಡಿಯಬೇಕೆಂದು ಅನಿಸಿತು. ಒಂದು ಬಾಟಲಿ ಪೂರಾ ತೆಗೆದು ಕೊಂಡರೆ ನಮ್ಮ ಪ್ರವಾಸ ಕಾಲವಿಡೀ ಕುಡಿಯುತ್ತಾ ಇರಬಹುದು ಎಂಬ ಲೆಕ್ಕ ದಲ್ಲಿ ಮುನ್ನಾರ್ ಪೇಟೆಯಲ್ಲಿರುವ ಒಂದೇ ಒಂದು ಸರಕಾರೀ ಮದ್ಯ ಮಾರಾಟದ ಅಂಗಡಿಗೆ ಹೋದೆ. ಅಲ್ಲಿ ಜನವೋ ಜಾತ್ರೆಯೋ. ಅಂತಿಂತು ಅರ್ಧ ಬಾಟಲಿ ಸಿಗ್ನೇಚರ್ ಗೆ ಏಳ್ನೂರೋ ಏನೋ ಕೊಟ್ಟು ತೆಗೆದು ಕೊಂಡೆ. ಬಿಲ್ಲ್ ಕೂಡ ಸಿಕ್ಕಿತು. ಅದರಲ್ಲಿ ಮದ್ಯದ ಮುಕ್ಕಾಲು ಶೇಕಡಾ ಟ್ಯಾಕ್ಸ್. ಮದ್ಯ ಮಾರಿ ಸರಕಾರ ಅದೆಷ್ಟು ದುಡ್ಡು ಮಾಡುತ್ತದೆ ಎಂದು ನಾನು ಅಚ್ಚರಿಪಟ್ಟೆ. ಕೊಂಡಿದ್ದ ವಿಸ್ಕಿಯನ್ನು ಒಂದೆರಡು ದಿನ ಜೋಪಾನವಾಗಿಟ್ಟು ಕುಡಿದೆ.
ಕುಡಿತದ ಒಂದೊಂದೇ ಪೆಗ್ ಗಳನ್ನು ಮುಂದೆ ಹೀರೋಣ ಎಂಬ ಭರವಸೆಯೊಂದಿಗೆ ಚೀರ್ಸ್ ಹೇಳುತ್ತೇನೆ.
ಒಲವಿನಿಂದ
ಬಾನಾಡಿ.

Thursday, May 10, 2007

ಚಹಾಕ್ಕೆ ರುಚಿ ನೀಡಿದ ಸಂಬಂಧ

ಅವತ್ತು ತುಂಬಾ ಬಳಲಿದ್ದೆ. ಸ್ವಲ್ಪ ಆರಾಮ ಬೇಕೆಂದು ಕೊಂಡು ಹೊರಟ್ಟಿದ್ದೆ. ನೇರವಾಗಿ ಸಮುದ್ರದ ಕಡೆಗೇ ಹೋಗಬಹುದ್ದಿತ್ತು. ಸಮುದ್ರದ ಬದಿಯಲ್ಲಿ ಕುಳಿತು ಅದರ ತೆರೆಗಳನ್ನೇ ನೋಡುತ್ತಾ ನಿಂತರೆ ಎಲ್ಲವನ್ನೂ ಮರೆತು ಅದ್ಯಾವುದೋ ಲೋಕಕ್ಕೇ ತಲಪುತ್ತೇನೆ. ಮನಸ್ಸು ನಿರಾಳವಾಗುತ್ತದೆ. ಕಡಲ ಕಿನಾರೆಯ ಮರಳಲ್ಲಿ ಕಾಲು ಚಾಚಿ ಬರುವ ತೆರೆಗಳನ್ನು ಕಂಡು ಸುಮ್ಮನೆ ನೋಡುತ್ತಿದ್ದರೆ ಸಾಕು. ಎಂದಿನಂತೆ ಸಮುದ್ರದ ಕಡೆಗೆ ಹೋಗಲ್ಲಿಲ್ಲ. ಬದಲು ಅದೇ ಆ ಹಳೆಯ ಸಿನಿಮಾ ಮಂದಿರದ ಕಡೆಗೆ ಹೋದೆ. ಅದರ ಎದುರು ಇರುವ ಚಹಾದಂಗಡಿಯ ಚಹಾ ನನಗೇನೋ ಒಂದು ತೃಪ್ತಿಯನ್ನು ನೀಡುತ್ತಿತ್ತು. ಕೆಲವೊಮ್ಮೆ ಆ ಚಹಾಕ್ಕೆಂದೇ ಯಾವುದೋ ರಸ್ತೆಯಲ್ಲಿ ಹೋಗುವ ನಾನು ಆ ರಸ್ತೆಯ ವರೆಗೆ ನಾಲ್ಕಾರು ಕಿಲೋ ಮೀಟರ್ ನಡೆದುಕೊಂಡು ಹೋಗುತ್ತಿದ್ದೆ. ಅವತ್ತು ಕೂಡ ಆ ಸಿನಿಮಾ ಮಂದಿರದ ಎದುರಿನ ಚಹಾದಂಗಡಿಗೆ ಹೋದೆ. ಎಂದಿನಂತೆ ಚಹಾ ಕುಡಿಯಲು ಕುಳಿತೆ. ಮಾಲೀಕ ತನ್ನ ಪರಿಚಯದ ನಗೆ ನಕ್ಕ. ಆತನ ಅಂಗಡಿಯಲ್ಲಿ ನಾನು ಅದೆಷ್ಟು ಸಲ ಚಹಾ ಕುಡಿದರೂ ಆತನ ಜತೆಗೆ ನಾನು ಮಾತುಕತೆಗೆ ಇಳಿದಿರಲ್ಲಿಲ್ಲ. ಅಂದರೆ ನಮ್ಮ ಸ್ವಂತ ವಿಚಾರಗಳ ಬಗ್ಗೆ ಏನೂ ಮಾತಾಡಿಲ್ಲ. ಲೋಕಾಭಿರಾಮವಾಗಿ ಬಂದ ಮಾತುಗಳಿಗೆ ನಾನೂ ದನಿ ಕೂಡಿಸಿದ್ದೆ. ಆತನಿಗೆ ನನ್ನ ಮುಖ ಪರಿಚಯವಿತ್ತಷ್ಟೆ. ವ್ಯಕ್ತಿ ಪರಿಚಯವಿರಲ್ಲಿಲ್ಲ. ಅಂದು ಕೂಡಾ ಚಹಾ ಕುಡಿದು ಸಿನಿಮಾ ಕುರಿತು ಮಾತಾಗಿತ್ತು. ಎದುರಿನ ಸಿನಿಮಾ ಮಂದಿರದಲ್ಲಿ ನಡೆಯುವ ಚಿತ್ರ ನಾಲ್ಕನೇ ವಾರ ಓಡುತ್ತಿತ್ತು. ಪತ್ರಿಕೆಯಲ್ಲಿ ಕೊನೇವಾರ ಎಂದು ಕೂಡ ಬಂದಿತ್ತು. ಸಿನಿಮಾ ಪ್ರಾರಂಭಗೊಳ್ಳಲು ಇನ್ನೇನು ಹದಿನೈದು ನಿಮಿಷ ಇದ್ದಿರಬೇಕು. ಟಿಕೇಟು ಕೊಳ್ಳಲು ಓಡಿದೆ. ಗಂಡಸರ ಸಾಲಲ್ಲಿ ತುಂಬಾ ಜನರಿದ್ದರು. ಹೆಂಗಸರ ಸಾಲಲ್ಲಿ ಕೆಲವಷ್ಟೇ ಮಂದಿಯಿದ್ದರು. ಒಬ್ಬಾಕೆಯಲ್ಲಿ ನನಗೂ ಒಂದು ಟಿಕೇಟು ಬೇಕೆಂದು ಹೇಳಿ ಹಣ ಕೊಟ್ಟೆನು. ಆಕೆಯ ಜತೆಗೆ ಇನ್ನೊಬ್ಬಳಿದ್ದಳು. ನನ್ನ ಟಿಕೇಟು ತೆಗೆದು ಕೊಟ್ಟಳು. ಟಿಕೇಟು ತೆಗೆದುಕೊಂಡು ಒಳಗೆ ಹೋದೆ. ಸ್ವಲ್ಪ ನಂತರ ನನ್ನ ಬಳಿಯ ಸೀಟಿಗೆ ನನಗೆ ಟಿಕೇಟು ತೆಗೆದು ಕೊಟ್ಟ ಹೆಂಗಸು ಮತ್ತು ಇನ್ನೊಬ್ಬಾಕೆ ಸ್ವಲ್ಪ ಎಳೆಯವಳು ಬಂದರು. ಅವರ ಜತೆ ಕುಳಿತು ಸಿನಿಮಾ ನೋಡಿದೆ. ಮಧ್ಯಾಂತರದಲ್ಲಿ ಅವರಿಗೂ ತಿಂಡಿ ತೆಗೆದು ಕೊಟ್ಟೆ. ಅವರ ಪರಿಚಯ ನನಗಿರಲ್ಲಿಲ್ಲ. ಅವರೊಂದಿಗೆ ನಾನು ಸಭ್ಯನಂತೇ ವರ್ತಿಸಿದ್ದೆ. ಸಿನಿಮಾ ಬಿಟ್ಟು ಸ್ವಲ್ಪ ಆರಾಮವದಂತೆಣಿಸಿ ಮತ್ತೆ ನನ್ನ ಕೆಲಸ ಕಾರ್ಯಗಳನ್ನು ಮುಂದುವರಿಸಿದೆ. ಬಹಳ ದಿನಗಳ ನಂತರ ನನ್ನ ಸ್ನೇಹಿತ ನನಗೆ ಸಿಕ್ಕಿದ. ಅವನಲ್ಲಿ ಕೇಳಿದೆ ಏನಯ್ಯ ನೀನಿಲ್ಲಿ ಎಂದು. ಆತ ಹೇಳಿದ ನಾನು ನನ್ನ ಅಣ್ಣನ ಮನೆಗೆ ಬಂದಿದ್ದೇನೆ. ಅವರ ಮನೆ ಇಲ್ಲಿಯೇ ಎಂದು. ನನ್ನನ್ನೂ ಅವರ ಮನೆಗೆ ಕರೆದ. ನಾನೆಂದೆ ಸುಮ್ಮನೆ ಯಾಕೆ ನಿನ್ನ ಅಣ್ಣನವರಿಗೆ ತೊಂದರೆ ಎಂದು. ಅದಕ್ಕವನು ತೊಂದರೆಯೇನಿಲ್ಲ ನೀನು ಬಾ ಎಂದು ಬಹಳ ಒತ್ತಾಯಿಸಿದ. ನಾನು ಅವನ ಜತೆಗೆ ಅವನ ಅಣ್ಣನ ಮನೆಗೆ ಹೋದೆ. ಅಲ್ಲಿಗೆ ಹೋದರೆ ನಾನು ಸಿನಿಮಾ ನೋಡಲು ಹೋದಾಗ ಸಿಕ್ಕ ಮಹಿಳೆಯೂ ಇದ್ದಳು. ನನ್ನ ಮಿತ್ರ ಅವಳನ್ನು ಆತನ ಅಣ್ಣನ ಹೆಂಡತಿಯೆಂದು ಪರಿಚಯಿಸಿದನು. ನಾನು ಸಿನಿಮಾ ನೋಡಲೆಂದು ಹೋದಾಗ ಅವರು ಸಿಕ್ಕಿದ ಬಗ್ಗೆ ಹೇಳಲ್ಲಿಲ್ಲ. ಆಕೆಯೂ ಏನೂ ಅನ್ನಲ್ಲಿಲ್ಲ. ನಮ್ಮ ಪರಿಚಯದ ನಂತರ ಸ್ವಲ್ಪ ಹೂತು ನಾನು ಅವರ ಮನೆಯಲ್ಲಿದ್ದು ನನ್ನ ಮಿತ್ರನಲ್ಲಿ ಮಾತಾಡಿ ಹೊರಟು ಬಿಟ್ಟೆನು. ಸ್ವಲ್ಪ ದಿನಗಳ ನಂತರ ನನ್ನ ಸ್ನೇಹಿತನು ಅವನ ಅಣ್ಣನ ಮನೆಯಿಂದ ವನ ಮನೆಗೆ ಒಂದು ಪ್ಯಾಕೆಟ್ ಅನ್ನು ನನ್ನ ಮೂಲಕ ತರಿಸಿದ. ಅದನ್ನು ಪಡೆಯಲೆಂದು ನನ್ನ ಸ್ನೇಹಿತನ ಅಣ್ಣನ ಮನೆಗೆ ಹೋದೆ ಅಲ್ಲಿ ಆ ಹೆಂಗಸು ಮಾತ್ರವಿದ್ದಳು. ನಾನು ಸಿನಿಮಾ ಮಂದಿರದಲ್ಲಿ ಸಿಕ್ಕ ವಿಚಾರವನ್ನು ಅವಳು ಹೇಳಿ ಕಳೆದ ಬಾರಿ ಬಂದಾಗ ಆ ಬಗ್ಗೆ ಏನೂ ಮಾತಾಡದಕ್ಕೆ ಥ್ಯಾಂಕ್ಸ್ ಹೇಳಿದಳು. ಅವಳು ಮತ್ತು ಅವಳ ಅಕ್ಕನ ಮಗಳು ನನ್ನ ಸ್ನೇಹಿತನ ಅಣ್ಣನಿಗೆ ಹೇಳದೇ ಸಿನಿಮಾ ನೋಡಲು ಹೋಗಿದ್ದಂತೆ. ನನ್ನನ್ನು ಕಂಡ ಅವಳಿಗೆ ಅವತ್ತು ಬಹಳ ಚಡಪಡಿಕೆ ಆಯಿತಂತೆ. ಎಲ್ಲಿಯಾದರೂ ನಾನು ಅವಳನ್ನು ಸಿನಿಮಾ ಮಂದಿರದಲ್ಲಿ ನೋಡಿದೆ ಎಂದು ಹೇಳಿದರೆ ಎಂದು. ಈಗ ಕೆಲವೊಮ್ಮೆ ನಾನು ಅವಳ ಎದುರೇ ಅವಳ ಗಂಡನೊಡನೆ ನಾವು ಸಿನಿಮಾ ನೋಡೋಕೆ ಹೋಗೋಣ ಎಂದರೆ ಅವಳು ಅಲ್ಲಿಂದ ಜಾಗ ಖಾಲಿ ಮಾಡುತ್ತಾಳೆ. ಅವಳೂನನ್ನ ಒಳ್ಳೆಯ ಸ್ನೇಹಿತೆಯಾಗಿ ಬಿಟ್ಟಿದ್ದಾಳೆ. ಆದರೆ ಮತ್ತೆಂದೂ ಜತೆಗೆ ಕೂತು ಸಿನಿಮಾ ನೋಡಿಲ್ಲ. ಅದಕ್ಕಾಗಿಯೇ ಕಾದು ಕುಳಿತ್ತಿದ್ದೇನೆ -ಸಿನಿಮಾ ಮಂದಿರದ ಎದುರಿನ ಚಹಾದಂಗಡಿಯಲ್ಲಿ ಚಹಾ ಕುಡಿಯುತ್ತಾ. ಅಥವಾ ಚಹಾ ಕುಡಿಯಲೆಂದೇ ಆ ರಸ್ತೆಯಲ್ಲಿ ಹೋಗುತ್ತೇನೆ. ಚಹಾ ಹಿಂದಿಗಿಂತಲೂ ಚೆನ್ನಾಗಿದೆ ಎಂದನಿಸುತ್ತದೆ. ಅಥವಾ ಆ ಚಹಾದ ಜತೆಗೆ ಅವಳ ನಿರೀಕ್ಷೆಯೋ? ಮತ್ತೆ ನನ್ನ ಗೆಳಯ ಅವನ ಅತ್ತಿಗೆಯ ಮನೆಗೆ ಒತ್ತಾಯವಿಲ್ಲದೇ ಕರೆದರೂ ನಾನು ಹೋಗುವೆ.
ಒಲವಿನಿಂದ
ಬಾನಾಡಿ

Monday, May 7, 2007

ಹಳೆಯದೊಂದು ಹೊಸ ಸಂಬಂಧ

ಅವಳನ್ನು ನನ್ನ ಬಾಲ್ಯದ ಸ್ನೇಹಿತೆಯೆನ್ನಬಹುದು. ಯಾಕೆಂದರೆ ನಾವಿಬ್ಬರೂ ಸುಮಾರು ಆರನೆ ತರಗತಿಯಿಂದ ಒಬ್ಬರನ್ನೊಬ್ಬರು ತಿಳಿದಿದ್ದೆವು. ನಮ್ಮಲ್ಲಿ ಸ್ನೇಹವಿತ್ತು. ಕಾರಣ ನಾವು ಇಬ್ಬರೂ ಒಂದೇ ತರಗತಿಯಲ್ಲಿ ಓದುತ್ತಿದ್ದೆವು. ಆಕೆ ಬೇರೆ ಶಾಲೆಯಲ್ಲಿ. ಹಾಗಾಗಿ ನಾವು ಸಹಪಾಠಿಗಳಾಗಿರಲ್ಲಿಲ್ಲ. ನಮ್ಮ ಭೇಟಿಯೂ ಅಷ್ಟೊಂದು ಸಲ ಆಗುತ್ತಿರಲಿಲ್ಲ. ವರ್ಷಕ್ಕೆ ಏಳೆಂಟು ಬಾರಿ ಎನ್ನಬಹುದು. ನಾವೇನೂ ಸಂಬಂಧಿಕರೂ ಆಗಿಲ್ಲ. ನಮ್ಮ ಸ್ನೇಹ ತುಂಬಾ ವರ್ಷಗಳ ವರೆಗೆ ಮುಂದುವರಿದಿತ್ತು. ಅಂದರೆ ನಾವಿಬ್ಬರೂ ನಮ್ಮ ಪಾಠಗಳ ಬಗ್ಗೆ, ಓದಿದ ಪುಸ್ತಕಗಳ ಬಗ್ಗೆ, ನೋಡಿದ ಯಕ್ಷಗಾನಗಳ ಬಗ್ಗೆ ಅಥವಾ ನಮ್ಮ ಇಬ್ಬರ ಪರಿಚಯವಿರುವವರ ಬಗ್ಗೆ ಮಾತಾಡುತ್ತಿದ್ದೇವು. ಅವಳು ಅವಳ ಮನೆಯವರ ಬಗ್ಗೆಯೂ ಒಮ್ಮೊಮ್ಮೆ ಮಾತಾಡುತ್ತಿದ್ದಳು. ಅವಳು ಸುಂದರವಾಗಿದ್ದಳು. ನಮ್ಮ ಹತ್ತನೆ ತರಗತಿಯ ನಂತರ ಒಂದು ವರ್ಷ ನಮ್ಮೊಳಗೆ ಯಾವುದೇ ಸಂಪರ್ಕವಿರಲ್ಲಿಲ್ಲ. ಒಂದು ವರ್ಷದ ನಂತರ ಅವಳಿಗೆ ಮದುವೆಯಾದ ಕುರಿತು ತಿಳಿಯಿತು. ಹುಡುಗ ನಮ್ಮೂರಲ್ಲಿದ್ದಾತ. ಆಗ ದೊಡ್ಡ ನಗರದಲ್ಲಿ ಒಳ್ಳೆಯ ಕೆಲಸದಲ್ಲಿದ್ದ. ಅವನ ಬಗ್ಗೆ ನನ್ನ ಮನೆಯವರಿಗೆ ಗೊತ್ತಿತ್ತು. ನನಗೆ ಗೊತ್ತಿರಲಿಲ್ಲ. ಆತ ನನ್ನಿಂದ ಸುಮಾರು ಹದಿನೈದು ವರ್ಷ ದೊಡ್ಡವನಿರಬೇಕು. ಹಾಗಾಗಿ ನನಗೆ ಆತನ ಪರಿಚಯವಿರಲ್ಲಿಲ್ಲ. ಆತನು ಊರಲ್ಲಿದ್ದಾಗ ನಾನಿನ್ನೂ ಚಿಕ್ಕವನಿದ್ದೆ. ನನ್ನ ಸ್ನೇಹಿತೆಯ ಪರಿಚಯ ನನ್ನ ಅಕ್ಕ, ಅಮ್ಮನವರಿಗೆ ಇತ್ತು. ನನ್ನ ಸ್ನೇಹಿತೆಯ ಮದುವೆಯ ಕುರಿತು ಹೇಳಿದಾಗ ಅವರು ಹುಡುಗಿಗೆ ಒಳ್ಳೆಯ ಹುಡುಗ ಸಿಕ್ಕಿದ ಎಂಬ ಅಭಿಪ್ರಾಯಪಟ್ಟಿದ್ದರು. ನಾನು ಕಾಲೇಜು ತಲಪುವ ವೇಳೆಗೆ ಅವರಿಗೆ ಇಬ್ಬರು ಮಕ್ಕಳೂ ಆಗಿದ್ದರು. ನಗರದಲ್ಲಿ ಒಮ್ಮೆ ಅವರನ್ನು ಭೇಟಿಯಾಗಿ ಅವರ ಮನೆಗೂ ಹೋಗಿದ್ದೆ. ಆಕೆ ತುಂಬಾ ಪ್ರೀತಿಯಿಂದ ನನ್ನನ್ನು ಆದರಿಸಿದಳು. ಅವಳ ಗಂಡನೂ ನನ್ನ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಹೊಂದಿದ್ದ. ನನ್ನ ತಂದೆ ತಾಯಿ ಕುಟುಂಬದ ಬಗ್ಗೆ ಆತ ತಿಳಿದಿದ್ದುದರಿಂದ ನನ್ನ ಮೇಲೆಯೂ ಒಳ್ಳೆಯ ಅಭಿಪ್ರಾಯ ಹೊಂದಿದ್ದ. ನಾನೂ ಆತನನ್ನು ಒಳ್ಳೆಯ ಸ್ನೇಹಿತ ಎಂದು ತಿಳಿದಿದ್ದೆ. ಅವನ ಮಕ್ಕಳೂ ನನಗೆ ಪ್ರಿಯರೆನಿಸಿದರು. ಆತನ ಕೆಲಸದ ಬಗ್ಗೆಯೂ ಹೇಳಿದ. ಕಾಲೇಜಿಗೆ ಹೋಗುತ್ತಿದ್ದ ನಾನೂ ಅವನಂತೆ ಒಳ್ಳೆಯ ಕೆಲಸ ಹಿಡಿಯಬೇಕು ಎಂದು ಯೋಚಿಸಿದ್ದೆ. ಒಟ್ಟಿನಲ್ಲಿ ಆ ಕುಟುಂಬ ನನಗೆ ತುಂಬಾ ಹತ್ತಿರದವರಂತೆ ಕಂಡುಬಂದರು.ಮತ್ತೆ ಕೆಲವು ಬಾರಿ ಅವರ ಮನೆಗೆ ಹೋಗುವ ಅವಕಾಶವಾಯಿತು ನನಗೆ. ಆತ ತನ್ನ ಕೆಲಸದ ಮೇಲೆ ಬಹಳ ನಿಷ್ಟನಾಗಿದ್ದ. ಬಹಳ ಸಮಯ ಕೆಲಸದ ಸ್ಥಳದಲ್ಲಿಯೇ ಕಳೆಯುತ್ತಿದ್ದ. ಮನೆಗೆ ಬಂದರೂ ಕೆಲಸದ ಬಗ್ಗೆಯೇ ಯೋಚಿಸುವಂತೆ ಕಾಣುತ್ತಿದ್ದ. ಆಕೆಯೂ ಉತ್ತಮ ಗೃಹಿಣಿಯಾಗಿದ್ದಳು. ಗಂಡನ ಅವಶ್ಯಕತೆಗಳನ್ನು ಸಮಯಕ್ಕನುಗುಣವಾಗಿ ನಿರ್ವಹಿಸಿ, ಅತಿಥಿಯಾದಂತಹ ನನ್ನ ಬಗ್ಗೆಯು ಕಾಳಜಿ ವಹಿಸಿ, ಮಕ್ಕಳ ಕಡೆಯೂ ಗಮನಕೊಡುತ್ತಿದ್ದಳಲ್ಲದೇ ನೆರೆಕರೆಯವರಲ್ಲಿಯೂ ಉತ್ತಮ ಸಂಬಂಧವನ್ನಿಟ್ಟಿದ್ದಳು. ಹಾಗೆಂದು ನನಗೆ ಕಂಡಿತು.ಈಗ ಅವರ ಮಕ್ಕಳು ಬೆಳೆದು ದೊಡ್ಡವರಾಗಿದ್ದಾರೆ. ಒಬ್ಬ ಕಲಿಯಲೆಂದು ಅವರಿಂದ ಬೇರೆಯಾಗಿ ಇನ್ಯಾವುದೋ ನಗರದಲ್ಲಿದ್ದಾನೆ. ಇನ್ನೊಬ್ಬ ಅದೇ ನಗರದಲ್ಲಿ ಓದುತ್ತಿದ್ದಾನೆ. ಗಂಡ ಅದೇ ಕೆಲಸಕ್ಕೆ ಅಷ್ಟೇ ಮುತುವರ್ಜಿಯಿಂದ ಹೋಗುತ್ತಿದ್ದಾನೆ. ಈಗ ನನ್ನ ಕೆಲಸ, ಬದುಕಿನ ಬಗ್ಗೆಯೂ ಆತ ಹೆಮ್ಮೆ ಪಡುತ್ತಾನೆ. ನನಗೂ ಕೆಲವೊಂದು ಕಿವಿಮಾತುಗಳನ್ನು ಹೇಳುತ್ತಾನೆ. ಈಗ ನಮ್ಮ ಭೇಟಿ ಬಹಳ ಅಪರೂಪ.
ನಮ್ಮಿಬ್ಬರ ಸ್ನೇಹಿತ ಮೊನ್ನೆ ಅಪರೂಪಕ್ಕೆ ಸಿಕ್ಕಿದ. ಆತನ ಜತೆ ಬಹಳ ಮಾತುಕತೆಯಾಯಿತು. ನನ್ನ ಆ ಸ್ನೇಹಿತೆಯ ಕುರಿತೂ ಆತ ಹೇಳಿದ. ಆಕೆಯ ಗಂಡ ಈಗಲೂ ಕೆಲಸದಲ್ಲಿದ್ದಾನಂತೆ. ಇನ್ನು ಮೂರ್ನಾಲ್ಕು ವರ್ಷಗಳಲ್ಲಿ ಆತ ನಿವೃತ್ತಿಯಾಗಬಹುದು. ಈಕೆಯ ಮಕ್ಕಳೂ ಕಾಲೇಜು, ಓದು, ಟ್ಯೂಷನ್, ಸ್ನೇಹಿತರು ಎಂದು ಬಿಜಿಯಾಗಿದ್ದಾರೆ. ಆಕೆ ಒಬ್ಬಂಟಿ. ಆಕೆಗೆ ಒಂಟಿತನ ಬಹಳ ಕಾಡುತ್ತಿದೆಯಂತೆ. ಆ ದಂಪತಿಗಳ ನಡುವೆ ಸುಮಾರು ಹತ್ತರಿಂದ ಹದಿನೈದು ವರ್ಷಗಳ ಅಂತರವಿರಬೇಕು. ಹಾಗಾಗಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಅವರಿಬ್ಬರು ಒಂದೇ ಮಟ್ಟದಲ್ಲಿ ಇಲ್ಲ. ಆದರೆ ಆ ಅನ್ಯೋನತೆ, ಪ್ರೀತಿ ಇನ್ನೂ ಮುಂದುವರಿದಂತೆ ಕಾಣುತ್ತದೆ. ನನ್ನ ಸ್ನೇಹಿತ ಹೇಳಿದ ಆಕೆಗೆ ಇನ್ಯಾವನೋ ಜತೆಗೆ ಅಫೇರ್ ಇದೆ ಎಂದು. ನನಗೆ ನಂಬಲಾಗುತ್ತಿಲ್ಲ. ಅವಳ ಹೊಸ ಸ್ನೇಹಿತನ ಬಗ್ಗೆಯೂ ಆತ ಹೇಳಿದ್ದ. ಅವನೂ ನಮಗಿಬ್ಬರಿಗೂ ಪರಿಚಿತ. ನಾನು ಅವಳಿಗೆ ಫೋನ್ ಮಾಡಿ ಅಭಿನಂದಿಸಬೇಕೆಂದಿದ್ದೆ. ಅವಳ ಹೊಸ ಸಂಬಂಧಕ್ಕಾಗಿ. ಅದಿನ್ನೂ ಆಗಿಲ್ಲ.

ಬಾನಾಡಿ

Wednesday, May 2, 2007

ಬಿಳಿ ಬೆಳಕಿನ ಬಾನಾಡಿ - ಕೆ.ಎಸ್.ನ.

ಬಿಳಿ ಬೆಳಕಿನ ಬಾನಾಡಿ
ಕೆ. ಎಸ್. ನರಸಿಂಹಸ್ವಾಮಿ ಅವರ ಒಂದು ಕವನ

ನೋಡಲ್ಲಿ! ಮಲ್ಲಿಗೆಯ
ಬಿಳಿ ಮೈಯ ಹಕ್ಕಿ
ಮರೆಯಾಯ್ತು ಮೋಡಗಳ
ಕಾಡಿನಲ್ಲಿ ಸಿಕ್ಕಿ!
ಮತ್ತೆ ನೀಲಿಯ ಮೇಲೆ
ಕಾಣಿಸಿತು ಚುಕ್ಕಿ;
ಮತ್ತೆ ಚಿನ್ನದ ಹಾಡು
ಆ ಕೊರಲು ಸೊಕ್ಕಿ.


ಬಿಳಿ ಬೆಳಕಿನ ಬಾನಾಡಿ
ಹಾರುತ್ತಿದೆ ಹಾಡಿ.
ನೀಲಿ ಬಾನಿನ ಮುಗಿಲ ಮಣಿಗಲು
ಮಾಲೆಯಾಗಿವೆ, ನೋಡಿ.
ಕಣ್ಣ ತೆರೆಯಿರಿ ದನಿಯ ಕೊರಲಿಗೆ
ಕಿವಿಯ ಬಾಣವ ಹೂಡಿ.
ಬಿಳಿ ಬೆಳಕಿನ ಬಾನಾಡಿ
ಹಾರುತ್ತಿದೆ ಹಾಡಿ.ಕಿಡಿ ನೆಲವಾಯಿತು,
ನೆಲ ಹಸಿರಾಯಿತು,
ಸಿರಿ ಉಸಿರಾಯಿತು,
ಬೆಂಗಾಡು.
ಬೆಳಕು ಮರಳಿತು,
ಹೂವು ಅರಳಿತು,
ಚೆಂಜೇನಾಯಿತು
ಬಿಳಿಹಾಡು.
ಬಿಳಿ ಬೆಳಕಿನ ಬಾನಾಡಿ
ಹಾರುತ್ತಿದೆ ಹಾಡಿ.Copyright
Kavyalaya Publishers, Mysore (1958)
ಶಿಲಾಲತೆ
ಕವನ ಸಂಕಲನದಿಂದ

Saturday, April 28, 2007

ಯಾವುದು ಧರ್ಮ?

ಅವತ್ತು ನಮ್ಮ ಕಾಲೇಜು ದಿನಾಚರಣೆ. ರಾತ್ರಿ ಸುಮಾರು ಹನ್ನೊಂದು ಗಂಟೆ ಹೊತ್ತಿಗೆ ನಾವೆಲ್ಲರೂ ಅಂದ್ರೆ ನಮ್ಮ ಕಾಲೇಜಿನ ಸಹಪಾಠಿಗಳು ಉತ್ಸವ ಮುಗಿಸಿ ಅವರವರ ರೂಮ್ ಗಳಿಗೆ ಹೊರಟೆವು. ಒಂದಿಬ್ಬರು ಮಿತ್ರರು ಮನೆ ದೂರವಿದ್ದುದರಿಂದ ನಮ್ಮ ರೂಮ್ ನಲ್ಲೇ ರಾತ್ರಿ ಉಳಿದರು. ಅವರೆಲ್ಲಾ ಬಂದಿದುದರಿಂದ ನಾವೂ ಅದೂ ಇದೂ ಮಾತಾಡುತ್ತಾ ಇನ್ನೂ ಬಹಳ ರಾತ್ರಿ ನಿದ್ದೆಯೇ ಮಾಡಿರಲ್ಲಿಲ್ಲ. ಸುಮಾರು ಮೂರು ಗಂಟೆಯಾಗಿರಬಹುದು. ನಾವು ಮಲಗಿದ್ದಲ್ಲೇ ಮಾತಾಡುತ್ತಿದ್ದೇವು. ಹೊರಗಡೆ ಯಾರೋ ಬಂದಂತೆ ಆಯಿತು. ನಮ್ಮದು ಸುಮಾರು ಏಳೆಂಟು ರೂಮ್ ಗಳು ಸಾಲಾಗಿ ಇದ್ದವು. ಎಲ್ಲಾ ರೂಮ್‌ಗಳ ಬಾಗಿಲುಗಳ ಚಿಲಕಗಳನ್ನು ಹೊರಗಿನಿಂದ ಹಾಕಿದಂತೆ ಎಣಿಸಿತು. ನಾನು ಬಾಗಿಲು ತೆಗೆಯಲು ನೋಡಿದೆ. ಹೌದು ಹೊರಗಿನಿಂದ ಬಾಗಿಲು ಹಾಕಿದ್ದು ಖಾತ್ರಿಯಾಯಿತು. ನಮ್ಮ ರೂಮ್‌ಗೆ ಹಿಂದಿನಿಂದಲೂ ಬಾಗಿಲಿತ್ತು. ನಮ್ಮ ಗೆಳೆಯರೊಬ್ಬರ ರೂಮಿಗೂ ಹಿಂದಿನಿಂದ ಬಾಗಿಲಿತ್ತು. ನಾನು ಹಿಂದಿನ ಬಾಗಿಲಿನಲ್ಲಿ ಹೋಗಿ ಅವರನ್ನು ಎಚ್ಚರಿಸಿದ್ದೆ. ಪಾಪ ಆತ ತನ್ನ ತಂಗಿ ಮತ್ತು ಅಕ್ಕನವರ ಜತೆ ಇದ್ದನು. ಏನು ನಡೆಯುತ್ತಿದೆ ಎಂದು ನಾವು ನಾವೇ ವಿಚಾರಿಸಿದೆವು. ಕಾಲೇಜಿನ ಹುಡುಗರೇ ಏನೋ ಕೀಟಲೆ ಮಾಡಲು ತೊಡಗಿರಬೇಕೆಂದು ಕೊಂಡೆವು. ನಾನು ಮತ್ತು ಗೆಳೆಯರು ಸೇರಿ ರೂಮ್‌ಗಳ ಬದಿಯಿಂದ ಬಂದು ಜೋರಾಗಿ ಬೊಬ್ಬೆ ಹೊಡೆದೆವು. ಬಂದವರೆಲ್ಲಾ ನಮ್ಮ ಅನಿರೀಕ್ಷಿತ ಬೊಬ್ಬೆಯಿಂದ ಗಾಬರಿಗೊಂಡರು. ಕೆಲವರು ಓಡಿದರು. ನಾವು ಕಲ್ಲು ಎಸೆಯಲು ಆರಂಭಿಸಿದೆವು. ನಮ್ಮ ಆಕ್ರಮಣವನ್ನು ತಿಳಿದ ಅವರೆಲ್ಲರೂ ಓಡಿದರು. ನಾವು ನಮ್ಮ ರೂಮ್‌ಗಳ ಮಾಲಿಕ ಅಲ್ಲೇ ಪಕ್ಕದಲ್ಲಿದ್ದ ಅವರ ಮನೆಗೆ ಹೋಗಿ ವಿಚಾರ ತಿಳಿಸಿದೆವು. ಅವರು ಕೂಡ ಬಂದರು. ಎಲ್ಲರೂ ಓಡಿ ಹೋಗಿಲ್ಲ ಎಂದು ನಾವು ಎಣಿಸಿದ್ದೆವು. ಹಾಗಾಗಿ ಜಾಗ್ರತೆಯಿಂದ ಯಾರಾದರೂ ಇದ್ದಾರ ಎಂದು ಮನೆಮಾಲೀಕ ಸೇರಿ ಹುಡುಕಿದೆವು. ಕೊನೆಗೊಬ್ಬ ಓಡಿದ. ನಾವು ಟಾರ್ಚ್ ಬೆಳಕು ಬಿಟ್ಟೆವು. ಆತ ಗುಡ್ಡ ಹಳ್ಳ ಎಂದು ಗಣಿಸದೇ ಓಟಕ್ಕಿತ್ತ. ಎಲ್ಲಾ ಹೋದರು ಎಂದು ಖಾತ್ರಿಯಾದ ಮೇಲೆ ನಮಗೆಲ್ಲಾ ಮತ್ತೆ ಸ್ವಲ್ಪ ಸಮಾಧಾನ ವಾಯಿತು. ನನ್ನ ಗೆಳೆಯನ ಸಹೋದರಿಯರು ಹೆದರಿದ್ದರು. ಎಲ್ಲರಿಗೂ ಧೈರ್ಯ ಕೊಟ್ಟವ ಮನೆ ಮಾಲಿಕ. ನಮ್ಮ ರೂಮ್‌ಗಳ ಸಾಲಿಗೇ ಬೆಂಕಿಯಿಡಲು ಬಂದಿದ್ದಾರೆ ಎಂದು ಆತ ಹೇಳಿದ. ನಮಗೆ ಇದೆಲ್ಲಾ ಅರ್ಥವಾಗಿಲ್ಲ. ನಾವಂದೆವು. ಇದ್ಯಾರೋ ಕಾಲೇಜಿನ ಹುಡುಗರೇ ಕೀಟಲೆ ಮಾಡಲು ಬಂದಿರ ಬೇಕು ಎಂದು. ನಮ್ಮ ಮನೆಮಾಲಿಕ ಮೊಯಿನುದ್ದೀನ್ ಹೇಳಿದ. ಪೇಟೆಯಲ್ಲಿ ಕೋಮು ಗಲಭೆ ಆರಂಭವಾಗಿದೆ. ಕಳೆದೆರಡು ದಿನಗಳಿಂದ ಮಸೀದಿಗಳಿಗೆ ಹಾಗೂ ದೇವಸ್ಥಾನಗಳಿಗೆ ಆಕ್ರಮಣವಾಗುತ್ತಿದೆ. ಮುಸಲ್ಮಾನರ ದೊಡ್ಡ ದೊಡ್ಡ ಮನೆಗಳಿಗೆ, ಹಿಂದುಗಳ ಭಜನಾ ಮಂದಿರಗಳಿಗೆ ಬೆಂಕಿಹಾಕುವ ಪ್ರಯತ್ನದಲ್ಲಿದ್ದಾರೆ ಕಿಡಿಗೇಡಿಗಳು ಎಂದು ಆತ ಹೇಳಿದ. ನೀವು ಎಚ್ಚರದಿಂದೆದ್ದು ನಮ್ಮ ರೂಮ್‌ಗಳಿಗೆ ಬೆಂಕಿ ಬೀಳದಂತೆ ಮಾಡಿದಕ್ಕೆ ಆತ ಧನ್ಯವಾದ ಹೇಳಿದ. ನನಗೆ ಆತ ಎರಡು ತಿಂಗಳ ಬಾಡಿಗೆಯನ್ನೂ ಮನ್ನ ಮಾಡಿದ. ನಾವು ಮುಗ್ದರಾಗಿ ಈ ಕೋಮುಗಲಭೆಯ ಬಗ್ಗೆ ಹೆಚ್ಚು ತಿಳಿದಿರಲ್ಲಿಲ್ಲ. ಬೇರಾವುದೋ ಊರಿನಲ್ಲಿ ಗಲಭೆಯಾದಾಗ ನಾವು ಕೂಡ ಬಹಳ ತೀವ್ರವಾಗಿ ಪ್ರತಿಸ್ಪಂದಿಸುತ್ತಿದ್ದೇವು. ಗಲಭೆ ಆರಂಭವಾಗಿ ಮೂರ್ನಾಲ್ಕು ದಿನವಾಗಿತ್ತಂತೆ. ಪತ್ರಿಕೆಗಳಿಗಾಗಲೀ ಜನರಿಗಾಗಲೀ ಈ ಕುರಿತು ಹೆಚ್ಚಿನ ಮಾಹಿತಿ ಇರಲ್ಲಿಲ್ಲ. ಪೋಲೀಸ್ ಪಡೆಯವರು ಗಲಭೆ ಜಾಸ್ತಿಯಾಗಬಾರದೆಂದು ಯಾವುದೇ ಪತ್ರಿಕೆಗಳಲ್ಲಿ ಈ ವಿಚಾರ ಬರದಂತೆ ಎಚ್ಚರಿಕೆ ವಹಿಸಿದ್ದರು. ನಮ್ಮ ಈ ಗಲಭೆಯಲ್ಲಿ ಸುಮಾರು ಹತ್ತು ಹೆಣ ಬಿದ್ದಿದೆ ಎಂದು ನಮಗೆ ತಿಳಿಯಿತು. ಆದರೆ ಯಾವುದೇ ಪತ್ರಿಕೆ ವರದಿ ಮಾಡಲ್ಲಿಲ್ಲ. ಮೊಯಿನುದ್ದೀನ್ ಗಲ್ಫ್ ದೇಶದಲ್ಲಿ ದುಡಿದು ಊರಿಗೆ ವಾಪಾಸಾಗಿದ್ದ. ಬಂಜರು ಭೂಮಿಯಲ್ಲಿ ತೆಂಗಿನ ಗಿಡ ನೆಟ್ಟು ಬೋರ್‌ವೆಲ್ ಹಾಕಿದ್ದ. ಜತೆಗೆ ರೂಮ್‌ಗಳನ್ನು ಕಟ್ಟಿಸಿ ನಮ್ಮಂತಹ ಹಳ್ಳಿಯ ಹುಡುಗರಿಗೆ ಬಾಡಿಗೆಗೆ ಕೊಟ್ಟಿದ್ದ. ಆತನೂ ನಾವೂ ಒಂಥರ ಸ್ನೇಹಿತರೇ. ಆತನು ಕೆಲವೊಮ್ಮೆ ನಮ್ಮ ಪೇಟೆಯ ಬಾರ್‌ನಲ್ಲಿ ನಮಗೆ ಸಿಗುತ್ತಿದ್ದ. ನಮ್ಮನ್ನು ಕಂಡು ಮುಗುಳ್ನ್ಗುತ್ತಿದ್ದ. ಅಲ್ಲಿ ಸಿಕ್ಕಿದ್ದನ್ನು ತನ್ನ ಮುದಿ ಅಪ್ಪನಿಗೆ ಹೇಳಬೇಡಿ ಎಂದು ಆತನು ನಮಗೆ ಮೊದಲೇ ಸೂಚಿಸಿದ್ದ. ಆತ ಸ್ವಲ್ಪ ದಿನಗಳ ನಂತರ ಹೇಳಿದ್ದ. ಆತನಲ್ಲೂ ಬಂದೂಕು ಇತ್ತಂತೆ. ಆದರೆ ಕೋಮು ಗಲಭೆಯಿದೆಯೆಂದು ಅದನ್ನು ಹೊರ ತೆಗೆಯಲ್ಲಿಲ್ಲ. ಇಲ್ಲ ದಿದ್ದರೆ ಅವತ್ತು ಕನಿಷ್ಟ ಎರಡು ಹೆಣ ಬೀಳುತ್ತಿತ್ತು ಎಂದು. ಗಲಾಟೆಯ ನಂತರ ಒಂದು ವಾರ ಪೋಲೀಸರಿಬ್ಬರು ಬಂದು ನಮ್ಮ ರೂಮ್‌ಗಳ ಪಕ್ಕ ಠಿಕಾಣಿ ಹೂಡಿದ್ದರು. ಪಾಳಿಯಲ್ಲಿ ಬರುತ್ತಿದ್ದ ಅವರೂ ನಮಗೆ ಸ್ನೇಹಿತರಾದರು.

ಒಲವಿನಿಂದ
ಬಾನಾಡಿ

Friday, April 27, 2007

ಸಾವು ನಮಗೆ ಎಲ್ಲಿಂದಲೂ ಬರಬಹುದು!

ಸಾವಿಗೆ ದಾರಿ ಬೇಡ. ಅದು ಹೋದಲ್ಲಿ ದಾರಿಯಾಗುತ್ತದೆ. ನಗರವಿರಲಿ, ಹಳ್ಳಿಯಿರಲಿ ಅದು ಹುಡುಕುತ್ತದೆ. ಮಕ್ಕಳಿರಲಿ, ಮುದುಕರಿರಲಿ ಅದರ ಆಯ್ಕೆ ಅದಕ್ಕೇ. ನಾವು ಎಣಿಸಿದಂತೆ ಅದನ್ನು ನರ್ತಿಸಲಾಗುವುದಿಲ್ಲ. ಕೆಲವೊಮ್ಮೆ ಸಾವು ನಿಗೂಢ ಆದಷ್ಟೇ ಅದಕ್ಕೆ ಒಳಗಾದವರೂ ನಿಗೂಢರಾಗಿರುತ್ತಾರೆ. ನನ್ನ ದೊಡ್ಡಜ್ಜನ ಮಗನ ಮಗಳ ಮಗಳು ಅಂದರೆ ನನ್ನ ಅಕ್ಕನ ಮಗಳು ಕಮಲ ಬಾವಿಗೆ ಬಿದ್ದು ಸತ್ತಾಗ ನಾನು ಐದನೆ ಕ್ಲಾಸಿನಲ್ಲಿದ್ದೆ. ಅವಳೇಕೆ ಸತ್ತಳು ಎಂದು ನನಗೀಗಲೂ ನಿಗೂಢ. ಅವಳು ಸತ್ತು ಎರಡು ವರ್ಷ ನಂತರ ಅಕ್ಕನಿಗೆ ಮತ್ತೊಂದು ಮಗುವಾಯಿತು. ಗಂಡು ಮಗು. ಶಿವಪ್ಪ. ಆತ ದೊಡ್ಡವನಾದ. ಅದು ಇದೂ ಎಂದು ಅವನು ಓದುವುದರಲ್ಲಿ ಜಾಣನಾಗಿರಲ್ಲಿಲ್ಲ ಅಂತ ಕಾಣುತ್ತದೆ. ಅವನಿಗೆ ಹದಿನೆಂಟು ವರ್ಷವಾಗಿರಬೇಕು ಆಗ ಅವನು ಉಡುಪಿಗೆ ಕೆಲಸಕ್ಕೆ ಹೋದ. ನನ್ನ ಅಣ್ಣನ ಮಗ ಅಲ್ಲಿ ಯಾವುದೋ ಕೆಲಸದಲ್ಲಿ ಇದ್ದ. ಆವರಿಬ್ಬರೂ ಒಳ್ಳೆಯ ಗೆಳೆಯರಾಗಿದ್ದುದರಿಂದ ಅವರಿಬ್ಬರೂ ಕೆಲಸಕ್ಕೆ ಜತೆಗೆ ಹೋದರು. ಒಂದು ದಿನ ಸಂಜೆ ಶಿವಪ್ಪ ರೂಮಿಗೆ ಬರಲ್ಲಿಲ್ಲ. ನನ್ನ ಅಣ್ಣನ ಮಗ ಅವನು ಊರಿಗೆ ಹೋಗಿರಬಹುದೆಂದು ಊರಿಗೆ ಫೋನ್ ಮಾಡಿದ. ಊರಿಗೆ ಬಂದ ಸುದ್ದಿ ತಿಳಿಯಲಿಲ್ಲ. ದಿನಗಳು ಒಂದು, ಎರಡು ಎಂದು ಉರುಳತೊಡಗಿದವು. ಮೂರು ದಿನಗಳ ನಂತರ ಗುಡ್ಡದಲ್ಲಿನ ಮರವೊಂದರಲ್ಲಿ ಒಬ್ಬ ವ್ಯಕ್ತಿಯ ದೇಹ ನೇತಾಡುವ ವಿಚಾರ ತಿಳಿಯಿತು. ನೋಡಿದರೆ ಶಿವಪ್ಪನದು. ಸತ್ತು ಮೂರು ದಿನವಾಗಿರಬಹುದು. ಉಟ್ಟ ಬಟ್ಟೆಗಳಿಂದಲೇ ಪರಿಚಯ ಸಿಕ್ಕಿತು. ಆತನೂ ಏಕೆ ಸತ್ತ ಎಂಬುದು ನಿಗೂಢ. ಕತೆಗಳು ತುಂಬಾ ಕಟ್ಟಿದವು. ಆದರೆ ಯಾವುದೇ ಕತೆಗೆ ಸಾವು ಇಷ್ಟು ಹತ್ತಿರ ಬರಬೇಕೇ ಎಂದು ಸಾಬೀತು ಪಡಿಸಲಾಗಿಲ್ಲ. ನನ್ನ ಆ ಅಕ್ಕನ ಗಂಡ ಕಳೆದ ವರ್ಷ ಸತ್ತರು. ಸತ್ತ ಸುದ್ದಿ ನನಗೆ ತಿಳಿದರೂ ವಯಸ್ಸಾದ ನನ್ನ ಅಮ್ಮನಿಗೆ ಅದನ್ನು ತಿಳಿಸುವ ವಿಚಾರ ನನಗೆ ಹಿಡಿಸಲಿಲ್ಲ. ಅಮ್ಮನಿಗೆ ನನ್ನ ಆ ಭಾವನ ಬಗ್ಗೆ ಮಮತೆ ಇರಬಹುದು. ಆತ ಸತ್ತ ಮೇಲೆ ದುಃಖವಾಗಬಹುದು ಎಂದು ನಾನು ಯೋಚಿಸಿದ್ದೆ. ಕೊನೆಗೆ ಏನೋ ಮಾತಾಡುವಾಗ ಆ ಅಕ್ಕನ ಇನ್ನೊಬ್ಬ ಮಗ ಬೆಂಗಳೂರಿನಿಂದ ಬಂದಿದ್ದನ್ನು ಹೇಳಿ ಅವನ ಅಪ್ಪ ಮೊನ್ನೆ ಸತ್ತು ಹೋದರು ಎಂದು ಅಮ್ಮನಿಗೆ ಹೇಳಿದೆ. ಅಮ್ಮ ನಾನೆಣಿಸಿದಷ್ಟು ವಿಚಲಿತಲಾಗಲ್ಲಿಲ್ಲ. ಅವಳ ವಯಸ್ಸು, ಅವಳು ಪಟ್ಟ ಬವಣೆ ಅವಳನ್ನು ಹಾಗೆ ಮಾಡಿದ್ದಿರಬಹುದು. ಅವಳು ನನ್ನಿಂದಲೂ ಹೆಚ್ಚು ಸಾವನ್ನು ಕಂಡಿರಬಹುದು. ಅವಳ ಕೊನೆಯ ಮಗು ನನ್ನ ತಮ್ಮ ಹುಟ್ಟಿ ಹದಿನೈದು ದಿನಕ್ಕೆ ಸತ್ತಾಗ ಅವಳು ಅಷ್ಟು ಹೊತ್ತು ಅತ್ತಿಲ್ಲ ದಿರಬಹುದು. ಅಂದು ನಾನು ಶಾಲೆಯಿಂದ ಬಂದಾಗ ಅಮ್ಮನ ಹೆರಿಗೆ ಮತ್ತು ಮಗುವಿನ ಆರೈಕೆಗೆ ಬಂದಿದ್ದ ಮೇಲಿನ ಮನೆಯ ಅತ್ತೆ ಮತ್ತಿತರರು ಚಿಂತಾಕ್ರಾಂತರಾಗಿದ್ದರು. ನಾನು ಬಂದೊದನೆ ಅತ್ತೆ ಹೇಳಿದರು. ಮಗು ತೀರಿ ಹೋಯಿತು. ನಿನ್ನ ಅಪ್ಪ ಅದನ್ನು ತೋಟದ ಆಚೆ ಮಣ್ಣು ಮಾಡಿದರು ಎಂದು. ನಾನು ಅತ್ತೆ. ಜೋರಾಗಿ ಅತ್ತೆ. ನನಗೆ ಗೊತ್ತಿಲ್ಲ ಏಕೆ ಅಳುವುದೆಂದು. ನನ್ನಲ್ಲಿ ಯಾವುದೇ ಭಾವನಾತ್ಮಕ ಸಂಬಂಧವನ್ನು ಬೆಳಿಸಿಕೊಳ್ಳಲಾಗದ ಹದಿನೈದು ದಿನಗಳ ಸಣ್ಣ ಮಗು ಸತ್ತಾಗ ಆರೇಳು ವರ್ಷದ ನಾನು ಅತ್ತದ್ದು ನನ್ನ ಹೃದಯದ ಒಳಗಿನಿಂದ ಇರಬಹುದು. ಸಾವು ಹುಟ್ಟಿದ ಹದಿನೈದು ದಿನಗಳೊಳಗೆ ಬಂದು ಬಿಟ್ಟಿತು. ಹುಟ್ಟು ಮತ್ತು ಸಾವನ್ನು ಆ ಜೀವ ಬಹಳ ಬೇಗ ಬೇಗನೆ ಅನುಭವಿಸಿತು. ಸಾವು ನಾವು ಕರೆದಾಗ ಬರುವುದಿಲ್ಲ. ಅದರ ದಾರಿ ಅದರ ಸಮಯ ಅದಕ್ಕೆ. ನನ್ನ ಮಾವ ತನ್ನ ಮಗ ತನ್ನಲ್ಲಿ ಹೇಳದೇ ಕೇಳದೇ ಹುಡುಗಿಯೊಬ್ಬಳನ್ನು ಮದುವೆಯಾದ ಎಂದು ವಿಷಕುಡಿದು ಬಿಟ್ಟಿದ್ದರು. ಅವರಿಗೆ ಮೊದಲೇ ಆರಾಮವಿಲ್ಲ. ನರಗಳ ದೌರ್ಬಲ್ಯ. ಜತೆಗೆ ಆಲೋಪತಿ ಔಷಧಿ ತಿಂದರೆ ಆಗುವುದಿಲ್ಲ. ಎರಡು ದಿನ ಮೂರ್ಛಿತರಾಗಿದ್ದ ಅವರು ಸಾಯಲಿಲ್ಲ. ಹಳೆಯ ಕಾಯಿಲೆ ಎಲ್ಲಾ ಮುಗಿಯಿತು ಎಂದು ಹೇಳುತಿದ್ದರು. ಒಂದೆರಡು ವರ್ಷದ ನಂತರವೂ ಅವರ ವಿಷ ಜಾರಿಲ್ಲ ಅಂತ ಕಾಣುತ್ತದೆ. ಸಾವು ಅವರ ಹತ್ತಿರ ಸುಳಿಯಲಿಲ್ಲ. ಸಾವಿಗೆ ಅದರದೇ ಆದ ದಾರಿ. ಅದರದೇ ಆದ ಸಮಯ. ನಮ್ಮ ಕೈಯಲ್ಲಿ ಅದಿಲ್ಲ.
ಒಲವಿನಿಂದ
ಬಾನಾಡಿ.

Thursday, April 26, 2007

ಜೀವನದ ಎತ್ತರಕ್ಕೆ ಹತ್ತುವ ಸಮಯ!

ಹತ್ತನೇ ತರಗತಿಯ ಮಕ್ಕಳಿಗೆಲ್ಲಾ ಇವತ್ತು ಬಹಳ ಮಹತ್ವದ ದಿನ. ಬಹಳಷ್ಟು ಮಕ್ಕಳ ಜೀವನದ ಪ್ರಶ್ನೆಗೆ ಉತ್ತರ ಸಿಗಬಹುದು. ಬಹಳಷ್ಟು ಜನ ಮಕ್ಕಳು ಇನ್ನೂ ಬದುಕಿನ ಕವಲು ದಾರಿಯಲ್ಲಿರಬಹುದು. ಇನ್ನಷ್ಟು ಮಕ್ಕಳು ಅದರಲ್ಲೂ ಹಳ್ಳಿಯಲ್ಲಿರುವ, ಅಶಿಕ್ಷಿತ ತಂದೆತಾಯಂದಿರ ಮಕ್ಕಳು ತಮ್ಮ ಬದುಕಿನ ಈ ಘಟ್ಟದ ಬಗ್ಗೆ ಅಷ್ಟೊಂದು ಮಹತ್ವವನ್ನು ಅನುಭವಿಸದೇ ಇರಬಹುದು.

ನನ್ನ ನೆನಪು ನನ್ನ ಹತ್ತನೇ ತರಗತಿಗೆ ಹೋಗುತ್ತಿದೆ. ನಮ್ಮ ಗಣಿತದ ವಿಶ್ವನಾಥ ಮೇಸ್ಟ್ರು ನಮಗೆ ಬಹಳ ಬುದ್ಧಿ ಹೇಳಿದ್ದರು. ಇದು ನಿಮ್ಮ ಜೀವನದ ಮಹತ್ವದ ಕ್ಷಣಗಳು. ಓದಿರಿ. ಇಲ್ಲಿ ಕಳಕೊಂಡ ಸಮಯ ಮತ್ತು ಅವಕಾಶಗಳನ್ನು ಜೀವನದಲ್ಲಿ ಎಲ್ಲೂ ಮತ್ತೆ ಪಡೆಯಲಾರಿರಿ. ಅವರ ಮಾತುಗಳನ್ನು ಕೆಲವಷ್ಟೇ ಮಂದಿ ಅರ್ಥೈಸಿದರು. ನಮ್ಮ ಸರಕಾರಿ ಹೈಸ್ಕೂಲ್ ನಲ್ವತ್ತು ಪ್ರತಿಶತ ಫಲಿತಾಂಶ ನೀಡಿತ್ತು. ನಾನು ಕೂಡ ಪಾಸಾಗಿದ್ದೆ.

ನನ್ನ ಓರಗೆಯವರಲ್ಲಿ ಹಾಗೂ ಹಿಂದಿನ ವರ್ಷಗಳಲ್ಲಿ ಪಾಸಾಗದವರನ್ನು ಕಂಡು ನಮ್ಮ ಹಳ್ಳಿಯ ಶ್ರಮಿಕರು ನೀನೂ ಕೂಡ ತಯಾರಾಗುತ್ತಿದ್ದಿ. ಮುಂದಿನ ವರ್ಷ ನಮ್ಮೊಂದಿಗೆ ತೋಟದಲ್ಲಿ ದುಡಿಯಲು. ನನ್ನ ಮೇಲೆ ಕೆಲವರಿಗೆ ಭರವಸೆ ಇತ್ತು ಅನ್ನಬೇಕು. ನಾನೂ ಗಂಭೀರವಾಗಿ ಓದಲ್ಲಿಲ್ಲ ಕಾಣುತ್ತದೆ. ಓದಲೆಂದು ಗುಡ್ಡದ ಮೇಲೆ ಹೋಗುತ್ತಿದ್ದೆ. ಓದುವ ದಿನಗಳ ರಜಾ ಸಮಯದಲ್ಲಿ ಬೆಳಗಿನಿಂದಲೇ ಗುಡ್ಡ ಏರುತ್ತಿದ್ದೆ. ಬಿಸಿಲು. ಗುಡ್ಡದ ಗೇರು ಮರಗಳು ಹೂಬಿಟ್ಟು ಇನ್ನೇನು ಗೇರು ಬೀಜಗಳೂ ಹುಟ್ಟುತಿವೆ. ಕಡಲ ಬದಿಯ ತಂಪು ಗಾಳಿ ಉರಿವ ಬಿಸಿಲನ್ನು ತಣ್ಣಾಗಾಗಿಸಿತ್ತು.

ಎಕಾಗ್ರತೆಗೆ ಬಹಳಷ್ಟು ಅಡ್ಡಿಗಳು. ಗುಡ್ಡದ ಬದಿಯಿಂದ ಓಡಾಡುವ ಬಸ್ಸು. ಗೋಳಿಕಟ್ಟೆಯ ಬೀಡಿ ಬ್ರಾಂಚ್ ಗೆ ಹೋಗುವ ಬೀಡಿ ಹುಡುಗಿ, ಹೆಂಗಸರು. ಬೇಸಿಗೆಯಲ್ಲಿ ನಡೆಯುವ ಮದುವೆ, ಇನ್ನಿತರ ಸಮಾರಂಭಗಳಲ್ಲಿ ಪಾಲ್ಗೊಳ್ಳಬೇಕೆಂಬ ಉತ್ಸುಕತೆಯ ಕನಸುಗಳು. ಜತೆಗೆ ಹೊಟ್ಟೆಯ ಚುರುಗುಟ್ಟುವಿಕೆ. ಬೆಳಿಗ್ಗೆ ತಿಂದ ಗೋಧಿ ದೋಸೆ ಕರಗುತ್ತಿದೆ. ಕೈ ಜೇಬಿಗೆ ಹೋಗುತ್ತದೆ. ಕಿಸೆಯಲ್ಲಿ ಸುಮಾರು ನಾಲ್ಕು ರೂಪಾಯಿ ಇರಬೇಕು. ಪೇಟೆಗೆ ಹೋಗಿ ಮೀನಿನ ಊಟ ಮಾಡಿ ಬರಬಹುದಲ್ಲವೇ? ಬಸ್ಸಿನಲ್ಲಿ ಹೋಗಲು ಐವತ್ತು ಪೈಸೆ, ಬರಲು ಐವತ್ತು ಪೈಸೆ. ಊಟಕ್ಕೆ ಎರಡೂವರೆ ರೂಪಾಯಿ. ಬಜೆಟು ಸರಿ ಇದೆ. ಸರಿ ಏನು? ಇನ್ನೂ ಐವತ್ತು ಪೈಸೆ ಮಿಗಿತೆ. ಆಗಲೇ ಅರ್ಥಶಾಸ್ತ್ರದ ಅರಿವು. ಸಿದ್ದಾಂತಗಳು ಗೊತ್ತಿಲ್ಲದಿದ್ದರೂ ಕೆಲಸ ಗೊತ್ತಲ್ಲ.

ಓದಲೆಂದು ಹೋದವನು ಪೇಟೆಗೆ ಹೋಗಿ ಸಮಯ ಹಾಳು ಮಾಡುವುದು ಅಕ್ಕನಿಗೆ ಗೊತ್ತಾಯಿತು. ಬೈಗಳು. ಅಮ್ಮನಿಗೆ ದೂರು. ಬೊಂಬಾಯಿ ಯಲ್ಲಿದ್ದ ಅಣ್ಣನಿಗೂ ಪತ್ರ ಬರೆದು ತಿಳಿಸಿದಳು. ಅಕ್ಕ ನನ್ನ ಮೇಲೆ ಇಟ್ಟ ಪ್ರೀತಿ ಮಮತೆ. ಈಗ ಅಕ್ಕ ತನ್ನ ಮಕ್ಕಳಿಗೆ ಹೇಳುತ್ತಿರಬಹುದು. ಅವರ ಬಗ್ಗೆ ದೂರು ನನಗೆ ಬರುತ್ತಿಲ್ಲ. ಅವರು ಓದುತ್ತಿರಬಹುದು.

ಹತ್ತನೇ ತರಗತಿಯ ಮಧ್ಯಾವಧಿ ಪರೀಕ್ಷೆಯ ಮಧ್ಯಾವಧಿಯಲ್ಲೇ ನನ್ನ ಬಾಬಾ ತೀರಿಹೋದರು. ಎರಡು ಪರೀಕ್ಷೆ ಬರೆಯಲೇ ಇಲ್ಲ. ಕ್ಲಾಸಿನಲ್ಲಿ ಉತ್ತರ ಪತ್ರಿಕೆ ಹಂಚುವಾಗ ನನ್ನ ಉತ್ತರ ಪತ್ರಿಕೆ ಇಲ್ಲ ದಿದ್ದುದಕ್ಕೆ ಅಧ್ಯಾಪಕರು "ನೀನು ಪರೀಕ್ಷೆಗೇ ಚಕ್ಕರ್ ಹೊಡೆದಿಯಾ?" ಎಂದು ಅಣಕಿಸಿದರು. ಉಮ್ಮಲಿಸುತ್ತಿದ್ದ ದುಃಖದಲ್ಲಿ ಅವರ ಬಹಳ ಹತ್ತಿರ ಹೋಗಿ "ನನ್ನ ತಂದೆ ತೀರಿ ಹೋಗಿದ್ದರು" ಎಂದಾಗ ಹೋಗು ಕುಳಿತುಕೋ ಎಂದು ಅಷ್ಟೇ ಅಸಡ್ಡೆಯಿಂದ ಹೇಳಿದ್ದರು.

ನನ್ನ ಸಹಪಾಠಿಗಳು ಸಾಕ್ಷಿಯಾಗಿ ಕ್ಲಾಸಿನ ನಂತರ ಹೇಳಿದರು: ಹೌದು. ಕೆಮೆಸ್ಟ್ರಿ ಪರೀಕ್ಷೆ ದಿವಸ ನಿಮ್ಮ ಮನೆಯ ಕಡೆಯಿಂದ ನಾವು ಹೊಗೆ ನೋಡಿದ್ದೇವೆ ಎಂದು. ಅದು ನನ್ನ ಅಪ್ಪನ ದೇಹವನ್ನು ಸುಟ್ಟ ಚಿತೆಯ ಹೊಗೆ. ಮಾವಿನ ಮರದ ಹಸಿ ಕೊಂಬೆಗಳು, ತೆಂಗಿನ ಕಾಯಿಯ ಸಿಪ್ಪೆ ಹೊಗೆ ಕಾರದೇ ಧಗ ಧಗ ಉರಿಯುತ್ತದೆಯೇನು?

ಏಪ್ರಿಲ್ ತಿಂಗಳೇ ಇರಬೇಕು. ಪರೀಕ್ಷೆ ಫಲಿತಾಂಶ ಬಂದಿದೆ. ಆರಾಮವಾಗಿ ಶಾಲೆಗೆ ಹೋಗಿ ಕಾಯುತ್ತಿದ್ದೇವೆ. ಕೆಲವರನ್ನು ಬಿಟ್ಟರೆ ಇನ್ಯಾರಿಗೂ ಆಸಕ್ತಿ ಇರಲ್ಲಿಲ್ಲ.


ಫಲಿತಾಂಶ ನೋಡಿ ಮನೆಗೆ ಬರುತ್ತೇನೆ. ಸಮಯ ಸುಮಾರು ಎರಡು ಕಳೆದಿರಬೇಕು. ಹೊರಗಡೆ ಬಿಸಿಲು. ಬಸ್ಸಿಳಿದು ಗುಡ್ಡವಿಳಿದು ಬರಬೇಕಾದರೆ ಮುಖ ಬಾಡಿತ್ತು. ಮನೆಯಲ್ಲೆಲ್ಲರೂ ನಾನು ಪಾಸಾಗಿಲ್ಲ ವೆಂದೇ ನನ್ನ ಮುಖ ನೋಡಿ ತಿಳಿದರು. ನಾನು ಪಾಸಾಗಿದ್ದೇನೆ ಎಂದು ನಾನು ಹೇಳಿದಾಗ ನನ್ನ ಅಮ್ಮ ಮಾತ್ರ ನಂಬಿದರು. ಬಿಸಿಲಿಗೆ ಮಗನ ಮುಖ ಬಾಡಿದೆ. ಫೇಲಾಗಿಲ್ಲ ಎಂದು ಎಲ್ಲರಿಗೂ ಭರವಸೆ ನೀಡಿದಳು.

ನಾನಿನ್ನೂ ಆ ಪಾಸ್ ಕುರಿತು ಆಚರಿಸಿಲ್ಲ. ಬದುಕೇ ಒಂದು ಆಚರಣೆ. ಹತ್ತನೆ ತರಗತಿ ನಿಜಕ್ಕೂ ಜೀವನದ ಎತ್ತರಕ್ಕೆ ಏರುವ ಸಮಯ.

ಪಾಸಾಗದ ಎಲ್ಲಾ ವಿದ್ಯಾರ್ಥಿಗಳ ಜತೆಗೆ ನಾನಿದ್ದೇನೆ. ಮುಂದಿನ ಸಲ ಖಂಡಿತಾ ಪಾಸಾಗುವಿರಿ.

ನೂರಕ್ಕೆ ತೊಂಬತೊಂಭತ್ತು ಶೇಕಡಾ ಸಿಕ್ಕಿಲ್ಲ ವೆಂದು ವ್ಯಥಿಸುವ ವಿದ್ಯಾರ್ಥಿಗಿಂತ ಕನಿಷ್ಟ ಶೇಕಡಾದಲ್ಲಿ ಪಾಸಾದ ವಿದ್ಯಾರ್ಥಿಯ ಖುಷಿ ಹೆಚ್ಚಿನದು.


ಒಲವಿನಿಂದ, ಪ್ರೀತಿಯಿಂದ
ಬಾನಂಚಿನಲ್ಲಿ ಹಾರುವ ಬಾನಾಡಿWednesday, April 25, 2007

ಅಪ್ಪಣೆ

ಒಳಗೆ ಬರಲು ಅಪ್ಪಣೆ
ಕೇಳಿದೆ ನಾನು ನಿನ್ನ
ಒಳಗೆ ಬರಲು

.........

ಸಾಯಲೆಂದೆ ಬಂದೆ ನಾನು
ನೀನು
ಆ ಸಾವಿನಲ್ಲೂ ಹುಟ್ಟಿಸಿದೆ
ನನ್ನನ್ನು
ನಿನ್ನನ್ನು
ಮತ್ತೊಂದು ಜೀವವನ್ನು

...................

(ನನ್ನ ಕವನದ ಕೆಲವು ಭಾಗಗಳು)
ಇಷ್ಟವಾದರೆ ಹೇಳಿ.

ಬದುಕಿನ ಕ್ಷಣಗಳು

ಅಂತರ್ಜಾಲದಲ್ಲಿ ಕೆಲ ಕ್ಷಣಗಳನ್ನು ನಾವು ಕಳೆಯುವುದಿಲ್ಲ. ಬದಲು ದಾಖಲಿಸುತ್ತೇವೆ. ನಮ್ಮ ಈ ಕ್ಷಣಿಕವಾದ ಮತ್ತು ಅಪೂರ್ವವಾದ ಸಂಗತಿಗಳು, ಸಂಗಾತಿಗಳು ನಮ್ಮೊಡನಿದ್ದಾಗ ನಮಗೇನು ಬೇಕು ಹೇಳಿ.
ಸಮುದ್ರದಲ್ಲಿ ತೆರೆಗಳಿಲ್ಲದಿದ್ದರೆ ಹೇಗೆ?
ಅದೆಷ್ಟು ನೀರಸ.
ಬದುಕಲ್ಲೂ ಹಾಗೇ
ತೆರೆಗಳಿರಬೇಕು.
ನೋಡೋಣ ಮುಂದಿನ ದಾರಿ ಹೇಗೆ ಕಾಣುತ್ತವೆ, ಕಾಡುತ್ತವೆ ಎಂದು.

ಒಲವಿನಿಂದ

ಬಾನಾಡಿ.