Monday, April 27, 2009

ಬುದ್ಧನ ನೆನಪುಗಳು


ತನ್ಮಯ ಬರುತ್ತಾನೆ ಎಂದು ನಮ್ಮ ಮನೆಮಂದಿಗೆಲ್ಲಾ ಸಂಭ್ರಮ. ತನ್ಮಯ ನಮ್ಮ ನೆರೆಮನೆಯ ಹುಡುಗ. ಆತನಿಗೆ ಎರಡು ವರ್ಷವಿದ್ದಾಗ ಆತನ ತಂದೆಗೆ ಗುಜರಾತಿಗೆ ಕೆಲಸದ ವರ್ಗವಾಗಿ ಈಗ ನಾಲ್ಕು ವರ್ಷವಾಯಿತು. ಮತ್ತೆ ಅವರು ನಮ್ಮ ಊರಿಗೆ ಬರುತ್ತಾರೆ. ಆತನಿಗೆ ಈಗ ಆರು ವರ್ಷ. ತನ್ಮಯನ ಅಪ್ಪ ನನಗೆ ಫೋನ್ ಮಾಡಿ ತನ್ಮಯನಿಗೆ ಶಾಲೆಯೊಂದನ್ನು ಹುಡುಕಿ ಇಡಲು ಹೇಳಿದ್ದಾನೆ. ನಮ್ಮ ಹತ್ತಿರದ ನಾಲ್ಕಾರು ಶಾಲೆಗಳ ದರ್ಶನ ಮಾಡಿ ಬಂದಿದ್ದೇನೆ. ಎಲ್ಲೂ ಪ್ರವೇಶವಿಲ್ಲ. ಒಂದೆರಡು ಶಾಲೆಯವರು ಅವರ ಎಪ್ಪತ್ತು ಕಿಲೋಮೀಟರ್ ದೂರದ ಶಾಖೆಯೊಂದರಲ್ಲಿ ಪ್ರವೇಶ ದೊರೆಯುವ ಸಾಧ್ಯತೆ ಇದೆ ಎಂದಿದ್ದಾರೆ. ತನ್ಮಯ ನಮಗೆಲ್ಲಾ ಅಚ್ಚುಮೆಚ್ಚು. ಹಾಗಾಗಿ ಅವನಿಗಾಗಿ ನಾವೇನೂ ಬೇಕಾದರೂ ಮಾಡಬಲ್ಲೆವು. ಶಾಲೆಯ ಪ್ರವೇಶಕ್ಕಾಗಿ ಬಹಳಷ್ಟು ಮಂದಿಯೊಡನೆ ಮಾತಾಡಿ ಇಟ್ಟಿದ್ದೇವೆ. ಆತ ಇಲ್ಲಿಗೆ ಬರುತ್ತಲೇ ಆತನ ಹುಟ್ಟಿದ ಹಬ್ಬ. ಹೌದು ನಮಗಿನ್ನೂ ನೆನಪಲ್ಲಿದೆ. ಆತನ ಅಮ್ಮ ಸ್ಮ್ರಿತಾ ಸಿಸೇರಿಯನ್ ಹೆರಿಗೆಯಾಗಲು ಇನ್ನೊಂದು ಮೂರು ದಿನಗಳಲ್ಲಿ ಯಾವಾಗ ಆಗಬಹುದೆಂದು ಕೇಳಿದಾಗ, ಒಳ್ಳೆಯದಿನವೆಂದು ಬುದ್ಧ ಪೂರ್ಣಿಮೆಯ ದಿನವನ್ನು ಆಯ್ಕೆ ಮಾಡಿದ್ದಳು. ಬರುವ ಬುದ್ಧ ಪೂರ್ಣಿಮೆಗೆ ತನ್ಮಯ ಬಂದೇ ಬರುತ್ತಾನೆ ನಮ್ಮ ನೆರೆಮನೆಗೆ. ಅವನ ಹುಟ್ಟಿದ ಹಬ್ಬ ನಮಗೂ ಗಮ್ಮತ್ತು.

ಏಪ್ರಿಲ್ ಆರಂಭದಲ್ಲಿ ನಾನು ಒರಿಸ್ಸಾದ ಕರಾವಳಿಯಲ್ಲಿದ್ದೆ. ಸುಡು ಬಿಸಿಲು ಆಗಷ್ಟೇ ಆರಂಭವಾಗಿತ್ತು. ಸಮುದ್ರ ಶಾಂತವಾಗಿತ್ತು. ನಿರಂತರ ರೌದ್ರ ರೂಪ ತಾಳುವ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಸದಾ ಕಾಡುತ್ತಿರುತ್ತದೆ. ನಾವು ಹಿಂತಿರುಗಿದ ಕೆಲವು ದಿನಗಳಲ್ಲಿ ಬಿಜ್ಲಿ ಎಂಬ ಚಂಡಮಾರುತ ಬಂದು ಅಪ್ಪಲಿಸದೆ ಹೋಯಿತು. ಒರಿಸ್ಸಾದ ಕರಾವಳಿ ಮತ್ತು ಸಣ್ಣ ಪಟ್ಟಣ, ಹಳ್ಳಿಗಳನ್ನು ಸುತ್ತುತ್ತಿರುವಂತೆ ಅದು ಕಳಿಂಗರಾಜ್ಯ ಎಂದು ನನಗೆ ನೆನಪಾಯಿತು.

ಕ್ರಿಸ್ತ ಪೂರ್ವದಿಂದಲೇ ಕಳಿಂಗರಾಜ್ಯ ಒಂದು ಸ್ವತಂತ್ರ ದೇಶವಾಗಿತ್ತು. ಬುಡಕಟ್ಟು ವಂಶಸ್ತರು ರಾಜ್ಯವಾಳುತ್ತಿದ್ದರು. ವೇದಕಾಲದಲ್ಲೂ ಈ ರಾಜ್ಯ ಇತರ ದೇಶಗಳಂತೆ ವೇದಕಾಲದ ರಾಜರಿಗಿಂತ ಹೊರಗಿತ್ತು. ಹದಿನೈದನೆ ಶತಮಾನದ ವರೆಗೆ ಇಲ್ಲಿ ಬ್ರಾಹ್ಮಣರ ಪ್ರಭಾವ ಕಡಿಮೆಯಿತ್ತು. ಆಡಳಿತ ಮತ್ತು ಯುದ್ಧದಲ್ಲಿ ಅಲ್ಲದೆ ಕಲೆ ಮತ್ತು ಸಂಸ್ಕೃತಿಯಲ್ಲಿಯೂ ಈ ದೇಶ ಉತ್ತುಂಗದಲ್ಲಿತ್ತು. ಕ್ರಿಸ್ತ ಪೂರ್ವ ೨೧೦ ರ ಸುಮಾರಿಗೆ ಚಂದ್ರಗುಪ್ತ ಮೌರ್ಯನ ಮೊಮ್ಮಗ ಸಾಮ್ರಾಟ ಅಶೋಕನು ಕಳಿಂಗ ರಾಜ್ಯವನ್ನು ಕಬಳಿಸಲು ದಂಡೆತ್ತಿಕೊಂಡು ಬಂದನು. ಪರಾಕ್ರಮಿಗಳಾದ ಕಳಿಂಗದ ಸೈನಿಕರು ಸಾಮ್ರಾಟ ಅಶೋಕನ ಸೈನ್ಯವನ್ನು ಕೆಚ್ಚೆದೆಯಿಂದ ಎದುರಿಸಿದರು. ಆ ಯುದ್ಧ ಆ ಕಾಲದ ಅತ್ಯಂತ ಕರಾಳವಾದ ಯುದ್ಧವಾಗಿತ್ತು. ರಕ್ತದೋಕುಳಿಯಾದ ರಣರಂಗ ಭೀಭತ್ಸವಾಗಿತ್ತು. ಜಗತ್ತನ್ನೇ ಯುದ್ಧದಿಂದ ಗೆಲ್ಲಲು ಹೊರಟ ಸಾಮ್ರಾಟ್ ಅಶೋಕನ ಎದೆಯನ್ನೆ ಕರಗಿಸಿತು. ಅಹಿಂಸಯನ್ನೇ ಧರ್ಮವೆಂದು ಭೋದಿಸಿದ ಬುದ್ಧನ ಅನುಯಾಯಿಯಾಗಿ ಸಾಮ್ರಾಟ ಅಶೋಕನು ಉಳಿದ ಬದುಕನ್ನು ಕಳೆದನು. ಭುವನೇಶ್ವರದ ಬಳಿಯಲ್ಲಿರುವ ದೌಳಿ ಎಂಬಲ್ಲಿ ಅಶೋಕನ ಶಿಲಾಶಾಸನವಿದೆ. ೧೮೩೭ ರಲ್ಲಿ ಲೆ. ಕಿಟ್ಟೋ ಕಂಡುಹಿಡಿದ ಈ ಶಾಸನದಲ್ಲಿ ಕಳಿಂಗ ಯುದ್ಧದ ನಂತರ ಅಶೋಕನು ಕಳಿಂಗರಾಜ್ಯದ ಜನತೆಗೆ ಅಹಿಂಸೆಯ ಮತ್ತು ಭರವಸೆಯ ಮಾತುಗಳನ್ನು ಬರೆಸಿದ್ದಾನೆ. ಮಹಾರಾಜನ ಪಾಕಶಾಲೆಯಲ್ಲಿ ಮಾಂಸದಡುಗೆಯ ನಿರ್ಬಂಧ, ವೈದ್ಯಕೀಯ ಶುಶ್ರೂಸೆಗಾಗಿ ವ್ಯವಸ್ಥೆ, ರಾಜ್ಯದ ಜನತೆಗೆ ನೈತಿಕ ಧರ್ಮದ ಭೋಧನೆ ಇತ್ಯಾದಿಗಳನ್ನು ಪಾಲಿ ಭಾಷೆಯಲ್ಲಿ ಬರೆಸಲಾದ ಈ ಶಿಲಾಶಾಸನದಲ್ಲಿ ಕಾಣಬಹುದು. ಈ ಶಿಲಾಶಾಸನಗ ಬಂಡೆಯ ಮೇಲ್ಗಡೆ ಆನೆಯ ಕೆತ್ತಲಾಗಿದೆ. ಬುದ್ಧನು ಗಜೋತ್ತಮನಾಗಿ ತನ್ನ ತಾಯಿಯ ಗರ್ಭ ಸೇರಿದುದನ್ನು ಈ ಶಿಲ್ಪವು ಸಾರುತ್ತದೆ.

ಅಶೋಕನು ತನ್ನ ಮಗ ಮಹಿಂದನ ಮೂಲಕ ಬುದ್ಧ ಧರ್ಮವನ್ನು ಶ್ರೀಲಂಕಾಗೆ ಕಳುಹಿಸಿದನು. ಇಂದು ಶ್ರೀಲಂಕಾದ 70ಶೇಕಡಾ ಜನಸಂಖ್ಯೆ ಬೌದ್ಧಧರ್ಮದ ಅನುಯಾಯಿಗಳು. ಲಂಕೆ ಮತ್ತೆ ಉರಿಯುತ್ತಿದೆ. ಅಲ್ಲಿನ ಜನಸಾಮಾನ್ಯರು ದಿಕ್ಕೆಟ್ಟಿದ್ದಾರೆ. ಬುದ್ಧ ಮತ್ತೆ ಮತ್ತೆ ನೆನಪಾಗುತ್ತಾನೆ.

ಒಲವಿನಿಂದ

ಬಾನಾಡಿ

©Both Photo by Author

Monday, March 30, 2009

ಕಡಲು, ಕಡಲ ತಡಿ ಮತ್ತು ತಲ್ಲಣಗಳ ಸಂಕಲನ

© pic by ani - my collection
ಉಷಾ ಕಟ್ಟೆಮನೆ ಮತ್ತು ಡಾ. ಪುರುಷೋತ್ತಮ ಬಿಳಿಮಲೆ ಅವರು ಸಂಪಾದಿಸಿ ಬೆಂಗಳೂರಿನ ಸೃಷ್ಟಿ ಪಬ್ಲಿಕೇಷನ್ಸ್ ಪ್ರಕಟಿಸಿರುವ ಕಡಲ ತಡಿಯ ತಲ್ಲಣ ಕರಾವಳಿ ಜಿಲ್ಲೆಯಲ್ಲಿ ನಡೆಯುತ್ತಿರುವ ಸಾಮಾಜಿಕ ತಲ್ಲಣಗಳಿಗೆ ಪ್ರತಿಕ್ರಿಯೆಯಾಗಿ ಹೊರಬಂದ ಪುಸ್ತಕ. ಇದರಲ್ಲಿ ೩೬ ಬರಹಗಾರರ ಲೇಖನಗಳಿವೆ.
ಆರಂಭ
ಮಂಗಳೂರಿನಲ್ಲಿ ೨೦೦೮ರ ಸಪ್ಟಂಬರದಲ್ಲಿ ನಡೆದ ಚರ್ಚ್ ದಾಳಿ ನಂತರ ಜನವರಿ ೨೦೦೯ರಲ್ಲಿ ನಡೆದ ಪಬ್ ದಾಳಿ ಪ್ರಕರಣಗಳು ಮಂಗಳೂರು ರಾಷ್ಟ್ರೀಯ ಸುದ್ದಿವ್ಯಾಪ್ತಿಯಲ್ಲಿ ಬರುವಂತೆ ಮಾಡಿವೆ. ಈ ಘಟನೆಗಳಿಂದ ಮಂಗಳೂರಿನ ಜನ ತಲ್ಲಣಗೊಡಿರುವುದು ನಿಜ. ಅದಕ್ಕೆ ಪ್ರತಿಕ್ರಿಯೆಯಾಗಿ ಮಾಧ್ಯಮಗಳಲ್ಲಿ ಇಂತಹ ಘಟನೆಗಳನ್ನು ವಿರೋಧಿಸುವ ಹಲವಾರು ಅಗ್ರಲೇಖನಗಳು ಮತ್ತು ಅಂಕಣಗಳು ಪ್ರಕಟಗೊಂಡಿವೆ. ಇಂತಹ ಬರಹಗಳು, ಅಂತರ್ಜಾಲದ ಬ್ಲಾಗ್‌ಗಳಲ್ಲಿ ಪ್ರಕಟವಾದ ಕೆಲವು ಲೇಖನಗಳು ಮತ್ತು ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಕುರಿತು ಈ ಹಿಂದೆ ಬಂದ ಲೇಖನಗಳನ್ನು ಈ ಪುಸ್ತಕದಲ್ಲಿ ಒಟ್ಟು ಮಾಡಲಾಗಿದೆ. ಈ ನಿಟ್ಟಿನಿಂದ ಈ ಪುಸ್ತಕವು ಮಂಗಳೂರಿನಲ್ಲಿ ನಡೆಯುತ್ತಿರುವ ಸಾಮಾಜಿಕ ಪರಿವರ್ತನೆಯ ಪ್ರಕ್ರಿಯೆಗೆ ಒಂದು ಪ್ರತಿಕ್ರಿಯಯಾಗಿ ಹೊರಬಂದಿದೆ. ಇಂತಹ ಒಂದು ಪುಸ್ತಕದ ಪರಿಕಲ್ಪನೆಯನ್ನು ಮಾಡಿ ಅದನ್ನು ಸಮಾಜಕ್ಕೆ ನೀಡಿರುವ ಡಾ. ಪುರುಷೋತ್ತಮ ಬಿಳಿಮಲೆಯವರು ಅಭಿನಂದನಾರ್ಹರು. ಅವರ ಸಾಮಾಜಿಕ ಕಳಕಳಿಯ ಪ್ರತಿಕ್ರಿಯೆ ಈ ಕಡಲ ತಡಿಯ ತಲ್ಲಣ.
ಈ ಪುಸ್ತಕದ ಬಹುತೇಕ ಬರಹಗಾರರ ವಯಸ್ಸು ನಲ್ವತ್ತು ದಾಟಿದೆ. ಅಂದರೆ ಅವರು ಅಷ್ಟು ವರ್ಷಗಳಿಂದ ಮಂಗಳೂರು ಸಂಸ್ಕೃತಿಯ ಭಾಗವಾಗಿ ಅದರ ಕುರಿತು ಸ್ಪಷ್ಟವಾಗಿ ಬರೆಯುವಂತಹ ಅನುಭವವನ್ನು ಪಡೆದಿದ್ದಾರೆ. ಹಾಗಾಗಿ ಇಲ್ಲಿರುವ ಬರಹಗಳೆಲ್ಲಾ ಪ್ರೌಢ ಬರಹಗಳಾಗಿವೆ. ಮತ್ತು ಇನ್ನೂ ಮೂವತ್ತು ದಾಟದ ಹೊಸ ತಲೆಮಾರಿನ ಮಂಗಳೂರು ಜನರಿಗೆ ಇಲ್ಲಿನ ಅನನ್ಯ ಸಂಸ್ಕೃತಿಯ ಪರಿಚಯ ನೀಡುವಲ್ಲಿ ಈ ಪುಸ್ತಕ ದಾರಿದೀಪವಾಗಬಹುದು.
ತಲ್ಲಣ
ಕನ್ನಡ ಪತ್ರಿಕೋದ್ಯಮದಲ್ಲಿ ಇಂದಿನ ದಿನ ಅತ್ಯಂತ ಗೌರವಕ್ಕೆ ಪಾತ್ರರಾಗಿರುವ ಅಂಕಣಕಾರ ದಿನೇಶ್ ಅಮೀನ್ ಮಟ್ಟು, ಮುಸಾಫರ್ ಅಸ್ಸಾದಿ, ಕೆ.ವಿ.ತಿರುಮಲೇಶ್, ಭಾಸ್ಕರ ಹೆಗ್ಡೆ, ಬಿ.ಎ. ವಿವೇಕ ರೈ, ಡಿ.ಎಸ್. ನಾಗಭೂಷಣ, ವಿ. ಲಕ್ಷ್ಮಿ ನಾರಾಯಣ, ಜಿ.ಎನ್. ಮೋಹನ್, ಶಶಿಧರ್ ಭಟ್ ಮೊದಲಾದವರ ಬರಹಗಳು ಮಂಗಳೂರಿನಲ್ಲಿ ಪಬ್ ದಾಳಿ ನಂತರ ಪತ್ರಿಕೆಗಳಲ್ಲಿ ಪ್ರಕಟವಾದವು. ಅವುಗಳನ್ನು ಕಡಲ ತಡಿಯ ತಲ್ಲಣದಲ್ಲಿ ಸಂಪಾದಿಸಲಾಗಿದೆ. ಮತ್ತೆ ಮತ್ತೆ ಓದಬೇಕಾಗಿರುವ ಈ ಬರಹಗಳು ಒಂದು ದಿನದ ಬಾಳುವೆ ಇರುವ ಪತ್ರಿಕೆಯಿಂದ ಪುಸ್ತಕರೂಪಕ್ಕೆ ಬಂದಿದೆ.
ಮಂಗಳೂರಿನ ತಲ್ಲಣವನ್ನು ಪ್ರತಿಬಿಂಬಿಸುವಂತೆ ಭಾಸ್ಕರ ಹೆಗ್ಡೆಯವರು ಬರೆಯುತ್ತಾರೆ ಮಂಗಳೂರಿನಲ್ಲಿ ಒಂದು ವ್ಯಾನ್‌ನಲ್ಲಿ ತುಂಬಿರುವ ಆಕಳುಗಳನ್ನು ಹಿಡಿದರೆ ಸಾಕು. ಹಿಂಸಾಚಾರ ಗ್ಯಾರಂಟಿ. ಈಗ ಲೇಟೆಸ್ಟು - ಬೇರೆ ಬೇರೆ ಸಮಾಜದ ಹುಡುಗ ಹುಡುಗಿ ಓಡಾಡಿದರೆ ಸಾಕು, ನಾಯಿ ನರಿಗೆ ಹೊಡೆದಂತೆ ಹೊಡೆಯುವುದು ಸಮಾಜದ ರೀತಿ ರಿವಾಜ್ ಆಗಿ ರೂಪುಗೊಂಡಿತು.
ಇಂತಹ ಸಮಾಜದಲ್ಲಿ ಭೀತಿ ಎಲ್ಲರನ್ನೂ ಕಾಡುತ್ತದೆ. ಗುಲಾಬಿ ಬಿಳಿಮಲೆಯವರು ತಮ್ಮ ಭೀತಿಯನ್ನು ವ್ಯಕ್ತಪಡಿಸುತ್ತಾ ತಿಳಿಸುತ್ತಾರೆ: ಮತೀಯ ಸಾಮರಸ್ಯದ ಅಪೂರ್ವ ಮಾದರಿಯಂತಿದ್ದ ಇಲ್ಲಿನ ಸಮಾಜ ಮತಧರ್ಮದ ನೆಲೆಯಲ್ಲಿ ಹೇಗೆ ಛಿದ್ರವಾಗುತ್ತಿದೆ, ತಾಲಿಬಾನಿ ಸಂಸ್ಕೃತಿ ಮೈಗೂಡಿಸಿಕೊಂಡಿರುವ ಮಂದಿಯ ಉಪಟಳದಿಂದಾಗಿ ಮಗ್ದ ಮನಸಿನ ಯುವಕ ಯುವತಿಯರು ಎಂತಹ ಭಯದ ಬದುಕನ್ನು ಬದುಕುತ್ತಿದ್ದಾರೆ!
ವೈಯಕ್ತಿಕ ಕಾರಣಗಳು ಕೋಮುದಳ್ಳುರಿಗೆ ಕಾರಣವಾಗುತ್ತವೆ. ಮೀನು ವ್ಯಾಪಾರದ ಜಗಳದೊಂದಿಗೆ ಕೇವಲ ವ್ಯಾಪಾರಿ ಹಿತಾಸಕ್ತಿಯ ಕಾರಣದಿಂದ ಪ್ರಾರಂಭವಾದ ಹಿಂದೂ ಮುಸ್ಲಿಮ್ ಸಂಘರ್ಷ ನಂತರದ ದಿನಗಳಲ್ಲಿ ಬೇರೆ ಬೇರೆ ರೂಪಗಳನ್ನು ಪಡೆಯಿತು ಎಂದು ಶಶಿಧರ್ ಭಟ್ ವಿವರಿಸುತ್ತಾರೆ.
ಸಾಂಸ್ಕೃತಿಕ ಫ್ಯಾಸಿಸಂ ಪ್ರತಿಪಾದಕರು ಸಮುದಾಯದಲ್ಲಿ ಆಳವಾದ ಕಂದಕ ನಿರ್ಮಾಣವನ್ನು ಬಯಸುತ್ತಾರೆ ಎಂದು ಹೇಳುವ ಮುಜಾಫರ್ ಅಸ್ಸದಿ ಅವರು ಅದಕ್ಕಾಗಿ ನಿರಂತರ ಕೋಮುವಾದ ಹಾಗೂ ಕೋಮು ಘರ್ಷಣೆಯನ್ನು ಬಯಸುವುದು ಸ್ವಾಭಾವಿಕವಾಗುತ್ತದೆ. ಸಮನ್ವಯ ಸಂಸ್ಕೃತಿ ಪ್ರತೀಕವಾಗಿದ್ದ ಬಪ್ಪಬ್ಯಾರಿ ಕಳೆದ ವರ್ಷ ಕೋಮುವಾದ ರಾಜಕಾರಣದ ಭಾಗವಾಗಿದ್ದನ್ನು ಇಲ್ಲಿ ದಾಖಲಿಸಬೇಕು. ಇವತ್ತು ಕರಾವಳಿಯಲ್ಲಿ ಕೋಮು ಘರ್ಷಣೆಯೆಂಬುದು ದಿನ ನಿತ್ಯದ ಘಟನೆ. ಕ್ಷುಲ್ಲಕ ಕಾರಣಗಳು ಕೋಮುವಾದದಲ್ಲಿ ಪರ್ಯವಶನಗೊಳ್ಳುವುದು ವಾಸ್ತವವಾಗುತ್ತಿದೆ.
ಪಬ್ ಸಂಸ್ಕೃತಿ ನಮ್ಮ ಸಂಸ್ಕೃತಿ ಅಲ್ಲ. ಅದು ವಿದೇಶಿ ಸಂಸ್ಕೃತಿ ಎನ್ನುವವರಿಗೆ ಹಿರಿಯ ಕವಿ, ಅಂಕಣಕಾರ ಕೆ. ವಿ. ತಿರುಮಲೇಶ್ ತಿರುಗೇಟು ಹಾಕುತ್ತಾರೆ. ಭಾರತದ ಪುರಾತನ ಶಿಲ್ಪಗಳನ್ನಾಗಲೀ ಚಿತ್ರಗಳನ್ನಾಗಲೀ ಗಮನಿಸಿದರೆ ರವಿಕೆಯನ್ನು ಧರಿಸಿದ್ದನ್ನು ಕಾಣಲಾರೆವು. ಯಾವ ಕಾವ್ಯದಲ್ಲೂ ರವಿಕೆಯ ಪ್ರಸ್ತಾಪ ಬರುವುದಿಲ್ಲ, ಮಾನ ಮುಚ್ಚುವ ವಡ್ಯಾಣಗಳು ಕಾಣಿಸುತ್ತವೆ. ಇಂದು ನಾವು ಉಪಯೋಗಿಸುವ ಯಾವುದೇ ಒಳ ಉಡುಪು ವಿದೇಶಿ ಮೂಲದ್ದು ಎನ್ನುವುದರಲ್ಲಿ ಸಂಶಯವಿಲ್ಲ. ನಮ್ಮ ಸಂಸ್ಕೃತಿ ಎಂದು ಬೊಬ್ಬಿರಿಯುವ ಹಿಂದೂ ಸನಾತನಿಗಳು ನಮ್ಮ ಸ್ತ್ರೀಯರು ಈ ವಿದೇಶಿ ಆಚರಣೆಗಳನ್ನೆಲ್ಲಾ ಕಿತ್ತೊಸೆದು ನಾರುಡುಗೆ ಧರಿಸಿ ಮನೆಯೊಳಗೆ ಕುಳಿತಿರಬೇಕೆಂದೇ? ಕೇಳುತ್ತಾರೆ ತಿರುಮಲೇಶ್.
ಮಂಗಳೂರಿನಲ್ಲಿ ನಡೆದ ಘಟನೆಗಳು ಸಾಮಾನ್ಯವಾದವು ಆದರೆ ಅದಕ್ಕೆ ಮಾಧ್ಯಮಗಳು ಬಣ್ಣ ಕೊಟ್ಟಿವೆ ಎಂಬ ವಿಚಾರದ ಹಿನ್ನಲೆಯಲ್ಲಿ ಜಿ.ಎನ್. ಮೋಹನ್ ಅವರ ಬರಹದ ಮಾತು ಪದೇ ಪದೇ ಹೊತ್ತಿ ಉರಿಯುವ ಕರಾವಳಿಯಲ್ಲಿ ಮಾಧ್ಯಮಗಳ ಕೈ ರಕ್ತ ಮೆತ್ತಿಕೊಂಡಿದೆ. ಜನರನ್ನು ತಿದ್ದುವ, ಬದಲಿಸುವ ದಾರಿಗೆ ಹಚ್ಚುವ ಯೋಚನೆಯೇ ಇಲ್ಲದ ಮಾಧ್ಯಮ ಎಂಬ ಉದ್ಯಮ ಈ ಬೆಂಕಿಯಲ್ಲಿ ಮೈ ಕಾಯಿಸಿಕೊಂಡದ್ದೂ ಅಲ್ಲದೆ ತಮ್ಮ ಲಾಭದ ಅಂಕೆಗಳನ್ನು ಕಾಯಿಸಿಕೊಂಡಿದೆ ಎನ್ನುವುದು ನಿಜವೆನಿಸುತ್ತದೆ.
ಜಿಲ್ಲೆಯ ಅರಾಜಕತೆಗೆ ಇಲ್ಲಿನ ರಾಜಕಾರಣಿಗಳ ಹೊಣೆಗೇಡಿತನವನ್ನು ಜವಾಬ್ದಾರಿಯಾಗಿಸುವ ಅಂಕಣಕಾರ ದಿನೇಶ್ ಅಮೀನ್ ಮಟ್ಟು ಅವರು ತಮ್ಮ ಲೇಖನದಲ್ಲಿ ಅಚ್ಚುಕಟ್ಟಾಗಿ ಅದನ್ನು ನಿರೂಪಿಸುತ್ತಾರೆ. ಅವರು ಹೇಳುತ್ತಾರೆ: ಅರಸು ಅವರ ಅವಸರದ ರಾಜಕೀಯ ಕ್ರಾಂತಿಯಿಂದಾಗಿ ಜಿಲ್ಲೆಯಲ್ಲಿ ವೀರಪ್ಪ ಮೊಯಿಲಿ ಮತ್ತು ಜನಾರ್ದನ ಪೂಜಾರಿ ಎಂಬ ಇಬ್ಬರು ನಾಯಕರು ಹುಟ್ಟಿಕೊಂಡರು. ಕೆಲಕಾಲದ ನಂತರ ಟಿ.ಎ.ಪೈ ಅವರನ್ನು ಸೋಲಿಸಿ ಆಸ್ಕರ್ ಫರ್ನಾಂಡಿಸ್ ಪ್ರವೇಶ ಮಾಡಿದರು. .. .. .. ಇಂದು ರಾಜಕೀಯ ವ್ಯವಸ್ಥೆಯೇ ಕುಸಿದು ಬಿದ್ದಂತಹ ಅರಾಜಕತೆಯೊಂದು ಅವಿಭಜಿತ ದಕ್ಷಿಣ ಕನ್ನಡದಲ್ಲಿ ನಿರ್ಮಿತವಾಗಿದ್ದರೆ ಅದಕ್ಕೆ ಈ ತ್ರಿಮೂರ್ತಿಗಳು ಕೂಡಾ ಹೊಣೆಗಾರರು. ಇವರಿಂದ ಹೊಸ ಸೃಷ್ಟಿ, ಪಾಲನೆ ಇಲ್ಲ.
ಹೀಗೆ ಕಡಲತಡಿಯ ತಲ್ಲಣಗಳ ಚಿತ್ರಗಳನ್ನು ನೀಡುವ ಪತ್ರಿಕೆಗಳಿಗಾಗಿ ಬರೆದ ಬರಹಗಳು ಇಲ್ಲಿವೆ.
ಕಡಲ ತಡಿ
ಜತೆಗೆ ಮಂಗಳೂರು ಸಂಸ್ಕೃತಿಯನ್ನು ವಿವರಿಸುವ ಅಪೂರ್ವವಾದ ಹಿರಿಯರ ಲೇಖನಗಳನ್ನು ಈ ಪುಸ್ತಕದಲ್ಲಿ ಕಾಣಬಹುದು. ಪ್ರೊ. ಮರಿಯಪ್ಪ ಭಟ್ಟರ ಬಹುಭಾಷೆಗಳ ಆಡುಂಬೊಲ, ಎಸ್.ಡಿ.ಶೆಟ್ಟಿ ಅವರ ಬಹುಧರ್ಮಗಳ ಬೀಡು, ಗಾಯತ್ರಿ ನಾವಡರ ತುಳುನಾಡಿನ ಶಕ್ತಿಶಾಲಿ ಮಹಿಳೆಯರು, ಸಾರಾ ಅಬೂಬಕರ್ ಅವರ ಮುಸ್ಲಿಂ ಸಂವೇದನೆ ಮತ್ತು ನಾನು, ಬಿ.ಎಂ.ಇಚ್ಲಂಗೋಡ್ ಅವರ ಬ್ಯಾರಿ ಸಮಾಜ ಮತ್ತು ಶಿಕ್ಷಣ, ಜಿ.ರಾಮಕೃಷ್ಣ ಅವರ ಮತಧರ್ಮ ಮತ್ತು ರಾಜಕೀಯ, ಫಕೀರ್ ಮಹಮ್ಮದ್ ಕಟ್ಪಾಡಿ ಅವರ ತುಳುನಾಡಿನ ದೀಪಾವಳಿ ಮೊದಲಾದ ಲೇಖನಗಳಿಂದ ಈ ಪುಸ್ತಕದ ಮೌಲ್ಯ ಹೆಚ್ಚಾಗಿದೆ.
ಮರಿಯಪ್ಪ ಭಟ್ಟರು ಇಲ್ಲಿ ಅನೇಕರಿಗೆ ಆರು ಭಾಷೆಗಳಲ್ಲಿ ಮಾತನಾಡುವ ಸಾಮಾರ್ಥ್ಯವಿರುತ್ತದೆ. ಕನ್ನಡ, ತುಳು, ಮಲಯಾಳ, ಕೊಂಕಣಿ, ಹಿಂದೂಸ್ಥಾನಿ ಮತ್ತು ಇಂಗ್ಲಿಷ್. ಹೀಗೆ ದಕ್ಷಿಣಕನ್ನಡ ಭಾಷೆಗಳ ಆಡುಂಬೊಲ ಆಗಿದೆ.
ಮಾನಿಗ, ಕಲ್ಲುರ್ಟಿ, ಮಾಯಾಂದಾಲ್, ನಾಗಸಿರಿ ಪಾಡ್ದನಗಳು ಸ್ತ್ರೀ ಕೇಂದ್ರಿತವಾದ ಮಾತೃರೂಪಿ ಸಂಸ್ಕೃತಿಯೊಂದರ ಹೆಣ್ಣುತನದ ಅಸ್ತಿತ್ವ ಹಾಗೂ ಪ್ರಾಧಾನ್ಯವನ್ನು ವಿವಿಧ ನೆಲೆಗಳಲ್ಲಿ ದಾಖಲಿಸಿದ ಚಿತ್ರಣವನ್ನು ಗಹನವಾದ ಲೇಖನದಲ್ಲಿ ಡಾ. ಗಾಯತ್ರಿ ನಾವಡ ಅವರು ವಿವರಿಸುತ್ತಾರೆ.
ಎಸ್. ಡಿ. ಶೆಟ್ಟಿ ಅವರ ಲೇಖನವು ತುಳುನಾಡಿನ ಶಿಷ್ಟ ಮತ್ತು ಜಾನಪದ ಸಂಸ್ಕೃತಿಗಳ ಮೌಲ್ಯಗಳನ್ನು ವಿವೇಚಿಸುತ್ತದೆ. ಪರಸ್ಪರ ಪ್ರೀತಿ, ವಿಶ್ವಾಸ, ಸಹಿಷ್ಣುತೆ ಮತ್ತು ಐಕ್ಯತೆಯ ತಳಹದಿಯಲ್ಲಿ ತುಳುನಾಡಿನ ಸಂಸ್ಕೃತಿ ಸುಂದರವಾಗಿ ರೂಪಿತವಾಗಿದೆ.
ಗೇಣಿದಾರರ ಏಣಿಯಾಟ ಲೇಖನದಲ್ಲಿ ಡಾ. ಎಚ್. ನಾಗವೇಣಿ ಅವರು ದಕ್ಷಿಣ ಕನ್ನಡದ ಸಾಮಾಜಿಕ ಪರಿವರ್ತನೆಯ ವಿವರವು ದೊರೆಯುತ್ತದೆ.
ಕಡಲು
ಎಸ್. ಆರ್. ವಿಜಯ ಶಂಕರ್ ಅವರು ಪಡ್ನೂರಿನ ಕಥೆಗಳು ಎಂಬ ಅಮೂಲ್ಯ ಬರಹವನ್ನು ಈ ಪುಸ್ತಕಕ್ಕೆ ನೀಡಿದ್ದಾರೆ. ಕತೆಗಾರ ಬೊಳುವಾರು ಮಹಮ್ಮದ್ ಕುಂಞ ಅವರ ಒಂದು ತುಂಡು ಗೋಡೆ ಎಂಬ ಅತ್ಯಪೂರ್ವ ಕತೆಯನ್ನು ಸಂಪಾದಕರು ಈ ಪುಸ್ತಕದಲ್ಲಿ ನೀಡಿದ್ದಾರೆ. ಊರಿನಿಂದ ಕರಸೇವೆಗೆ ಅಯೋಧ್ಯೆಗೆ ಹೋದ ಚಂದ್ರಣ್ಣ ತಂದ ಬಾಬರಿ ಮಸೀದಿಯ ಗೋಡೆಯ ಇಟ್ಟಿಗೆಯ ತುಂಡೊಂದು ಮತ್ತು ವಿಧವೆ ರೊಟ್ಟಿ ಪಾತುಮ್ಮಳು ಕಟ್ಟಲು ಯೋಚಿಸುವ ಮನೆಯೊಂದರ ಸುತ್ತ ಹೆಣೆದ ಕತೆಯಿದು. ಕತೆಯೋದಿದಾಗ ಮನಸ್ಸು ನಿರ್ಮಲವಾಗುವುದು.
ಅಡಿಗರ ಕವನಗಳ ತುಣುಕುಗಳು, ಕಯ್ಯಾರ ಕಿಂಞಣ್ಣ ರೈ, ಎಂ. ವ್ಯಾಸ, ಸೇಡಿಯಾಪು ಕೃಷ್ಣ ಭಟ್, ಬಿ.ಎಂ. ಬಶೀರ್, ಆರ್ ಕೆ ಮಣಿಪಾಲ, ಶ್ರೀನಿವಾಸ ಕಾರ್ಕಳ, ಸುದೇಶ್ ಮಹಾನ್ ಮೊದಲಾದ ಕವಿಗಳ ಕಡಲಿಗಿಂತಲೂ ವಿಸ್ತಾರವಾದ ಭಾವನೆಗಳನ್ನು ನೀಡುವ ಕವಿತೆಗಳು ಈ ಸಂಕಲನದಲ್ಲಿವೆ.

Sunday, March 29, 2009

ದೆಹಲಿಯಲ್ಲಿ ....ಕಡಲ ತಡಿಯ ತಲ್ಲಣ

ಸೃಷ್ಟಿ ಪಬ್ಲಿಕೇಶನ್ಸ್, ಬೆಂಗಳೂರು ಇವರು ಹೊರ ತಂದಿರುವ ಉಷಾ ಕಟ್ಟೆಮನೆ ಮತ್ತು ಡಾ. ಪುರುಷೋತ್ತಮ ಬಿಳಿಮಲೆ ಸಂಪಾದಿಸಿದ "ಕಡಲ ತಡಿಯ ತಲ್ಲಣ" ಕರಾವಳಿಯ ಬಹುಸಂಸ್ಕೃತಿಯ ಕುರಿತ ಲೇಖನಗಳ ಸಂಕಲನವನ್ನು ದಿ ವೀಕ್ ಪತ್ರಿಕೆಯ ದೆಹಲಿಯ ಸ್ಥಾನೀಯ ಸಂಪಾದಕರಾದ ಕೆ.ಎಸ್. ಸಚ್ಚಿದಾನಂದ ಮೂರ್ತಿ ಅವರು ಮಾರ್ಚ್ ೨೯ರಂದು ದೆಹಲಿಯಲ್ಲಿ ಬಿಡುಗಡೆಗೊಳಿಸಿದರು. (ಎಲ್ಲಾ ಚಿತ್ರಗಳನ್ನು ತೆಗೆದವರು ಬಸ್ತಿ ದಿನೇಶ್ ಶೆಣೈ)
ಬಿಳಿಮಲೆ ಅವರು ಪುಸ್ತಕದ ಕುರಿತು ಮಾತಾಡುತ್ತಿರುವುದು...

ಕವಿ, ನಾಟಕಕಾರ ಎಚ್. ಎಸ್. ಶಿವಪ್ರಕಾಶ್ ...

ಬಿಡುಗಡೆ ನಂತರ ಮಾತಾಡುತ್ತಿರುವ ಸಚ್ಚಿ...

ಐ.ರಾಮ ಮೋಹನ್ ರಾವ್

ಇಡ್ಲಿ, ವಡೆ, ಕೇಸರಿಬಾತ್, ಕಾಫಿ...

ಬಂದ ಮಂದಿ...

ಗುರು ಬಾಳಿಗ

ಭಾರತ ಸರಕಾರದ ಮಾಜಿ ಮುಖ್ಯ ವಾರ್ತಾ ಅಧಿಕಾರಿ ಹಾಗೂ ಎ.ಎನ್.ಐ.ಯ ಸಂಪಾದಕ ಶ್ರೀ ರಾಮಮೋಹನ್ ರಾವ್ ಅವರು ಅಧ್ಯಕ್ಷತೆ ವಹಿಸಿದ್ದರು. ಡಾ. ಪುರುಷೋತ್ತಮ ಬಿಳಿಮಲೆಯವರು ಪುಸ್ತಕದ ಕುರಿತು ಪ್ರಸ್ತಾವನೆ ಮಾಡಿದರು. ಕವಿ ನಾಟಕಕಾರ ಎಚ್.ಎಸ್. ಶಿವಪ್ರಕಾಶ್ ಮತ್ತು ಆರ್. ಭರತಾದ್ರಿ ಅವರೂ ಮಾತಾಡಿದರು. ಪುಸ್ತಕದ ಕುರಿತು ಉಷಾ ಭರತಾದ್ರಿ ಮತ್ತು ಬಾಲಕೃಷ್ಣ ನಾಯ್ಕ್ ಮಾತಾಡಿದರು. ದೆಹಲಿಯ ಲೋಧಿ ಎಸ್ಟೇಟ್ ನಲ್ಲಿರುವ ದೆಹಲಿ ಕನ್ನಡ ಶಾಲೆಯ ಸೆಮಿನಾರ್‍ ಹಾಲ್‍ನಲ್ಲಿ ನಡೆದ ಬಿಡುಗಡೆ ಸಮಾರಂಭದಲ್ಲಿ ಸುಮಾರು ಅರುವತ್ತು ಮಂದಿ ಸಾಹಿತ್ಯಾಸಕ್ತರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಗುರುಬಾಳಿಗ ನಡೆಸಿಕೊಟ್ಟರು. ಜತೆಗೆ ಜಲಜಾರಾಜು ಅವರು ಕಯ್ಯಾರ ಕಿಂಞಣ್ಣ ರೈ ಅವರ ಶ್ರೀಮುಖ ಎಂಬ ಕವನಕ್ಕೆ ರಾಗ ನೀಡಿ ಹಾಡಿದರು.

Thursday, March 26, 2009

ನಾಲ್ಕನೆ ಸ್ಥಂಭ

ಕಳೆದ ಮಹಾಚುನಾವಣೆಯ ಈ ಚುನಾವಣೆಯ ನಡುವೆ ಸಾರ್ವಜನಿಕ ಬದುಕಿನಲ್ಲಿ ಮತ್ತು ಕೆಲವರಿಗೆ ವೈಯಕ್ತಿಕ ಬದುಕಿನಲ್ಲೂ ಮಾಧ್ಯಮಗಳು ಅತೀವ ಪರಿಣಾಮ ಬೀರಿವೆ. ಕೆಲವೊಮ್ಮೆ ಮಾಧ್ಯಮಗಳು ಅತಿರೇಕದ ವರದಿಗಳಿಂದ ಒಂದು ಓದುಗವರ್ಗದ ಒಲವನ್ನು ಗಳಿಸಿದರೆ ಅಷ್ಟೇ ಪ್ರಾಮುಖ್ಯವಾಗಿ ಸಾರ್ವಜನಿಕವಾಗಿ ತನ್ನ ಪ್ರತಿಷ್ಟೆಯನ್ನು ಕಳೆದುಕೊಳ್ಳುವಂತಹ ಮಟ್ಟಿಗೆ ಇಳಿದಿತ್ತು. ಮಾಧ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೆಯ ಸ್ಥಂಭ ಎಂದು ಪರಿಗಣಿಸಿದ ಸಮಾಜವು ಅದು ಪ್ರಜಾಸತ್ತಾತ್ಮಕತೆ ಮತ್ತು ಮಾಹಿತಿ ಹಕ್ಕುಗಳ ಪರಿಮಿತಿಯಾಚೆ ವೈಯಕ್ತಿಕ ದಾಳಿ ನಡೆಸುವುದನ್ನು ಕಂಡು ಕೆಲವೊಮ್ಮೆ ದಂಗುಬಡಿದು ಭ್ರಮನಿರಶನಗೊಂಡದ್ದೂ ಇದೆ. ಗುಣಾತ್ಮಕ ಲಕ್ಷಣಗಳನ್ನು ಪರಿಗಣಿಸಿದಾಗ ಮಾಧ್ಯಮದ ಶಕ್ತಿಯಿಲ್ಲದೆ ಪ್ರಜಾಪ್ರಭುತ್ವ ರಾಜಕೀಯ ವ್ಯವಸ್ಥೆಯು ಜನರ ಆಶೋತ್ತರಗಳನ್ನು ಈಡೇರಿಸಲಾರದು ಎಂದನಿಸುತ್ತದೆ. ಆದರೆ ಸಮಾಜವನ್ನು ಅಧೋಗತಿಗೆ ತೆಗೆದುಕೊಂಡು ಹೋಗುವ ಮಾಧ್ಯಮದ ದುಷ್ಪರಿಣಾಮಗಳು ಬಹಳಷ್ಟು ಮಾರಕಪ್ರಾಯವಾಗಿವೆ.
ಚುನಾವಣೆ ಘೋಷಣೆಗೆ ನಮ್ಮ ವಾಣಿಜ್ಯೀಕೃತ ಮಾಧ್ಯಮಗಳು ಹಾತೊರೆದು ಕಾದಿದ್ದವು. ಚುನಾವಣೆಯ ಕೆಲ ತಿಂಗಳ ಮೊದಲಿಂದ ಆರಂಭವಾದ ಸರಕಾರಿ ಜಾಹೀರಾತುಗಳು ಆರ್ಥಿಕ ವ್ಯವಸ್ಥೆ ಕುಸಿದು ಮಾಧ್ಯಮ ಸಂಸ್ಥೆಗಳು ಅನುಭವಿಸುತ್ತಿದ್ದ ನಷ್ಟವನ್ನು ನೀಗಲು ಸಹಾಯವಾಯಿತು. ವೃತ್ತಪತ್ರಿಕೆಗಳಲ್ಲಿ ಇಡೀಪುಟಗಳ ಜಾಹೀರಾತುಗಳು ತುಂಬಿ ತುಳುಕಾಡಿದವು. ಇಲೆಕ್ಟ್ರಾನಿಕ್ ಮಾಧ್ಯಮಗಳು ಮುಖ್ಯವಾಗಿ ರೇಡಿಯೋ, ಟಿವಿ ಮತ್ತು ವೆಬ್‌ಸೈಟ್‌ಗಳು ಕೂಡ ಈ ಸಲದ ಚುನಾವಣೆಯಲ್ಲಿ ಬಹಳಷ್ಟು ಹಣಮಾಡಿದವು. ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಲ್.ಕೆ.ಅಡ್ವಾಣಿ ಅವರ ವೆಬ್‌ಸೈಟ್‌ನ ಜಾಹಿರಾತು ಲಿಂಕ್‌ಗಳು ಎರಡು ಸಾವಿರಕ್ಕೂ ಹೆಚ್ಚು ವೆಬ್‌ಸೈಟ್‌ಗಳಲ್ಲಿ ಜಾಹಿರಾತು ನೀಡಿದೆ.
ಚುನಾವಣೆ ಆರಂಭವಾದಂತೆ ಮಾಧ್ಯಮಗಳಲ್ಲಿ ವರದಿಗಾರಿಕೆಯ ವಿಶ್ಲೇಷಣೆ ನಡೆಸಿದರೆ ಈಗಾಗಲೇ ಸ್ಥಾಪಿತವಾದಂತೆ ಬೆರಳೆಣಿಕೆಯ ಕೆಲವೊಂದು ಪತ್ರಿಕೆಗಳನ್ನು ಬಿಟ್ಟರೆ ಉಳಿದವೆಲ್ಲಾ ತಾವು ಬೆಂಬಲಿಸುವ ರಾಜಕೀಯ ಧೋರಣೆಗಳನ್ನು ಓದುಗರ ಮೇಲೆ ಹೇರುವ ಕೆಲಸವನ್ನು ನಾಚಿಕೆಯಿಲ್ಲದೆ ಮಾಡುತ್ತಿವೆ. ಸಮಾಜದ ನಾಲ್ಕನೆ ಸ್ಥಂಭದ ಜವಾಬ್ದಾರಿಯನ್ನು ಹೊತ್ತ ಮಾಧ್ಯಮಗಳು ಏನು ಮಾಡುತ್ತಿವೆ ಎಂದು ಆತ್ಮವಿಮರ್ಶೆಮಾಡಿಕೊಳ್ಳುವ ಅವಶ್ಯಕತೆಯನ್ನು ಅವರಾಗಿ ಮಾಡುವುದಿಲ್ಲ. ಇತರ ವೇದಿಕೆಯಲ್ಲಿ ಅಂತಹ ಕೆಲಸ ನಡೆದರೆ ಅದು ಸುದ್ದಿಯಾಗುವುದಿಲ್ಲ. ಇದೊಂದು ವ್ಯತಿರಿಕ್ತವಾದ ಆಭಾಸ.
ಇದರ ನಡುವೆ ನನ್ನ ಪರಿವೀಕ್ಷಣೆಯಲ್ಲಿ ಕಂಡ ಇನ್ನೂ ಕುತೂಹಲಕಾರಿ ಸಂಗತಿಯೆಂದರೆ ನಾಲ್ಕನೆ ಸ್ಥಂಭ ಎನ್ನುವ ಮಾಧ್ಯಮಕ್ಕಿಂತ ಹೆಚ್ಚು ಪರಿಣಾಮಕಾರಿ ಹಾಗೂ ಶಕ್ತಿಶಾಲಿಯಾದುದು ಭಾರತದ ರಾಜಕಾರಣ. ನಾವು ನಮ್ಮ ರಾಜಕಾರಣಿಗಳ ಬಗ್ಗೆ ಎಷ್ಟೇ ನಕರಾತ್ಮಕ ಭಾವನೆಯನ್ನೇ ಇಟ್ಟುಕೊಂಡರೂ ಕಟ್ಟಕಡೆಗೂ ಜಯಿಸುವುದು ಅವರೇ. ಎನ್‌ಡಿಎ, ಯುಪಿಎ, ಎಡ ಮತ್ತು ತೃತಿಯ ರಂಗಗಳೆಂದು ಮೂರ್ನಾಲ್ಕು ಮುಖ್ಯವಾಹಿನಿಯಾಗಿದ್ದ ರಾಜಕೀಯ ಧ್ರುವೀಕರಣ ಚುನಾವಣೆಯ ಕಾವು ಹೆಚ್ಚುತ್ತಿದ್ದಂತೆ ಬಿಸಿಲ ಬೇಗೆಗೆ ಕರಗುವ ಹಿಮದಂತೆ ರಾಜಕೀಯ ಪಕ್ಷಗಳ ಒಕ್ಕೂಟಗಳು ಸಡಿಲಗೊಳ್ಳುತ್ತಿವೆ. ಒರಿಸ್ಸಾದಲ್ಲಿ ಬಿಜೆಡಿಯು ಬಿಜೆಪಿಯಿಂದ ದೂರ ಹೋದರೆ ಯುಪಿಎಯ ಅಂಗ ಪಕ್ಷಗಳು ನಾವು ನಮ್ಮದೇ ದಾರಿ ನೋಡುತ್ತೇವೆ ಎಂಬಂತೆ ವರ್ತಿಸುತ್ತಿವೆ. ಇಂದು ಇಡೀ ಭಾರತದ ಮಹಾಚುನಾವಣೆಯಲ್ಲಿ ಪ್ರಧಾನಿಯಾಗುವ ಆಕಾಂಕ್ಷಿಗಳು ಒಬ್ಬರಲ್ಲ, ಇಬ್ಬರಲ್ಲ. ಸಂಭವನೀಯ ಪ್ರಧಾನಿಗಳು ಯಾವುದೇ ಒಂದು ಕೂಟದಲ್ಲಿ ಇರಲು ಒಪ್ಪುವುದಿಲ್ಲ. ಅಡ್ವಾಣಿ, ಮನಮೋಹನ್ ಸಿಂಗ್, ಮಾಯಾವತಿ, ಮುಲಾಯಂ ಸಿಂಗ್, ಶರದ್ ಪವಾರ್, ಲಾಲು ಪ್ರಸಾದ್, ರಾಮ ವಿಲಾಸ್ ಪಾಸ್ವಾನ್, ದೇವೇಗೌಡ ಮೊದಲಾದವರು ಚುನಾವಣೆಯ ಪರಿಣಾಮದಲ್ಲಿ ಕಿಂಚಿತ್ ಏರುಪೇರುಗಳಾದರೂ ತಾವು ಪ್ರಧಾನಿಯಾಗಬಲ್ಲೆ ಎಂಬ ಮಹತ್ವಾಕಾಂಕ್ಷೆಯನ್ನು ಇಟ್ಟುಕೊಂಡು ತಮ್ಮ ತಮ್ಮ ದಾಳಗಳನ್ನು ಪಣಕ್ಕಿಡುತ್ತಿದ್ದಾರೆ.
ಈ ಬೆಳವಣಿಗೆಯಿಂದ ಮಾಧ್ಯಮಗಳಲ್ಲಿ ವಿಶ್ಲೇಷಣೆ ಮಾಡುತ್ತಿರುವ ಪರಿಣಿತರಿಗೆ ದಿಕ್ಕು ಕೆಟ್ಟಂತಾಗಿದೆ. ಮಹಾನ್ ಸಂಪಾದಕರುಗಳು ರಾಜಕೀಯ ಬೆಳವಣಿಗೆಗಳಿಂದ ಗಾಬರಿಯಾದಂತಿದೆ. ನಿಷ್ಟುರವಾದ ಸಂಪಾದಕೀಯಗಳು, ಓದುಗರಿಗೆ ಸ್ಪಷ್ಟದಿಶೆಯನ್ನು ನೀಡುವ ಅಗ್ರಲೇಖನಗಳು, ಪ್ರಜಾಪ್ರಭುತ್ವದ ಬೆಳವಣಿಗೆಗೆ ಪೂರಕವಾದ ರಾಜಕೀಯ ಅಭಿಪ್ರಾಯಗಳನ್ನು ಮೂಡಿಸುವ ಅಂಕಣಬರಹಗಳು ವೃತ್ತ ಪತ್ರಿಕೆಗಳ ಪುಟಗಳಿಂದ ಬಹಳ ದೂರ ಹೋಗಿವೆ. ಮಾಧ್ಯಮ ಉದ್ಯಮವಾಗಿ ಮತ್ತು ತಾಂತ್ರಿಕವಾಗಿ ಅತ್ಯಂತ ಉನ್ನತ ಸ್ಥಾನದಲ್ಲಿದೆ. ಆದರೆ ವೃತ್ತಿನಿಷ್ಟತೆ ಮತ್ತು ಪ್ರಜಾಪ್ರಭುತ್ವದ ನಾಲ್ಕನೆ ಸ್ಥಂಭವಾಗಿ ಇರಬೇಕಾದ ಮಾಧ್ಯಮ ಕುಸಿಯುತ್ತಿದೆ. ಸಂವಹನದ ವಿದ್ಯಾರ್ಥಿಯಾಗಿ ಒಳಗೊಳಗೆ ನಾನು ನೊಂದುಕೊಳ್ಳುತ್ತಿದ್ದೇನೆ. ಜಯ್ ಹೋ...

Wednesday, March 18, 2009

ಜಾಗತೀಕ ನಿದ್ರಾ ದಿನ.




ಎಲ್ಲದಕ್ಕೂ ಒಂದು ದಿನ ಇದ್ದಂತೆ ನಿದ್ದೆಗೂ ಒಂದು ದಿನ ಇದೆ. ಜಾಗತೀಕ ನಿದ್ರಾ ದಿನ. ಮಾರ್ಚ್ 20ರಂದು. ಅದು ಒಂದು ಮಟ್ಟಿಗೆ ನಿದ್ರಾ ರಾತ್ರಿ ಆಗಬೇಕಿದೆ. ಯಾಕೆಂದರೆ ಹಗಲಲ್ಲಿ ನಿದ್ದೆ ಬರುವುದಿಲ್ಲವಲ್ಲ. ಕೆಲವರಿಗೆ ಅದು ಮಾರ್ಚ್ 20 ಮತ್ತು 21 ಎರಡೂ ದಿನವಿರುತ್ತದೆ. ಕಾರಣ ಜಾಗತೀಕ ನಿದ್ರಾ ದಿನದ ದಿವಸ ಮಲಗಿದವರು ಮರುದಿನವೂ ಏಳದೆ ಎರಡೂ ದಿನ ನಿದ್ರಾದಿನವನ್ನು ಆಚರಿಸುತ್ತಾರೆ.
ಪ್ರತಿ ದಿನಾಚರಣೆಗೂ ಒಂದು ಥೀಮ್ ಇದ್ದಂತೆ ಈ ವರ್ಷದ ನಿದ್ದೆಯ ದಿನಾಚರಣೆಗೆ ಜಾಗ್ರತೆಯಾಗಿ ಗಾಡಿ ಚಲಾಯಿಸಿ ಜೋಪಾನವಾಗಿ ಮನೆಗೆ ಬಾ ಎಂದು ಥೀಮ್. ಮಂಗಳೂರಿನ ನನ್ನ ಸ್ನೇಹಿತರಾಗಿ ಉಳಿದ ಕೆಲವರು ಈಗಾಗಲೇ ಈ ನಿದ್ರಾದಿನವನ್ನು ಕಳೆದೆರಡು ತಿಂಗಳಿಂದ ಆಚರಿಸುತ್ತಿದ್ದಾರಂತೆ. ಕಾರಣ ಅಲ್ಲಿನ ಪರಿಸ್ಥಿತಿಯಲ್ಲಿ ಅವರಿಗೆ ಬೇರೆ ಉಪಾಯವಿಲ್ಲ. ಮನೆಯವರು ಮನೆಗೆ ಬೇಗ ಬಾ ಎನ್ನುವುದಕ್ಕಿಂತ ಹೆಚ್ಚು, ಊರಿನವರು ಮನೆಗೆ ಬೇಗ ಹೋಗು ಎಂದು ಹೇಳುತ್ತಿದ್ದಾರೆ ಅದಕ್ಕೆ.
ನಾನೂ ಈ ಬರಹವನ್ನು ಆದಷ್ಟು ಬೇಗ ಮುಗಿಸಿ ಜಾಗತೀಕ ನಿದ್ರಾ ದಿನವನ್ನು ಆಚರಿಸಲು ಹೋಗುತ್ತೇನೆ. ಮುಂದಿನ ಬರಹದವರೆಗೆ ನಾನೂ ಬ್ಲಾಗ್ ಲೋಕದವರ ಮಟ್ಟಿಗೆ ನಿದ್ರಾದಿನವನ್ನೇ ಆಚರಿಸುತ್ತಿದ್ದೇನೆ. ಇನ್ನೂ ಬ್ಲಾಗ್ ತೆರೆದು ಒಂದೆರಡು ಬರಹ ಹಾಕಿ ವರ್ಷವಿಡೀ ನಿದ್ರಿಸಿರುವ ಬ್ಲಾಗಿಗರು ಈ ಜಾಗತೀಕ ನಿದ್ರಾ ದಿನದ ಮೇಲಾದರೂ ಏಳಲಿ ಎಂದು ಆಶಿಸುವೆ.
ಒಲವಿನಿಂದ
ಬಾನಾಡಿ

Monday, March 9, 2009

ಕೊಟ್ಟರೆ ಬರುವವರು

ಒಂದೊಮ್ಮೆ ಅಹಮದಾಬಾದ್‌ನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಪದವೀಧರರು ಕ್ಯಾಂಪಸ್ ನೇಮಕಾತಿಗಳಲ್ಲಿ ವರ್ಷಕ್ಕೆ ಒಂದೂವರೆ ಕೋಟಿ ರೂಪಾಯಿಗಳಷ್ಟು ಸಂಬಳದ ಕೆಲಸಗಳನ್ನು ಗಿಟ್ಟಿಸುತ್ತಿದ್ದರು. ಬಹುದೇಶಿಯ ಹಣಕಾಸು ಸಂಸ್ಥೆಗಳು, ಉದ್ಯಮಗಳು ಈ ಪದವೀಧರರನ್ನು ಪಡೆಯಲು ಎಷ್ಟು ಬೇಕಾದರೂ ಕೊಡಲು ತಯಾರಾಗಿದ್ದರು. ಅಹಮದಬಾದ್‌ನ ಈ ಸಂಸ್ಥೆ ಭಾರತದ ಶೈಕ್ಷಣಿಕ ಕ್ಷೇತ್ರದ ಗರಿಮೆಯಾಗಿದೆ. ಆದರೆ ಇಂದು ಆರ್ಥಿಕ ಮುಗ್ಗಟ್ಟಿನ ಕಾರಣ ಕೆಲವೊಂದು ಸಂಸ್ಥೆಗಳು ಇಂತಹ ಪದವೀಧರ ಅಧಿಕಾರಿಗಳನ್ನು ಹೊರಗೆ ಹಾಕಿರಲೂ ಬಹುದು. ಹಾಗಾಗಿ ಕ್ಯಾಂಪಸ್ ನೇಮಕಾತಿಗೆ ಬಂದು ವರ್ಷಕ್ಕೆ ಕೋಟಿಗಟ್ಟಲೇ ಸುರಿದು ಅತ್ಯಮೂಲ್ಯವಾದ ಮಾನವ ಸಂಪನ್ಮೂಲಗಳನ್ನು ತಮ್ಮ ಕಂಪನಿಗಳಿಗೆ ಸೇರಿಸುವ ಕಾರ್ಯಕ್ರಮವನ್ನು ರದ್ದುಗೊಳಿಸಿವೆ. ಹಣಕಾಸು ಸಂಸ್ಥೆಗಳು, ಮಾರ್ಕೆಟಿಂಗ್ ಸಂಸ್ಥೆಗಳು ಬಂದು ಪದವೀಧರರನ್ನು ಕೊಂಡರೂ ಸರಾಸರಿ ಸಂಬಳ ಮಾತ್ರ ಸುಮಾರು ಹನ್ನೆರಡು ಲಕ್ಷಗಳಷ್ಟೇ. ಅತ್ಯಂತ ಅಧಿಕ ಸಂಖ್ಯೆ ಒಂದು ಕೋಟಿಯನ್ನೂ ಮೀರಿದೆ.
ಇದುವರೆಗೆ ಭಾರತದ ಸಾರ್ವಜನಿಕ ಸಂಸ್ಥೆಗಳು ಇಲ್ಲಿನ ಪದವೀಧರರಿಗೆ ತಮ್ಮ ಆಯ್ಕೆಯಲ್ಲಿ ಅತ್ಯಂತ ಕೆಳಗಿನಲ್ಲಿರುತ್ತಿತ್ತು. ಬಹುರಾಷ್ಟ್ರೀಯ ಮತ್ತು ಖಾಸಗಿ ಕಂಪನಿಗಳೇ ಇಲ್ಲಿನ ಪದವೀಧರರನ್ನು ಕೊಂಡು ಮುಗಿಸುತ್ತಿದ್ದುದರಿಂದ ಸಾರ್ವಜನಿಕ ಕ್ಷೇತ್ರದ ಕಂಪೆನಿಗಳಿಗೆ ಯಾವಾಗಲೂ ನಿರಾಶೆಯಾಗುತ್ತಿತ್ತು. ಸರಕಾರದ ನೀತಿಗನುಗುಣವಾಗಿ ಸಾರ್ವಜನಿಕ ಸಂಸ್ಥೆಗಳು ಸಂಬಳ ನೀಡಬೇಕಾಗಿರುವುದರಿಂದ ಅದು ಅಹಮದಾಬಾದ್‌ನ ಈ ಪ್ರತಿಷ್ಟಿತ ಸಂಸ್ಥೆಯ ಪದವೀಧರರಿಗೆ ಆಕರ್ಷಕ ವಾಗುತ್ತಿರಲಿಲ್ಲ.
ಈ ವರ್ಷದ ಕ್ಯಾಂಪಸ್ ನೇಮಕಾತಿಯಲ್ಲಿ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳಾದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಬ್ಯಾಂಕ್ ಆಫ್ ಬರೋಡಾ ಕ್ರಮವಾಗಿ ೧೮ ಮತ್ತು ಆರು ಪದವೀಧರನ್ನು ಸೆಳೆದಿವೆ. ಅದೇ ರೀತಿ ಭಾರತದ ಅತೀ ದೊಡ್ಡ ವಾಣಿಜ್ಯ ಸಂಸ್ಥೆಯಾಗಿರುವ ಸಾರ್ವಜನಿಕ ಕ್ಷೇತ್ರದ ಇಂಡಿಯನ್ ಆಯಲ್ ಕಾರ್ಪೋರೇಶನ್ ಐದು ಪದವೀಧರರನ್ನು ಪಡೆಯುವಲ್ಲಿ ಯಶಸ್ವೀಯಾಗಿದೆ. ಸಾರ್ವಜನಿಕ ಕ್ಷೇತ್ರದ ಈ ಕಂಪನಿಗಳು ಹೊಸ ಪದವೀಧರರಿಗೆ ಅವರು ಯಾವುದೇ ಶೈಕ್ಷಣಿಕ ಸಂಸ್ಥೆಯಿಂದ ಬಂದರೂ ಏಕರೀತಿಯ ಸಂಬಳ ಸೌಲಭ್ಯಗಳನ್ನು ನೀಡಬೇಕಾಗುತ್ತದೆ. ಮುಂಚೂಣಿಯಲ್ಲಿರುವ ಸಂಸ್ಥೆಗಳಲ್ಲಿ ವೃತ್ತಿ ನಿಪುಣತೆ ಮತ್ತು ಸಾಂಸ್ಥಿಕ ಸಂಸ್ಕೃತಿಗಳು ಉತ್ತಮವಾಗಿದ್ದರೂ ಕೈಗೆ ಸಿಗುವ ಸಂಬಳ ಸೀಮಿತವಾಗಿರುತ್ತದೆ. ಆದರೆ ಕೆಲವು ಖಾಸಗಿ ಕಂಪನಿಗಳಷ್ಟೂ ನಿಕೃಷ್ಟವಾಗಿರುವುದಿಲ್ಲ ಎಂಬುದಕ್ಕೆ ನಿದರ್ಶನವಾಗಿ ಅಹಮದಾಬಾದ್‌ನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಸುಮಾರು ಹತ್ತು ಪ್ರತಿಶತಕ್ಕಿಂತಲೂ ಹೆಚ್ಚು ಪದವೀಧರರು ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳನ್ನು ಆಯ್ದು ಕೊಂಡಿದ್ದಾರೆ.
ಹತ್ತು ವರ್ಷಕ್ಕೊಮ್ಮೆ ಉಂಟಾಗುವ ಆರ್ಥಿಕ ಸಂಕಷ್ಟದ ಚಕ್ರದಡಿ ಉರುಳಿದ ಅನೇಕ ಆರ್ಥಿಕ ನಿರ್ಧಾರಗಳು ಆರ್ಥಿಕ ಪರಿಸ್ಥಿತಿ ಉನ್ನತಮಟ್ಟದಲ್ಲಿರುವಾಗ ಮರೆತು ಬಿಡುತ್ತವೆ. ಹೀಗೆಯೇ, ಈ ಎಲ್ಲ ಪದವೀಧರರು ಮುಂದೆ ಆರ್ಥಿಕ ಪರಿಸ್ಥಿತಿ ಉತ್ತಮವಾಗುವಾಗ ಬೇರೆ ಹೆಚ್ಚು ಸಂಬಳ ಸಿಗುವ ಕಂಪನಿಗಳನ್ನು ಸೇರಿ ಬಿಡಲಾರರು ಎಂಬ ನಿಶ್ಚಿತತೆಯೇನೂ ಇಲ್ಲ.

Friday, March 6, 2009

ಒಂದು ಜತೆ ಚಪ್ಪಲಿ, ಗಡಿಯಾರ




ಮಹಾತ್ಮಾ ಗಾಂಧಿ ಭಾರತೀಯರಿಗೆ ಅಮೂಲ್ಯ. ಅವರ ವೃತ್ತಾಕಾರದ ಫ್ರೇಮಿನ ಕನ್ನಡಕ, ಒಂದು ಜತೆ ಚಪ್ಪಲಿ, ಗಡಿಯಾರ, ಊಟದ ತಟ್ಟೆಗಳನ್ನು ವಿಜಯ ಮಲ್ಯ ಅವರು ಸುಮಾರು ಎರಡು ಮಿಲಿಯ ಅಮೇರಿಕನ್ ಡಾಲರ್ ನೀಡಿ ಮತ್ತೆ ಭಾರತಕ್ಕೆ ತರುವ ಅತ್ಯದ್ಭುತ ಸಾಹಸವನ್ನು ಮಾಡಿದ್ದಾರೆ. ಜೇಮ್ಸ್ ಒಟಿಸ್ ಒಮ್ಮೆ ತಾನು ಗಾಂಧಿಯವರ ಈ ಖಾಸಗಿ ಸಾಮಾಗ್ರಿಗಳನ್ನು ಏಲಂ ಮಾಡುವುದಿಲ್ಲ ಎಂದು ಹೇಳಿದರೂ ಕೊನೆಗೂ ಅದು ಭಾರತಕ್ಕೆ ಮರಳುವಂತಾಗಿದೆ. ಅಂದ ಹಾಗೆ ಅದು ಏಲಂ ಆದರೂ ದೆಹಲಿಯ ಹೈಕೋರ್ಟಿನಲ್ಲಿ ಕೇಸೊಂದು ಇರುವುದರಿಂದ ಅದನ್ನು ಭಾರತಕ್ಕೆ ಕೂಡಲೆ ಕಳುಹಿಸಲು ಅಮೇರಿಕಾದ ಸರಕಾರ ಒಪ್ಪಲಾರದು.
ವಿಜಯ ಮಲ್ಯ ಅವರು ಈ ಏಲಂನಲ್ಲಿ ಭಾಗವಹಿಸುವುದು ಸುದ್ದಿಯಾಗಿರಲಿಲ್ಲ. ಭಾರತೀಯ ಮೂಲದ ಸಂತ್ ಸಿಂಘ್ ಚತ್ವಾಲ್ ಅಥವಾ ಅನಿವಾಸಿ ಭಾರತೀಯರು, ಗುಜರಾತ್ ಮೂಲದ ಅಮೇರಿಕಾದಲ್ಲಿರುವ ಮಿಲಿಯಾಧಿಪತಿಗಳು ಇವರಲ್ಲಿ ಯಾರಾದರೂ ಈ ಅಮೂಲ್ಯ ಭಾವನಾತ್ಮಕ ಸಂಪತ್ತನ್ನು ಭಾರತಕ್ಕೆ ನೀಡುವಲ್ಲಿ ಯಶಸ್ವಿಯಾಗಬಹುದೆಂದು ತಿಳಿಯಲಾಗಿತ್ತು. ಭಾರತ ಸರಕಾರವೂ, ಮುಖ್ಯವಾಗಿ ಪ್ರಧಾನಿ ಮನಮೋಹನ್ ಸಿಂಘ್ ಅವರೂ, ಗಾಂಧಿಯವರ ಅಮೂಲ್ಯ ಈ ಸಾಮಗ್ರಿಗಳು ಭಾರತಕ್ಕೆ ಹೇಗಾದರೂ ಮರಳಬೇಕೆಂಬ ಅಭಿಲಾಷೆಯಲ್ಲಿದ್ದರು.
ಒಂದೊಮ್ಮೆ ವಿದೇಶಿಯರು ಭಾರತವನ್ನು ಲೂಟಿಗೈದು ಇಲ್ಲಿರುವ ಅಮೂಲ್ಯ ಸಂಪತ್ತನ್ನು ಯುರೋಪ್ ಮುಂತಾದ ಕಡೆ ಸಾಗಿಸಿರುವುದನ್ನು ಈಗ ಬಲಿಷ್ಟವಾಗುತ್ತಿರುವ ಭಾರತ ಮತ್ತೆ ಪಡೆಯಬಹುದೇ? ಇದಕ್ಕೆ ಸರಕಾರವೇ ಆಗಬೇಕಿಲ್ಲ. ವಿಜಯ ಮಲ್ಯರಂಥ ಉದ್ಯಮಿಗಳು, ವಿದೇಶದಲ್ಲಿ ಇರುವ ಭಾರತೀಯ ಮೂಲದ ಮಿಲಿಯಾಧಿಪತಿಗಳು ಕೆಲಸಮಾಡಬಹುದು. ಹಲವು ತಲೆಮಾರುಗಳಿಗೆ ಬೇಕಾಗುವಷ್ಟು ತಮ್ಮ ಉದ್ಯಮ ಸಾಮ್ರಾಜ್ಯವನ್ನು ಜಗತ್ತಿನಾದ್ಯಂತ ವಿಸ್ತರಿಸಿರುವ ಭಾರತೀಯ ಮೂಲದ ವ್ಯಕ್ತಿಗಳು ಭಾರತದ ಗೌರವವನ್ನು ಎತ್ತಿಹಿಡಿಯುವಂತಹ ಇಂತಹ ಕೆಲಸವನ್ನು ಮಾಡಿದರೆ ಅವರು ಇತಿಹಾಸದಲ್ಲಿ ತಮ್ಮ ಹೆಸರನ್ನು ಅಜರಾಮರಗೊಳಿಸಬಹುದು.
ಮಿಂಚು
ಅಂದ ಹಾಗೆ ಗಾಂಧೀಜಿಯವರ ಕನ್ನಡಕ, ಕೋಲು ಇತ್ಯಾದಿಗಳ ನಕಲಿ ಪ್ರತಿಗಳು ದೆಹಲಿಯ ಮಾಡರ್ನ್ ಆರ್ಟ್ ಗ್ಯಾಲರಿಯಲ್ಲಿ ಜನರಿಗೆ ಸಿಗುವುದಂತೆ. ಸದ್ಯಕ್ಕೆ ಸ್ಟಾಕಿಲ್ಲ! (photo: Reuters/)